ಮುಕ್ವೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪುಷ್ಪಾ ಕುಮಾರಿ ಎನ್ ಸೇವಾ ನಿವೃತ್ತಿ

0

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪುಷ್ಪಾ ಕುಮಾರಿ ಎನ್. ಅವರು ಜೂ.30ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.

1985ರಲ್ಲಿ ಶಿಕ್ಷಕಿಯಾಗಿ ಸೇವೆ ಆರಂಭಿಸಿದ ಪುಷ್ಪಾ ಕುಮಾರಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದವರು. ಬೋಧನಾ ಕ್ಷೇತ್ರದಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಶಿಶಿಲದ ಈಶ್ವರ ಪುರುಷ ಮತ್ತು ಬೇಬಿ ದಂಪತಿಗಳ ಪುತ್ರಿಯಾಗಿ 20-06-1962ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಿಶಿಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ್ದರು. ಪ್ರೌಢಶಿಕ್ಷಣವನ್ನು ಪುತ್ತೂರಿನ ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆಯಲ್ಲಿ ಪೂರೈಸಿದ್ದರು. ಬಳಿಕ ಮಂಗಳೂರು ಸಮೀಪದ ಕಿನ್ನಿಕಂಬಳ ರೋಸಾ ಮಿಸ್ತಿಕಾ ಸಂಸ್ಥೆಯಲ್ಲಿ ಟಿಸಿಎಚ್ ತರಬೇತಿ ಪಡೆದು 1985ರಲ್ಲಿ ಡಿಎಲ್‌ಆರ್‌ಸಿಯ ಮೂಲಕ ಶಿಕ್ಷಕಿಯಾಗಿ ನೇಮಕಾತಿ ಹೊಂದಿದ್ದರು.

1985ರಿಂದ 1991ರವರೆಗೆ 5 ವರ್ಷಗಳ ಕಾಲ ಶಿಶಿಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿ ಬಳಿಕ 1991ರಲ್ಲಿ ಪುತ್ತೂರು ತಾಲೂಕಿನ ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡರು. 2008ರವರೆಗೆ ಸುಮಾರು 17 ವರ್ಷಗಳ ಕಾಲ ಆನಡ್ಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, 2008ರಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿ ಪಡೆದುಕೊಂಡು ಕೈಕಾರದ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿ 2015ರವರೆಗೆ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿ 2015ರಿಂದ ಮಾಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡರು. 2019ರವರೆಗೆ 5 ವರ್ಷಗಳ ಕಾಲ ಸೇವೆ ಸಲ್ಲಿಸಿ 2019ರಿಂದ 2022ರವರೆಗೆ ಮುಕ್ವೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ.‌

ನಾಗರಿಕ ಸರಬರಾಜು ಇಲಾಖೆಯಲ್ಲಿ ಆಹಾರ ನಿರೀಕ್ಷಕರಾಗಿದ್ದ, ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ-ಮುಗೇರಡ್ಕದ ಮೋನಪ್ಪ ಪುರುಷರೊಂದಿಗೆ 1986ರಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ದಂಪತಿಗೆ ಚೇತನ್ ಕುಮಾರ್ ಮತ್ತು ಯೋಗಿತಾ ಎನ್ನುವ ಇಬ್ಬರು ಮಕ್ಕಳು. ಮೋನಪ್ಪ ಪುರುಷ ಅವರು ಸುಳ್ಯ, ಮಂಗಳೂರು, ಪುತ್ತೂರಿನಲ್ಲಿ ಆಹಾರ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ಉಪತಹಶೀಲ್ದಾರ್ ಆಗಿ ಭಡ್ತಿಗೊಂಡು 2015ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಪ್ರಸ್ತುತ ಕೃಷಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕವಾಗಿ, ರಾಜಕೀಯವಾಗಿಯೂ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಚೇತನ್ ಸಾಫ್ಟ್‌ ವೇರ್ ಉದ್ಯೋಗಿಯಾಗಿದ್ದು, ಸೊಸೆ ಸ್ವಾತಿಯವರೊಂದಿಗೆ ಆ‌ಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಪುತ್ರಿ ಯೋಗಿತಾ ಅವರ ವಿವಾಹವೂ ಬಜ್ಪೆಯ ಉದ್ಯಮಿ ಸೂರಜ್ ಎಂಬವರೊಂದಿಗೆ ಆಗಿದ್ದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here