ವಿವೇಕಾನಂದ ಪ. ಪೂ. ಕಾಲೇಜಿನಲ್ಲಿ ನೂತನ ವರ್ಷದ ವಿದ್ಯಾರ್ಥಿಗಳ ಸ್ವಾಗತ, ವಿದ್ಯಾರ್ಥಿ ಸಂಘದ ಉದ್ಘಾಟನೆ, ‘ವಿವೇಕ ಮುನ್ನುಡಿ-22’ ಕಾರ್ಯಕ್ರಮ

0

  • ಕಲಿಕೆಯ ಜೊತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳುವ ಕಾರ್ಯವೂ ಆಗಬೇಕು: ಸತೀಶ್ ರೈ

ಪುತ್ತೂರು: ಶೈಕ್ಷಣಿಕ ವರ್ಷದ ಪ್ರಾರಂಭಗಳು ಹೊಸ ಚೈತನ್ಯವನ್ನು ಹೊತ್ತುತರುತ್ತವೆ. ಹೊಸ ವಾತಾವರಣಕ್ಕೆ ಹೊಂದಿಕೊಂಡು ಜೀವನದ ಕನಸನ್ನು ಚಿಗುರಿಸುವ ಕಾರ್ಯವಾಗಬೇಕು. ಕಲಿಕೆಯ ಜೊತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳುವ ಕಾರ್ಯವೂ ಆಗಬೇಕು. ಯಶಸ್ವೀ ಜೀವನಕ್ಕೆ ಪೂರಕವಾದ ಅಂಶಗಳನ್ನು ರೂಢಿಸಿಕೊಂಡು ಮುನ್ನಡೆಯಬೇಕು ಎಂದು ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್‌ರೈ ಹೇಳಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಜೂ.28ರಂದು ನಡೆದ ನೂತನ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ’ ವಿವೇಕಮುನ್ನುಡಿ 22’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ ಅಂಕಣಕಾರ ಹಾಗು ಶಿಕ್ಷಕ ಡ್ಯಾನಿಪಿರೇರಾ ಮಾತನಾಡಿ, ಶಿಕ್ಷಣ ರಾಷ್ಟ್ರಸ್ನೇಹಿಯಾಗಿದ್ದಾಗ ಭವಿಷ್ಯದ ಪ್ರಜೆಗಳು ದೇಶ ಪ್ರೇಮಿಗಳಾಗುತ್ತಾರೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಪರಂಪರೆಯಾಧಾರಿತ ಶಿಕ್ಷಣದ ಆಲೋಚನೆಯಿಂದ ವಿಮುಖವಾಗಿರುವುದು ವಿಷಾಧನೀಯವಾಗಿದೆ. ಸಂಸ್ಕಾರಯುತ ಶಿಕ್ಷಣ ಹಾಗೂ ಚಾರಿತ್ರ್ಯ ನಿರ್ಮಾಣದಿಂದ ಭವಿಷ್ಯರೂಪಿಸುವ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಲು ಸಾಧ್ಯ. ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಪ್ರಯತ್ನ ಶ್ಲಾಘನೀಯ. ಶಿಕ್ಷಣವನ್ನು ಪಡೆದಷ್ಟು ಜ್ಞಾನ ವೃದ್ಧಿಯಾಗುತ್ತದೆ ಹೊರತು ವಿದ್ಯಾಸಂಸ್ಥೆ ಎಂದಿಗೂ ಬರಿದಾಗುವುದಿಲ್ಲ. ಸಮಾಜಕ್ಕೆ ಗೌರವ ತರುವ ಪ್ರಯತ್ನ ವಿದ್ಯಾರ್ಥಿಗಳಿಂದಾಗಬೇಕು. ಶಿಕ್ಷಣ ಪಡೆಯುತ್ತಿರುವ ಉದ್ದೇಶವನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, ಆತ್ಮನಿರ್ಭರ ಭಾರತದ ಪರಿಕಲ್ಪನೆ ವಿದ್ಯಾರ್ಥಿಗಳಿಂದ ಸಾಕಾರವಾಗಬೇಕು. ಶಿಕ್ಷಣ ಪಡೆದವರು ಸೋಲಿಗೆ ವಿಮುಖರಾಗದೆ, ಜೀವನವನ್ನು ಬದುಕಲು ಕಲಿಯಬೇಕು. ಪ್ರಮಾಣಪತ್ರದ ಅಂಕಗಳು ಜೀವನದ ಮಾನದಂಡವಾಗದೆ, ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯವಾಗಬೇಕು. ಹಾಗೆಯೇ ಪ್ರಾಚೀನ ಶಿಕ್ಷಣ ವ್ಯವಸ್ಥೆಯನ್ನು ಮಾದರಿಯಾಗಿಟ್ಟು ಶಿಕ್ಷಣ ನೀಡುವ ಕಾರ್ಯವನ್ನು ವಿವೇಕಾನಂದ ವಿದ್ಯಾಸಂಸ್ಥೆ ನಡೆಸುತ್ತಾ ಬಂದಿದೆ. ಶೈಕ್ಷಣಿಕ ಜ್ಞಾನ ನಮ್ಮನ್ನು ಜೀವನ ವಿವೇಕಿಗಳನ್ನಾಗಿಸಬೇಕು ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳಿಧರ್ ಕೆ ಎನ್ ಮಾತನಾಡಿ, ಜೀವನ ಕೌಶಲ್ಯವನ್ನು ವಿದ್ಯಾರ್ಥಿ ದೆಸೆಯಿಂದಲೇ ಕಲಿತುಕೊಳ್ಳಬೇಕು. ನಮಗಿರುವ ಆಸಕ್ತಿಯನ್ನು ಮುನ್ನಡೆಸುವ ಸಾಮರ್ಥ್ಯ ನಮ್ಮಲ್ಲಿರಬೇಕು. ಹಾಗೆಯೇ ಪೂರಕ ಸಹಾಯಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಪ್ರಯತ್ನ ಕಾಲೇಜಿನಿಂದ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಆಡಳಿತ ಮಂಡಳಿಯ ಸದಸ್ಯೆ ವತ್ಸಲಾರಾಜ್ಞೆ ಮಾತನಾಡಿ, ಕಾಲೇಜಿನಲ್ಲಿ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜನೆ ಮಾಡಲಾಗುತ್ತದೆ. ಈ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ದೇವಿಪ್ರಸಾದ್ ಪ್ರಮಾಣ ವಚನ ಕಾರ್ಯಕ್ರಮವನ್ನು ನೆರವೇರಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುದತ್ ನಾಯಕ್, ಉಪಾಧ್ಯಕ್ಷೆ ರುದ್ಧಿ ಎಂ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೀರ್ತನ್, ಜೊತೆ ಕಾರ್ಯದರ್ಶಿ ಧನುಷ, ಪ್ರತೀಕ್ಷಾ ಎ. ಕೆ, ಕ್ರೀಡಾ ಕಾರ್ಯದರ್ಶಿಯಾಗಿ ರಜತ್‌ ಆರ್ ಭಟ್, ಜೊತೆ ಕಾರ್ಯದರ್ಶಿ ಖುಷಿ ರೈ, ಲಲಿತಾ ಕಲಾ ಸಂಘದ ಕಾರ್ಯದರ್ಶಿ ಶ್ರೇಯಜೆ ಶೆಟ್ಟಿ, ಹಾಗೂ ತರಗತಿ ಪ್ರತಿನಿಧಿಗಳು ಈ ಸಂದರ್ಭ ಪ್ರಮಾಣವಚನ ಸ್ವೀಕರಿಸಿದರು. ಕಾಲೇಜಿನ ಪ್ರಾಚಾರ್ಯ ಮಹೇಶ್ ನಿಟಿಲಾಪುರ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪದವಿ ಪೂರ್ವ ಕಾಲೇಜಿನ ಅಂಗ್ಲ ವಿಭಾಗದ ಮುಖ್ಯಸ್ಥ ಪಿ ಕೆ ಪರಮೇಶ್ವರ ಶರ್ಮ ಸ್ವಾಗತಿಸಿ, ಪ್ರಸ್ತಾವನೆಗೈದರು. ಗಣಿತ ಶಾಸ್ತ್ರ ವಿಭಾಗದ ಉಪನ್ಯಾಸಕಿ  ಶರ್ಮಿಳ ಕೆ. ಎಂ ವಂದಿಸಿದರು.  ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಮಮತಾ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು. ಗಣಿತ ಶಾಸ್ತ್ರ ವಿಭಾಗದ ಪಲ್ಲವಿ ಮತ್ತು ಗಣಕ ಶಾಸ್ತ್ರ ವಿಭಾಗದ ಸುಚಿತ್ರಾ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು.

ವಿಶೇಷ ಆಕರ್ಷಣೆ

ವಿದ್ಯಾರ್ಥಿ ಸಂಘದ ಉದ್ಘಾಟನೆ ’ವೈವಿಧ್ಯ ಗಾಯನ ಶುಭ ಆಯನ’ ಭಾಗವತಿಕೆ, ಚೆಂಡೆ, ಸಾಕ್ಸೋಫೋನ್‌ ವಾದನ ಹಾಗೂ ಸಂಗೀತದ ಮೂಲಕ ನಡೆಯಿತು. ಸಂಗೀತದ ಸಾಹಿತ್ಯವನ್ನು ವಿವೇಕಾನಂದ ಪದವಿ ಪೂರ್ವಕಾಲೇಜಿನ ಶಿಕ್ಷಕರೇ ರಚಿಸಿರುವುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here