ಕೊನೆಗೂ ಸರ್ವೆ ಗ್ರಾಮದ ರೆಂಜಲಾಡಿ-ಕಲ್ಪಣೆ ಪರಿಸರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಬಂತು…ಬಹುದಿನಗಳ ಬೇಡಿಕೆ ಈಡೇರಿದ ಖುಷಿಯಲ್ಲಿ ಗ್ರಾಮಸ್ಥರು

0

 

ಪುತ್ತೂರು: ಸರ್ವೆ ಗ್ರಾಮ ವ್ಯಾಪ್ತಿಯ ರೆಂಜಲಾಡಿ, ಕಲ್ಪಣೆ ಪ್ರದೇಶಕ್ಕೆ ಕೊನೆಗೂ ಬಸ್ ಬಂದಿದೆ. ಜೂ.೨೮ರಂದು ಈ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಬರಲಾರಂಭಿಸಿದ್ದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂತೋಷಗೊಂಡಿದ್ದಾರೆ. ಆ ಮೂಲಕ ಬಹು ದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ.

ಸರ್ವೆ ಗ್ರಾಮ ವ್ಯಾಪ್ತಿಯ ಒಳಪ್ರದೇಶಗಳಾದ ರೆಂಜಲಾಡಿ, ಕಲ್ಪಣೆ, ಸೊರಕೆ ಪ್ರದೇಶಗಳಿಗೆ ಬಸ್ ಸೌಕರ್ಯ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುತ್ತಿದ್ದು ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ತಲುಪಲು ಸಾಧ್ಯವಾಗದೇ ಪರದಾಡುತ್ತಿರುವ ಬಗ್ಗೆ ಜೂ.೧೩ರಂದು ಸುದ್ದಿ ಪತ್ರಿಕೆ ವಿಶೇಷ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು. ಅಲ್ಲದೇ ಜೂ.13ರಂದು ಪುತ್ತೂರಿನಲ್ಲಿ ಶಾಸಕರ ನೇತೃತ್ವದಲ್ಲಿ ನಡೆದ ಕೆಎಸ್‌ಆರ್‌ಟಿಸಿ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರಾದ ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ, ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಧರ್ಮಸ್ಥಳ ಗ್ರಾ.ಯೋ. ಸರ್ವೆ ಎ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿ ಮೊದಲಾದವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಬಸ್ ಸೌಕರ್ಯ ಒದಗಿಸಿಕೊಡುವ ಬಗ್ಗೆ ಆಗ್ರಹಿಸಿದ್ದರು. ಶಾಸಕರೂ ಈ ಭಾಗಕ್ಕೆ ಇರುವ ಬಸ್‌ನ್ನು ಡೈವರ್ಟ್ ಮಾಡಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದರು. ನಂತರ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ತಂಡ ರೆಂಜಲಾಡಿ, ಕಲ್ಪಣೆ ಮೊದಲಾದ ಕಡೆಗಳಿಗೆ ಆಗಮಿಸಿ ರೂಟ್ ಪರಿಶೀಲನೆ ಮಾಡಿದ್ದರು. ಇದೀಗ ಕೊನೆಗೂ ಈ ಪ್ರದೇಶಕ್ಕೆ ಬಸ್ ಬರಲಾರಂಭಿಸಿದ್ದು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಪರಿಹಾರ ದೊರಕಿದಂತಾಗಿದೆ.

ಗ್ರಾಮಾಂತರ ಪ್ರದೇಶವಾದ ರೆಂಜಲಾಡಿ-ಕಲ್ಪಣೆ ಪ್ರದೇಶದ ವಿದ್ಯಾರ್ಥಿಗಳು ಬಸ್ ಇಲ್ಲದ ಕಾರಣದಿಂದ ಸಂಕಷ್ಟ ಪಡುತ್ತಿರುವ ಬಗ್ಗೆ ಸಚಿತ್ರ ವರದಿ ಪ್ರಕಟಿಸಿದ ಸುದ್ದಿ ಪತ್ರಿಕೆಗೆ, ಬಸ್ ಬರುವಂತೆ ಮಾಡಲು ಪ್ರಯತ್ನಿಸಿದ ಕರುಣಾಕರ ಗೌಡ ಎಲಿಯ, ರಾಧಾಕೃಷ್ಣ ರೈ ರೆಂಜಲಾಡಿ ಹಾಗೂ ಕೆ.ಎಂ ಹನೀಫ್ ರೆಂಜಲಾಡಿಯವರಿಗೆ, ಶಾಸಕರಿಗೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಜೂ.೨೮ರಂದು ಬರಲಾರಂಭಿಸಿದ ಬಸ್‌ನ್ನು ಕಲ್ಪಣೆಯಲ್ಲಿ ಸ್ವಾಗತಿಸುವ ಕಾರ್ಯವನ್ನು ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯರವರ ಮುಂದಾಳತ್ವದಲ್ಲಿ ಮಾಡಲಾಗಿಯಿತು. ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿಯವರು ತೆಂಗಿನಕಾಯಿ ಒಡೆದು ಶುಭ ಹಾರೈಸಿದರು. ಬಸ್‌ಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯವನ್ನೂ ಮಾಡಲಾಯಿತು. ಈ ಸಂದರ್ಭದಲ್ಲಿ ಮುಂಡೂರು ಗ್ರಾ.ಪಂ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಸರ್ವೆ ಕಲ್ಪಣೆ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ, ಶಿಕ್ಷಕರಾದ ಉದಯಕುಮಾರ್ ಶೆಟ್ಟಿ ಹಾಗೂ ಉಮಾಶಂಕರ್, ಬಿಜೆಪಿ ಶಕ್ತಿ ಕೇಂದ್ರದ ಮುಖಂಡರುಗಳಾದ ಅಶೋಕ್ ರೈ ಸೊರಕೆ, ಬೂತ್ ಸಮಿತಿ ಅಧ್ಯಕ್ಷ ಗೌತಮ್ ರೈ ಸರ್ವೆ, ಕೆಜಿಎನ್ ಕಾಂಪ್ಲೆಕ್ಸ್‌ನ ಮಾಲಕ ಮಹಮ್ಮದ್ ಕೆಜಿಎನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here