ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಪದ ಪ್ರದಾನ

0

  • ಪರರ ಕಷ್ಟವನ್ನು ಅರಿತು ನೆರವೀಯುವವನೇ ನಿಜವಾದ ರೊಟೇರಿಯನ್-ಜೋಸೆಫ್ ಮ್ಯಾಥ್ಯೂ

 

ಪುತ್ತೂರು: ರೋಟರಿಗೆ ಸೇರ್ಪಡೆಗೊಂಡ ಪ್ರತೀ ರೊಟೇರಿಯನ್ಸ್‌ಗಳ ಜೀವನವೂ ಸಂಪೂರ್ಣವಲ್ಲ. ಅವರ ಜೀವನದಲ್ಲೂ ನೋವು ಇರುತ್ತದೆ. ಆದರೆ ಸಮಾಜದಲ್ಲಿನ ಅಶಕ್ತರ, ದೀನದಲಿತರ, ಒಂದೊತ್ತು ಊಟಕ್ಕೂ ಕಷ್ಟಪಡುವವರ ನೋವನ್ನು ಅರಿತು ಅವರಿಗೆ ನೆರವೀಯುವ ಕೈಂಕರ್ಯವನ್ನು ಯಾರು ಮಾಡುತ್ತಾರೋ ಅವರೇ ನಿಜವಾದ ರೊಟೇರಿಯನ್ಸ್‌ಗಳು ಎಂದು ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಹೇಳಿದರು.


ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಇಂದು ಪೋಲಿಯೋ ನಿರ್ಮೂಲನೆ, ಸಂಪೂರ್ಣ ಸಾಕ್ಷರತೆ ಮುಂತಾದ ಪ್ರಾಜೆಕ್ಟ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ನಮಗೆ ಊಹಿಸಿಕೊಳ್ಳಲು ಸಾಧ್ಯವಾಗದು. ಅದರಂತೆ ಅಂತರ್ರಾಷ್ಟ್ರೀಯ ರೋಟರಿ ಅಧ್ಯಕ್ಷರು ಪ್ರಸ್ತುತ ವರ್ಷ `ಇಮ್ಯಾಜಿನ್ ರೋಟರಿ’ ಎಂಬ ಧ್ಯೇಯವಾಕ್ಯವನ್ನು ನೀಡಿರುವುದಾಗಿದೆ. ರೊಟೇರಿಯನ್ಸ್‌ಗಳು ಯಾರೂ ಊಹಿಸಿಕೊಳ್ಳಲಾಗದಂತಹ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾಗಿದೆ. ಸಮಾಜದಲ್ಲಿ ಅದೆಷ್ಟೋ ಜನ ಅನ್ನ, ನೀರು, ಸೂರಿಲ್ಲದೆ ಬಳಲುತ್ತಿದ್ದಾರೆ. ನಾವು ಅವರುಗಳ ಕಷ್ಟದಲ್ಲಿ ಭಾಗಿಯಾಗಿ ಆರೋಗ್ಯಕರವುಳ್ಳ ಉತ್ತಮ ಸಮಾಜ ನಿರ್ಮಾಣ ಮಾಡಿದಾಗ ನಮ್ಮಲ್ಲಿನ ವರ್ತನೆ, ಬಂಧುತ್ವ, ಕನಸು ವೃದ್ಧಿಯಾಗುತ್ತದೆ ಎಂದರು.

ವಿಶ್ವದ ಪ್ರಥಮ ಸೇವಾ ಸಂಸ್ಥೆ ರೋಟರಿ-ಎ.ಜೆ ರೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈಯವರು ಕ್ಲಬ್‌ಗೆ ಸೇರ್ಪಡೆಗೊಂಡ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಪ್ರತಿ ರೊಟೇರಿಯನ್ಸ್‌ಗಳು ಜಗತ್ತನ್ನು ಸುಧಾರಿಸಿಕೊಳ್ಳುವಂತಹ ಕೈಂಕರ್ಯಗಳನ್ನು ಮಾಡಿದಾಗ ಅದು ಮುಂದಿನ ಜನಾಂಗಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ರೋಟರಿ ಸಂಸ್ಥೆಯು ವಿಶ್ವದಲ್ಲಿ ಪ್ರಥಮ ಸೇವಾ ಸಂಸ್ಥೆಯೆಂಬ ಹೆಗ್ಗಳಿಕೆಯನ್ನು ಪಡೆದಿದೆ. ನಾಲ್ಕು ಜಿಲ್ಲಾ ಪ್ರಾಜೆಕ್ಟ್‌ಗಳಾದ ವನಸಿರಿ, ಜಲಸಿರಿ, ವಿದ್ಯಾಸಿರಿ ಹಾಗೂ ಆರೋಗ್ಯ ಸಿರಿಯನ್ನು ವೃದ್ಧಿಸುವತ್ತ ನಾವು ಹೆಜ್ಜೆಯಿಡೋಣ ಜೊತೆಗೆ ಕ್ಲಬ್‌ಗೆ ಸಮಾಜಮುಖಿ ಚಿಂತನೆಯುಳ್ಳ ಸದಸ್ಯರನ್ನು ಹೆಚ್ಚೆಚ್ಚು ಸೇರ್ಪಡೆಗೊಳಿಸುವಂತಾಗಲಿ ಎಂದರು.

ಜಿಲ್ಲೆಯಲ್ಲಿ ಉತ್ತಮ ಕ್ಲಬ್ ಆಗಿ ಮೂಡಿ ಬರಲಿ-ಡಾ|ಹರ್ಷಕುಮಾರ್ ರೈ:
ರೋಟರಿ ವಲಯ ಸೇನಾನಿ ಡಾ|ಹರ್ಷಕುಮಾರ್ ರೈ ಮಾಡಾವುರವರು ಕ್ಲಬ್‌ನ ಬುಲೆಟಿನ್ `ರೋಟರಿ ಸೆಂಟ್ರಲ್ ನ್ಯೂಸ್’ನ್ನು ಅನಾವರಣಗೊಳಿಸಿ ಮಾತನಾಡಿ, ಕ್ಲಬ್‌ನ ಸ್ಥಾಪಕ ಸದಸ್ಯ ಸಂತೋಷ್ ಶೆಟ್ಟರವರ ನಾಯಕತ್ವದಲ್ಲಿ ಸಾಮಾಜಿಕ ಕಳಕಳಿ, ಉತ್ತಮ ಚಿಂತನೆಯನ್ನು ಮೈಗೂಡಿಸಿಕೊಂಡು ಅಲ್ಪಾವಧಿಯಲ್ಲಿಯೇ ಕ್ಲಬ್ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸೈ ಎನಿಸಿಕೊಂಡಿದೆ. ನವೀನ್‌ಚಂದ್ರ ನಾಯಕ್‌ರವರ ನಾಯಕತ್ವದಲ್ಲಿ ಮಾಡಿರುವಂತಹ ಮಾನವೀಯ ಕಳಕಳಿಯುಳ್ಳ ಕಾರ್ಯಕ್ರಮಗಳು ಶಾಶ್ವತ ಕಾರ್ಯಕ್ರಮಗಳೆನಿಸಿವೆ. ಅದರಂತೆ ಮಹಮದ್ ರಫೀಕ್‌ರವರ ನೂತನ ತಂಡ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಪಡೆಯುವ ಅನುಭವಗಳು ಕ್ಲಬ್‌ನ್ನು ಜಿಲ್ಲೆಯಲ್ಲಿಯೇ ಉತ್ತಮ ಕ್ಲಬ್ ಆಗಿ ಗುರುತಿಸಿಕೊಳ್ಳುವಂತಾಗಲಿ ಎಂದರು.

ರೋಟರಿ ಸಂಸ್ಥೆಯ ಗುರಿ ಸ್ನೇಹ, ಸೇವೆ-ವೆಂಕಟ್ರಮಣ ಕಳುವಾಜೆ:
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಮಾತೃಸಂಸ್ಥೆ ರೋಟರಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ವೆಂಕಟ್ರಮಣ ಕಳುವಾಜೆರವರು ಮಾತನಾಡಿ, ಪುತ್ತೂರಿನಲ್ಲಿ ಏಳು ರೋಟರಿ ಕ್ಲಬ್ ಸಮಾಜಮುಖಿ ಕಾರ್ಯಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಈ ಏಳು ರೋಟರಿಗಳ ಗುರಿ ಒಂದೇ. ಅದು ಸ್ನೇಹ ಮತ್ತು ಸೇವೆ ಆಗಿದೆ. ಎಲ್ಲಾ ರೋಟರಿ ಸದಸ್ಯರು ಸಮಾಜಮುಖಿ ಸೇವೆಗೆ ಬದ್ಧರಾಗಿ, ಎಲ್ಲರನ್ನೂ ಗೌರವಿಸುವಂತಾಗಲಿ ಎಂದರು.

ಬಡ ಅಂಗವಿಕಲರಿಗೆ, ರೋಗಿಗಳಿಗೆ, ವಿಧವೆಯರಿಗೆ ಸೂರನ್ನು ಕಲ್ಪಿಸಿಕೊಡುವ ಯೋಜನೆಯಿದೆ-ಮಹಮದ್ ರಫೀಕ್:
ಕ್ಲಬ್‌ನ ನೂತನ ಅಧ್ಯಕ್ಷ ಮಹಮದ್ ರಫೀಕ್ ದರ್ಬೆ ಮಾತನಾಡಿ, ಮನುಷ್ಯ ಪರಿಪೂರ್ಣ ಎನಿಸಿಕೊಳ್ಳಬೇಕಾದರೆ ಆಸ್ಪತ್ರೆಯಲ್ಲಿನ ರೋಗಿಗಳ ಬದುಕನ್ನು ಕಾಣು ಎಂಬುದಾಗಿ ತಾನು ಚಿಕ್ಕದಿರುವಾಗ ಅಜ್ಜಿ ಹೇಳಿದ ಮಾತು ಇಂದು ನನಸಾಗಿದೆ ಎಂದೆನಿಸಿದೆ ನನಗೆ. ಶಾಸಕರ ಮುಂದಾಳತ್ವದಲ್ಲಿ ತಾನು ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿಯಲ್ಲಿ ಸೇರಿಕೊಂಡೆ. ಆಸ್ಪತ್ರೆಗೆ ಬರುವ ಸಮಾಜದ ಕಟ್ಟಕಡೆಯ ವ್ಯಕ್ತಿಗಳಾದ 28 ಡಯಾಲಿಸಿಸ್ ರೋಗಿಗಳ ಮನೆ ಬದುಕು ಏನೆಂಬುದನ್ನು ಅರಿತುಕೊಂಡೆ. ಅದರಲ್ಲಿನ ಐವರು ಬಡ ರೋಗಿಗಳನ್ನು ಆಯ್ದು ಅವರಿಗೆ ಒಂದು ವರ್ಷದ ರೇಶನ್, ಆಸ್ಪತ್ರೆಗೆ ಬರುವ ವೆಚ್ಚವನ್ನು ನೋಡಿಕೊಳ್ಳುವ ಕೈಂಕರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಪುತ್ತೂರಿನ ಎಲ್ಲಾ ರೋಟರಿ ಸದಸ್ಯರ ಸಹಾಯದೊಂದಿಗೆ ಉಳಿದ ಡಯಾಲಿಸಿಸ್ ರೋಗಿಗಳಿಗೆ ಸಹಾಯಹಸ್ತ ನೀಡುವ ಚಿಂತನೆಯಿದೆ ಜೊತೆಗೆ ಬಡ ಅಂಗವಿಕಲರಿಗೆ, ರೋಗಿಗಳಿಗೆ, ವಿಧವೆಯರಿಗೆ ಸೂರನ್ನು ಕಲ್ಪಿಸಿಕೊಡುವ ಯೋಜನೆಯೂ ಇದೆ ಎಂದರು.

ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ ತೃಪ್ತಿಯೊಂದಿಗೆ ನಿರ್ಗಮಿಸಿತ್ತಿದ್ದೇನೆ-ನವೀನ್‌ಚಂದ್ರ ನಾಯ್ಕ್:
ರೋಟರಿ ಸೆಂಟ್ರಲ್‌ನ ನಿರ್ಗಮನ ಅಧ್ಯಕ್ಷ ನವೀನ್‌ಚಂದ್ರ ನಾಯ್ಕ್ ಸ್ವಾಗತಿಸಿ ಮಾತನಾಡಿ, ಕ್ಲಬ್‌ನ ಮೂರನೇ ಅಧ್ಯಕ್ಷನಾಗಿ ಕ್ಲಬ್‌ನ್ನು ಮುನ್ನೆಡೆಸಬೇಕೆಂದು ಆಯ್ಕೆ ಮಾಡಿದಾಗ ಯಾವುದೇ ಸಂಘ-ಸಂಸ್ಥೆಗಳ ಅಧ್ಯಕ್ಷನಾಗಿ ಒಮ್ಮೆಯೂ ಜವಾಬ್ದಾರಿ ನಿರ್ವಹಿಸದ ನಾನು ಒಮ್ಮೆಗೆ ತಟಸ್ಥನಾಗಿದ್ದೆ. ಕರ್ಮಣ್ಯೇವ ವಾಧಿಕಾರಸ್ಥೆ ಮಾಫಲೇಸು ಕದಾಚನ ಎಂಬಂತೆ ನಿನ್ನ ಕೆಲಸ ನೀನು ಪ್ರತಿಫಲಾಪೇಕ್ಷೆಯಿಕ್ಕದೆ ಮಾಡು ಎನ್ನುವ ಮಾತಿನಂತೆ ನಾನು ನನ್ನ ಕರ್ತವ್ಯವನ್ನು ಮಾಡಲು ಶ್ರಮ ವಹಿಸಿದ್ದೇನೆ. ನಾನು ಯೋಚನೆ ಮಾಡಿದ ಎಲ್ಲಾ ಕಾರ್ಯಗಳು ಆಗಿದೆ ಎಂದಲ್ಲ. ಸೀಮಿತ ಸಂಪನ್ಮೂಲಗಳು, ಹೊಸ ಕ್ಲಬ್‌ನ ಇತಿ ಮಿತಿಗಳೊಂದಿಗೆ ನನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ ತೃಪ್ತಿಯೊಂದಿಗೆ ನಿರ್ಗಮಿಸಿ, ಮುಂದಿನ ತಂಡಕ್ಕೆ ನನ್ನಿಂದಾದಷ್ಟು ಸಹಕಾರ ನೀಡುತ್ತೇನೆ ಎಂದರು.

ಹೊಸ ಸದಸ್ಯರ ಸೇರ್ಪಡೆ:
ಮೆಂಬರ್‌ಶಿಪ್ ಡೆವಲಪ್‌ಮೆಂಟ್‌ನಡಿಯಲ್ಲಿ ಕಲ್ಲಾರೆ ವಿ ಕೇರ್ ರಕ್ತ ಪರೀಕ್ಷಾ ಕೇಂದ್ರದ ಅಬ್ದುಲ್ ನವಾಜ್, ಸಪ್ತಗಿರಿ ಕನ್‌ಸ್ಟ್ರಕ್ಷನ್‌ನ ಅಭಿಜಿತ್ ಕೆ, ಸಿವಿಲ್ ಇಂಜಿನಿಯರ್ ಆಸಿಫ್ ಅಡ್ಯನಡ್ಕ, ಕೊಡಿಪ್ಪಾಡಿ ನವೀನ್‌ಚಂದ್ರ ನಾಯಕ್‌ರವರ ಪತ್ನಿ ಶ್ರೀಮತಿ ನವ್ಯಶ್ರೀರವರನ್ನು ಪಿಡಿಜಿ ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಂಡರು.ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಚೇರ್‌ಮ್ಯಾನ್ ಪದ್ಮನಾಭ ಶೆಟ್ಟಿ ನೂತನ ಸದಸ್ಯರನ್ನು ಪರಿಚಯಿಸಿದರು.

ಸನ್ಮಾನ/ಅಭಿನಂದನೆ:
ವೊಕೇಶನಲ್ ಸರ್ವಿಸ್‌ನಡಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಗಲಿರುಳು ಸಾರ್ವಜನಿಕರ ಸೇವೆ ಮಾಡುತ್ತಾ ಜನಮನ್ನಣೆ ಗಳಿಸಿರುವ ಡಾ.ಅಜಯ್ ಎಂ.ಬಿರವರನ್ನು, ನಿರ್ಗಮನ ಅಧ್ಯಕ್ಷ ನವೀನ್‌ಚಂದ್ರ ನಾ‌ಯ್ಕ್ ರವರ ತಂಡದ ಪರವಾಗಿ ತಂಡಕ್ಕೆ ಉತ್ತಮ ಸಹಕಾರ ನೀಡಿದ ಕ್ಲಬ್ ಸದಸ್ಯ ಸನತ್ ಕುಮಾರ್ ರೈರವರನ್ನು, ಕ್ಲಬ್ ಸರ್ವಿಸ್‌ನಡಿಯಲ್ಲಿ ಕಳೆದ ವರ್ಷ ಕ್ಲಬ್‌ನ ಉತ್ತುಂಗಕ್ಕೆ ಶ್ರಮಿಸಿದ ನಿರ್ಗಮನ ಅಧ್ಯಕ್ಷ ನವೀನ್‌ಚಂದ್ರ ನಾಯ್ಕ್, ನಿರ್ಗಮಿತ ಕಾರ್ಯದರ್ಶಿ ಡಾ|ರಾಜೇಶ್ ಬೆಜ್ಜಂಗಳ, ನಿರ್ಗಮಿತ ಕೋಶಾಧಿಕಾರಿ ಶಿವರಾಂ ಎಂ.ಎಸ್‌ರವರಿಗೆ ಸೇವಾ ಗೌರವದೊಂದಿಗೆ ಸನ್ಮಾನ, ಆಶ್ಮಿ ಕಂಫರ್ಟ್‌ನಲ್ಲಿ ಜರಗುವ ಕ್ಲಬ್‌ನ ಪ್ರತಿಯೊಂದು ಕಾರ್ಯಕ್ರಮಕ್ಕೆ ಸಹಕರಿಸುತ್ತಾ ಬಂದಿರುವ ಆಶ್ಮಿ ಕಂಫರ್ಟ್ ಉದ್ಯೋಗಿ ಲಿಖಿತ್‌ರವರನ್ನು ಗುರುತಿಸಿ ಅಭಿನಂದಿಸಲಾಯಿತು.

ಪ್ರಜ್ಞಾ ಆಶ್ರಮಕ್ಕೆ ಕೊಡುಗೆ:
ಬೀರಮಲೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಜ್ಞಾ ಆಶ್ರಮದಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು ಇಲ್ಲಿನ ಅಡುಗೆ ಕೋಣೆ ಸಂಪೂರ್ಣ ತೆರೆದುಕೊಂಡಿದ್ದು, ಕೇವಲ ಅಡುಗೆ ಕೋಣೆ ಅಲ್ಲದೆ ಬಚ್ಚಲು ಮನೆ, ಬಟ್ಟೆ ಮತ್ತು ಪಾತ್ರೆ ತೊಳೆಯುವ ಜಾಗದ ಉನ್ನತೀಕರಣ, ಎಲ್ಲಾ ಕೋಣೆಗಳಿಗೆ ಸೋಲಾರ್ ಲೈಟ್ ಅಳವಡಿಸಿಕೊಡಲಾಗಿದೆ. ಅಂದಾಜು ಖರ್ಚು ರೂ.2 ಲಕ್ಷಕ್ಕಿಂತ ಹೆಚ್ಚು ಬಂದರೂ ಕ್ಲಬ್‌ನ ಸಹೃದಯಿ ಸದಸ್ಯರ ತ್ವರಿತ ಪ್ರತಿಕ್ರಿಯೆಯಿಂದ ಸುಮಾರು ರೂ.೨೦ ಸಾವಿರದಷ್ಟು ಇಳಿಸಲು ನೆರವಾಯಿತು. ಈ ಪ್ರಾಜೆಕ್ಟ್‌ಗೆ ಕ್ಲಬ್ ಸದಸ್ಯರು ಕೈಜೋಡಿಸಿದ್ದು ಮಾತ್ರವಲ್ಲದೆ ಇಂದಿನ ಯುವ ಜನಾಂಗಕ್ಕೆ ಸಮಾಜ ಮತ್ತು ಸೇವೆಯ ಅರಿವು ಸಿಗಲಿ ಎಂಬುದಂತೆ ಕ್ಲಬ್ ಸದಸ್ಯರ ಮಕ್ಕಳಾದ ಶಾಂತಕುಮಾರ್‌ರವರ ಪುತ್ರಿ ಸುಮಾ, ಚಂದ್ರಹಾಸ ರೈಯವರ ಪುತ್ರಿ ಪ್ರಥ್ವಿ, ರಮೇಶ್ ರೈ ಬಾಲೋಡಿ, ಚಂದ್ರಹಾಸ ರೈ ಹಾಗೂ ಭಾರತಿ ಎಸ್ ರೈಯವರ ಸಹೋದರ ಭಾಸ್ಕರ್ ರೈಯವರ ಪುತ್ರಿಯರಾದ ಪ್ರಣೀತ ರೈ ಹಾಗೂ ಪ್ರಜ್ಞಾ ರೈರವರೂ ಈ ಪ್ರಾಜೆಕ್ಟ್‌ನಲ್ಲಿ ಕೈಜೋಡಿಸಿದ್ದು ಅವರುಗಳಿಗೆ ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಹೂ ನೀಡಿ ಗೌರವಿಸಿದರು. ಪ್ರಜ್ಞಾ ಆಶ್ರಮಕ್ಕೆ ನೆರವು ನೀಡಿದ ರೋಟರಿ ಸೆಂಟ್ರಲ್‌ಗೆ ಪ್ರಜ್ಞಾ ಆಶ್ರಮದ ಮುಖ್ಯಸ್ಥ ಅಣ್ಣಪ್ಪರವರು ತನ್ನ ಹಸ್ತಾಕ್ಷರಗಳಿಂದ ಪೋಣಿಸಿದ ಕೃತಜ್ಞತಾ ಪತ್ರವನ್ನು ಅಧ್ಯಕ್ಷ ಮಹಮದ್ ರಫೀಕ್‌ರವರಿಗೆ ಹಸ್ತಾಂತರಿಸಿದರು.

ಜಿಲ್ಲಾ ಸಮಿತಿಗೆ ಅಭಿನಂದನೆ:
ಕ್ಲಬ್‌ನಲ್ಲಿನ ಸದಸ್ಯರಿಗೆ ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಸೇವೆ ನೀಡುವ ಅವಕಾಶ ದೊರೆತಿದ್ದು, ಅದರಂತೆ ಕ್ಲಬ್‌ನ ಸಂತೋಷ್ ಶೆಟ್ಟಿ(ಚೇರ್‌ಮ್ಯಾನ್-ಫ್ಲಾಗ್ ಎಕ್ಸ್‌ಚೇಂಜ್), ನವೀನ್‌ಚಂದ್ರ ನಾಕ್(ವೈಸ್ ಚೇರ್‌ಮ್ಯಾನ್-ರೋಟರಿ ಆಕ್ಷನ್ ಗ್ರೂಪ್), ಸನತ್ ಕುಮಾರ್ ರೈ(ಪಲ್ಸ್ ಪೋಲಿಯೊ ಕೋರ್ಡಿನೇಟರ್), ಡಾ|ರಾಜೇಶ್ ಬೆಜ್ಜಂಗಳ(ಇಂಟಗ್ರೇಟೆಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಕೋರ್ಡಿನೆಟರ್), ಡಾ|ರಾಮಚಂದ್ರ(ಡಿಸ್ಟ್ರಿಕ್ ಸ್ಪೋರ್ಟ್ಸ್ ಕೋರ್ಡಿನೇಟರ್), ಅಮಿತಾ ಶೆಟ್ಟಿ(ಮೆಂಬರ್ಶಿಪ್ ರಿಟೆನ್ಷನ್ ಕೋರ್ಡಿನೆಟರ್), ಅಶೋಕ್ ನಾಕ್(ರೋಟರಿ ಡೇ ಸೆಲೆಬ್ರೇಶನ್ ಕೋರ್ಡಿನೇಟರ್), ರಾಕೇಶ್ ಶೆಟ್ಟಿ(ಮೆಂಬರ್ಶಿಪ್ ಎಕ್ಸ್ಟೆಂಶನ್ ಕೋರ್ಡಿನೇಟರ್)ರವರನ್ನು ಅಭಿನಂದಿಸಲಾಯಿತು.

ಅಭಿನಂದನೆ:
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ಕ್ಲಬ್‌ನ ಸದಸ್ಯ ಶಿವರಾಂ ಎಂ.ಎಸ್ ಹಾಗೂ ಮಮತಾರವರ ಪುತ್ರ ಗಗನ್‌ರವರಿಗೆ ಈ ಸಂದರ್ಭದಲ್ಲಿ ಹೂ ನೀಡಿ ಅಭಿನಂದಿಸಲಾಯಿತು.‌

ವೇದಿಕೆಯಲ್ಲಿ ನಿರ್ಗಮಿತ ಅಧ್ಯಕ್ಷ ನವೀನ್‌ಚಂದ್ರ ನಾಯ್ಕ್  ರವರ ಪತ್ನಿ ಪ್ರತಿಭಾ ನಾಕ್ ಉಪಸ್ಥಿತರಿದ್ದರು. ಕು|ತನ್ವಿ ಪ್ರಾರ್ಥಿಸಿದರು. ನಿರ್ಗಮಿತ ಕಾರ್ಯದರ್ಶಿ ಡಾ|ರಾಜೇಶ್ ಬೆಜ್ಜಂಗಳ ವರದಿ ಮಂಡಿಸಿದರು. ಕ್ಲಬ್ ಸದಸ್ಯರಾದ ಶಿವರಾಂ ಎಂ.ಎಸ್, ರಮೇಶ್ ರೈ ಡಿಂಬ್ರಿ, ಪ್ರಮೋದ್ ಕೆ.ಕೆ, ಮಂಜುನಾಥ ಆಚಾರ್ಯ, ಅಶೋಕ್ ನಾಕ್‌ರವರು ಅತಿಥಿಗಳನ್ನು ಪರಿಚಯಿಸಿದರು. ಸಮಾರಂಭಕ್ಕೆ ಆಗಮಿಸಿದ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳನ್ನು ಕ್ಲಬ್ ಸ್ಥಾಪಕ ಅಧ್ಯಕ್ಷ ಸಂತೋಷ್ ಶೆಟ್ಟಿ ಪರಿಚಯಿಸಿದರು. ನೂತನ ಕಾರ್ಯದರ್ಶಿ ಚಂದ್ರಹಾಸ ರೈ ವಂದಿಸಿದರು. ನೂತನ ಕೋಶಾಧಿಕಾರಿ ಡಾ|ರಾಮಚಂದ್ರ ಹಾಗೂ ಟೀಚ್ ಚೇರ್‌ಮ್ಯಾನ್ ಭಾರತಿ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಕ್ಷರ ಯೋಜನೆಗಳು…
*ಸರಕಾರಿ ಆಸ್ಪತ್ರೆಯಲ್ಲಿನ ಕಿಡ್ನಿ ಡಯಾಲಿಸಿಸ್ 5  ರೋಗಿಗಳಿಗೆ ಒಂದು ವರ್ಷದ ಆಹಾರ ಸಾಮಾಗ್ರಿಗಳ ಪೂರೈಕೆ, *ನಿರಂತರ ರಕ್ತ ಪರೀಕ್ಷಾ ಶಿಬಿರ, *ಸರಕಾರಿ ಆಸ್ಪತ್ರೆಗೆ ಅಗತ್ಯ ಪರಿಕರಗಳ ಕೊಡುಗೆ, *ಆರೋಗ್ಯ ಬಗ್ಗೆ ಹೆಚ್ಚಿನ ಮಾಹಿತಿ ಕಾರ್ಯಕ್ರಮ, *ಬೀರಮಲೆ ಪ್ರಜ್ಞಾ ಆಶ್ರಮದ ಅಡುಗೆ ಕೋಣೆ ಮೇಲ್ದರ್ಜೆಗೆ, *ಪೋಕ್ಸೊ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ, *ಕಾಲೇಜುಗಳಲ್ಲಿ ರೋಟರ್‍ಯಾಕ್ಟ್ ಸ್ಥಾಪನೆಗೆ ಪ್ರಯತ್ನ, *ಅಂಗಾಂಗ ಕಳೆದುಕೊಂಡವರಿಗೆ ಕೃತಕ ಅಂಗಾಂಗ ಜೋಡಣೆಗೆ ಸಹಕಾರ, *ವಾಲ್ ಆಫ್ ಹ್ಯೂಮಾನಿಟಿಯ ಅಭಿವೃದ್ಧಿ, *ಗಿಡ ನೆಡುವ ಮೂಲಕ ಪ್ರಕೃತಿಗೆ ಸೊಬಗು ತರುವ ಪ್ರಯತ್ನ, *ಸಮಾಜಸೇವೆ, ಆರೋಗ್ಯ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಮಾಡಿದವರನ್ನು ಗುರುತಿಸುವ ಪ್ರಯತ್ನ, *ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಕಾರ್ಯಕ್ರಮಗಳು ಮುಂತಾದುವುಗಳು…

೫ ಡಯಾಲಿಸಿಸ್ ರೋಗಿಗಳಿಗೆ ನೆರವು..
ಪುತ್ತೂರು ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಬರುವ 28 ರೋಗಿಗಳ ಪೈಕಿ ಐವರು ರೋಗಿಗಳನ್ನು ಗುರುತಿಸಿ ಅವರುಗಳಿಗೆ ಒಂದು ವರ್ಷದ ರೇಶನ್ ಕಿಟ್, ಡಯಾಲಿಸಿಸ್‌ಗೆ ಬರುವ ವೆಚ್ಚವನ್ನು ಪೂರೈಸಲಾಗುವುದು. ಅದರಂತೆ ಡಯಾಲಿಸಿಸ್ ರೋಗಿಗಳಾದ ಮೋನಪ್ಪ, ಶಾಕೀರ್, ಯಕ್ಷ, ಹಂಝ, ಲೂಯಿಸ್ ಎಂಬವರಿಗೆ ಅವರಿಗೆ ಹತ್ತಿರವಾಗುವಂತಹ ಅಂಗಡಿಗಳಿಂದ ರೇಶನ್ ಕಿಟ್ ವಿತರಣೆಗೆ ಅವಕಾಶ ಮಾಡಿಕೊಡಲಾಯಿತು.

ಪದಾಧಿಕಾರಿಗಳ ಪದ ಪ್ರದಾನ…
ನೂತನ ಅಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆರವರಿಗೆ ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಕೊರಳಪಟ್ಟಿಯನ್ನು ತೊಡಿಸಿ, ರೋಟರಿ ದಂಡ ನೀಡಿ ಪದ ಪ್ರದಾನ ಮಾಡಿದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ರೈ ಬಿ, ಕೋಶಾಧಿಕಾರಿ ಡಾ|ರಾಮಚಂದ್ರ, ನಿಕಟಪೂರ್ವ ಅಧ್ಯಕ್ಷ ನವೀನ್‌ಚಂದ್ರ ನಾಯ್ಕ್  , ಸಹ ಕಾರ್ಯದರ್ಶಿ ಜಯಪ್ರಕಾಶ್ ಎ.ಎಲ್, ನಿಯೋಜಿತ ಅಧ್ಯಕ್ಷ ಪುರುಷೋತ್ತಮ್ ನಾಯ್ಕ್, ಉಪಾಧ್ಯಕ್ಷ ಅಶೋಕ್ ನಾಯ್ಕ್, ಸಾರ್ಜಂಟ್ ಎಟ್ ಆರ್ಮ್ಸ್ ಜಯಪ್ರಕಾಶ್ ಅಮೈ, ಕ್ಲಬ್ ಸರ್ವಿಸ್ ನಿರ್ದೇಶಕ ಅಶ್ರಫ್ ಮುಕ್ವೆ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಮಂಜುನಾಥ್ ಆಚಾರ್ಯ, ವೊಕೇಶನಲ್ ಸರ್ವಿಸ್ ನಿರ್ದೇಶಕ ಡಾ|ರಾಜೇಶ್ ಬೆಜ್ಜಂಗಳ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಕವನ್ ನಾಯ್ಕ್, ಯೂತ್ ಸರ್ವಿಸ್ ನಿರ್ದೇಶಕ ರಾಕೇಶ್ ಶೆಟ್ಟಿ, ಚೇರ್‌ಮ್ಯಾನ್‌ಗಳಾದ ನೋಯಲ್ ಡಿ’ಸೋಜ(ಪೋಲಿಯೋ ಪ್ಲಸ್), ಶಿವರಾಮ ಎಂ.ಎಸ್(ಟಿ.ಆರ್.ಎಫ್), ಪುರುಷೋತ್ತಮ್ ಶೆಟ್ಟಿ(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಪದ್ಮನಾಭ ಶೆಟ್ಟಿ(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಭಾರತಿ ಎಸ್.ರೈ(ಟೀಚ್), ರಮೇಶ್ ರೈ ಡಿಂಬ್ರಿ(ವಿನ್ಸ್), ಸನತ್ ಕುಮಾರ್ ರೈ(ವೆಬ್), ಪ್ರಮೋದ್ ಕುಮಾರ್ ಕೆ.ಕೆ(ಸಾಂಸ್ಕೃತಿಕ), ಪ್ರದೀಪ್ ಬೊಳ್ವಾರು(ಕ್ರೀಡೆ), ಅಮಿತಾ ಶೆಟ್ಟಿ(ಅಟೆಂಡನ್ಸ್ ಕಮಿಟಿ), ರಮೇಶ್ ರೈ ಬೋಳೋಡಿ(ಫೆಲೋಶಿಪ್)ರವರಿಗೆ ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಸ್ವಾಗತಿಸಿದ್ದಾರೆ.

LEAVE A REPLY

Please enter your comment!
Please enter your name here