ಏರಿಕೆಯಾಗುತ್ತಿರುವ ನದಿ ನೀರಿನ ಮಟ್ಟ: ಹೆಚ್ಚಿದ ಆತಂಕ

ಉಪ್ಪಿನಂಗಡಿ: ದ.ಕ. ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರ ನದಿಗಳಲ್ಲಿ ಜು. 4ರ ತಡರಾತ್ರಿಯ ಬಳಿಕ ತಗ್ಗಿದ ನೀರಿನ ಮಟ್ಟ ಮಂಗಳವಾರ ಬೆಳಗ್ಗೆಯಿಂದ ಏರಿಕೆಯಾಗುತ್ತಲೇ ಇದ್ದು, ನದಿ ಪಾತ್ರದ ಜನತೆಯಲ್ಲಿ ಆತಂಕವನ್ನು ಮೂಡಿಸಿದೆ.

ಎಸಿ ಗಿರೀಶ್ ನಂದನ್ ಅವರು ನದಿಗಳ ಪರಿಸ್ಥಿತಿ ಅವಲೋಕಿಸುತ್ತಿರುವುದು

ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗ್ಗೆ ತನಕ ಉಪ್ಪಿನಂಗಡಿಯಲ್ಲಿ 122.4ಮಿ.ಮೀ. ಮಳೆ ಸುರಿದಿದೆ. ಸೋಮವಾರದಂದು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ 25 ಮೆಟ್ಟಿಲುಗಳು ಮುಳುಗಿದ್ದು, ತಡರಾತ್ರಿ 12ರ ಬಳಿಕ ನೀರು ಇಳಿಕೆಯಾಗಿ 18 ಮೆಟ್ಟಿಲುಗಳು ಕಾಣಿಸಿಕೊಂಡವು ಮತ್ತೆ ಮಂಗಳವಾರ ಬೆಳಗ್ಗೆ ಎಂಟೂವರೆಗೆ ನೀರು ಏರಿಕೆಯಾಗಿದ್ದು, 13 ಮೆಟ್ಟಿಲುಗಳು ಕಾಣಿಸಿಕೊಂಡವು. ಸಂಜೆಯ ತನಕವೂ ನೀರು ಏರಿಕೆಯಲ್ಲೇ ಇದ್ದು, ಈಗ ಎಂಟೂವರೆ ಮೆಟ್ಟಿಲುಗಳು ಮಾತ್ರ ಕಾಣಿಸಿಕೊಳ್ಳುತ್ತಿವೆ. ಇಲ್ಲಿನ ಮೆಟ್ಟಿಲುಗಳು ಎಲ್ಲಾ ಮುಳುಗಿದರೆ ದೇವಾಲಯದ ಆವರಣಕ್ಕೆ ನೀರು ನುಗ್ಗುವುದಲ್ಲದೆ, ಪಂಜಳ, ಹಿರ್ತಡ್ಕ- ಮಠ, ಹಳೆಗೇಟು, ಕಡವಿನ ಬಾಗಿಲು, ಸೂರಪ್ಪ ಕಂಪೌಂಡ್, ಕೆಂಪಿಮಜಲು ಹೀಗೆ ನದಿ ಪಾತ್ರದ ಪರಿಸರ, ನದಿಯನ್ನು ಸಂಪರ್ಕಿಸುವ ತೋಡುಗಳುಳ್ಳ ಪ್ರದೇಶಗಳು ಜಲಾವೃತಗೊಳ್ಳುತ್ತವೆ. ಹೆದ್ದಾರಿಗೂ ನೀರು ನುಗ್ಗುತ್ತದೆ. ದೇವಾಲಯದ ಬಳಿ ನದಿಯಲ್ಲಿ ಶಂಭೂರು ಅಣೆಕಟ್ಟಿನವರು ಅಳವಡಿಸಿರುವ ಜಲ ಮಾಪಕದಲ್ಲಿ ನೇತ್ರಾವತಿ ನದಿಯಲ್ಲಿನ ನೀರಿನ ಮಟ್ಟ 28.03 ಆಗಿದ್ದು, ಇದರಲ್ಲಿ ಅಪಾಯದ ಮಟ್ಟ 30 ಮೀ. ಆಗಿದೆ. ನಟ್ಟಿಬೈಲ್‌ನ ನದಿಯಂಚಿನ ಸ್ವಲ್ಪ ಕೃಷಿ ಪ್ರದೇಶ ನೀರಿನಿಂದಾವೃತವಾಗಿವೆ.

ಮೈದುಂಬಿ ಹರಿಯುತ್ತಿರುವ ಕುಮಾರಧಾರ ನದಿ

ಎ.ಸಿ. ಭೇಟಿ: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ನದಿಗಳ ಸಂಗಮ ಸ್ಥಳದ ಬಳಿ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್‌ನಂದನ್ ಅವರು ಭೇಟಿ ನೀಡಿದ್ದು, ಉಭಯ ನದಿಗಳ ಪರಿಸ್ಥಿತಿಯನ್ನು ಅವಲೋಕಿಸಿದರು. ನೆರೆ, ಪ್ರಾಕೃತಿಕ ವಿಕೋಪಗಳಂತಹ ಘಟನೆಗಳು ನಡೆದಾಗ ತುರ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿತಗೊಂಡಿರುವ ಗೃಹರಕ್ಷಕರ ಪ್ರಾಕೃತಿಕ ವಿಕೋಪ ತಂಡದೊಂದಿಗೆ ಸಮಾಲೋಚನೆ ನಡೆಸಿ, ಸಲಹೆ- ಸೂಚನೆಗಳನ್ನು ನೀಡಿದರು.

ತಹಶೀಲ್ದಾರ್ ಭೇಟಿ: ಇಲ್ಲಿ ನೆರೆ ಬಂದಾಗ ಶ್ರೀ ದೇವಾಲಯದ ವಠಾರ, ರಥಬೀದಿ, ಪಂಜಳ, ಹಿರ್ತಡ್ಕ- ಮಠ, ಹಳೆಗೇಟು, ಕಡವಿನ ಬಾಗಿಲು, ಸೂರಪ್ಪ ಕಂಪೌಂಡ್, ಕೆಂಪಿಮಜಲು ಹೀಗೆ ನದಿ ಪಾತ್ರದ ಪರಿಸರ, ನದಿಯನ್ನು ಸಂಪರ್ಕಿಸುವ ತೋಡುಗಳುಳ್ಳ ಪ್ರದೇಶಗಳು ಜಲಾವೃತಗೊಳ್ಳುತ್ತವೆ. ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ ಅವರು ಸೋಮವಾರ ಈ ಪ್ರದೇಶಕ್ಕೆಲ್ಲಾ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದು, ನೆರೆ ಬರುವ ಸಾಧ್ಯತೆ ಕಂಡಾಗಲೇ ಇಲ್ಲಿಂದ ಸ್ಥಳಾಂತರಗೊಳ್ಳಬೇಕೆಂದು ಅಲ್ಲಿನ ಮನೆಯವರಿಗೆ ಮನವಿ ಮಾಡಿದರು. ಬಳಿಕ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಬಳಿಕ ಉಪ್ಪಿನಂಗಡಿ ನಾಡ ಕಚೇರಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ ದೇವಾಲಯದ ಬಳಿ ಬಂದು ಪರಿಸ್ಥಿತಿ ಅವಲೋಕಿಸಿದರು.
ಈ ಸಂದರ್ಭ ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ರಂಜನ್, ಗ್ರಾಮಕರಣಿಕ ಜಿತೇಶ್ ವಿ., ಗ್ರಾಮ ಸಹಾಯಕ ಯತೀಶ್ ಇದ್ದರು.

ಹಳೆಗೇಟು ಬಳಿ ಹರಿಯುತ್ತಿರುವ ನೇತ್ರಾವತಿ ನದಿಯ ದೃಶ್ಯ

ಸನ್ನದ್ಧಗೊಂಡ ಪ್ರಕೃತಿ ವಿಕೋಪ ತಂಡ: ಗೃಹ ರಕ್ಷದ ದಳದ ಪ್ರಕೃತಿ ವಿಕೋಪ ತಂಡ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ಬೀಡು ಬಿಟ್ಟಿದ್ದು, ನೆರೆ ಬಂದ ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿದೆ. ದಿನೇಶ್, ಜನಾರ್ದನ ಆಚಾರ್ಯ, ಅಣ್ಣು ಬಿ., ಸೋಮನಾಥ, ಸಮಾದ್ ಹಾಗೂ ಪ್ರಶಾಂತ್ ತಂಡದಲ್ಲಿದ್ದು, ಇವರಲ್ಲಿ ಓರ್ವ ಎಲೆಕ್ಟ್ರಿಷಿಯನ್, ಓರ್ವ ಪ್ಲಂಬರ್, ಇಬ್ಬರು ಸ್ವಿಮ್ಮರ್‌ಗಳಿದ್ದಾರೆ. ಅಲ್ಲದೇ, ಈಜುಗಾರರಾದ ವಿಶ್ವನಾಥ ಶೆಟ್ಟಿಗಾರ್, ಸುದರ್ಶನ್ ನೆಕ್ಕಿಲಾಡಿ ಹಾಗೂ ಮುಹಮ್ಮದ್ ಬಂದಾರು ಅವರನ್ನು ಇಲ್ಲಿ ನಿಯೋಜಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.