ವಂಚನೆಯಿಂದ ಭೂ ಕಬಳಿಕೆ ; ತಹಶೀಲ್ದಾರ್, ನೋಂದಣಾಧಿಕಾರಿ, ವಕೀಲ ಸಹಿತ ಏಳು ಮಂದಿಯ ಮೇಲೆ ಎಫ್ಐಆರ್

0

ಉಪ್ಪಿನಂಗಡಿ: ವಂಚನೆ ಮಾಡಿ ಭೂ ಕಬಳಿಕೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ತಹಶೀಲ್ದಾರ್, ನೋಂದಣಾಧಿಕಾರಿ, ವಕೀಲರೋರ್ವರ ಸಹಿತ ಒಟ್ಟು ಏಳು ಮಂದಿಯ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಾಯ ಗ್ರಾಮದ ಕೆರೆಕೋಡಿ ನಿವಾಸಿ ನಾರಾಯಣ ನಾಯ್ಕ ಎಂಬವರ ಪತ್ನಿ ವಾರಿಜಾ ಎಂಬವರು ಈ ದೂರು ನೀಡಿದ್ದು, ವಕೀಲರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬೆಳ್ತಂಗಡಿ ತಹಶೀಲ್ದಾರರು, ಕರಾಯ ಧನಲಕ್ಷ್ಮೀ ನಿಲಯದ ಗಿರೀಶ, ಸುರೇಶ, ಶೇಖರ ಹಾಗೂ ತಣ್ಣೀರುಪಂಥ ಗ್ರಾಮದ ಅಳಕೆಯ ನಝೀರ್ ಮತ್ತು ಬೆಳ್ತಂಗಡಿಯ ನೋಂದಣಾಧಿಕಾರಿ ನಾಗರಾಜ್ ಎಂಬವರು ತನಗೆ ವಂಚನೆ ನಡೆಸಿ, ತನ್ನ ಭೂಮಿಯನ್ನು ಕಬಳಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ತನಗೆ ಎಲ್‌ಆರ್‌ವೈ 9/74-75ರಂತೆ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಸರ್ವೆ ನಂ.: 13/4ರಲ್ಲಿ 1.01 ಎಕ್ರೆ, ಸ.ನಂ.: 13/3ರಲ್ಲಿ 1.56 ಎಕ್ರೆ, ಸ.ನಂ. 11/4ರಲ್ಲಿ 0.37 ಎಕ್ರೆ, ಸ.ನಂ.: 11/2ರಲ್ಲಿ 0.34 ಎಕ್ರೆ, ಸ.ನಂ.: 13/5ರಲ್ಲಿ 0.20 ಎಕರೆ ಜಮೀನು ಮಂಜೂರಾಗಿದ್ದು, ತನ್ನ ತಂದೆ ಹಾಗೂ ತಾಯಿ ಮೃತಪಟ್ಟ ಬಳಿಕ ತಂದೆಗೆ ಮಂಜೂರಾದ ಜಮೀನನ್ನು ವಿಭಜನೆ ಮಾಡಿಕೊಡಬೇಕೆಂದು ತಾನು ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಲ್ಲಿ ಮೂಲದಾವೆ ನಂ: 156/2016ರಂತೆ ದಾವೆ ಹೂಡಿ ಮಧ್ಯಂತರ ನಿರ್ಬಂಧಕಾeಯನ್ನು ನ್ಯಾಯಾಲಯದ ಮೂಲಕ ಪಡೆದಿರುತ್ತೇನೆ. ಇಲ್ಲಿ ಒಂದನೇ ಆರೋಪಿಯಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ಮೂರನೇ ಆರೋಪಿಯಾಗಿರುವ ಸುರೇಶ್ ಅವರ ಪಹಣಿಯು ವ್ಯತ್ಯಾಸವಾಗಿದೆ ಎಂಬುದಾಗಿ ನಂಬಿಸಿ, ಬೆಳ್ತಂಗಡಿ ನೋಂದಣಿ ಕಚೇರಿಯಲ್ಲಿ ಆರನೇ ಆರೋಪಿಯಾದ ನಝೀರ್ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಆರೋಪಿಗಳಾದ ಸುರೇಶ್, ಗಿರೀಶ್ ಹಾಗೂ ಶೇಖರ ಎಂಬವರು ಜಮೀನು ಖರೀದಿಸುವ ನಾಟಕ ಮಾಡಿದ್ದು, ಇದಕ್ಕೆ ಒಂದನೇ ಆರೋಪಿಯು ಪ್ರಮುಖ ಪಾತ್ರಧಾರಿಯಾಗಿರುತ್ತಾರೆ. ಎರಡನೇ ಆರೋಪಿಯಾದ ತಹಶೀಲ್ದಾರ್ ಅವರು ಎಲ್‌ಆರ್‌ವೈ 9/74-75ಯನ್ನು ಪಹಣಿಯಲ್ಲಿ ತಿರುಚಿ ಎಲ್‌ಆರ್‌ವೈ 12/74-75ರಂತೆ ಸುಳ್ಳು ದಾಖಲೆ ಮಾಡಿಕೊಟ್ಟು ಸಹಕರಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸದೇ ನೋಂದಣಾಧಿಕಾರಿಯಾಗಿರುವ ನಾಗರಾಜ್ ಅವರು ಇವರಿಗೆ ಜಾಗವನ್ನು ನೋಂದಣಿಮಾಡಿ ಸಹಕರಿಸಿದ್ದಾರೆ ಎಂದು ವಾರಿಜಾ ಎಂಬವರು ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಜು.2ರಂದು ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here