ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಗೆ ಎನ್‌ಐಎಗೆ ಕೇಂದ್ರ ಗೃಹ ಸಚಿವಾಲಯ ಆದೇಶ-ಎಫ್‌ಐಆರ್ ದಾಖಲು

0


ಪುತ್ತೂರು: ಜು.26ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.ಈ ಆದೇಶದ ಬೆನ್ನಲ್ಲೇ ಪ್ರಕರಣ ಸಂಬಂಧ ಎನ್‌ಐಎ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ಪ್ರಕರಣ ದಾಖಲಿಸಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖಾ ವರದಿ(ಎಫ್‌ಐಆರ್)ಸಲ್ಲಿಸಿದೆ.

ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿದ್ದ, ಸುಳ್ಯ ತಾಲೂಕು ಯುವವಾಹಿನಿಯ ಮಾಜಿ ಅಧ್ಯಕ್ಷರೂ ಆಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿದ್ದರು.ಆ ನಂತರ ನಡೆದ ಅಹಿತಕರ ಘಟನೆಗಳಿಂದಾಗಿ ಜಿಲ್ಲೆಯಲ್ಲಿ ಒಂದು ರೀತಿಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ನಡುವೆ ಮೃತ ಪ್ರವೀಣ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ, ಮೃತರ ಕುಟುಂಬದವರಿಗೆ ಸರಕಾರದಿಂದ ಪರಿಹಾರ ಧನವನ್ನು ನೀಡಿ ಹೋಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಪ್ರಕಟಿಸಿದ್ದರು.ಅವರ ಹೇಳಿಕೆ ಬಳಿಕ ಎನ್‌ಐಎ ಅಧಿಕಾರಿಗಳ ತಂಡ ಪ್ರಕರಣಕ್ಕೆ ಸಂಬಂಧಿಸಿ ಗುಪ್ತ ಮಾಹಿತಿ ಸಂಗ್ರಹ ಮಾಡಲಾರಂಭಿಸಿತ್ತು.
ತನಿಖೆ ವಹಿಸಿಕೊಳ್ಳಲು ಎನ್‌ಐಎಗೆ ನಿರ್ದೇಶನ: ಕರ್ನಾಟಕ ಸರಕಾರದ ಶಿಫಾರಸ್ಸಿನಂತೆ ಪ್ರಕರಣದ ತನಿಖೆಯನ್ನು ಇದೀಗ ಎನ್‌ಐಎಗೆ ವಹಿಸಲಾಗಿದೆ.ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ವಿಪುಲ್ ಅಲೋಕ್ ಅವರು ಎನ್‌ಐಎ ಮಹಾ ನಿರ್ದೇಶಕರಿಗೆ ಆ.೩ರಂದು ಆದೇಶ ಮಾಡಿದ್ದಾರೆ.ಕರ್ನಾಟಕ ಸರಕಾರದ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.
ಎಫ್‌ಐಆರ್ ದಾಖಲು: ಪ್ರಕರಣದ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿರುವ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳು ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆ 302(ಕೊಲೆ) ಮತ್ತು 120(ಬಿ)(ಕೊಲೆಗೆ ಸಂಚು) ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಅಡಿಯಲ್ಲಿ ಪ್ರಕರಣ ದಾಖಲಿಸಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದಾರೆ.
ಬೆಳ್ಳಾರೆ ಪೊಲೀಸರಿಂದ ನಾಲ್ವರ ಬಂಧನ: ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಮಂದಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಬೆಳ್ಳಾರೆ ಪಳ್ಳಿಮಜಲಿನ ಸದ್ದಾಂ ಮತ್ತು ಹ್ಯಾರೀಸ್ ಎಂಬವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.ಬಂಧಿತರ ಪೈಕಿ ಆರೋಪಿ ಶಫೀಕ್‌ನನ್ನು ಎರಡನೇ ಬಾರಿಗೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಮಸೂದ್ ಕೊಲೆಗೆ ಪ್ರತೀಕಾರ, ಹಲಾಲ್ ಕಟ್, ಜಟ್ಕಾ ಕಟ್ ವಿವಾದ ಕಾರಣ?: ಕೆಲವು ದಿನಗಳ ಹಿಂದೆ ಪಾಲ್ತಾಡು ಕಳೆಂಜ ವಿಷ್ಣುನಗರದಲ್ಲಿ ಕೇರಳ ಮೂಲದ ಮಸೂದ್ ಎಂಬ ಯುವಕನನ್ನು ತಂಡವೊಂದು ಹಲ್ಲೆ ಮಾಡಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಪ್ರತೀಕಾರವಾಗಿ ಮತ್ತು ಹಲಾಲ್ ಕಟ್, ಜಟ್ಕಾ ಕಟ್ ವಿವಾದವೇ ಪ್ರವೀಣ್ ಹತ್ಯೆಗೆ ಕಾರಣ ಎಂದು ತನಿಖಾ ಸಂಸ್ಥೆ ಮೂಲಗಳಿಂದ ತಿಳಿದು ಬಂದಿದೆ.
ಉಪ್ಪಳ ನಿವಾಸಿ ವಶಕ್ಕೆ: ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಕೊಲೆ ಆರೋಪಿಗಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಉಪ್ಪಳ ಮಂಗಲ್ಪಾಡಿ ಸೋಂಕಾಲು ನಿವಾಸಿಯೋರ್ವನನ್ನು ಕರ್ನಾಟಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಮೂಲತಃ ಕರ್ನಾಟಕದವನಾದ ಈತ ಕಾರ್ಮಿಕನಾಗಿದ್ದು, ಸೋಂಕಾಲಿನಲ್ಲಿ ವಾಸವಾಗಿದ್ದಾನೆ.ಈ ಹಿಂದೆ ಈತ ತಿಂಗಳಾಡಿ ಸಮೀಪ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆಯಾದರೂ ಪೊಲೀಸರು ಇದನ್ನು ಖಚಿತ ಪಡಿಸಿಲ್ಲ.
ಸ್ಥಳೀಯರೇ ಹತ್ಯೆ ಮಾಡಿದ್ದು ಕೇರಳದವರಲ್ಲ- ಗೃಹ ಸಚಿವ : 
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿರುವುದು ಸ್ಥಳೀಯರೇ ಹೊರತು ಕೇರಳದವರು ಅಲ್ಲ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಕೇರಳದಿಂದ ಬಂದ ಹಂತಕರು ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಿದ್ದು, ಅವರಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ ಎಂದು ಈವರೆಗೆ ಭಾವಿಸಲಾಗಿತ್ತು.ಆದರೆ ಹತ್ಯೆ ಮಾಡಿದ್ದು ಸ್ಥಳೀಯರೇ ಆಗಿದ್ದು ಅವರಿಗೆ ಕೇರಳದ ನಂಟು ಇದೆ.ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಗೃಹ ಸಚಿವರು ಹೇಳಿರುವುದಾಗಿ ವರದಿಯಾಗಿದೆ.
ಹಂತಕರು ಪೊಲೀಸ್ ವಶಕ್ಕೆ?
ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿರುವ ಪ್ರಮುಖ ಆರೋಪಿಗಳು ಪೊಲೀಸರ ವಶವಾಗಿದ್ದಾರೆ ಎಂದು ವ್ಯಾಪಕವಾಗಿ ಸುದ್ದಿ ಹರಡಿದೆ.ಹತ್ಯೆ ಮಾಡಿರುವವರ‍್ಯಾರು ಎನ್ನುವುದು ನಮಗೆ ಗೊತ್ತಾಗಿದೆ,ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಆ.೪ರಂದು ಮಾಹಿತಿ ನೀಡಿರುವುದು ಮತ್ತು ಪ್ರವೀಣ್ ಅವರನ್ನು ಹತ್ಯೆ ಮಾಡಿರುವುದು ಸ್ಥಳೀಯರೇ ಹೊರತು ಕೇರಳದವರು ಅಲ್ಲ,ಶೀಘ್ರವಾಗಿ ಅವರನ್ನು ಬಂಧಿಸಲಾಗುವುದು ಎಂದು ರಾಜ್ಯ ಗೃಹ ಸಚಿವರು ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ, ಪ್ರವೀಣ್ ಹಂತಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಸುದ್ದಿ ಹರಡಿದೆ.

LEAVE A REPLY

Please enter your comment!
Please enter your name here