ಸಾರ್ವಜನಿಕ ಸೇವಕರಾಗಿರುವ ಕೆಎಂಎಫ್ ನೌಕರರೂ‌ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಗೆ-ಹೈಕೋರ್ಟ್

0

ಬೆಂಗಳೂರು:ಕರ್ನಾಟಕ ಹಾಲು ಮಹಾಮಂಡಳದ(ಕೆಎಂಎಫ್) ನೌಕರರೂ ಕೂಡ ಸಾರ್ವಜನಿಕ ಸೇವಕರಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ.

ತನ್ನ ಗೊತ್ತಿರುವ ಆದಾಯದ ಮೂಲಗಳನ್ನು ಮೀರಿ ಸಂಪತ್ತು ಗಳಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ತನ್ನ ವಿರುದ್ಧ ದಾಖಲಿಸಿದ ಪ್ರಕರಣವನ್ನು ಪ್ರಶ್ನಿಸಿ ಕೆಎಂಎಫ್ ಘಟಕದ ನಂದಿನಿ ಹಾಲು ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ.ಕೃಷ್ಣಾ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ ಈ ತೀರ್ಪು ನೀಡಿದೆ.

ಕೃಷ್ಣಾ ರೆಡ್ಡಿಯವರು ನಂದಿನಿ ಮಿಲ್ಕ್ ಪ್ರಾಡಕ್ಟ್ಸ್‌ನ ಜನರಲ್ ಮ್ಯಾನೇಜರ್ ಆಗಿದ್ದಾಗ ನವೆಂಬರ್ 23, 2021ರಂದು ಕಾಯಿದೆಯ 15(2) ಸೆಕ್ಷನ್ 13(1)(ಬಿ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಎಸಿಬಿಯವರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅವರ ಮನೆ ಮತ್ತು ಆಸ್ತಿಯನ್ನು ಶೋಧಿಸಲಾಗಿದ್ದು, ಈ ಕುರಿತ ತನಿಖೆ ಪ್ರಗತಿಯಲ್ಲಿದೆ. ಈ ಮಧ್ಯೆ, ಕೆಎಂಎಫ್ ನ ನೌಕರರು ಕಾಯಿದೆಯಡಿ ವ್ಯಾಖ್ಯಾನಿಸಿದಂತೆ ಸಾರ್ವಜನಿಕ ಸೇವಕರಲ್ಲ ಮತ್ತು ಎಸಿಬಿ ದಾಖಲಿಸಿದ ಅಪರಾಧವು ಅದರ ವ್ಯಾಪ್ತಿಯನ್ನು ಮೀರಿದೆ ಎಂದು ಕೃಷ್ಣಾ ರೆಡ್ಡಿ ನ್ಯಾಯಾಲಯದ ಮೆಟ್ಟಿಲೇರಿದರು.

ರೆಡ್ಡಿ ವಾದ ತಿರಸ್ಕರಿಸಿದ ಹೈಕೋರ್ಟ್: ಆದಾಯ ಮೀರಿ ಶೇ.107 ಆಸ್ತಿ ಹೊಂದಿದ್ದ ಕುರಿತ ರೆಡ್ಡಿ ವಿರುದ್ಧ ಆರೋಪ ಹೊರಿಸಲಾಗಿತ್ತು. ಪ್ರಕರಣ ರದ್ದು ಕೋರಿ ವಿ.ಕೃಷ್ಣಾರೆಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಕೆಎಂಎಫ್ ಸಿಬ್ಬಂದಿ ಸರ್ಕಾರಿ ನೌಕರರಲ್ಲ. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವೆಂದು ರೆಡ್ಡಿ ಪರ ವಕೀಲರು ವಾದಿಸಿದ್ದರು. ಆದರೆ ಅವರ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

ಸಂವಿಧಾನದ ಆಡಳಿತಕ್ಕೆ ಭ್ರಷ್ಟಾಚಾರ ಅಪಾಯಕಾರಿ

ಕೆಎಂಎಫ್ ನೌಕರ ಕೂಡಾ ಭ್ರಷ್ಟಾಚಾರ ತಡೆ ಕಾಯ್ದೆಗೆ ಒಳಪಡುತ್ತಾರೆ. ಅರ್ಜಿದಾರನ ಮೇಲೆ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪವಿದೆ. ಭ್ರಷ್ಟಾಚಾರ ದೇಶದ ಜನಜೀವನವನ್ನು ಆವರಿಸಿದೆ. ಸಂವಿಧಾನದ ಆಡಳಿತಕ್ಕೆ ಭ್ರಷ್ಟಾಚಾರ ಅಪಾಯಕಾರಿ. ಬೇರೆ ಬೇರೆ ಸ್ವರೂಪಗಳಲ್ಲಿ ಲಂಚಗುಳಿತನ ವ್ಯಾಪಿಸಿದೆ. ಉತ್ತಮ ಆಡಳಿತಕ್ಕಾಗಿ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಅನಿವಾರ್ಯ ಎಂದು ನ್ಯಾ|ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

LEAVE A REPLY

Please enter your comment!
Please enter your name here