ಪುಣ್ಚತ್ತಾರು ಬೊಬ್ಬೆಕೇರಿ ರಾಜ್ಯ ಹೆದ್ದಾರಿ ರಸ್ತೆ ಕುಸಿತದ ಭೀತಿಯಲ್ಲಿ 

0

ತಡೆಗೋಡೆ ನಿರ್ಮಾಣ ಅಗತ್ಯ | ಬೇಕಿದೆ ದೊಡ್ಡ ಮೊತ್ತದ ಅನುದಾನ

ಕಾಣಿಯೂರು: ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿಯ ಪುಣ್ಚತ್ತಾರು-ಬೊಬ್ಬೇಕೇರಿ ಸಂಪರ್ಕದ ಮಧ್ಯೆ ಹೆದ್ದಾರಿ ಕುಸಿಯುವ ಭೀತಿ ಉಂಟಾಗಿದೆ. ಹೆದ್ದಾರಿ ಕೆಳಭಾಗದಲ್ಲಿ ತೋಡೊಂದು ಹರಿಯುತ್ತಿದ್ದು ಇದರ ನೀರಿನ ತೇವಾಂಶದಿಂದ ಮಣ್ಣು ಸಡಿಲಗೊಂಡು ಹೆದ್ದಾರಿ ಭಾಗದಿಂದ ಜರಿಯಲು ಆರಂಭವಾಗಿದೆ.

ಕುಸಿತ ಭೀತಿ: ಹೆದ್ದಾರಿಯ ಕೆಳಭಾಗದಲ್ಲಿ ತೋಡು ಹರಿಯುತ್ತಿದೆ. ಹೆದ್ದಾರಿಗೆ ತಾಗಿಕೊಂಡಂತೆ ಕೆಳಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು, ಹೊಂಡ ನಿರ್ಮಾಣವಾಗಿದೆ. ಜೋರು ಮಳೆಗೆ ತೋಡಿನಲ್ಲಿ ನೀರು ತುಂಬಿ ಹರಿದಲ್ಲಿ ಮಣ್ಣು ಕೊರೆಯಲು ಆರಂಭಗೊಂಡು ಹೆಚ್ಚಿನ ಪ್ರಮಾಣದ ಕುಸಿತ ಉಂಟಾಗುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕುಸಿತಗೊಂಡರೆ ಹೆದ್ದಾರಿ ಹಾನಿಗೊಳಗಾಗುವ ಭೀತಿ ಎದುರಾಗಲಿದೆ. ಈಗಾಗಲೇ ಮಣ್ಣು ಕುಸಿತಗೊಂಡಿರುವುದರಿಂದ ಸ್ಥಳೀಯರು ಭೀತಿಗೊಂಡಿದ್ದು, ಪಾದಾಚಾರಿಗಳು ನಡೆದಾಡಲು ನಡು ರಸ್ತೆಯನ್ನು ಅವಲಂಭಿಸಲಾರಂಭಿಸಿದ್ದಾರೆ. ರಸ್ತೆಗೆ ಹಾನಿ ಸಂಭವಿಸಿದಲ್ಲಿ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಆತಂಕವನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ತಡೆಗೋಡೆ ಅಗತ್ಯ; ಮಣ್ಣು ಕುಸಿತ ತಡೆಗೆ ಕೆಳಭಾಗದಿಂದ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಬೇಕೆಂಬ ಆಗ್ರಹವೂ ಕೇಳಿಬಂದಿದೆ. ತಡೆಗೋಡೆ ನಿರ್ಮಾಣದಿಂದ ಮಣ್ಣು ಕುಸಿತಕ್ಕೆ ತಡೆ ಸಿಗಲಿದ್ದು, ತೋಡಿನ ನೀರು ಸರಾಗವಾಗಿ ಹರಿದು ಹೋಗಲಿದೆ. ಹೆದ್ದಾರಿಗೂ ರಕ್ಷಣೆ ಒದಗಲಿದೆ. ಅಪಾಯ ಬಂದೊದಗುವ ಮೊದಲು ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳಲಿ ಎಂದು ನಾಗರಿಕರು ತಿಳಿಸಿದ್ದಾರೆ. ಇಲ್ಲಿ ತಡೆಗೋಡೆ ನಿರ್ಮಿಸಲು ದೊಡ್ಡ ಮೊತ್ತದ ಅನುದಾನ ಬೇಕಿದೆ.

ಅಗತ್ಯವಾಗಿ ಕ್ರಮ ಕೈಗೊಳ್ಳಬೇಕಿದೆ

ಕಳೆದ ವರ್ಷವೂ ಇದೇ ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿ ಮಣ್ಣು ಕುಸಿತವುಂಟಾಗಿತ್ತು. ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಧರೆ ಕುಸಿತಗೊಂಡಿದೆ. ಸಂಬಂಧ ಪಟ್ಟ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಜರಿದು ಮುಖ್ಯ ರಸ್ತೆ ಕುಸಿಯುವ ಸಾಧ್ಯತೆ ಇದೆ.

ದಿನೇಶ್ ಪೈಕ, ಸ್ಥಳೀಯರು

LEAVE A REPLY

Please enter your comment!
Please enter your name here