ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ವಿಭಿನ್ನ ಯೋಜನೆ; ದೈವಸ್ಥಾನದ ಆವರಣದಲ್ಲಿ `ಶತ ಕಲ್ಪವೃಕ್ಷ ನಾಟಿ ಅಭಿಯಾನ’

0

* ಮೂರು ಎಕರೆಯಲ್ಲಿ ನಾಟಿ
* ಆ.20ರಂದು ಶಾಸಕರಿಂದ ಚಾಲನೆ

ಪುತ್ತೂರು:ಇತಿಹಾಸ ಪ್ರಸಿದ್ದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವತಿಯಿಂದ ದೈವಸ್ಥಾನದ ಆವರಣದಲ್ಲಿ `ಶತ ಕಲ್ಪವೃಕ್ಷ ನಾಟಿ’ ಮಾಡುವ ವಿಭಿನ್ನ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈ ಅಭಿಯಾನಕ್ಕೆ ಆ.20ರಂದು ಚಾಲನೆ ದೊರೆಯಲಿದೆ.

ಧಾರ್ಮಿಕ, ಶ್ರದ್ಧಾ ಕೇಂದ್ರಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿರದೇ ಕೃಷಿ, ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು, ಕೃಷಿ ಕಾರ್ಯದಲ್ಲಿ ಮುಂದಿನ ಪೀಳಿಗೆಗೂ ಉತ್ತೇಜನ ನೀಡಬೇಕು ಎಂಬ ಮಹಾನ್ ಉದ್ದೇಶದಿಂದ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯು ಶತ ಕಲ್ಪವೃಕ್ಷ ಅಭಿಯಾನ ನಡೆಸಲು ತೀರ್ಮಾನಿಸಿದೆ. ಇದಕ್ಕಾಗಿ ದೇವಸ್ಥಾನದ ಆವರಣದಲ್ಲಿ ಖಾಲಿಯಿರುವ ಜಾಗದಲ್ಲಿ ತೆಂಗಿನ ಸಸಿ ನಾಟಿ ಮಾಡುವ ವಿಭಿನ್ನ ಅಭಿಯಾನವನ್ನು ಹಾಕಿಕೊಂಡಿದೆ. ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19ನಿಂದ ಆರ್ಥಿಕತೆ ಕುಸಿದಿದ್ದು ಇದನ್ನು ಸರಿದೂಗಿಸಿಕೊಳ್ಳುವುದೂ ಹಾಗೂ ದೈವಸ್ಥಾನದ ಆದಾಯವನ್ನು ವೃದ್ಧಿಸುವುದೂ ವ್ಯವಸ್ಥಾಪನಾ ಸಮಿತಿಯ ಮಹಾ ಕನಸಾಗಿದೆ. ಇದಕ್ಕಾಗಿ ವ್ಯವಸ್ಥಾಪನಾ ಸಮಿತಿಯಿಂದ ಅಡಿಪಾಯವನ್ನು ಹಾಕಿಕೊಳ್ಳಲಾಗಿದೆ.

3 ಎಕರೆಯಲ್ಲಿ ನಾಟಿ:
ದೈವವಸ್ಥಾನದ ಆವರಣದಲ್ಲಿರುವ ಸುಮಾರು 3 ಎಕರೆ ಖಾಲಿ ಭೂಮಿಯಲ್ಲಿ ಶತ ಕಲ್ಪವೃಕ್ಷ ನಾಟಿ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ನಡೆಸಿಕೊಂಡಿರುವುದಲ್ಲದೆ ಗುಂಡಿ ನಿರ್ಮಾಣ ಕಾರ್ಯವು ನಡೆಯುತ್ತಿದೆ. ನಾಟಿಗಾಗಿ ಉತ್ತಮ ತಳಿಯ, ಅಧಿಕ ಇಳುವರಿ ಕೊಡುವ ತೆಂಗಿನ ಸಸಿಗಳನ್ನು ಸಿದ್ದಪಡಿಸಲಾಗಿದೆ. ಅಭಿಯಾನದಲ್ಲಿ ಭಕ್ತಾದಿಗಳಿಂದ ನಾಟಿ ಮಾಡುವ ಸಸಿಗಳಿಗೆ ನೀರು, ಗೊಬ್ಬರ ಮೊದಲಾದ ಎಲ್ಲಾ ರೀತಿಯ ನಿರ್ವಹಣೆಗಳನ್ನು ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ನಿರ್ವಹಣೆ ನಡೆಯಲಿದೆ.

ಭಕ್ತಾದಿಗಳಿಗೂ ಅವಕಾಶ:
ಈ ಅಭಿಯಾನದಲ್ಲಿ ಭಕ್ತಾದಿಗಳಿಗೂ ಪಾಲ್ಗೊಳ್ಳುವ ಅವಕಾಶವನ್ನು ವ್ಯವಸ್ಥಾಪನಾ ಸಮಿತಿ ಕಲ್ಪಿಸಿದೆ. ನಾಟಿಗೆ ಬೇಕಾದ ಗುಂಡಿ ನಿರ್ಮಾಣ ಹಾಗೂ ಗಿಡವನ್ನು ದೈವಸ್ಥಾನ ವತಿಯಿಂದ ನೀಡಲಾಗುತ್ತಿದೆ. ನಾಟಿ ಮಾಡಲು ಇಚ್ಚಿಸುವ ಭಕ್ತಾದಿಗಳು ಗುಂಡಿ, ಗಿಡ, ನೆಡುವ ವೆಚ್ಚ, ನಿರ್ವಹಣೆ ಸೇರಿದಂತೆ ಒಟ್ಟು ರೂ.1000ವನ್ನು ದೈವಸ್ಥಾನಕ್ಕೆ ಪಾವತಿಸಿ, ಗಿಡ ನೆಟ್ಟು ಈ ಅಭಿಯಾನದಲ್ಲಿ ಪಾಲು ಪಡೆಯಬಹುದು.

ಆ.20ರಂದು ಶಾಸಕರಿಂದ ಚಾಲನೆ:
ದೈವಸ್ಥಾನದ ವತಿಯಿಂದ ಹಮ್ಮಿಕೊಂಡಿರುವ ಶತ ಕಲ್ಪವೃಲ್ಷ ಅಭಿಯಾನಕ್ಕೆ ಆ.20ರಂದು ಚಾಲನೆ ನೀಡಲಾಗುತ್ತಿದ್ದು ಶಾಸಕ ಸಂಜೀವ ಮಠಂದೂರು ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕರು ಚಾಲನೆ ನೀಡಲಿದ್ದಾರೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

ದೈವಸ್ಥಾನದ ವತಿಯಿಂದ ನಡೆಯುವ ಅಭಿಯಾನದಲ್ಲಿ ನಾಟಿ ಮಾಡಲು ಇಚ್ಚಿಸುವ ಭಕ್ತಾದಿಗಳು ದೈವಸ್ಥಾನ ಅಥವಾ ಮಾಧವ ಗೌಡ ಕೆ. 9481149327, ಕಿರಣ್ ಕುಮಾರ್ ರೈ 9686918249, ಅಶೋಕ್ ಕುಮಾರ್ ಪದವು 9448725915, ಚಂದ್ರಹಾಸ ಕುಲಾಲ್ 81475533617, ವೆಂಕಟಕೃಷ್ಣ ಭಟ್ ಪಾಲೆಚ್ಚಾರು 9449944064 ಸಂಪರ್ಕಿಸಬಹುದು ಎಂದು ವ್ಯವಸ್ಥಾಪನಾ ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here