ಕಡಬ ತಾಲೂಕು ಪರಿಶಿಷ್ಠ ಜಾತಿ/ಪಂಗಡದವರ ಹಿತರಕ್ಷಣೆ ಸಭೆ

0

ಡಿಸಿ ಮನ್ನಾ ಭೂಮಿ ಅತಿಕ್ರಮಣ ತೆರವುಗೊಳಿಸಿ ದಲಿತರಿಗೆ ಹಂಚಬೇಕು-ಆಗ್ರಹ

  •  ಈ ಹಿಂದೆ ಆಗಿರುವ ನಿರ್ಣಯಗಳಿಗೆ ಬೆಲೆ ಇಲ್ಲದಂತಾಗಿದೆ.
  •  ಕಾಟಾಚಾರಕ್ಕೆ ಸಭೆ ನಡೆಸುವುದೇ ಬೇಡ
  •  ದಲಿತರ ಹೆಸರಲ್ಲಿ ಉಳ್ಳವರ ಮನೆಗೆ ಕಾಂಕ್ರೀಟ್ ರಸ್ತೆ ಆಗುತ್ತದೆ.
  •  ಕಡಬ ವೈದ್ಯಾಧಿಕಾರಿಯನ್ನು ವರ್ಗಾವಣೆಗೊಳಿಸದಿದ್ದರೆ ಪ್ರತಿಭಟನೆ.

ಉಪ್ಪಿನಂಗಡಿ: ಡಿಸಿ ಮನ್ನಾ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವುಗೊಳಿಸುವುದಾಗಿ ಕಳೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಈ ವರೆಗೆ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ದಲಿತ ಮುಖಂಡರು ತಕ್ಷಣ ತೆರವು ಕಾರ್ಯ ನಡೆಯಬೇಕು ಮತ್ತು ಅವುಗಳನ್ನು ದಲಿತರಿಗೆ ಹಂಚಬೇಕು ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು.

ಸೆ. ೯ರಂದು ಕಡಬ ತಹಸೀಲ್ದಾರ್ ಅನಂತಶಂಕರ ಅಧ್ಯಕ್ಷತೆಯಲ್ಲಿ ಇಲ್ಲಿನ ಕಡಬದ ಅಂಬೇಡ್ಕರ್ ಭವನದಲ್ಲಿ ನಡೆದ ಕಡಬ ತಾಲ್ಲೂಕು ಪರಿಶಿಷ್ಠ ಜಾತಿ/ಪಂಗಡದವರ ಹಿತರಕ್ಷಣಾ ಹಾಗೂ ಕ್ಷೇಮಾಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡರು ಕಳೆದ ಹಲವಾರು ವರ್ಷಗಳಿಂದ ಡಿ.ಸಿ. ಮನ್ನಾ ಜಾಗವನ್ನು ಬೇರೆಯವರು ಅತಿಕ್ರಮಿಸಿದ್ದಾರೆ, ಅದನ್ನು ತೆರವು ಮಾಡಿ ಎಂದು ಸಭೆಯಲ್ಲಿ ಹೇಳುತ್ತಲೇ ಇದ್ದೇವೆ, ಆದರೆ ಅದರ ಬಗ್ಗೆ ಏನೂ ಕ್ರಮ ಜರಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ತಹಸೀಲ್ದಾರ್ ಅನಂತ ಶಂಕರ್ ಪ್ರತಿಕ್ರಿಯಿಸಿ ಇದೀಗ ಎಲ್ಲಿಯೂ ಡಿ.ಸಿ. ಮನ್ನಾ ಭೂಮಿ ಅತಿಕ್ರಮಣ ನಡೆಯುತ್ತಿಲ್ಲ ಎಂದರು. ಆಗ ಮಾತನಾಡಿದ ಮುಖಂಡರು ಕಳೆದ ಸಭೆಯಲ್ಲಿ ಎಲ್ಲೆಲ್ಲಿ ಡಿಸಿ. ಮನ್ನಾ ಜಾಗ ಇದೆ, ಎಷ್ಟು ಇದೆ ಎಂದು ಕೇಳಿದ್ದೆವು. ಅದನ್ನಾದರೂ ತಿಳಿಸಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ನೆಲ್ಯಾಡಿಯಲ್ಲಿ, ರಾಮಕುಂಜದಲ್ಲಿ ಡಿ.ಸಿ. ಮನ್ನಾ ಜಾಗ ಇತ್ತು. ಅವುಗಳಲ್ಲಿ ರಸ್ತೆಗಾಗಿ ಮತ್ತು ಸಹಕಾರಿ ಸಂಘಕ್ಕೆ ಹಂಚಿಕೆ ಆಗಿದೆ ಎಂದರು.

ಇದರಿಂದ ಮತ್ತೆ ಆಕ್ರೋಶಿತರಾದ ದಲಿತ ಮುಖಂಡರು ರಸ್ತೆ ನಿರ್ಮಿಸುವುದಕ್ಕೆ, ಸರಕಾರಿ ಕಟ್ಟಡ ನಿರ್ಮಾಣಕ್ಕೆ ಡಿಸಿ ಮನ್ನಾ ಜಾಗವೇ ನಿಮಗೆ ಬೇಕೇ?, ನೆಲ್ಯಾಡಿಯಲ್ಲಿ ೧೦ ಎಕ್ರೆ ಜಾಗವನ್ನು ನಿವೃತ್ತ ಸೈನಿಕರೋರ್ವರಿಗೆ ನೀಡಲಾಗಿತ್ತು. ಆದರೆ ಅವರು ಇದೀಗ ಆ ಜಾಗವನ್ನು ಮಾರಾಟ ಮಾಡಿ ಮುಂಬೈನಲ್ಲಿ ನೆಲೆಸಿದ್ದಾರೆ. ಆದ ಕಾರಣ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಅಂತಹವುಗಳನ್ನು ತೆರವು ಮಾಡಬೇಕು ಮತ್ತು ಅವುಗಳನ್ನು ದಲಿತರಿಗೆ ಹಂಚಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಇದೆಲ್ಲ ೨೦೦೬ರಲ್ಲಿ ಆಗಿರುವಂತದ್ದು, ೨೦೧೫ರಿಂದ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ಆಗಿಲ್ಲ. ಅದಕ್ಕಿಂತ ಹಿಂದೆ ಆಗಿರುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದಾಗ್ಯೂ ಅಕ್ರಮ ಸಕ್ರಮ ಅರ್ಜಿ ಸಲ್ಲಿಕೆಗೆ ಮಾರ್ಚ್ ತನಕ ಅವಕಾಶ ಇದ್ದು, ಅಂತಹ ಅರ್ಜಿಯನ್ನು ಮಂಜೂರಾತಿಗೆ ನೀಡಬಹುದು ಎಂದರು.

ದಲಿತರ ಹೆಸರಲ್ಲಿ ಉಳ್ಳವರ ಮನೆಗೆ ಕಾಂಕ್ರೀಟ್ ಆರೋಪ: ಎಸ್‌ಸಿ/ಎಸ್‌ಟಿ. ಕೋಟಾದಡಿ ದಲಿತ ಕಾಲೋನಿಗಳ ಹೆಸರಲ್ಲಿ ಶ್ರೀಮಂತರ ಮನೆಯ ರಸ್ತೆ ಕಾಂಕ್ರೀಟಿಕರಣ ಮಾಡಲಾಗಿದೆ. ಕ್ಷೇತ್ರದ ಶಾಸಕರು ದಲಿತ ಸಮುದಾಯದ ಅಹವಾಲುಗಳನ್ನು ಪರಿಗಣಿಸದೆ ಅವರಿಗೆ ಇಷ್ಟ ಬಂದಲ್ಲಿ ರಸ್ತೆ ಕಾಂಕ್ರೀಟಿಕರಣ ಮಾಡಲು ಎಸ್‌ಸಿಎಸ್‌ಟಿ. ನಿಗಮದ ಅನುದಾನ ಬಳಕೆ ಮಾಡುತ್ತಿದ್ದಾರೆ, ನೆಲ್ಯಾಡಿಯ ಪಟ್ಟೆ ಎಂಬಲ್ಲಿ ಯಾವುದೇ ದಲಿತ ಕುಟುಂಬಗಳು ಇಲ್ಲದಿದ್ದರೂ ಅಲ್ಲಿಗೆ ದಲಿತರ ಹೆಸರಿನಲ್ಲಿ ಕಾಂಕ್ರೀಟಿಕರಣ ಮಾಡಲಾಗಿದೆ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಇಂಜಿನಿಯರ್ ಕಾನಿಷ್ಕ, ದಲಿತ ಕಾಲೋನಿ ಸಂಪರ್ಕ ರಸ್ತೆಗೆ ಕಾಂಕ್ರಿಟೀಕರಣಗೊಳಿಸಲು ಅವಕಾಶವಿದೆ. ಹಾಗೆಯೇ ಆ ಭಾಗದ ಕಾಲೋನಿ ಜನರ ಅನುಮತಿ ಪಡೆದು ಅಗತ್ಯ ಇರುವ ಕಡೆ ಕಾಂಕ್ರಿಟೀಕರಣ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಹಂತಹಂತವಾಗಿ ರಸ್ತೆ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು, ಕೊಂಬಾರು ಗ್ರಾಮದ ಬೊಟ್ಟಡ್ಕದಲ್ಲಿ ೨೫ಕ್ಕಿಂತಲೂ ಹೆಚ್ಚು ದಲಿತ ಮನೆಗಳಿರುವ ಕಾಲೋನಿ ಇದೆ, ಅದಕ್ಕೆ ಈ ವರೆಗೆ ಶಾಸಕರು ಅನುದಾನ ನೀಡಿಲ್ಲ ಎಂದು ಶಶಿಧರ ಬೊಟ್ಟಡ್ಕ ಆರೋಪಿಸಿದರು.

ಅರಣ್ಯ ಉತ್ಪತ್ತಿಯ ಏಲಂ ಪಡೆಯಲು ಎಸ್‌ಸಿಎಸ್‌ಟಿಯವರಿಗೆ ಅವಕಾಶವಿದ್ದರೂ ಬೇರೆಯವರು ಅದನ್ನು ಕಬಳಿಸುತ್ತಿದ್ದಾರೆ. ಇನ್ನು ಮುಂದೆ ಎಸ್‌ಸಿಎಸ್‌ಟಿಯವರಿಗೇ ಅವಕಾಶ ನೀಡಬೇಕು, ಈಗ ಇರುವ ಅರಣ್ಯ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಸಮಿತಿಯಲ್ಲಿ ಎಸ್‌ಸಿ/ಎಸ್‌ಟಿ. ಸಮುದಾಯದವರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಗುರವಪ್ಪ ಕಲ್ಲುಗುಡ್ಡೆ ಅಗ್ರಹಿಸಿದರು.

ಸುಬ್ರಹ್ಮಣ್ಯದಲ್ಲಿ ದಲಿತ ಮುಖಂಡರ ವಿರುದ್ಧ ಸುಳ್ಳು ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ರಾಘವ ಕಳಾರ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಕಡಬ ಠಾಣಾಽಕಾರಿ ಆಂಜನೇಯ ರೆಡ್ಡಿ ದೂರು ನೀಡಿದಾಗ ಪ್ರಕರಣ ದಾಖಲಿಸಲೇಬೇಕು, ಬಳಿಕ ತನಿಖೆ ನಡೆಸಿ ಪ್ರಕರಣದಲ್ಲಿ ಸತ್ಯಾಂಶ ಇಲ್ಲದಿದ್ದರೆ ಬಿ. ರಿಪೋರ್ಟ್ ಹಾಕಲಾಗುತ್ತದೆ, ಸುಳ್ಳು ದೂರು ನೀಡಿರುವುದು ಸಾಬೀತಾದರೆ ದೂರು ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದರು. ಕಡಬದಲ್ಲಿ ತಾಲೂಕು ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು, ಆಹಾರ ಪರಿವೀಕ್ಷಕರು ವಾರದಲ್ಲಿ ಎರಡು ದಿನ ಕಡಬದಲ್ಲಿ ಕರ್ತವ್ಯ ನಿರ್ವಹಿಸಬೇಕು, ಸುವಿಧದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ದೊರೆಯುವ ಸವಲತ್ತುಗಳಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಬೇಕು ಮುಂತಾದ ಬೇಡಿಕೆಗಳನ್ನು ಸಲ್ಲಿಸಲಾಯಿತು.

ಕಡಬ ವೈದ್ಯಾಽಕಾರಿಯವರನ್ನು ವರ್ಗಾವಣೆಗೊಳಿಸದಿದ್ದರೆ ಪ್ರತಿಭಟನೆ: ಕಡಬ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿದರೂ ಜನರಿಗೆ ಯಾವುದೇ ಪ್ರಯೋಜನವಿಲ್ಲ. ವೈದ್ಯರು, ಸಿಬ್ಬಂದಿಗಳನ್ನು ನೀಡದೆ ಸರಕಾರ ಸತಾಯಿಸುತ್ತಿದೆ. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಲು ಇಲ್ಲಿ ಯಾರೂ ಇಲ್ಲ. ಇರುವ ಆರೋಗ್ಯಾಽಕಾರಿಯವರು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಅವರನ್ನು ವರ್ಗಾವಣೆಗೊಳಿಸಿ ಎಂದು ಕಳೆದ ಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ಸಭೆಯ ಒಳಗಡೆ ಅವರನ್ನು ವರ್ಗಾವಣೆಗೊಳಿಸದಿದ್ದರೆ ಸಭೆ ನಡೆಸಲು ಬಿಡದೆ ಪ್ರತಿಭಟನೆ ನಡೆಸುತ್ತೇವೆ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದರು. ಇದಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮಾತನಾಡಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿಗಳ ನೇಮಕಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ಸಭೆಯಲ್ಲಿ ದಲಿತ ಮುಖಂಡರಾದ ಗುರುವಪ್ಪ ಕಲ್ಲುಗುಡ್ಡೆ, ಶಶಿಧರ ಬೊಟ್ಟಡ್ಕ, ಬಾಬು ಸವಣೂರು, ವಸಂತ ಕುಬಲಾಡಿ, ಚಂದ್ರಹಾಸ ಬಲ್ಯ, ಆನಂದ ಕೆ, ರಾಘವ ಕಳಾರ, ತನಿಯ ಸಂಪಡ್ಕ, ಸುಂದರಿ ಕಲ್ಲುಗುಡ್ಡೆ, ಆನಂದ ಎಡಮಂಗಲ ಮತ್ತಿತರ ದಲಿತ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಽಕಾರಿ ನವೀನ್ ಭಂಡಾರಿ, ತಾಲ್ಲೂಕು ವೈದ್ಯಾಽಕಾರಿ ಡಾ. ದೀಪಕ್ ರೈ, ಪಟ್ಟಣ ಪಂಚಾಯಿತಿ ಮುಖ್ಯಾಽಕಾರಿ ಪಕೀರ ಮೂಲ್ಯ, ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೆಶಕ ಬಿ. ಕೃಷ್ಣ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here