ಬೊಳುವಾರಿನಲ್ಲಿ ಶ್ರೀ ವಿಶ್ವಕರ್ಮ ಪೂಜೆ, ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ

0

ಪುತ್ತೂರು: ಬೊಳುವಾರು ವಿಶ್ವಕರ್ಮ ಯುವ ಸಮಾಜ, ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘದ ವತಿಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಶನಿವಾರ ಶ್ರೀ ವಿಶ್ವಕರ್ಮ ಪೂಜೆ, ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರಗಿತು.

ಕುಲವೃತ್ತಿಯಿಂದ ಆತ್ಮವಿಶ್ವಾಸ:
ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಪುತ್ತೂರು ಜ್ಯುವೆಲ್ಲರ್‍ಸ್ ಅಸೋಸಿಯೇಷನ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಮಕ್ಕಳಿಗೆ ಧರ್ಮ, ಸಂಸ್ಕೃತಿಯ ಅರಿವಿಲ್ಲದಂತಾಗಿದೆ. ಇದಕ್ಕೆ ಕಾರಣ ಅವರಿಗೆ ಆ ಜ್ಞಾನವನ್ನು ನೀಡದೇ ಇರುವ ನಾವುಗಳೇ. ಆದ್ದರಿಂದ ಅವರಿಗೆ ಸಂಸ್ಕೃತಿಯನ್ನು ತಿಳಿಸಿಕೊಡುವ ಕೆಲಸ ಆಗಬೇಕಿದೆ. ಇದರ ಜೊತೆಗೆ ಯುವಕರು ಕುಲವೃತ್ತಿಯನ್ನು ವೃತ್ತಿಯಾಗಿಯೋ ಅಥವಾ ಪ್ರವೃತ್ತಿಯಾಗಿಯೋ ಕಲಿಯಬೇಕಾದ ಅಗತ್ಯವೂ ಇದೆ. ಕುಲವೃತ್ತಿ ನಮಗೆ ಆತ್ಮವಿಶ್ವಾಸವನ್ನು ತುಂಬಿಸುವ ಜೊತೆಗೆ, ಜೀವನಕ್ಕೊಂದು ದಾರಿಯನ್ನು ತೋರಿಸುತ್ತದೆ ಎಂದರು.

ವಿಶ್ವಕರ್ಮ ಜನಾಂಗದವರಲ್ಲಿ ಎಲ್ಲಾ ಕಲೆಗಳು ಮೇಳೈಸಿರುತ್ತವೆ. ಡೆಕೊರೇಷನ್, ಕಲೆ, ಸಾಹಿತ್ಯ, ಕುಶಲ ಕಲೆಗಳಲ್ಲಿ ವಿಶ್ವಕರ್ಮ ಜನಾಂಗದವರು ಸಿದ್ಧಹಸ್ತರು. ಇದರೊಂದಿಗೆ ಪಿ.ಎಫ್. ಮೊದಲಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸ್ವಂತ ಉದ್ಯಮ ನಡೆಸುವವರು ಪಿ.ಎಫ್. ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದರು. ಚಾಣಕ್ಯ ತಿಳಿಸಿದಂತೆ – ಶಿಕ್ಷಣದಿಂದ ವಿನಯ, ವಿನಯದಿಂದ ರಾಜತ್ವ, ರಾಜತ್ವದಿಂದ ಕೆಲಸಕ್ಕೊಂದು ಅರ್ಥ ಅಥವಾ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಲಭಿಸುತ್ತದೆ ಎಂದು ತಿಳಿಸಿದ್ದಾನೆ. ಅದರಂತೆ ಉತ್ತಮ ಶಿಕ್ಷಣವನ್ನು ಪಡೆಯಬೇಕೆಂಬ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಿರುವುದು ಉತ್ತಮ ಕೆಲಸ ಎಂದು ಶ್ಲಾಘಿಸಿದರು.

ಕಲಾಶಾಲೆಗಳಿಂದ ಕಲಾಸಂಪನ್ನತೆ:
ಮಡಿಕೇರಿ ಎಮ್ಮೆಮಾಡು ಸರಕಾರಿ ಪ್ರೌಢಶಾಲಾ ಚಿತ್ರಕಲಾ ಅಧ್ಯಾಪಕ ಮಂಜುನಾಥ ಆಚಾರ್ಯ ಮಾತನಾಡಿ, ಉತ್ತಮ ಕರಕುಶಲ ಕೆಲಸಗಳ ಹಿಂದೆ ವಿಶ್ವಕರ್ಮ ಜನಾಂಗದ ವ್ಯಕ್ತಿಗಳು ಇರುವುದನ್ನು ಗಮನಿಸಬಹುದು. ಕಲಾ ಶಾಲೆಗಳಿಗೆ ಹೋಗದೇ, ಉತ್ತಮ ಚಿತ್ರ, ಕೆತ್ತನೆ ಮೊದಲಾದ ಕೆಲಸಗಳಲ್ಲಿ ಉತ್ತಮ ಪಾಂಡಿತ್ಯವನ್ನು ಪಡೆದಿದ್ದಾರೆ. ಇವರನ್ನು ಕಲಾ ಶಾಲೆಗಳಿಗೆ ಕಲಿಸಿದರೆ, ಉತ್ತಮ ಪ್ರತಿಭಾ ಸಂಪನ್ನರಾಗಿ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ ಎಂದರು.

ನೆರವಾದವರನ್ನು ಮರೆಯದಿರಿ:
ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಎಸ್.ಎನ್. ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಬೇಕೆಂಬ ದೃಷ್ಟಿಯಿಂದ ವಿದ್ಯಾರ್ಥಿವೇತನ ವಿತರಿಸಲಾಗಿದೆ. ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಮೂಡಿಬರಬೇಕು. ಮಾತ್ರವಲ್ಲ, ತಮ್ಮ ಜೀವನದಲ್ಲಿ ಸಹಾಯ ಮಾಡಿದವರನ್ನು ಎಂದಿಗೂ ಮರೆಯದಿರಿ ಎಂದು ಕಿವಿಮಾತು ಹೇಳಿದರು.

ವೆಬ್‌ಸೈಟ್, ಸೇವಾಕೇಂದ್ರ ಆರಂಭ:
ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಕೆ. ಮಾತನಾಡಿ, ಸಾಂಪ್ರದಾಯಿಕ ಕಲೆಗಳಿಂದ ಹಿಡಿದು ಟಿಕ್‌ಟಾಕ್‌ವರೆಗೂ ಉತ್ತಮ ಕಲಾವಿದರನ್ನು ವಿಶ್ವಕರ್ಮ ಸಮಾಜ ಹೊಂದಿದೆ. ಸಮಾಜಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡುವ ದೃಷ್ಟಿಯಿಂದ ವೆಬ್‌ಸೈಟ್ ಆರಂಭಿಸುವ ಯೋಜನೆ ಇದೆ. ಇದರ ಜೊತೆಗೆ ಸೇವಾಕೇಂದ್ರವನ್ನು ತೆರೆಯುವ ಯೋಜನೆಯೂ ಇದೆ ಎಂದು ತಿಳಿಸಿದರು.

ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಪುರುಷೋತ್ತಮ್ ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರೌಢಶಾಲಾ ವಿಭಾಗದ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ರಮೇಶ್ ಪುರೋಹಿತ್ ಪ್ರಾರ್ಥಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕರ್ಮ ಯುವ ಸಮಾಜದ ಕಾರ್ಯದರ್ಶಿ ಮಹೇಶ್ ಎಂ., ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ, ನಾರಾಯಣ ಆಚಾರ್ಯ, ರಮೇಶ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ವಿಶ್ವಕರ್ಮ ಯುವ ಸಮಾಜದ ಕೋಶಾಧಿಕಾರಿ ವಸಂತ ಆಚಾರ್ಯ ಬೊಳುವಾರು ವಂದಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಜತೆ ಕಾರ್ಯದರ್ಶಿ ಆನಂದ ಆಚಾರ್ಯ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here