ರಾಮಕುಂಜ: ಅ.19ರಂದು ಸಂಜೆ ರಾಮಕುಂಜ ಪರಿಸರದಲ್ಲಿ ವಿಪರೀತ ಗಾಳಿ ಮಳೆಯಾಗಿದ್ದು ಕಾಜರೊಕ್ಕು ಎಂಬಲ್ಲಿ ತೆಂಗಿನಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅಲ್ಲದೆ ಸಚಿನ್ ಎಂಬವರ ಸರ್ವೀಸ್ ಸ್ಟೇಷನ್‌ಗೂ ಹಾನಿಯಾಗಿದೆ. ಗಾಳಿಗೆ ತೆಂಗಿನಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಇದರಿಂದ ಪರಿಸರದ ನಾಲ್ಕು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಸಚಿನ್ ಎಂಬವರ ಸರ್ವಿಸ್ ಸ್ಟೇಷನ್‌ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ತಂತಿ ಎಳೆದಂತಾಗಿ ಕಟ್ಟಡದ ಶೀಟ್, ಛಾವಣಿ ಸಂಪೂರ್ಣ ಹಾನಿಯಾಗಿದೆ. ಘಟನೆ ವೇಳೆ ಕಟ್ಟಡದ ಒಳಗಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ. ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆತೂರು ಸಮೀಪದ ಆಯಿಶಾ ವಿದ್ಯಾ ಸಂಸ್ಥೆಯ ಬಳಿ ಚರಂಡಿಯಲ್ಲಿ ಹೂಳು ತುಂಬಿದ್ದರಿಂದ ಸರಾಗವಾಗಿ ಮಳೆ ನೀರು ಹರಿಯಲು ತಡೆ ಉಂಟಾದ ಪರಿಣಾಮ ರಸ್ತೆಯಲ್ಲಿ ನೀರು ಹರಿಯಿತು. ಕೆಲ ಕಾಲ ಸಂಚಾರಕ್ಕೂ ತೊಂದರೆಯಾಯಿತು. ಹೆದ್ದಾರಿಯ ಇನ್ನೊಂದು ಮಗ್ಗುಲಲ್ಲಿದ್ದ ಮನೆಗಳಿಗೆ ನೀರು ನುಗ್ಗಿತ್ತು. ಮನೆಯಂಗಳದಲ್ಲಿದ್ದ ಬಾವಿಗಳಿಗೆ ಮಳೆ ನೀರು ಸೇರಿಕೊಂಡಿತ್ತು. ಕಡಬ ತಾಲೂಕಿನೆಲ್ಲೆಡೆ ಭಾರೀ ಮಳೆಯಾಗಿದ್ದು ಅಲ್ಲಲ್ಲಿ ಕೃಷಿ ತೋಟಗಳಿಗೆ ನೀರು ನುಗ್ಗಿರುವುದಾಗಿ ವರದಿಯಾಗಿದೆ.