ದ17 ರಿಂದ ಜನವರಿ 14 ರವರೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಧನುಪೂಜಾ ಸಂಭ್ರಮ

0

ಬೆಟ್ಟಂಪಾಡಿ: ಚುಮು ಚುಮು ಚಳಿ, ನಿದ್ದೆಯ ಮಂಪರಿನಲ್ಲೂ ತಮ್ಮ ಆರಾಧ್ಯದೇವರ ಪೂಜಾ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಕಾತುರ.. ರುದ್ರಪಾರಾಯಣ, ಭಜನೆ, ಕುಣಿತ ಭಜನೆ, ಸಂಗೀತ, ಚೆಂಡೆ ತಾಳ ಮೇಳದ ನಿನಾದದೊಂದಿಗೆ‌‌ ಮೂಡಣದಿ ನೇಸರ ಮೂಡುವ ಮೊದಲೇ ಭಕ್ತಗಡಣದ ಸಮ್ಮುಖದಲ್ಲಿ ಮಹಾದೇವನಿಗೆ ಸಲ್ಲುತ್ತದೆ ಧನು ಮಾಸದ ವಿಶೇಷ ಪೂಜೆ.

ವೈಭವದ ಧನುಪೂಜಾ ಸಂಭ್ರಮಕ್ಕೆ ಮತ್ತೊಮ್ಮೆ ಸಾಕ್ಷಿಯಾಗಲಿದೆ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಮಹಾಲಿಂಗೇಶ್ವರನ‌ ಸನ್ನಿಧಿ. 2022 ಡಿಸೆಂಬರ್ 17ರಿಂದ 2023 ನೇ ಜನವರಿ 14ರವರೆಗೆ ಶ್ರೀ ಕ್ಷೇತ್ರದಲ್ಲಿ ಧನುಮಾಸದ ವಿಶೇಷ ಪೂಜೆ ನಡೆಯಲಿದೆ. ಪ್ರತಿ ದಿನ ಪೂರ್ವಾಹ್ನ 5.30ರಿಂದ ಮಹಾಲಿಂಗೇಶ್ವರ ದೇವರಿಗೆ ಭಕ್ತಿಯ ಧನುಪೂಜೆಯ ಸಮರ್ಪಣೆಯಾಗಲಿದೆ.

ಪೂಜೆಗೂ ಮೊದಲು ರುದ್ರಾಧ್ಯಾಯಿಗಳಿಂದ ರುದ್ರಪಾರಾಯಣ, ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಕುಣಿತ ಭಜನಾ ತಂಡದವರಿಂದ ನೃತ್ಯ ಭಜನಾ ಸೇವೆ, ಮಣಿಕಂಠ ಚೆಂಡೆ ಮೇಳದವರಿಂದ ಚೆಂಡೆ ಸೇವೆ, ಸಂಗೀತ, ಯಕ್ಷಗಾನ ಸೇವೆ ನಡೆದು ಬರುತ್ತದೆ. ಪೂಜೆಯ ಬಳಿಕ ಭಕ್ತಾಭಿಮಾನಿಗಳಿಗೆ ಉಪಾಹಾರದ ವ್ಯವಸ್ಥೆಯೂ ನಡೆಯುತ್ತದೆ. ವಿಶೇಷ ದಿನಗಳಂದು ದೇವರಿಗೆ ಮತ್ತು ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ದೀಪಾಲಂಕಾರ ಸೇವೆಯೂ ನಡೆಯುತ್ತದೆ.

ಈ ಬಾರಿ ಮೂರನೇ ವರ್ಷದ ಧನುಪೂಜೆ ಕ್ಷೇತ್ರದಲ್ಲಿ ನಡೆಯಲಿದ್ದು, ಕಳೆದ ಎರಡು ವರ್ಷವೂ ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಊರ ಪರವೂರ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ರವರು.

LEAVE A REPLY

Please enter your comment!
Please enter your name here