ಇಂದು(ಜ.21) ವಿಟ್ಲದಲ್ಲಿ ಮಹಾರಥೋತ್ಸವ ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್‌

0

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ಜ.21ರಂದು ರಾತ್ರಿ ನಡೆಯಲಿದೆ. ರಥೋತ್ಸವ ಕಾರ್ಯಕ್ರಮದಲ್ಲಿ ಊರ ಪರವೂರಿನ ಸಾವಿರಾರು ಭಕ್ತಾದಿಗಳು ಭಾಗವಹಿಸುವ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.


ಜ.21ರಂದು ಬೆಳಗ್ಗೆ ದರ್ಶನ ಬಲಿ, ರಾಜಾಂಗಣದ ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 8ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರಲಿದೆ. ಬಳಿಕ ಸುಡುಮದ್ದು ಪ್ರದರ್ಶನ ಮಹಾರಥೋತ್ಸವ ನಡೆಯಲಿದೆ. ಬಳಿಕ ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.

ಏಳನೇ ದಿನವಾದ ಜ.20ರಂದು ಬೆಳಿಗ್ಗೆ 5 ಗಂಟೆಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು, ರಾತ್ರಿ ಉತ್ಸವ ನಡೆದು ಬಳಿಕ ಹೂತೇರು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ವಿ.ಆರ್.ಸಿ ವಿಟ್ಲ ಇದರ ಆಶ್ರಯದಲ್ಲಿ ರಮಾನಾಥ ವಿಟ್ಲರವರ ಸಾರಥ್ಯದಲ್ಲಿ ವಿಟ್ಲೋತ್ಸವ ನಡೆಯಿತು.

ಜ.19ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ತೆಪ್ಪೋತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಆರ್.ಕೆ.ಕಲಾ ಆರ್ಟ್ಸ್ ವಿಟ್ಲ ಇವರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್  ವಿಟ್ಲ ರವರ ನಿರ್ದೇಶನದಲ್ಲಿ ನೃತ್ಯ ಸಂಭ್ರಮ – 2023 ನಡೆಯಿತು.

ನಾಳೆ ಕವಾಟೋದ್ಘಾಟನೆ: ದೇವಾಲಯದಲ್ಲಿ ಜ.22ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಮಹಾಪೂಜೆ, ಕಾಲಾವಧಿ ಬಟ್ಟಲು ಕಾಣಿಕೆ, ತುಲಾಭಾರ ಸೇವೆ ನಡೆಯಲಿದೆ. ರಾತ್ರಿ ಓಕುಳಿಕಟ್ಟೆಯಲ್ಲಿ ಕಟ್ಟೆಪೂಜೆಯ ನಂತರ ಶ್ರೀದೇವರಿಗೆ ಅಷ್ಟಾವಧಾನ ಸೇವೆ ನಡೆಯಲಿದೆ. ನಂತರ ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ದೇವರ ಸವಾರಿ, ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ.

ಬಿಗಿ ಪೊಲೀಸ್ ಬಂದೋಬಸ್ತು: ವಿಟ್ಲ ರಥೋತ್ಸವದ ಪ್ರಯುಕ್ತ ದೇವಾಲಯದ ಜಾತ್ರಾ ಗದ್ದೆ ಸಹಿತ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿವಿಧ ಕಡೆಗಳಿಂದ ಹೆಚ್ಚುವರಿಯಾಗಿ ಪೊಲೀಸರನ್ನು ಕರೆಸಲಾಗಿದೆ. ಮಾತ್ರವಲ್ಲದೆ ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. ರಥೋತ್ಸವದ ವೇಳೆ ಜನಜಂಗುಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಚಿನ್ನಾಭರಣಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಹಾಗೂ ಮಕ್ಕಳ ಬಗ್ಗೆ ಕೂಡಾ ಜಾಗೃತರಾಗಿರಬೇಕು. ಈಗಾಗಲೇ ಕೆಲವೆಡೆ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದ್ದು ಕೆಲವೊಂದು ಆಯಕಟ್ಟಿನ ಸ್ಥಳದಲ್ಲಿ ಹೆಚ್ಚುವರಿ ಸಿ.ಸಿ ಕ್ಯಾಮರವನ್ನು ಅಳವಡಿಸಲಾಗಿದೆ. ಅಹಿತಕರ ಘಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸರು ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ದೇವಸ್ಥಾನದ ಸಮೀಪ ಸಾರ್ವಜನಿಕರಿಗೆ ಸಹಾಯವಾಗಲೆಂದು ಪೊಲೀಸ್ ಔಟ್‌ಪೋಸ್ಟನ್ನು ತೆರೆಯಲಾಗಿದೆ. ಜಾತ್ರೋತ್ಸವದ ಗದ್ದೆಯಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಠಾಣೆಯನ್ನು ಅಥವಾ ಪೊಲೀಸ್ ಔಟ್‌ಪೋಸ್ಟನ್ನು ಸಂಪರ್ಕಿಸುವಂತೆ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here