- ಕಡಬ ತಹಸೀಲ್ದಾರ್ ಕಛೇರಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ: ಎಸಿ ಗಿರೀಶ್ ನಂದನ್
ಕಡಬ: ಮಾ.5 ರಂದು ಕಡಬದ ತಹಶೀಲ್ದಾರ್ ಕಚೇರಿಯಲ್ಲಿ ಮೇಜಿನ ಮೇಲೆ ದಲ್ಲಾಳಿ ಎನ್ನಲಾಗಿರುವ ವ್ಯಕ್ತಿಯೊಬ್ಬರು ರಾಜಾ ರೋಷವಾಗಿ ಕುಳಿತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಭೇಟಿ ನೀಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಬಂದಾಗ ಹೊರಭಾಗದಲ್ಲಿ ನಿಂತು ಕಾಯುತ್ತಿದ್ದರೂ ಒಳಗಡೆ ಸಿಬ್ಬಂದಿಗಳು ದಲ್ಲಾಳಿ ತರಿಸಿರುವ ಚಾ ತಿಂಡಿ ತಿನ್ನುತ್ತಿದ್ದ ಆರೋಪ ವ್ಯಕ್ತವಾಗಿತ್ತು, ಇದು ಜಿಲ್ಲಾಧಿಕಾರಿಯವರ ಗಮನಕ್ಕೆ ಕೂಡ ಬಂದು ಅವರು ಕೂಡ ಗರಂಗೊಂಡಿದ್ದರು. ಈ ಹಿನ್ನಲೆಯಲ್ಲಿ ಮಾ.೭ರಂದು ಎ.ಸಿ.ಯವರು ತಾಲೂಕು ಕಛೇರಿಗೆ ಭೇಟಿ ನೀಡಿದ್ದರು.
ಮಧ್ಯವರ್ತಿಗಳಿಗೆ ಅವಕಾಶವಿಲ್ಲ-ಎ.ಸಿ.
ಕಡಬ ತಹಶಿಲ್ದಾರ್ ಕಛೇರಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡುವುದಿಲ್ಲ. ಅಂತಹ ವಿಚಾರಗಳು ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಸೂಕ್ರ ಕ್ರಮ ಜರಗಿಲಾಗುವುದು ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಎಚ್ಚರಿಕೆ ನೀಡಿದರು.
ಅವರು ಸೋಮವಾರ ಕಡಬ ತಹಶಿಲ್ದಾರ್ ಕಛೇರಿಗೆ ಭೇಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಕಡಬ ತಾಲೂಕು ಕಛೇರಿಯ ಟೇಬಲ್‌ನಲ್ಲಿ ಮದ್ಯವರ್ತಿಯೊಬ್ಬರು ಕುಳಿತು ದರ್ಬರ್ ನಡೆಸಿದ್ದಾರೆ ಎಂದು ಸುದ್ದಿಯಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲಾಗುತ್ತಿದೆ, ಪ್ರತೀ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿದೆ, ಸಾರ್ವಜನಿಕರು ಯಾರೂ ಕೂಡಾ ಅವರ ಕೆಲಸಕ್ಕೆ ಸರಕಾರಿ ಕಛೇರಿಗೆ ಬರಬಹುದು, ಅವರು ಸಹಾಯಕ್ಕೆ ಕರೆದುಕೊಂಡು ಬರಬಹುದು ಆದರೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಹಣ ಸುಲಿಗೆ ಮಡುವ ಕೆಲಸ ಮಾಡಿದರೆ ಅದು ಅನ್ಯಾಯವಾಗುತ್ತದೆ, ಇಂತಹ ಮಧ್ಯವರ್ತಿಗಳ ಬಗ್ಗೆ ಮೃದು ದೋರಣೆ ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ, ಸಾರ್ವಜನಿಕರ ಕೆಲಸವನ್ನು ಅಧಿಕಾರಿಗಳು ಯಾವುದೇ ತಕರಾರಿಲ್ಲದೆ ಮಾಡಿಕೊಡಬೇಕು ಎನ್ನುವ ಸೂಚನೆಯನ್ನು ಕೂಡಾ ನೀಡಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಡಬ ತಹಶಿಲ್ದಾರ್ ಅನಂತ ಶಂಕರ್ ಬಿ. ಉಪಸ್ಥಿತರಿದ್ದರು.