ಕಂಬಳ ಕೂಟಕ್ಕೆ 15 ಲಕ್ಷ ರೂ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಡಿ.ಸಿ.ಗೆ ಅಶೋಕ್ ರೈ ಮನವಿ

0

ಪುತ್ತೂರು: ಪ್ರತೀ ಕಂಬಳ ಕೂಟಗಳಿಗೆ ತಲಾ ಹದಿನೈದು ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈಯವರು ದ.ಕ‌. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರಿಗೆ ಮಾ.7ರಂದು ಮನವಿ ಸಲ್ಲಿಸಿದ್ದಾರೆ.

ಸಾವಿರ ವರ್ಷಗಳ ಇತಿಹಾಸ, ಪರಂಪರೆ ಹೊಂದಿರುವ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿನ ರೈತರ ಆರಾಧನಾತ್ಮಕ ಆಚರಣೆಯಾಗಿರುವ ಕಂಬಳದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನರು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಬಡವರು, ಶ್ರೀಮಂತರು ಎಂಬ ತಾರತಮ್ಯವಿಲ್ಲದ ಸಹಸ್ರಾರು ಸಂಖ್ಯೆಯಲ್ಲಿ ಕುಟುಂಬ ಸಹಿತ ಪಾಲ್ಗೊಳ್ಳುತ್ತಿದ್ದಾರೆ. ಕಂಬಳವು ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಿ ಸಂಪ್ರದಾಯಬದ್ಧವಾಗಿ ಆಚರಿಸುವ ಜನಪ್ರಿಯ ಜಾನಪದ ಉತ್ಸವವಾಗಿದೆ.

ರೈತರ ಗ್ರಾಮೀಣ ಬದುಕಿಗೆ ಪೂರಕವಾಗಿ ಈ ದೇಶದ ಕಾನೂನನ್ನು ಪಾಲಿಸುತ್ತ ಅಹಿಂಸಾತ್ಮಕವಾಗಿ ಕಂಬಳವನ್ನು ಸಂಘಟಿಸಲಾಗುತ್ತಿದೆ. ವರ್ಷಂಪ್ರತಿ ಸುಮಾರು 23 ರಿಂದ 25 ಕಂಬಳ ಕೂಟಗಳನ್ನು ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ಕರಾವಳಿ ಭಾಗದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗುತ್ತಿದೆ. ಈ ಕಂಬಳ ಕೂಟಗಳ ಸಂಘಟನೆಗೆ ಹಲವಾರು ಲಕ್ಷ ರೂಪಾಯಿಗಳ ಅಗತ್ಯವಿದೆ. ರೈತರು ಅತ್ಯಂತ ಕಷ್ಟದಿಂದ ಆರ್ಥಿಕ ಹೊಂದಾಣಿಕೆ ಮಾಡಿಕೊಂಡು ಈ ಕೂಟಗಳನ್ನು ಪ್ರತಿ ವರ್ಷ ಆಯೋಜಿಸುತ್ತಿದ್ದಾರೆ. ಕರ್ನಾಟಕ ಸರಕಾರ ಕೂಡ ಕಂಬಳ ಕೂಟಗಳ ಆಯೋಜನೆಗೆ ಆರ್ಥಿಕ ಸಹಾಯ ಮಾಡುತ್ತಾ ಬರುತ್ತಿದೆ.
ಕಂಬಳ ಆಚರಣೆಯು ಕೇವಲ ಕರ್ನಾಟಕಕ್ಕೆ ಅಷ್ಟೇ ಸೀಮಿತವಾಗಿರದೆ ದೇಶ, ವಿದೇಶಗಳ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಅನೇಕ ವಿದೇಶಿ ಪತ್ರಿಕೆಗಳಲ್ಲೂ ಈ ಬಗ್ಗೆ ಪ್ರಶಂಸೆಯ ಮಾತುಗಳು ಪ್ರಕಟಗೊಂಡಿವೆ.

ಕಂಬಳ ಕೂಟಗಳು ರೈತಾಪಿ ವರ್ಗದ ಜನರ ಆಚರಣೆಯಾಗಿದ್ದು, ಸಾವಿರಾರು ಕುಟುಂಬಗಳು ಈ ಆಚರಣೆಯಿಂದ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿವೆ. 2021-22ರ ಸಾಲಿನ ಈ ಕಂಬಳ ಕೂಟಗಳ ಆಯೋಜನೆಗೆ ಕರ್ನಾಟಕ ಸರಕಾರದ ಆರ್ಥಿಕ ಸಹಾಯದ ಅಗತ್ಯವಿದೆ. ಅದರಂತೆ ಕರ್ನಾಟಕ ಸರಕಾರವು 2021-22ರ ಸಾಲಿನ ಬಜೆಟ್ ನಲ್ಲಿ ಕಂಬಳ ಆಯೋಜನೆಗೆ ಹಣ ಮೀಸಲಿಟ್ಟಿದೆ. ಜಿಲ್ಲಾ ಕಂಬಳ ಸಮಿತಿ ನೀಡಿರುವ ಕಂಬಳ ವೇಳಾಪಟ್ಟಿಯಂತೆ ಕಂಬಳ ಕೂಟಗಳ ಆಯೋಜನೆ ಬಾಕಿಯಿರುವ ಕಂಬಳ ಕೂಟಗಳ ಆಯೋಜನೆಗೆ ತಲಾ 15 ಲಕ್ಷ ರೂಪಾಯಿಯನ್ನು ಪ್ರತಿಯೊಂದು ಕಂಬಳ ಕೂಟಗಳಿಗೆ ಬಿಡುಗಡೆ ಮಾಡಲು ಕರ್ನಾಟಕ ಸರಕಾರಕ್ಕೆ ಪುಸ್ತಾವನೆ ಸಲ್ಲಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪುತ್ತೂರು ಕೋಟಿ-ಚೆನ್ನಯ ಮತ್ತು ಉಪ್ಪಿನಂಗಡಿಯ ವಿಜಯ ವಿಕ್ರಮ ಜೋಡುಕರೆ ಕಂಬಳ ಸಹಿತ ವಿವಿಧ ಕಂಬಳ ಕೂಟಗಳ ವೇಳಾಪಟ್ಟಿಯನ್ನು ಮನವಿಯಲ್ಲಿ ಲಗತ್ತಿಸಲಾಗಿದೆ‌. ಕಂಬಳ ಕೂಟಗಳಿಗೆ ವಿಶೇಷ ಅನುದಾನ ನೀಡುವಂತೆ ಕರ್ನಾಟಕ ಸರಕಾರದ ಪ್ರವಾಸೋದ್ಯಮ‌ ಖಾತೆಯ ಸಚಿವ ಆನಂದ್ ಸಿಂಗ್ ಅವರನ್ನು ಅಶೋಕ್ ರೈ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಇದೀಗ ಜಿಲ್ಲಾಧಿಕಾರಿಗಳ ಮೂಲಕವೂ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಪೂರಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಯವರು ನಾನು ಕೂಡ ಕಂಬಳದ ಅಭಿಮಾನಿಯಾಗಿದ್ದೇನೆ ಎಂದು ತಿಳಿಸಿದರಲ್ಲದೆ ತಕ್ಷಣವೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷರೂ ಹಾಲಿ ಗೌರವಾಧ್ಯಕ್ಷರೂ ಆಗಿರುವ ಬಿ.ಆರ್. ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here