- ಮಾ.13ರಿಂದ ಕುದಿ ಓಡಿಸಲು ಅವಕಾಶ
ಉಪ್ಪಿನಂಗಡಿ: ಮುಂಬರುವ ಎಪ್ರಿಲ್ 2 ಮತ್ತು 3ರಂದು ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಮಾ.13ರಿಂದ ಕುದಿ ಓಡಿಸಲು ಕಂಬಳ ಕರೆಯಲ್ಲಿ ಅವಕಾಶ ನೀಡಲಾಗುವುದು ಎಂದು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.
ಹಳೆಗೇಟು ದಡ್ಡುವಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯ ಬಳಿ ಕಂಬಳ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರೆಯ ಕೆಲಸಗಳು ಮುಗಿಯುವ ಹಂತದಲ್ಲಿದ್ದು, ಕಂಬಳ ಕೋಣಗಳಿಗೆ ಕುದಿ ಓಡಿಸಲು ಮಾ.೧೩ರಿಂದ ಅವಕಾಶ ನೀಡಲಾಗುವುದು. ಕಂಬಳಕ್ಕಾಗಿ ನದಿ ಬದಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಎರಡು ವಾರಗಳಲ್ಲಿ ಎಲ್ಲಾ ಕೆಲಸಗಳು ಮುಗಿದು ಪರಿಸರ ಸಂಪೂರ್ಣ ಕಂಬಳಕ್ಕಾಗಿ ಸಿದ್ಧಗೊಳ್ಳಲಿದೆ. ಈ ಹಿಂದಿನ ಬಾರಿಗಿಂತಲೂ ಈ ಬಾರಿ ಅದ್ದೂರಿಯಾಗಿ ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದೆ. ಮಾ.13ರಂದು ಕಂಬಳದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವನ್ನೂ ನಡೆಸಲಾಗುವುದು. ಅಲ್ಲದೇ, ಅದೇ ದಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಸಂಘದ ವತಿಯಿಂದ ಕಂಬಳ ನಡೆಯುವ ಜಾಗದಲ್ಲಿ ಶ್ರಮದಾನವನ್ನೂ ನಡೆಸಲಾಗುವುದು ಎಂದರು.
ಸಭೆಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ಪದಾಧಿಕಾರಿಗಳಾದ ನಿರಂಜನ್ ರೈ ಮಠಂತಬೆಟ್ಟು, ಅಶೋಕ ರೈ ಅರ್ಪಣಿಗುತ್ತು, ದಿಲೀಪ್ ಶೆಟ್ಟಿ ಕರಾಯ, ಶಿವರಾಮ ಶೆಟ್ಟಿ ಗೋಳ್ತಮಜಲು, ರಾಕೇಶ ಶೆಟ್ಟಿ, ಕೃಷ್ಣಪ್ಪ ನಂದಿನಿನಗರ, ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಚಾರ ಸಮಿತಿಯ ಸಂಚಾಲಕ ಕೃಷ್ಣಪ್ರಸಾದ್ ಬೊಳ್ಳಾವು ಉಪಸ್ಥಿತರಿದ್ದರು.