ಫೆ.13, 14: ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ

0

ನೆಲ್ಯಾಡಿ: ಗ್ರಾಮ ದೇವರಾದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಫೆ.14 ಹಾಗೂ 14ರಂದು ನಡೆಯಲಿದೆ.

ಫೆ.12ರಂದು ಬೆಳಿಗ್ಗೆ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಕಾಂಚನ ಬಸ್‌ನಿಲ್ದಾಣದಿಂದ ಹೊರೆಕಾಣಿಕೆ ಮೆರವಣಿಗೆ ಆರಂಭಗೊಳ್ಳಲಿದೆ. ನಂತರ ದೇವಸ್ಥಾನದಲ್ಲಿ ಉಗ್ರಾಣ ಮುಹೂರ್ತ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ.13ರಂದು ಬೆಳಿಗ್ಗೆ 8.45ಕ್ಕೆ ಗೊನೆ ಮುಹೂರ್ತದೊಂದಿಗೆ ವಾರ್ಷಿಕ ಜಾತ್ರೆ ಆರಂಭಗೊಳ್ಳಲಿದೆ. ಬಳಿಕ ಬಜತ್ತೂರು, ಕಾಂಚನ, ಪದಕ ದೈವಗಳಿಗೆ ತಂಬಿಲ, ಬಜತ್ತೂರು ಗುತ್ತಿನ ನಾಗತಂಬಿಲ, ತೋರಣ ಮುಹೂರ್ತ ನಡೆಯಲಿದೆ. ರಾತ್ರಿ 7.30ಕ್ಕೆ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಗ್ರಾಮ ದೈವವಾದ ಶಿರಾಡಿ ದೈವಗಳ ಭಂಡಾರ ತರುವುದು, ರಾತ್ರಿ 8ಕ್ಕೆ ಶ್ರೀ ದೇವರಿಗೆ ರಂಗಪೂಜೆ, ಪಂಜುರ್ಲಿ ಮತ್ತು ಗ್ರಾಮ ದೈವಗಳಿಗೆ ಕೊಡಿನಾಡಿನಲ್ಲಿ ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8.30ಕ್ಕೆ ಶ್ರೀ ದೇವರ ಬಲಿ ಹೊರಡುವುದು, ಅಶ್ವತ್ಥ ಕಟ್ಟೆಪೂಜೆ, ಉತ್ಸವ, ವಸಂತ ಕಟ್ಟೆಪೂಜೆ, ನೃತ್ಯ ಬಲಿ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

ಫೆ.14ರಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, ಕಲಶಾಭಿಷೇಕ, ಗಣಪತಿ ದೇವರಿಗೆ ಅಪ್ಪಸೇವೆ ನಡೆಯಲಿದೆ. ಬಳಿಕ ಶ್ರೀ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪಂಜುರ್ಲಿ ದೈವಕ್ಕೆ ತಂಬಿಲ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ವರ್ಣರ ಪಂಜುರ್ಲಿ ದೈವಕ್ಕೆ ತಂಬಿಲ ಮತ್ತು ಭಂಡಾರ ತೆಗೆಯುವುದು, ದೇವರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ನಂತರ ವರ್ಣರ ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮ ದೈವ ಶಿರಾಡಿ ದೈವಗಳ ನೇಮೋತ್ಸವ ನಡೆಯಲಿದೆ. ಫೆ.೧೫ರಂದು ಅಪರಾಹ್ನ ದೊಂಪದ ಬಲಿಯ ಮಾರಿ ಪೂಜೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ, ಪುಸ್ತಕ ಬಿಡುಗಡೆ:

ಫೆ.14ರಂದು ಸಂಜೆ 5ರಿಂದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಾಂಚನ ವೆಂಕಟಸುಬ್ರಹ್ಮಣ್ಯಂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಹಾಗೂ ಊರ ಭಕ್ತಾದಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ರಿಂದ ಶ್ರೀ ಕ್ಷೇತ್ರ ಕಟೀಲಿನಿ ಅನುವಂಶೀಯ ಅರ್ಚಕರಾದ ಹರಿನಾರಾಯಣ ಅಸ್ರಣ್ಣರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸನ್ಮಾನ, ಸುಮನ ಬಡಿಕ್ಕಿಲ್ಲಾಯ ಕಾಂಚನ ಅವರು ಬರೆದಿರುವ ’ ಅಮ್ಮನ ಮನೆ ಮದ್ದು’ ಪುಸ್ತಕ ಬಿಡುಗಡೆಗೊಳ್ಳಲಿದೆ. ದೇವಸ್ಥಾನದ ಅರ್ಚಕರು, ಮೊಕ್ತೇಸರರೂ ಆದ ನಾರಾಯಣ ಬಡಿಕ್ಕಿಲ್ಲಾಯ, ಬ್ರಹ್ಮವಾಹಕರಾದ ಕೃಷ್ಣ ಹೊಳ್ಳ ಬಾರೆ ಕಾಸರಗೋಡು ಅವರಿಗೆ ಸನ್ಮಾನ ನಡೆಯಲಿದೆ. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಉಪ್ಪಿನಂಗಡಿ ವಲಯ ಮೇಲ್ವಿಚಾರಕ ಚಂದ್ರಶೇಖರ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here