ಅಮಿತ್ ಶಾರವರು ಕ್ಯಾಂಪ್ಕೋ ಸುವರ್ಣ ಮಹೋತ್ಸವದ ವೇದಿಕೆಯನ್ನು ಬಿಜೆಪಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿರುವುದು ಸರಿಯಲ್ಲ – ಎಂ.ಬಿ ವಿಶ್ವನಾಥ ರೈ

0

ಪುತ್ತೂರು: ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳು ಹಾಗೂ ಅದಕ್ಕೆ ಸರಕಾರ ಒದಗಿಸಲಿರುವ ಪರಿಹಾರ ಕ್ರಮಗಳ ಬಗ್ಗೆ ಮಾತನಾಡದ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾರವರು ಕ್ಯಾಂಪ್ಕೋ ಸುವರ್ಣ ಮಹೋತ್ಸವದ ವೇದಿಕೆಯನ್ನು ಬಿಜೆಪಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಆರೋಪಿಸಿದ್ದಾರೆ.

ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಎಂ.ಬಿ. ವಿಶ್ವನಾಥ ರೈಯವರು ಶಾ ಭೇಟಿಯಿಂದ ಪುತ್ತೂರಿಗೆ ಯಾವುದೇ ಉಪಯೋಗವಾಗಿಲ್ಲ. ಜನರ ಹಣವನ್ನು ಪಕ್ಷದ ಪ್ರಚಾರಕ್ಕೆ ಉಪಯೋಗಿಸಲು ಕ್ಯಾಂಪ್ಕೋ ಸಂಸ್ಥೆಯನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿದರು. ದೊಡ್ಡ ನಾಯಕರು ಭೇಟಿ ನೀಡುವಾಗ ತರಾತುರಿಯಲ್ಲಿ ರಸ್ತೆ, ಹೆಲಿಪ್ಯಾಡ್‌ಗಳನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಆದರೆ ಜನ ಸಾಮಾನ್ಯರ ಸಮಸ್ಯೆಗಳು ಒಂದಷ್ಟು ವರ್ಷ ಕಳೆದರೂ ಪರಿಹಾರವಾಗುವುದಿಲ್ಲ, ಸೂಕ್ತ ಸ್ಪಂದನೆಯೂ ಸಿಗುತ್ತಿಲ್ಲ. ಕೇಂದ್ರ ಸಹಕಾರಿ ಸಚಿವರು ಇಲ್ಲಿನ ಪ್ರಧಾನ ಬೆಳೆಯಾದ ಅಡಿಕೆಗೆ ಪ್ರಯೋಜನಕಾರಿಯಾಗುವ ಯಾವುದೇ ಮಾತುಗಳನ್ನು ಆಡಿಲ್ಲ. ಗುಜರಾತ್ ಹಾಗೂ ಅಡಿಕೆಗಿರುವ ನಂಟಿಗಷ್ಟೆ ಅಡಿಕೆಯ ಉಲ್ಲೇಖ ಮಾಡಿದರು. ಎಲೆ ಚುಕ್ಕಿ ಹಾಗೂ ಹಳದಿ ರೋಗದಿಂದ ಸಂಕಷ್ಟ ಪಡುತ್ತಿರುವ ರೈತನಿಗೆ ಯಾವುದೇ ಸ್ಪಂದನೆ ಮಾಡಲಿಲ್ಲ. ಭೇಟಿಯ ಸಂದರ್ಭ ಶಾ ಪುತ್ತೂರಿಗೆ ಕೊಟ್ಟ ಕೊಡುಗೆಯೇನು ಕ್ಯಾಂಪ್ಕೋ ಹಾಗೂ ರೈತರಿಗಾದ ಪ್ರಯೋಜನವೇನು ಎಂದು ಪ್ರಶ್ನಿಸಿದರು.

ಉಕ್ಕಿನ ಮನುಷ್ಯನಲ್ಲ, ಸೊಕ್ಕಿನ ಮನುಷ್ಯ- ಅಮಳ ರಾಮಚಂದ್ರ
ಬಳಿಕ ಮಾತನಾಡಿದ ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ, ರೈತರ ಖರ್ಚಿನಲ್ಲಿ ಆಯೋಜಿಸಲಾದ ಕ್ಯಾಂಪ್ಕೋ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾಡಿದ ಅಮಿತ್ ಶಾ ಅವರ ಪಕ್ಷದವರು ಹೇಳುವಂತೆ ಉಕ್ಕಿನ ಮನುಷ್ಯನಲ್ಲ, ಅವರೊಬ್ಬ ಸೊಕ್ಕಿನ ಮನುಷ್ಯ. ಆದ್ದರಿಂದಲೇ ಅವರು ಕ್ಯಾಂಪ್ಕೋದ ವೇದಿಕೆಯನ್ನು ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಹಣಿಯಲು ಬಳಸಿಕೊಂಡಿದ್ದಾರೆ. ಇದು ದ.ಕ. ಜಿಲ್ಲೆಯ ರೈತರಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.

ಕ್ಯಾಂಪ್ಕೋ ಸ್ಥಾಪಕ ವಾರಣಾಸಿ ವೇದಿಕೆಯಲ್ಲಿರುತ್ತಿದ್ದರೆ ಗೆಟ್ ಔಟ್ ಎನ್ನುತ್ತಿದ್ದರು:
ಕ್ಯಾಂಪ್ಕೋ ಪಕ್ಷಾತೀತ ಸಂಸ್ಥೆಯಾಗಿದ್ದು ಇದರ ಸದಸ್ಯರಲ್ಲಿ ಎಲ್ಲ ಪಕ್ಷದವರಿದ್ದು, ಈ ಪಕ್ಷಾತೀತ ಸಹಕಾರಿ ಸಂಘದ ವೇದಿಕೆಯಲ್ಲಿ ಚುನಾವಣಾ ಭಾಷಣ ಮಾಡಲು ಇವರಿಗೆ ಅಧಿಕಾರ ಕೊಟ್ಟವರಾರು? ಕ್ಯಾಂಪ್ಕೋ ಸ್ಥಾಪಕ ವಾರಾಣಾಸಿ ಸುಬ್ರಾಯ ಭಟ್ ಅವರು ಮೊನ್ನೆ ವೇದಿಕೆಯಲ್ಲಿರುತ್ತಿದ್ದರೆ ಶಾ ರನ್ನು ಗೆಟ್ ಔಟ್ ಎನ್ನುತ್ತಿದ್ದರು. ಆದರೆ ಬಿಜೆಪಿಯ ಚಮಚಾಗಳಂತೆ ವರ್ತಿಸುವ ಈಗಿನ ಆಡಳಿತ ಅಡಳಿತ ಮಂಡಳಿ ವೇದಿಕೆಯ ದುರುಪಯೋಗಕ್ಕೆ ಮೂಕ ಸಾಕ್ಷಿಯಾಯಿತು ಎಂದರು

ಸಮಾವೇಶ, ಬಿ.ಜೆ.ಪಿ.ಯಿಂದ ಹೈಜಾಕ್
ಕ್ಯಾಂಪ್ಕೋ ತಾನು ಬೆಳೆದು ಬಂದ ಹಾದಿ, ಎದುರಿಸುತ್ತಿರುವ ಸವಾಲುಗಳು, ಸರಕಾರದಿಂದ ಸಿಗಬೇಕಾದ ಸವಲತ್ತು, ಪರಿಹಾರಗಳ ಬಗ್ಗೆ ಗಮನ ಸೆಳೆಯಲು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು, ಆದರೆ ಬಿಜೆಪಿಯವರು ಪೂರ್ತಿ ಕಾರ್ಯಕ್ರಮವನ್ನು ಹೈಜಾಕ್ ಮಾಡಿ ರೈತರಿಗೆ ಹಾಗೂ ಸಂಘದ ಸದಸ್ಯರಿಗೆ ಅನ್ಯಾಯ ಮಾಡಿದ್ದಾರೆ. ಪುತ್ತೂರು ಪೇಟೆಯುದ್ದಕ್ಕೂ ಬಿಜೆಪಿಯವರು ಹಾಕಿದ ಬಂಟಿಂಗ್ಸ್ ಹಾಗೂ ಬ್ಯಾನರ್‌ಗಳೆ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.

ತರಾತುರಿಯಲ್ಲಿ ನಿರ್ಮಿಸಿದ ಹೆಲಿಪ್ಯಾಡ್ ಗೆ ವರ್ಕ್ ಅರ್ಡರ್ ಎಲ್ಲಿದೆ?
ಶಾ ಭೇಟಿಯಿಂದಾಗಿ ಪುತ್ತೂರಿನ ಮೊಟ್ಟೆತಡ್ಕದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣವಾಯಿತೆಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ಇದರ ಟೆಂಡರ್ ಕರೆದದ್ದು ಯಾವಾಗ? ವರ್ಕ್ ಅರ್ಡರ್ ಎಲ್ಲಿದೆ? ಸರಕಾರದ ಬೊಕ್ಕಸದ ಹಣವನ್ನು ಯಾವುದೇ ಲಂಗು ಲಗಾಮಿಲ್ಲದೇ ತಮ್ಮ ಸ್ವಂತ ಕಿಸೆಯ ಹಣ ಎಂಬಂತೆ, ನೀತಿ ನಿಯಮಗಳನ್ನು ಗಾಳಿಗೆ ತೂರಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸದರು.

ಸತ್ತ ಮರದಲ್ಲಿ ಅಣಬೆ ಹುಟ್ಟುತ್ತದೆ:
ಮಳೆ ಬಂದಾಗ ಅಣಬೆಗಳು ಹುಟ್ಟುತ್ತಿವೆ ಎಂದು ಹೇಳಿದ ಪುತ್ತೂರು ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ಅಮಳ ರಾಮಚಂದ್ರ, ಅಣಬೆಗಳು ಹುಟ್ಟುವುದು ಸತ್ತ ಮರದಲ್ಲಿ ಅಲ್ಲದೆ ಜೀವಂತ ಮರದಲ್ಲಿ ಅಣಬೆಗಳು ಹುಟ್ಟುವುದಿಲ್ಲ. ಬಿಜೆಪಿಯಲ್ಲಿ ಅಣಬೆಗಳು ಹುಟ್ಟುತ್ತಿದೆ ಎಂದಾದರೆ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂದು ಅರ್ಥ. ಬಿಜೆಪಿಯವರು ಯುವಕರ ತಲೆಗೆ ಕೋಮುವಾದದ ವಿಷ ಬೀಜ ಬಿತ್ತಿ, ಅವರನ್ನು ಬಳಸಿಕೊಂಡು, ತಮ್ಮ ಕಾರ್ಯಸಾಧನೆಯಾದಾಗ ಎಸೆಯುತ್ತದೆ. ಹಿಂದುತ್ವದ ಹೆಸರಿನಲ್ಲಿ ಹಿಂಸಾಚಾರದಲ್ಲಿ ತೊಡಗಿಕೊಳ್ಳುವ ಬಿಸಿ ರಕ್ತದ ಹುಡುಗರು ಶಾಸಕರು ಹೇಳಿದಂತೆ ಅಣಬೆಯ ರೀತಿಯೇ ಆಗಿಹೋಗಿದ್ದಾರೆ. ಇಂದು ಹುಟ್ಟಿ ನಾಳೆ ನಾಶವಾಗುವ ಹಿಂಸೆಯ ಹಿಂದುತ್ವದ ಯುವಕರನ್ನು ಬಿಜೆಪಿ ಬಳಸಿ ಎಸೆಯುತ್ತದೆ, ಯುವ ಜನಾಂಗ ವೇಷ ಮತ್ತು ಹಿಂಸೆಯ ಹಿಂದುತ್ವವನ್ನು ತೊರೆದು ನೈಜ ಹಿಂದುತ್ವವನ್ನು ಅನುಸರಿಸಲಿ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌನೀಸ್ ಮಸ್ಕರೆಂಜಸ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಮತ್ತು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here