ಪುತ್ತೂರು: ನಗರಸಭಾ ಮಾಜಿ ಅಧ್ಯಕ್ಷರೂ ಯೂನಿಯನ್ ಕ್ಲಬ್ ಅಧ್ಯಕ್ಷರೂ ಆಗಿರುವ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರ ವಿಶೇಷ ಕಲ್ಪನೆಗೆ ಕೈ ಜೋಡಿಸಿದ ಕೆಮ್ಮಾಯಿ ಕೃಷ್ಣನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಮತ್ತು ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ವಿಶಿಷ್ಠ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದಾರೆ.
ಕೃಷ್ಣನಗರ ಹಿ.ಪ್ರಾ. ಶಾಲೆಯ 100 ವಿದ್ಯಾರ್ಥಿಗಳಿಗೆ 100 ರಸಪ್ರಶ್ನೆಗಳನ್ನು ಕೇಳಿ 100 ಬಹುಮಾನಗಳನ್ನು ವಿತರಿಸಿ ಪ್ರತಿಭಾ ಪುರಸ್ಕಾರ ನೆರವೇರಿಸುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲಾಯಿತು.
ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಕಾರ್ಯಕ್ರಮದ ಪ್ರಾಯೋಜಕ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರು, ಮಕ್ಕಳಲ್ಲಿ ಬುದ್ಧಿವಂತಿಕೆ ಇರುತ್ತದೆ. ಅದನ್ನು ಪೋಷಿಸುವ ಕೆಲಸವನ್ನು ಶಿಕ್ಷಕರು ಮತ್ತು ಊರವರು ಮಾಡಬೇಕು, ಗುರಿ ಮುಟ್ಟುವ ಛಲ ವಿದ್ಯಾರ್ಥಿಗಳಲ್ಲಿ ಇರಬೇಕು, ನಮ್ಮೂರ ಶಾಲೆ ಎಂದರೆ ನಮ್ಮೂರಿನ ದೇಗುಲ ಇದ್ದಂತೆ. ದೇಗುಲದಲ್ಲಿ ಪೂಜೆ ನಡೆಯುವಂತೆಯೇ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪೋಷಿಸಬೇಕು, 4 ತಿಂಗಳಿಗೊಮ್ಮೆ ಪ್ರತಿಭಾ ಪುರಸ್ಕಾರ ನಡೆದರೆ ಪ್ರತಿಭೆಗಳನ್ನು ಮತ್ತಷ್ಟು ಪ್ರೋತ್ಸಾಹಿಸಲು ಸಾಧ್ಯವಿದೆ ಎಂದು ಹೇಳಿದರು.
ಯೂನಿಯನ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ರೋಶನ್ ರೆಬೆಲ್ಲೋ, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಪೂಜಾರಿ, ಉಪಾಧ್ಯಕ್ಷೆ ರಹಿಮತ್, ಮುಖ್ಯೋಪಾಧ್ಯಾಯಿನಿ ಮರಿಯಮ್ಮ ಉಪಸ್ಥಿತರಿದ್ದರು. ಶಿಕ್ಷಕರಾದ ನಾಗವೇಣಿ, ಪ್ರತಿಭಾ ಮತ್ತು ಶ್ರುತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.