ಪುತ್ತೂರುನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶ

0

ದೇಶವನ್ನು ಉಳಿಸಲು ಬಿಜೆಪಿ ಗೆಲ್ಲಿಸಿ-ಈಶ್ವರಪ್ಪ

ಸಮಾಜ ದ್ರೋಹಿಗಳನ್ನು ವಿಜ್ರಂಭಿಸಲು ಬಿಡುವುದಿಲ್ಲ – ಸುನಿಲ್ ಕುಮಾರ್
ಸಂಸ್ಕೃತಿ, ಪರಂಪರೆ ಉಳಿವಿಗಾಗಿ ಬಿಜೆಪಿ ಗೆಲ್ಲಬೇಕು – ಸುದರ್ಶನ್ ಮೂಡಬಿದ್ರೆ

ಬಿಜೆಪಿ ಬಂದರೆ ಹಿಂದುಗಳು ನಿರ್ಭೀತಿಯಿಂದ ಬದುಕಬಹುದು-ಸಂಜೀವ ಮಠಂದೂರು

ಅಮ್ಚಿನಡ್ಕದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಸ್ವಾಗತ
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿಂದ ಅದ್ದೂರಿ ಮೆರವಣಿಗೆ
ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು
ಮೆರವಣಿಗೆಯುದ್ದಕ್ಕೂ ಕೊಂಬು ಕಹಳೆ, ಗೊಂಬೆ ನೃತ್ಯ ಆಕರ್ಷಣೆ

ಪುತ್ತೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ದೇಶವನ್ನು ಉಳಿಸಲು.ಈ ದೇಶದಲ್ಲಿರುವ ರೈತರು, ಹೆಣ್ಣುಮಕ್ಕಳ ಗೌರವ ಉಳಿಸಲು, ಗೋಮಾತೆಯನ್ನು ಉಳಿಸಲು, ರಾಷ್ಟ್ರದ್ರೋಹಿಗಳನ್ನು ಸದೆಬಡಿಯಲೆಂದು ನೀವೆಲ್ಲ ತೀರ್ಮಾನ ಮಾಡಿ ಬಿಜೆಪಿಯನ್ನು ಗೆಲ್ಲಿಸಬೇಕು.ಈಗಾಗಲೇ ಅಯೋಧ್ಯೆಯ ರಾಮ ಮಂದಿರ ಅಗಿದೆ.ಮುಂದೆ ಚುನಾವಣೆ ಮುಗಿದಂತೆ ಕಾಶಿ ವಿಶ್ವನಾಥ ದೇವಸ್ಥಾನ, ಮಥುರಾದ ಶ್ರೀಕೃಷ್ಣ ದೇವಸ್ಥಾನವೂ ಆಗಿಯೇ ಆಗುತ್ತದೆ.ಇದರಲ್ಲಿ ಯಾವ ಅನುಮಾನವಿಲ್ಲ.ಈ ರೀತಿಯ ತೀರ್ಮಾನವನ್ನು ತೆಗೆದುಕೊಂಡು ದೇಶ ರಕ್ಷಣೆ, ಧರ್ಮ ರಕ್ಷಣೆ ಮಾಡುವ ನಿಟ್ಟಿನಲ್ಲಿ ನೀವೆಲ್ಲರೂ ಬಿಜೆಪಿಯನ್ನು ಗೆಲ್ಲಿಸಿ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.


ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸಲು ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ' ಸಮಾವೇಶದಲ್ಲಿ ಅವರು ಮಾತನಾಡಿದರು.ವಿಜಯ ಸಂಕಲ್ಪ ಯಾತ್ರೆ ಮಾ.೧೧ರಂದು ಪುತ್ತೂರಿಗೆ ಆಗಮಿಸಿ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಈಶ್ವರಪ್ಪ ಮುಖ್ಯ ಭಾಷಣ ಮಾಡಿದರು. ದಕ್ಷಿಣ ಕನ್ನಡಕ್ಕೆ ಬಂದಾಗ ನಮಗೆ ಇಲ್ಲಿ ರಾಷ್ಟ್ರೀಯತೆಯ ಪ್ರೇರಣೆ ಸಿಗುತ್ತದೆ.ನಿಮ್ಮನ್ನು ನೋಡಿಯೇ ನಾವು ಕಲಿತೆವು.ಇಲ್ಲಿ ರಾಷ್ಟ್ರದ್ರೋಹಿ ಶಕ್ತಿಗಳು ತಲೆ ಎತ್ತಿದಾಗಲೆಲ್ಲ ನೀವು ಮಟ್ಟ ಹಾಕುತ್ತಾ ಬಂದಿದ್ದೀರಿ. ಆಮೇಲೆ ಅವರು ಶಿವಮೊಗ್ಗದ ಕಡೆ ವಿಸ್ತರಣೆಗೆ ಯತ್ನಿಸಿದರು.ದೇಶದ್ರೋಹಿ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡುವ ಮೂಲಕ ಬಿಜೆಪಿ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ.ಮೋದಿಯವರನ್ನು ಬೈಯ್ಯುವ ಕಾಂಗ್ರೆಸ್ ನಾಯಕರು ತಮ್ಮೊಳಗೆ ಮೋದಿಯವರ ಗುಣಗಾನ ಮಾಡುತ್ತಾರೆ.ವಿಶ್ವದಲ್ಲಿ ಭಾರತೀಯ ಸಂಸ್ಕೃತಿಯನ್ನು ಮೇಲ್ದರ್ಜೆಗೆ ಏರಿಸಿದ ವ್ಯಕ್ತಿ ನರೇಂದ್ರ ಮೋದಿಯವರಾಗಿದ್ದಾರೆ.ಅದೇ ರೀತಿ ಸರದಾರ್ ವಲ್ಲಭಬಾಯಿ ಪಟೇಲ್ ಬಿಟ್ರೆ ದೇಶದ ರಕ್ಷಣೆ ಮಾಡುವಲ್ಲಿ ಅಗ್ರಗಣ್ಯ ನಾಯಕ ಅಮಿತ್ ಶಾ.ಅವರೊಬ್ಬ ಉಕ್ಕಿನ ಮನುಷ್ಯ ಎಂದು ಕಾಂಗ್ರೆಸ್ ನಾಯಕರೇ ಹೇಳುವುದಲ್ಲದೆ ನಮ್ಮಲ್ಲಿ ಅಂತಹ ನಾಯಕರಿಲ್ಲ ಎಂದು ಅಡಿಕೊಳ್ಳುತ್ತಿದ್ದಾರೆ ಎಂದರು.ಭಾರತ ಒಂದು ಕಾಲದಲ್ಲಿ ಸಾಲಗಾರನಾಗಿತ್ತು. ಇವತ್ತು ಪ್ರಪಂಚದ ಅನೇಕ ರಾಷ್ಟ್ರಗಳಿಗೆ ಸಾಲಕೊಡುವಷ್ಟರ ಮಟ್ಟಿಗೆ ಬೆಳೆದು ಭಾರತವಿಂದು ಶ್ರೀಮಂತ ರಾಷ್ಟ್ರವಾಗಿದೆ.ಇದು ಭಾರತದ ವಿಶೇಷತೆ. ವಿಜ್ಞಾನದಲ್ಲೂ ಮುಂದಿದ್ದೇವೆ. ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಶಸ್ತ್ರಾಸ್ತ್ರ ಪೂರೈಕೆಯಲ್ಲೂ ನಾವು ಮುಂದಿದ್ದೇವೆ ಎಂದು ಹೇಳಿದ ಈಶ್ವರಪ್ಪ ಅವರು, ಕಾಂಗ್ರೆಸ್‌ನ ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಭಾರತ ಪಾಕಿಸ್ತಾನದ ಗಡಿ ಭಾಗದಲ್ಲಿ ನಮ್ಮ ಸೈನಿಕರೊಬ್ಬರನ್ನು ಪಾಕಿಸ್ತಾನ ಕೊಂದಾಗ ಅದಕ್ಕೆ ಪ್ರತ್ಯುತ್ತರ ನೀಡಲು ವಿಶ್ವಸಂಸ್ಥೆಗೆ ಪತ್ರ ಬರೆಯಬೇಕಾಗಿತ್ತು.ಆದರೆ ಇವತ್ತು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇದೇ ತರಹ ನಮ್ಮ ದೇಶದ ಸೈನಿಕರನ್ನು ಪಾಕಿಸ್ತಾನ ಕೊಂದಾಗ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯನ್ನು ಕೇಳಲು ಹೋಗಿಲ್ಲ. ಬದಲಾಗಿ ಸೈನ್ಯದ ಅಧಿಕಾರಿಗಳಿಗೆ ನೇರವಾದ ಆದೇಶ ನೀಡಿ, ನಮ್ಮ ಒಬ್ಬ ಸೈನಿಕರನ್ನು ಮುಟ್ಟಿದರೆ ನೂರು ಪಾಕಿಸ್ತಾನದ ಸೈನಿಕರನ್ನು ಕೊಂದು ಬಿಡಿ ಯಾರಿಗೂ ಕೇಳಬೇಡಿ ಎಂದು ಹೇಳಿದರು.ಇದು ರಾಷ್ಟ್ರಭಕ್ತಿಯ ಸಂಕೇತ ಎಂದರು.

ಸಿದ್ಧರಾಮಯ್ಯನವರ ನಾಲಿಗೆ ಕಿತ್ತು ಬಿಸಾಡುತ್ತೇವೆ:

ಬಿಜೆಪಿಯವರು ಪಿಎಫ್‌ಐನವರನ್ನು ನಿಷೇಧಿಸಿದ್ದಾರೆ, ನಾವು ಅಧಿಕಾರಕ್ಕೆ ಬಂದರೆ ಅದನ್ನು ವಾಪಸ್ ಮಾಡ್ತೇವೆ ಅವರನ್ನು ಸ್ವತಂತ್ರಗೊಳಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ.ಆದರೆ ನಮ್ಮ ದೇಶ ಜಿನ್ನಾ ಸಂತತಿಗೆ ಅವಕಾಶ ಕೊಡಲ್ಲ ಎಂದು ಭಾಷಣದ ಉದ್ದಕ್ಕೂ ಈಶ್ವರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.ನಿಮ್ಮಂತವರು ನೂರು ಜನ ಬಂದರೂ ಈ ಕಾಯ್ದೆಗಳನ್ನು ವಾಪಸ್ ಮಾಡುವುದಕ್ಕೆ ಆಗಲ್ಲ ಎಂದರು.ಮತಾಂತರ ನಿಷೇಧ ಕಾಯ್ದೆ ವಾಪಸ್ ಮಾಡ್ತೀವಿ ಅಂತ ಸಿದ್ಧರಾಮಯ್ಯ ಹೇಳ್ತಾರೆ.ಆದರೆ ನಿಮ್ಮ ಮನೆಯಲ್ಲೇ ಇದೇ ಪರಿಸ್ಥಿತಿ ಆದಾಗ ಏನು ಮಾಡ್ತೀರಿ ಎಂದು ಪ್ರಶ್ನಿಸಿದರು.

ಮೋದಿಯನ್ನು ವಿರೋಧಿಸುವುದು ಪಾಕಿಸ್ಥಾನ ಮತ್ತು ಸಿದ್ಧರಾಮಯ್ಯ ಮಾತ್ರ:

ಕಾಂಗ್ರೆಸ್ ಕಾಲದಲ್ಲಿ ಪಾಕಿಸ್ತಾನವನ್ನು ಜಗತ್ತಿನ ಎಲ್ಲ ರಾಷ್ಟ್ರಗಳು ಬೆಂಬಲಿಸುತ್ತಿದ್ದವು.ಈಗ ಎಲ್ಲ ರಾಷ್ಟ್ರಗಳು ಮೋದಿಯವರನ್ನು ಬೆಂಬಲಿಸುತ್ತಿವೆ.ಮೋದಿಯವರನ್ನು ವಿರೋಧಿಸುವವರು ಜಗತ್ತಿನಲ್ಲಿ ಇಬ್ಬರು ಮಾತ್ರ. ಒಂದು ಪಾಕಿಸ್ತಾನ, ಇನ್ನೊಬ್ಬರು ಸಿದ್ಧರಾಮಯ್ಯ.ದೇಶ ದ್ರೋಹಿಗಳಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಇನ್ನೊಂದು ಬಾರಿ ನರಹಂತಕ ಎಂದು ಹೇಳಿ ಆದರೆ, ಏಕವಚನದಲ್ಲಿ ಕರೆದರೆ ಸಿದ್ದರಾಮಯ್ಯ ಅವರ ನಾಲಿಗೆ ಕಿತ್ತು ಬಿಸಾಡಬೇಕಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.ದೇಶದಲ್ಲಿ ಸುಮಾರು ೧೦ ಕೋಟಿ ಸದಸ್ಯತ್ವ ಪಡೆದ ಒಂದೇ ಒಂದು ಪಕ್ಷ ಅದು ಬಿಜೆಪಿ ಮಾತ್ರ. ಎಲ್ಲಾ ಜನರು ಬಿಜೆಪಿಯನ್ನು ಬಂದು ಸೇರುತ್ತಿದ್ದಾರೆ. ನಾವು ಅಭಿವೃದ್ಧಿ ಬಗ್ಗೆ ವಿವರಿಸಲು ಹೋಗುವುದಿಲ್ಲ. ಎಲ್ಲವೂ ಪತ್ರಿಕೆಯಲ್ಲಿ ಬರುತ್ತಿದೆ. ಅನೇಕ ಹೊಸ ಹೊಸ ರೈಲುಗಳು ಬಂದಿವೆ. ಕೌಶಲ್ಯಾಭಿವೃದ್ಧಿ ಯೋಜನೆ ಮೂಲಕ ಉದ್ಯೋಗಾವಕಾಶ ನೀಡುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ಇಂದಲ್ಲ ನಾಳೆ ಮುಸ್ಲಿಮರೂ ನಮ್ಮ ಜತೆ ಬರುತ್ತಾರೆ:

ಎಸ್‌ಡಿಪಿಐ ಪಕ್ಷ ಬಂದಿದೆ. ಕಾಂಗ್ರೆಸ್ ಸೋತರೂ ಪರ್ವಾಗಿಲ್ಲ. ಮುಂದೊಂದು ದಿನ ಅಧಿಕಾರ ಹಿಡೀತೀವಿ ಎಂದು ಎಸ್‌ಡಿಪಿಐ ಹೇಳುತ್ತಿದೆ. ಆದರೆ ದೇಶಭಕ್ತರು ಇರೋತನಕ ಎಸ್‌ಡಿಪಿಐ ಕನಸು ನನಸಾಗೋದಿಲ್ಲ. ಈಗ ಮುಸ್ಲಿಮರಿಗೂ ಅರ್ಥವಾಗಿದೆ.ಇಂದಲ್ಲ ನಾಳೆ ಮುಸ್ಲಿಮರೂ ನಮ್ಮ ಜತೆ ಬರ್ತಾರೆ. ಈಗಾಗಲೇ ಅನೇಕರು ಬಂದಿದ್ದಾರೆ. ಅವರೂ ದೇಶಭಕ್ತರಾಗ್ತಾರೆ ಎಂದು ಈಶ್ವರಪ್ಪ ಹೇಳಿದರು.

ಸಮಾಜ ದ್ರೋಹ ಮಾಡುವವರನ್ನು ವಿಜ್ರಂಭಿಸಲು ಬಿಡುವುದಿಲ್ಲ-ಸುನಿಲ್ ಕುಮಾರ್:

ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಅವರು ಮಾತನಾಡಿ ಇವತ್ತು ಎರಡು ಸರಕಾರಗಳ ಯೋಜನೆಗಳು ಮನೆ ಬಾಗಿಲಿಗೆ ಬರುತ್ತಿವೆ.ಹಿಂದುತ್ವ ಮತ್ತು ಅಭಿವೃದ್ಧಿ ಮುಂದಿಟ್ಟು ಆಡಳಿತ ನಡೆಸುವ ನಮ್ಮ ಸರಕಾರ ಇವೆರಡರಲ್ಲಿ ಇಷ್ಟರ ತನಕ ರಾಜಿ ಮಾಡಿಲ್ಲ.ಸಿದ್ದಾಂತ ರೂಪದಲ್ಲಿರುವುದನ್ನು ಅಡಳಿತಕ್ಕೆ ಬಂದಾಗ ಅನುಷ್ಠಾನ ಮಾಡಿzವೆ.ಪಂಡಿತ್ ದೀನ್ ದಯಾಳ್ ಅವರ ಅಂತ್ಯೋದಯ ಕಲ್ಪನೆಯಂತೆ ಇವತ್ತು ನೂರಾರು ಯೋಜನೆಯನ್ನು ಸಮಾಜದ ಕೊನೆಯ ತನಕ ಮುಟ್ಟಿಸುವ ಕೆಲಸ ಆಗಿದೆ.ಹಿಂದುತ್ವಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಿದ್ದಾಂತ, ಚಟುವಟಿಕೆಗಳಿಗೆ ಕಾನೂನು ರೂಪವನ್ನು ತರುವ ಪ್ರಯತ್ನ ಮಾಡಿದ್ದೇವೆ ಎಂದರು. ಅಯೋಧ್ಯೆ ರಾಮಮಂದಿರ ಶಂಕು ಸ್ಥಾಪನೆ ಮಾಡಿದ್ದು ನರೇಂದ್ರ ಮೋದಿಯವರ ಸರಕಾರ.ಕಾಶಿಯಲ್ಲಿ, ಉಜ್ಜೈಯಿನಿಯಲಿ ಕಾರಿಡಾರ್ ನಿರ್ಮಾಣ, ಸಾಂಸ್ಕೃತಿಕ ಭಾರತಕ್ಕೆ ಇನ್ನಷ್ಟು ಸೌಂದರ್ಯ ತರುವ ಪ್ರಯತ್ನ ನಮ್ಮ ಸರಕಾರ ಮಾಡಿದೆ. ನಮ್ಮ ಸರಕಾರ ಹಿಂದುತ್ವಕ್ಕಾಗಿ ಅನೇಕ ನಿಲುವನ್ನು ತೆಗೆದು ಕೊಂಡಿದೆ. ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ, ಮತಾಂತರ ನಿಷೇಧ ಜಾರಿಗೆ, ಲವ್ ಜಿಹಾದ್‌ಗೆ ಕಡಿವಾಣ ಹಾಕಿದ್ದು, ಹನುಮಗಿರಿಗೆ ರೂ.೧೦೦ ಕೋಟಿ ಕೊಟ್ಟದ್ದು ಇದೇ ಬಿಜೆಪಿ ಸರಕಾರ. ದತ್ತ ಪೀಠದಲ್ಲಿ ಹಿಂದು ಅರ್ಚಕರ ನೇಮಕಾತಿ ಮಾಡಿದ್ದು ಕೂಡಾ ಇದೇ ಬಿಜೆಪಿ ಸರಕಾರ, ನಾವು ಯಾವ ವಿಚಾರವನ್ನು ಅಧಿಕಾರ ಇಲ್ಲದ ಸಂದರ್ಭದಲ್ಲಿ ಹೇಳಿzವೋ ಅದನ್ನು ಅಧಿಕಾರ ಬಂದ ಬಳಿಕ ಪೂರೈಸುವ ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳಿದ ಸುನಿಲ್ ಕುಮಾರ್, ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಸರಕಾರಿ ಗೋ ಶಾಲೆ, ಅಧಿಕಾರಕ್ಕೆ ಬಂದ ೨೪ ಗಂಟೆಯೊಳಗೆ ಟಿಪ್ಪು ಜಯಂತಿ ರದ್ದು ಮಾಡಿದ್ದೇವೆ. ಪಠ್ಯಪುಸ್ತಕದಲ್ಲಿ ರಾಷ್ಟ್ರೀಯತೆಯನ್ನು ಮೂಡಿಸುವ ಚಿಂತನೆ ಮಾಡಿದ್ದೇವೆ. ಮಠ ಮಂದಿರ ದೇವಸ್ಥಾನಗಳಿಗೆ ಅನುದಾನ ನೀಡಿದ್ದೇವೆ. ಇವೆಲ್ಲ ನಮ್ಮ ವಿಚಾರಕ್ಕೆ ಸಂಬಂಧಿಸಿದ ಯೋಜನೆಗಳು. ಇದಕ್ಕೆ ಕಾನೂನು ರೂಪ ನೀಡುವ ಪ್ರಯತ್ನವನ್ನು ನಮ್ಮ ಡಬಲ್ ಇಂಜಿನ್ ಸರಕಾರ ಮಾಡುತ್ತಾ ಬಂದಿದೆ.ಅಭಿವೃದ್ಧಿ ವಿಚಾರ ಬಂದಾಗ ನೂರಕ್ಕೆ ನೂರು ಅಭಿವೃದ್ಧಿ ಆಗಿದೆ ಎಂದು ಹೇಳುವುದಿಲ್ಲ.ಯಾವುದನ್ನು ಜನರು ಅಪೇಕ್ಷೆ ಮಾಡುತ್ತಿದ್ದಾರೋ ಅದನ್ನು ಅನುಷ್ಠಾನ ಮಾಡಿದ್ದೇವೆ ಎಂದು ಸುನಿಲ್ ಕುಮಾರ್ ಹೇಳಿದರು. ಕೊರೋನಾ ಸಂದರ್ಭದಲ್ಲೂ ಬಿಜೆಪಿ ಕಾರ್ಯಕರ್ತರು ಹಲವು ಸೇವೆ ನೀಡಿದರು.ಆದರೆ ಕಾಂಗ್ರೆಸ್ ಕಾರ್ಯಕರ್ತರು ಕಾಣುತ್ತಿರಲಿಲ್ಲ.ಕೋವಿಡ್ ಲಸಿಕೆ ನಮ್ಮ ಸರಕಾರ ಉಚಿತವಾಗಿ ನೀಡಿದೆ. ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನದ ಮೂಲಕ ಅಭಿವೃದ್ಧಿ ಕೆಲಸ ಮಾಡಿದೆ. ಆದರೆ ಇವತ್ತು ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು.ಅದನ್ನು ದೂರ ಮಾಡೋಣ. ಕಾಂಗ್ರೆಸ್ ಕಾಲದಲ್ಲಿ ದಕ್ಷಿಣ ಕನ್ನಡದ ವಾತಾವರಣ ಹೇಗಿತ್ತು. ಇವತ್ತು ಹೇಗಿದೆ.ಮತ್ತೊಮ್ಮೆ ಕಾಂಗ್ರೆಸ್ ಮುಖ್ಯಮಂತ್ರಿಯಾದರೆ ರಾಜ್ಯದ, ದೇಶದ ಪರಿಸ್ಥಿತಿ ಹೇಗಾಗಬಹುದು. ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡುವ ಆಡಳಿತ ಬೇಕಾ. ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡುವವರನ್ನು ಬಗ್ಗು ಬಡಿಯುವ ಬಿಜೆಪಿ ಸರಕಾರ ಬೇಕಾ ಎಂದು ಜನರು ತೀರ್ಮಾನ ಮಾಡಬೇಕು ಎಂದರು.ಮುಂದಿನ ದಿನ ಬರುವ ಚುನಾವಣೆಯಲ್ಲಿ ನಮ್ಮ ನಮ್ಮ ಬೂತ್‌ನಲ್ಲಿ ನಾವೇ ಅಭ್ಯರ್ಥಿಗಳೆಂದು ಸಂಕಲ್ಪ ಮಾಡಿಕೊಂಡು ಕೆಲಸ ಮಾಡೋಣ. ಕಾಂಗ್ರೆಸ್ ಮತ್ತೊಮ್ಮೆ ಬಂದರೆ ಬಹಳ ದೊಡ್ಡ ಪ್ರಮಾಣದಲ್ಲಿ ಅಭದ್ರತೆಯನ್ನು ಸೃಷ್ಟಿ ಮಾಡುವ ಸಮಾಜ ಘಾತುಕ ಶಕ್ತಿಗಳು ವಿಜ್ರಂಭಿಸುವ ಮೂಲಕ ಅಭಿವೃದ್ಧಿ ಶೂನ್ಯ ರಾಜ್ಯ ಆಗುವುದು ಬೇಡ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸಿದ್ಧಾಂತದ ಸರಕಾರ ಬಿಜೆಪಿ ಸರಕಾರ ಆಡಳಿತ ಬರಬೇಕು.ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಶಾಸಕರನ್ನು ಗೆಲ್ಲಿಸುವ ಮೂಲಕ ಡಬಲ್ ಇಂಜಿನ್ ಸರಕಾರವನ್ನು ಬೆಂಬಲಿಸುವಂತೆ ಮತದಾರರಲ್ಲಿ ವಿನಂತಿಸಿದರು.

ಹನುಮಗಿರಿಗಲ್ಲ ಅಂಜನಾದ್ರಿಗಿರಬಹುದು:

ಸಚಿವ ಸುನಿಲ್ ಕುಮಾರ್ ಅವರು ಮಾತನಾಡುವ ಭರದಲ್ಲಿ ಹನುಮಗಿರಿಗೆ ರೂ.೧೦೦ ಕೋಟಿ ಅನುದಾನ ನೀಡಿರುವ ಕುರಿತು ಉಲ್ಲೇಖಿಸಿದ್ದರು.ಆದರೆ ಅದು ಅಂಜನಾದ್ರಿ ಕ್ಷೇತ್ರಕ್ಕೆ ಆಗಿರಬಹುದು ಹನುಮಗಿರಿಗೆ ಅಲ್ಲ ಎಂದು ಬಿಜೆಪಿ ಸಂಕಲ್ಪ ಯಾತ್ರೆ ಸಂಘಟಕರಾದ ಪಿ.ಜಿ.ಜಗನ್ನಿವಾಸ್ ರಾವ್, ಚಂದ್ರಶೇಖರ್ ರಾವ್ ಬಪ್ಪಳಿಗೆ ಸಮಾವೇಶದ ಬಳಿಕಸುದ್ದಿ’ಗೆ ತಿಳಿಸಿದ್ದಾರೆ.


ಸಂಸ್ಕೃತಿ, ಪರಂಪರೆ ಉಳಿವಿಗಾಗಿ ಬಿಜೆಪಿ ಗೆಲ್ಲಬೇಕು:

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು ಮಾತನಾಡಿ ಬಿಜೆಪಿ ಶಾಸಕ ಆಯ್ಕೆಯಾಗಿ ಬರಬೇಕೆಂದು ಸಂಕಲ್ಪ ಯಾತ್ರೆ. ಲಾಲ್ ಬಹದ್ದೂರು ಶಾಸ್ತ್ರಿಯವರು ಜೈ ಜವಾನ್ ಜೈ ಕಿಸಾನ್ ಎಂದು ಘೋಷಣೆ ಮಾಡಿದ್ದು ಮಾತ್ರ. ಆದರೆ ಅದರ ಅನುಷ್ಠಾನವನ್ನು ಕಾಂಗ್ರೆಸ್‌ನಿಂದ ಮಾಡಲು ಆಗಿಲ್ಲ. ಕೊನೆಗೆ ಬಿಜೆಪಿ ಸರಕಾರದಿಂದ ಅನುಷ್ಠಾನ ಆಗಿದೆ. ಇವತ್ತು ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ಯೊಜನೆಗಳನ್ನು ನೋಡಿ ಕಾಂಗ್ರೆಸ್ ಮನೆಮನೆಗೆ ತೆರಳಿ ಗ್ಯಾರೆಂಟಿ ಕಾರ್ಡ್ ಕೊಡುವ ಪರಿಸ್ಥಿತಿಗೆ ತಲುಪಿದೆ.ಆದರೆ ಇವತ್ತು ಸಂಸ್ಕೃತಿ, ಪರಂಪರೆ ಉಳಿವಿವಾಗಿ ಪುತ್ತೂರಿನಲ್ಲಿ ಬಿಜೆಪಿ ಗೆಲ್ಲಬೇಕಾಗಿದೆ ಎಂದರು.


ಬಿಜೆಪಿ ಬಂದರೆ ಹಿಂದುಗಳು ನಿರ್ಭೀತಿಯಿಂದ ಬದುಕಬಹುದು:

ಶಾಸಕ ಸಂಜೀವ ಮಠಂದೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇವತ್ತು ದೇಶದಲ್ಲಿ ಡಬಲ್ ಇಂಜಿನ್ ಸರಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ.ಆರಂಭದಲ್ಲಿ ಒಂದು ವರ್ಷ ೨ ತಿಂಗಳು ವಿರೋಧ ಪಾರ್ಟಿಯಲ್ಲಿದ್ದಾಗ ಪುತ್ತೂರು ಕ್ಷೇತ್ರಕ್ಕೆ ಕೆಲವೇ ಲಕ್ಷ ಅನುದಾನ ಬಂದಿದ್ದು, ನಮ್ಮ ಸರಕಾರ ಬಂದ ಬಳಿಕ ರೂ. ೧,೨೦೦ ಕೋಟಿ ಅನುದಾನ ಬಂದಿದೆ. ನಮ್ಮ ಸರಕಾರದಿಂದ ಅಭಿವೃದ್ಧಿ ಕ್ರಾಂತಿ ರೂಪದಲ್ಲಿ ಆಗಿದೆ.ಇದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಮ್ಮ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಮುಖ್ಯ ಕಾರಣ. ಸರ್ವರಿಗೂ ಸಮಪಾಲು, ಸಮ ಬಾಳು ನಮ್ಮ ಧ್ಯೇಯ. ಹಾಗಾಗಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಬರಲಿದೆ. ಇವತ್ತು ಲವ್ ಜಿಹಾದ್, ಟಿಪ್ಪು ಜಯಂತಿ, ಶಾದಿ ಭಾಗ್ಯ ಕಾಂಗ್ರೆಸ್‌ನ ಗ್ಯಾರೆಂಟಿಯಾಗಿದೆ.ಆದರೆ ಬಿಜೆಪಿ ಬಂದರೆ ಹಿಂದುಗಳು ನಿರ್ಭೀತಿಯಿಂದ ಬದುಕಲು ಸಾಧ್ಯ ಎಂದು ಮಠಂದೂರು ಹೇಳಿದರು.ವಿಜಯ ಸಂಕಲ್ಪ ಯಾತ್ರೆ ೧ರ ಸಹ ಸಂಚಾಲಕರಾದ ದತ್ತಾತ್ರೆಯ, ಕಿಶೋರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ಪುತ್ತೂರು ವಿಧಾನಸಭಾ ಚುನಾವಣಾ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ದೇವದಾಸ್ ಶೆಟ್ಟಿ, ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್, ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ ನಾರಾಯಣ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಯಾತ್ರೆಯ ಪುತ್ತೂರು ಸಂಚಾಲಕ ಸುನಿಲ್ ಕುಮಾರ್ ದಡ್ಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ವಂದಿಸಿದರು.ಗೌರಿ ಬನ್ನೂರು, ಉಷಾ, ಜ್ಯೋತಿ ಆರ್ ನಾಯಕ್ ವಂದೇ ಮಾತರಂ ಹಾಡಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು.

ಅಮ್ಚಿನಡ್ಕದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಸ್ವಾಗತ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸುಳ್ಯದಿಂದ ಪುತ್ತೂರಿಗೆ ಪ್ರವೇಶ ಮಾಡುವಾಗ ಅಮ್ಚಿನಡ್ಕದಲ್ಲಿ ಅದನ್ನು ಸ್ವಾಗತಿಸಲಾಯಿತು. ವಿಜಯ ಸಂಕಲ್ಪ ಯಾತ್ರೆ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪುತ್ತೂರಿಗೆ ಬರ ಮಾಡಿಕೊಳ್ಳಲಾಯಿತು.


ಅದ್ದೂರಿ ಮೆರವಣಿಗೆ
ವಿಜಯ ಸಂಕಲ್ಪ ಯಾತ್ರೆಯನ್ನು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿಂದ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಸುನಿಲ್ ಕುಮಾರ್, ಶಾಸಕರಾದ ಸಂಜೀವ ಮಠಂದೂರು, ಪ್ರತಾಪಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ವಿಜಯ ಸಂಕಲ್ಪ ಯಾತ್ರೆಯ ರಥದಲ್ಲಿದ್ದರು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು.ಮೆರಣಿಗೆಯುದ್ದಕ್ಕೂ ಕೊಂಬು ಕಹಳೆ, ಗೊಂಬೆ ನೃತ್ಯ ಆಕರ್ಷಣೀಯವಾಗಿತ್ತು. ಮೆರವಣಿಗೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ತಲುಪುತ್ತಿದ್ದಂತೆ ರಥದಲ್ಲಿದ್ದ ಈಶ್ವರಪ್ಪ ಅವರು ದೇವಸ್ಥಾನಕ್ಕೆ ಕೈ ಮುಗಿದರು.

ಅವರು ಇವನನ್ನು..ಇವರು ಅವನನ್ನು ಸೋಲಿಸುವುದು ಕಾಂಗ್ರೆಸ್..

ಪರಮೇಶ್ವರ್ ಅವರು ಸ್ಪರ್ಧೆ ಮಾಡಿದಾಗ ಅವರು ಗೆದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಅಡ್ಡಬರುತ್ತಾರೆಂದು ಅವರು ಗೆಲ್ಲದಂತೆ ಸಿದ್ಧರಾಮಯ್ಯ ತಂತ್ರ ರೂಪಿಸಿದ್ದರು. ಪರಮೇಶ್ವರ್ ಸೋತರು.ಚಾಮುಂಡೇಶ್ವರಿಯಲ್ಲಿ ಚುನಾವಣೆ ಬಂದಾಗ ಪರಮೇಶ್ವರ ಅವರು ಸಿದ್ದರಾಮಯ್ಯರನ್ನು ಸೋಲಿಸಲು ಕಾಯುತ್ತಿದ್ದರು.ಅಲ್ಲಿ ಸಿದ್ದರಾಮಯ್ಯ ಸೋತರು.ಒಟ್ಟಾರೆ ಅವರು ಇವನನ್ನು ಸೋಲಿಸುವುದು, ಇವರು ಅವನನ್ನು ಸೋಲಿಸುವುದು ಕಾಂಗ್ರೆಸ್. ಚಾಕು ಹಾಕುವ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿದೆ.ಬಿಜೆಪಿಯಲ್ಲಿ ಅದು ಇಲ್ಲಎಂದು ಈಶ್ವರಪ್ಪ ಹೇಳಿದರು.

ಶಾಲೆಗಳಿಗೆ ಅಭಿವೃದ್ಧಿ ಅನುದಾನ ಕೊಡಿಸಿದ ಮೊದಲ ಶಾಸಕ ಸಂಜೀವ ಮಠಂದೂರು

ಮಠಂದೂರು ಅವರು ಶಾಲೆಗಳಿಗೆ ಹಲವು ಅಭಿವೃದ್ಧಿ ಅನುದಾನ ನೀಡಿರುವುದು ಕೇಳಿ ನನಗೆ ಆಶ್ಚರ್ಯವಾಗಿದೆ.ಯಾಕೆಂದರೆ ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ ಯೋಜನೆ, ಹೊಸ ಕಟ್ಟಡಗಳು ಸೇರಿದಂತೆ ಕೋಟ್ಯಾಂತರ ಅನುದಾನದಿಂದ ಶಾಲೆಗಳ ಅಭಿವೃದ್ಧಿ ಪಡಿಸಿದ ಮೊದಲನೇ ಶಾಸಕರಿದ್ದರೆ ಅದು ಸಂಜೀವ ಮಠಂದೂರು. ನಾನು ಕೂಡಾ ಅವರಲ್ಲಿ ಈ ರೀತಿಯ ಅಭಿವೃದ್ಧಿ ಕಾರ್ಯದ ಕುರಿತು ಮಾಹಿತಿ ಪಡೆಯಲಿzನೆ. ಇಡೀ ಕರ್ನಾಟಕದಲ್ಲಿ ಎಲ್ಲಾ ಶಾಲೆಗಳಿಗೂ ಈ ರೀತಿಯ ಅವಕಾಶ ಆಗಬೇಕು. ಈ ರೀತಿಯ ಮಾದರಿ ಕಾರ್ಯಕ್ರಮ ಮಾಡಿರುವ ಮಠಂದೂರು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ಅವರು ಹೇಳೀದರು.

LEAVE A REPLY

Please enter your comment!
Please enter your name here