ಮೂರ್ಕಜೆ: ಸಂಪರ್ಕ ಇಲ್ಲದ ಪ್ರದೇಶಕ್ಕೆ  ಕೋಟಿ ರೂ ಅನುದಾನದಲ್ಲಿ ಸೇತುವೆ ನಿರ್ಮಾಣ : ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ಆರೋಪ  

0

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಮೂರ್ಕಜೆಯಲ್ಲಿ ಕೊಡಂಗಾಯಿ ನದಿಗೆ ನಿರ್ಮಾಣ ಮಾಡಲಾಗಿರುವ ಅಣೆಕಟ್ಟಿನಲ್ಲಿ ಜನ ಸಂಪರ್ಕವೇ ಇಲ್ಲದ ಪ್ರದೇಶಕ್ಕೆ ಸೇತುವೆ ನಿರ್ಮಾಣ ಮಾಡುವ ಮೂಲಕ ಅನುದಾನವನ್ನು ವ್ಯರ್ಥ ಮಾಡಲಾಗಿದೆ. ಸೇತುವೆ ಯಾರೊಬ್ಬರಿಗೂ ಪ್ರಯೋಜನ ಇಲ್ಲದಂತಾಗಿದೆ ಎಂದು ವಿಟ್ಲಪಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ ಬಿಕ್ನಾಜೆ  ಹೇಳಿದರು.

ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೂರ್ಕಜೆಯಲ್ಲಿ ಸುಮಾರು 2.75 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಅಣೆಕಟ್ಟು ಹಾಗೂ ಸೇತುವೆಯಲ್ಲಿ ಅಣೆಕಟ್ಟು ಸ್ಥಳೀಯ ಕೃಷಿಕರಿಗೆ ಸಹಾಯವಾಗುತ್ತದಾದರೂ, ಸೇತುವೆ ಯಾರೊಬ್ಬರಿಗೂ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಒಂದು ಬದಿ ಖಾಸಗೀ ತೋಟವಿದ್ದು, ಇನ್ನೊಂದು ಭಾಗದಲ್ಲಿ ಸೇತುವೆಗೆ ಹತ್ತಲೂ ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಈ ಮೂಲಕ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಯಾದ ಪಶ್ಚಿಮ ವಾಹಿನಿಯ ಮೂಲಕ ಬಂದ ಅನುದಾನವನ್ನು ಪೋಲು ಮಾಡುವ ಕಾರ್ಯ ಮಾಡಲಾಗಿದೆ. ಭವಿಷ್ಯದಲ್ಲೂ ಖಾಸಗೀ ತೋಟವನ್ನು ಕಡಿದು ರಸ್ತೆ ನಿರ್ಮಾಣ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವಾಗ ಇದು ಕೇವಲ ಶೇ.40 ಕಮೀಷನ್ ಪಡೆಯಲು ಮಾಡಿದ ಯೋಜನೆಯಂತಿದೆ ಎಂದು ಅವರು ಆರೋಪಿಸಿದರು. ಇಲ್ಲಿ ನಿರ್ಮಿಸಲಾದ ಅಣೆಕಟ್ಟು ಈ ಭಾಗದ ಜನರಿಗೆ ಸಹಕಾರಿಯಾಗಲಿದೆ. ಆದರೆ ಅಲ್ಲಿ ನಿರ್ಮಾಣ ವಾಗಿರುವ ರಸ್ತೆ ಮಾತ್ರ ಉಪಯೋಗ ಶೂನ್ಯವಾಗಿದೆ.

ನಾಲ್ಕು ವರ್ಷದ ಹಿಂದೆ ಪಾದಯಾತ್ರೆ ಮಾಡಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದ ಕೊಡಂಗಾಯಿ – ಬಲಿಪಗುಳಿ – ಪಂಜಿಗದ್ದೆ ರಸ್ತೆ ಇನ್ನೂ ಹಾಗೇ ಉಳಿದಿದೆ. ಗುತ್ತಿಗೆದಾರರು ತಮ್ಮ ಪ್ರಭಾವ ಬಳಸಿ ಇಲಾಖೆಯಿಂದ ತಂದಿರುವ ಅನುದಾನವನ್ನು ಬಿಜೆಪಿಗರು ತಮ್ಮ ಯೋಜನೆಯೆಂದು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.

ಕೊಡುಂಗಾಯಿ – ಬಲಿಪ್ಪಗುಳಿ – ಪಂಜಿಗದ್ದೆ ರಸ್ತೆ ಸಂಪೂರ್ಣ ಹದೆಗೆಟ್ಟು ಹೋಗಿದ್ದು, ಜನರು ನಿತ್ಯ ಸಂಚರಿಸಲು ಕಷ್ಟ ಪಡಬೇಕಾದ ಪರಿಸ್ಥಿತಿ ಇದೆ. ಆದರೂ 4 ವರ್ಷದ ಹಿಂದೆ ನೀಡಿದ ಭರವಸೆಯನ್ನು ಇನ್ನೂ ಈಡೇರಿಸುವ ಕಾರ್ಯ ಮಾಡಿಲ್ಲ. ಗ್ರಾಮದಲ್ಲಿ ಈಗಾಗಲೇ ಹಲವು ಕಾಮಗಾರಿಗಳು ನಡೆದಿದ್ದು, ಶಾಸಕರು ಇದರಲ್ಲಿ ಯಾವುದೇ ಪಾತ್ರವನ್ನೂ ವಹಿಸಿಲ್ಲ. ಜನರ ಅಗತ್ಯಗಳನ್ನು ಗುತ್ತಿಗೆದಾರರೇ ಮುಂದೆ ನಿಂತು ಇಲಾಖೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾಗಿದೆ ಎಂದು ತಿಳಿಸಿದರು.

ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ಲ ಕುಕ್ಕಿಲ, ಮಾಜಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಡಂಬು, ಕಿಸಾನ್ ಘಟಕದ ಅಧ್ಯಕ್ಷ ಪ್ರಕಾಶ್ ರೈ ಎರ್ಮೆನಿಲೆ, ಪಂಚಾಯತ್ ಸದಸ್ಯರಾದ ಹರ್ಷದ್ ಕುಕ್ಕಿಲ, ಶರೀಫ್ ಕೊಡಂಗೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here