ಪುತ್ತೂರು: ಬಂಗಾರದ ಮಲ್ಲಿಗೆಯನ್ನೇ ತೊಟ್ಟು ನೇಮ ಪಡೆದುಕೊಳ್ಳುವ ಸೀಮೆಯೊಡತಿ ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿಯು ಎ.28ರಂದು ನಡೆಯಲಿದೆ.
ನೇಮ ನಡಾವಳಿಯ ಪೂರ್ವಭಾವಿಯಾಗಿ ಎ.27ರಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದೈವಗಳ ಭಂಡಾರ ತೆಗೆಯುವುದು,ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಎ.28ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದು ತಂತ್ರ ತೂಗಿದ ಬಳಿಕ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ಆರಂಭಗೊಂಡು ಕಿರುವಾಳು ಭಂಡಾರ ವಾಲಸರಿ ಗದ್ದೆಗೆ ತೆರಳಿ, ದಂಡನಾಯಕ ದೈವದ ಮುಖಾಮುಖಿ ನಡೆಯಲಿದೆ. ವಾಲಸರಿ ಗದ್ದೆಯಲ್ಲಿ ದೈವದ ನೇಮ ನಡೆದು ಕಟ್ಟೆ ಮನೆಯ ಬಳಿಯಿರುವ ಕಟ್ಟೆಯಲ್ಲಿ ಪೂಜೆ ನಡೆಯಲಿದೆ. ಬೆಳಿಗ್ಗೆ 10ಗಂಟೆಯಿಂದ ಶ್ರೀ ಉಳ್ಳಾಲ್ತಿ ದೈವದ ನೇಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ಯಾರ ಮನೆಯಿಂದ ವರ್ಷಂಪ್ರತಿ ತರುವ ಚಿನ್ನದ ಮುಗುಳು ಮಲ್ಲಿಗೆಯನ್ನು ಉಳ್ಳಾಲ್ತಿ ದೈವಕ್ಕೆ ಮುಡಿದು ನೇಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ 2 ಗಂಟೆಯಿಂದ ಶ್ರೀಕಾಳರಾಹು ಮತ್ತು ಮಲರಾಯ ದೈವಗಳ ನೇಮ ನಡೆಯಲಿದೆ.
ಎ.27ರ ಕಾರ್ಯಕ್ರಮದಲ್ಲಿ ಬದಲಾವಣೆ:
ಪ್ರತಿ ವರ್ಷ ನೇಮೋತ್ಸವದ ಹಿಂದಿನ ದಿನ ಅಂದರೆ ಎ.27ರಂದು ರಾತ್ರಿ ದೈವಗಳ ಭಂಡಾರ ತೆಗೆದು, ನೇಮೋತ್ಸವ ನಡೆಯುವ ದೈವಸ್ಥಾನಕ್ಕೆ ಆಗಮಿಸಿದ ಬಳಿಕ ಅನ್ನಸಂತರ್ಪಣೆ ನಡೆದ ನಂತರ ದೈವಗಳಿಗೆ ತಂಬಿಲ ಸೇವೆಗಳು ನಡೆಯುತ್ತಿದ್ದವು. ಆದರೆ ಈ ವರ್ಷದಿಂದ ತಂತ್ರಿಗಳ ಮಾರ್ಗದರ್ಶನದಂತೆ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು ಸಂಜೆ 7 ಗಂಟೆಗೆ ದೈವಗಳ ಭಂಡಾರ ತೆಗೆದು, ಭಂಡಾರವು ನೇಮೋತ್ಸವ ನಡೆಯುವ ದೈವಸ್ಥಾನಕ್ಕೆ ಆಗಮಿಸಿದ ಬಳಿಕ 9 ಗಂಟೆಗೆ ದೈವಗಳಿಗೆ ತಂಬಿಲ ಸೇವೆ, 9.30ಕ್ಕೆ ಪಲ್ಲ ಪೂಜೆ ನಡೆದು ಕೊನೆಯಲ್ಲಿ ಅನ್ನಸಂತರ್ಪಣೆ ನಡೆಸಲಾಗುವುದು ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.