ಕೋಡಿಂಬಾಡಿ: ಹಕ್ಕುಪತ್ರ ಪಡೆದುಕೊಂಡವರಿಗೆ ನಿವೇಶನ ನೀಡಲು ಶಾಸಕರ ಸೂಚನೆ-7 ವರ್ಷಗಳ ಸಮಸ್ಯೆಯನ್ನು ಇತ್ಯರ್ಥಪಡಿಸಿದ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ಹಕ್ಕುಪತ್ರ ಪಡೆದುಕೊಂಡಿರುವ ಎಲ್ಲರಿಗೂ ಮನೆ ನಿವೇಶನ ನೀಡುವಂತೆ ಶಾಸಕ ಅಶೋಕ್‌ ಕುಮಾರ್ ರೈ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೂ.6ರಂದು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಸೂಚನೆ ನೀಡಿದ್ದಾರೆ. ಈ ಮೂಲಕ ಕಳೆದ 7 ವರ್ಷಗಳಿಂದ ಇತ್ಯರ್ಥವಾಗದೆ ಇದ್ದ ಸಮಸ್ಯೆಯನ್ನು ಬಗೆಹರಿಸಿದ್ದಾರೆ.


ಕೋಡಿಂಬಾಡಿ ಗ್ರಾಮದ ಅರ್ಬಿ,ಕೂರ್ನಡ್ಕದಲ್ಲಿ ಕೋಡಿಂಬಾಡಿ ಗ್ರಾಪಂ ಗ್ರಾಮದ ಮನೆ ರಹಿತರಿಗೆ ನಿವೇಶನವನ್ನು ಕಾಯ್ದಿರಿಸಲಾಗಿತ್ತು. 2014-15 ನೇ ಸಾಲಿನಲ್ಲಿ ಕೋಡಿಂಬಾಡಿ ಗ್ರಾಮಪಂಚಾಯತ್ ಅರ್ಬಿಯಲ್ಲಿದ್ದ 1.34 ಎಕ್ರೆ ಸ್ಥಳದಲ್ಲಿ 29 ಮಂದಿ ಫಲಾನುಭವಿಗಳಿಗೆ ನಿವೇಶನವನ್ನು ಗುರುತಿಸಿ ಅವರಿಗೆ ಹಕ್ಕುಪತ್ರವನ್ನು ನೀಡಲಾಗಿತ್ತು. ಆದರೆ ನಿವೇಶನ ಪಡೆದುಕೊಂಡಿದ್ದ ಫಲಾನುಭವಿಗಳು ಮನೆ ಕಟ್ಟುವಲ್ಲಿ ಸಮಸ್ಯೆ ತಲೆದೂರಿತ್ತು. ನಿವೇಶನಕ್ಕಾಗಿ ಕಾಯ್ದಿರಿಸಿದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂಬ ತಕರಾರಿನಿಂದಾಗಿ ಕಳೆದ 7 ವರ್ಷಗಳಿಂದ ಈ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಫಲಾನುಭವಿಗಳಿಗೆ ಕಾನೂನಿನ ತೊಡಕಾಗಿತ್ತು. ಕೋಡಿಂಬಾಡಿ ಗ್ರಾ.ಪಂ ಈ ವಿಚಾರದಲ್ಲಿ ನಿರ್ಣಯ ಮಾಡಿದ್ದರೂ ಮನೆ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ.

ಶಾಸಕರಿಗೆ ದೂರು ನೀಡಿದ ಗ್ರಾಪಂ ಸದಸ್ಯ
ಉಪ್ಪಿನಂಗಡಿಯಲ್ಲಿ ಜೂ. 6 ರಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರು ಕೋಡಿಂಬಾಡಿ ಗ್ರಾಮದಲ್ಲಿ ನಿವೇಶನಕ್ಕಾಗಿ ಕಾಯ್ದಿರಿಸಿದ ಜಾಗದ ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಈ ವಿಚಾರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಶಾಸಕರು ನಿವೇಶನದಲ್ಲಿ ಯಾರೆಲ್ಲಾ ಹಕ್ಕುಪತ್ರ ಪಡೆದುಕೊಂಡಿದ್ದಾರೋ ಅವರೆಲ್ಲರೂ ಆ ಜಾಗದಲ್ಲಿ ಮನೆ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು. ಮನೆ ಕಟ್ಟುವ ಜಾಗದಲ್ಲಿ ಮರಗಳಿದ್ದರೆ ಆ ಮರಗಳನ್ನು ಕಡಿಯುವಲ್ಲಿ ಇಲಾಖೆ ಕ್ರಮಕೈಗೊಳ್ಳುತ್ತದೆ. ಮನೆ ನಿವೇಶನ ಹೊರತುಪಡಿಸಿ ಉಳಿದ ಜಾಗದಲ್ಲಿರುವ ಮರಗಳನ್ನು ಉಳಿಸಿ ಸದ್ರಿ 1.34 ಎಕ್ರೆಯಲ್ಲಿ 29 ಮಂದಿಗೆ ನಿವೇಶನದ ಹಕ್ಕುಪತ್ರ ನೀಡಲಾಗಿದ್ದು ಅವೆರೆಲ್ಲರೂ ಆ ಜಾಗದಲ್ಲಿ ಮನೆ ನಿರ್ಮಾಣ ಮಾಡುವಲ್ಲಿ ಕ್ರಮಕೈಗೊಳ್ಳಬೇಕು, ಅಲ್ಲಿ ಯಾವುದೇ ತಕರಾರಿದ್ದರೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಇತ್ಯರ್ಥಪಡಿಸಿ ಬಡವರಿಗೆ ನೀಡಿರುವ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವಲ್ಲಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.

ಹುಟ್ಟೂರಿನ ಸಮಸ್ಯೆ ಇತ್ಯರ್ಥಪಡಿಸಿದ ಶಾಸಕರು
ಶಾಸಕರಾದ ಅಶೋಕ್ ರೈಯವರ ಗ್ರಾಮವೇ ಆಗಿರುವ ಕೋಡಿಂಬಾಡಿಯಲ್ಲಿ ಕಳೆದ 7 ವರ್ಷಗಳಿಂದ ಇದ್ದ ಸಮಸ್ಯೆಯನ್ನು ಇತ್ಯರ್ಥಪಡಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಕ್ಕುಪತ್ರ ಪಡೆದ 29 ಕುಟುಂಬಸ್ಥರು ಕಳೆದ ಏಳು ವರ್ಷಗಳಿಂದ ಮನೆ ನಿರ್ಮಾಣ ಮಾಡಲು ಸಾಧ್ಯವಾಗದೆ ನೊಂದುಕೊಂಡಿದ್ದರು.

ರಾಜಕೀಯ ದುರುದ್ದೇಶದಿಂದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡದಂತೆ ಕೆಲವರು ಅಡ್ಡಿಪಡಿಸಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಹಕ್ಕುಪತ್ರ ನೀಡಲಾಗಿದೆ . ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳುವ ಮೂಲಕ ಹಕ್ಕುಪತ್ರ ಪಡೆದವರಿಗೆ ಮನೆ ಕಟ್ಟಲು ಅಡ್ಡಿ ಮಾಡಲಾಗಿತ್ತು. ಇದೀಗ ಎಲ್ಲಾ ಸಮಸ್ಯೆಯೂ ಇತ್ಯರ್ಥವಾಗಿದೆ. ಮುಂದಿನ ದಿನಗಳಲ್ಲಿ ಹಕ್ಕುಪತ್ರ ಪಡೆದುಕೊಂಡಿರುವ 29 ಮಂದಿಗೂ ಅಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು. ಸಮಸ್ಯೆ ಇತ್ಯರ್ಥಪಡಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ಹೇಳಿದರು

LEAVE A REPLY

Please enter your comment!
Please enter your name here