ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿಯ ಸಚಿನ್ ಜ್ಯೂಸ್ ಸೆಂಟರ್ ನಲ್ಲಿ ಬಿದ್ದು ಸಿಕ್ಕಿದ ಮೂರು ಪವನ್ ಚಿನ್ನದ ಬ್ರಾಸ್‌ಲೈಟ್ ಅನ್ನು ಅದರ ನೈಜ ವಾರೀಸುದಾರರಾದ ರಾಮಕುಂಜ ಗ್ರಾಮದ ಶಾರದಾ ನಾಗರ ನಿವಾಸಿ ದಿಲೀಪ್‌ರವರಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.
ಕಳೆದ ಮೇ 3 ನೇ ತಾರೀಕಿನಂದು ಸಿಕ್ಕಿರುವ ಈ ಆಭರಣದ ಮೂಲ ವಾರೀಸುದಾರರು ವಿಚಾರಿಸಿಕೊಂಡು ಬರಬಹುದೆಂದು ನಿರೀಕ್ಷಿಸಲಾಗಿತ್ತಾದರೂ, ಯಾರೂ ಬಾರದೇ ಇದ್ದಾಗ ಚಿನ್ನಾಭರಣ ದೊರಕಿರುವ ಬಗ್ಗೆ ಜ್ಯೂಸ್ ಸೆಂಟರ್ ಮಾಲಕರು ತಮ್ಮ ಸಿಬ್ಬಂದಿಯ ಮೂಲಕ ವಾಟ್ಸಪ್ ಸಂದೇಶವನ್ನು ಹರಿಯಬಿಟ್ಟಿದ್ದರು. ಈ ಬಗ್ಗೆ ಪತ್ರಿಕಾ ವರದಿಗಳು ಮಂಗಳವಾರದಂದು ಪ್ರಕಟವಾಗಿದ್ದು, ಪತ್ರಿಕಾ ವರದಿಯ ತುಣುಕನ್ನು ವಾಟ್ಸಪ್ ನಲ್ಲಿ ಕಂಡ ದಿಲೀಪ್ ರವರು ಪೂರಕ ದಾಖಲೆಗಳೊಂದಿಗೆ ಅಂಗಡಿ ಮಾಲಕರನ್ನು ಸಂಪರ್ಕಿಸಿದರು.
ಆದರೆ ಆ ವೇಳೆಗಾಗಲೇ 30 ಕ್ಕೂ ಅಧಿಕ ಮಂದಿ ತಾವು ಕಳೆದುಕೊಂಡ ಆಭರಣವನ್ನು ವಿಚಾರಿಸಿ ಜ್ಯೂಸ್ ಸೆಂಟರ್ ಮಾಲಕರನ್ನು ಸಂಪರ್ಕಿಸಿದ್ದರಿಂದ, ಗೊಂದಲ ನಿವಾರಣೆಗಾಗಿ ಉಪ್ಪಿನಂಗಡಿ ಪೊಲೀಸರನ್ನು ಸಂಪರ್ಕಿಸಿ ನೈಜ ವಾರಸುದಾರರ ಪತ್ತೆಗೆ ಸಹಕಾರ ಕೋರಿದರು. ಆಭರಣ ಖರೀದಿಯ ಬಿಲ್, ಪೂರಕ ಪೋಟೋ, ಸಿಸಿ ಕ್ಯಾಮಾರದಲ್ಲಿನ ದೃಶ್ಯಾವಳಿಯನ್ನು ಆಧರಿಸಿ ದಿಲೀಪ್ ರವರನ್ನು ಆಭರಣದ ನೈಜ ವಾರೀಸುದಾರರೆಂದು ಪರಿಗಣಿಸಿ ಅವರಿಗೆ ಠಾಣಾಧಿಕಾರಿ ರಾಜೇಶ್ ಕೆ.ವಿ.ಯವರ ಸಮ್ಮುಖದಲ್ಲಿ ಜ್ಯೂಸ್ ಸೆಂಟರ್ ಮಾಲಕ ಸುಂದರ ಗೌಡ ರವರು ಹಸ್ತ್ತಾಂತರಿಸಿದರು.
ನಂಬಿದ ದೈವ ಕೈಬಿಡಲಿಲ್ಲ:
ಅದು ಮೇ ತಿಂಗಳ 3 ನೇ ತಾರೀಕು. ನಾನು ನನ್ನ ಅಕ್ಕನ ಮನೆಯ ಗೃಹ ಪ್ರವೇಶಕ್ಕೆ ಹೋಗಿ ಬಂದಾಗ ನನ್ನ ಕೈಯಲ್ಲಿದ್ದ ಬ್ರಾಸ್ ಲೈಟ್ ಕಣ್ಮರೆಯಾಗಿತ್ತು. ಗೃಹ ಪ್ರವೇಶದ ಜನಜಂಗುಳಿಯಲ್ಲಿ ಕಳೆದಿರಬಹುದೆಂದು ಅಂದಾಜಿಸಿ ನೆಂಟರಿಷ್ಟರಲ್ಲಿ ವಿಚಾರಿಸಿದ್ದೆ. ಯಾರಿಂದಲೂ ಮಾಹಿತಿ ಲಭಿಸಿರಲಿಲ್ಲ. ಬಳಿಕ ನಂಬಿದ ದೈವ ಕೊರಗಜ್ಜನಿಗೆ ಹರಕೆ ಹೊತ್ತೆ. ಗೃಹ ಪ್ರವೇಶದಿಂದ ಹಿಂದಿರುಗುವಾಗ ಸಚಿನ್ ಜ್ಯೂಸ್ ಸೆಂಟರ್ ಗೆ ಹೋಗಿ ಜ್ಯೂಸ್ ಕುಡಿದಿದ್ದೆವು. ಆಭರಣ ಕಳೆದುಹೋದ ಸಮಯದಲ್ಲಿ ಅದೆಲ್ಲವೂ ನೆನಪಿಗೆ ಬಂದಿರಲಿಲ್ಲ. ಮಂಗಳವಾರ ಮುಂಜಾನೆ ಪತ್ರಿಕಾ ವರದಿಯ ತುಣುಕ್ಕೊಂದು ವಾಟ್ಸಪ್ ನಲ್ಲಿ ಹರಿದಾಡಿದಾಗ ನನ್ನ ಆಭರಣ ಆಗಿರಬಹುದಾ ಎಂದು ಅಂದಾಜಿಸಿ ಸುಂದರ ಗೌಡರನ್ನು ಸಂಪರ್ಕಿಸಿದೆ. ಅವರ ಪ್ರಾಮಾಣಿಕತೆಯಿಂದಾಗಿ ನನ್ನ ಕಷ್ಟಾರ್ಜಿತ ಸೊತ್ತು ನನಗೆ ಲಭಿಸಿದಂತಾಗಿದೆ. ನಂಭಿದ ದೈವ ನನ್ನನ್ನು ಕೈಬಿಡದೆ ಕಾಪಾಡಿದೆ ಎಂದು ಬ್ರಾಸ್‌ಲೈಟ್ ಸಿಕ್ಕಿದ ಸಂತಸದಲ್ಲಿ ದಿಲೀಪ್‌ರವರು ಪ್ರತಿಕ್ರಿಯಿಸಿದರು.
ನೈಜ ವಾರೀಸುದಾರರು ವಿಚಾರಿಸಿಕೊಂಡು ಬರುವ ಬಗ್ಗೆ ನಿರೀಕ್ಷಿಸಿದ್ದೆ:
ಚಿನ್ನಾಭರಣ ಕಳೆದ ಮೇ ತಿಂಗಳ 3 ನೇ ತಾರೀಕಿನಂದು ದೊರಕ್ಕಿದ್ದರೂ, ಅದರ ವಾರೀಸುದಾರರು ವಿಚಾರಿಸಿಕೊಂಡು ಬರಬಹುದೆಂದು ನಿರೀಕ್ಷಿಸಿದ್ದೆ. ಬಳಿಕ ವ್ಯವಹಾರಿಕ ಒತ್ತಡದಿಂದಾಗಿ ಅದನ್ನು ಮರೆತ್ತಿದ್ದೆ. ಆಭರಣ ಸಿಕ್ಕಿ 45 ದಿನ ಕಳೆದರೂ ಯಾರೂ ಬಾರದಿದ್ದಾಗ ಈ ಬಗ್ಗೆ ವಾಟ್ಸಪ್ ಸಂದೇಶವನ್ನು ನನ್ನ ಸಿಬ್ಬಂದಿಗಳ ಮೂಲಕ ಹರಿಯಬಿಟ್ಟೆವು. ಈ ಬಗ್ಗೆ ಪತ್ರಿಕಾ ವರದಿಗಳು ಪ್ರಕಟವಾದವು. ಅದರ ಫಲಶ್ರುತಿಯಾಗಿ ನೈಜ ವಾರೀಸುದಾರರು ಪತ್ತೆಯಾಗುವಂತಾಯಿತು ಎಂದು ಸಚಿನ್ ಜ್ಯೂಸ್ ಸೆಂಟರ್ ಮಾಲಕ ಸುಂದರ ಗೌಡ ಪ್ರತಿಕ್ರಿಯಿಸಿದ್ದಾರೆ.
ಪೋಟೋ: ೨೦ಯುಪಿಪಿಹಸ್ತಾಂತರ