ಗುಣಮಟ್ಟದ ಸೇವೆಯನ್ನು ನೀಡಿದಾಗ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ: ಬಾಲಕೃಷ್ಣ ಆಳ್ವ ಕೊಡಾಜೆ
ವಿಟ್ಲ: ಗುಣಮಟ್ಟದ ಸೇವೆಯನ್ನು ನೀಡಿದಾಗ ಗ್ರಾಮೀಣ ಭಾಗದಿಂದ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿಯವರ ಕಾರ್ಯ ಶ್ಲಾಘನೀಯ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಅವರು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿದ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರವು ಖಾಸಗಿ ಆಸ್ಪತ್ರೆಗಳಿಗೆ ಸರಿಸಮಾನವಾಗಿ ತನ್ನ ಸೇವೆಯನ್ನು ನೀಡುತ್ತಿದೆ. ಸಂಸ್ಥೆಯ ಅಭಿವೃದ್ಧಿಯ ದೃಷ್ಟಿಯಿಂದ ಪಂಚಾಯತ್ ವತಿಯಿಂದ ನಿಯಮಾನುಸಾರವಾಗಿ ನೀಡಬಹುದಾದ ಅನುದಾನವನ್ನು ನೀಡುತ್ತಿದ್ದೇವೆ. ಮುಂದೆಯೂ ಕೂಡಾ ನೀಡಲು ಬದ್ಧರಾಗಿದ್ದೇವೆ. ಸ್ಥಳೀಯ ದಾನಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪಂಚಾಯತ್ತಿನವರು ಕೂಡಾ ಸಹಕರಿಸುತ್ತಿದ್ದಾರೆ. ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ವೈದ್ಯಾಧಿಕಾರಿ ಡಾ. ಶಶಿಕಲಾರವರು ಆರೋಗ್ಯ ಕೇಂದ್ರಕ್ಕೆ ಬಂದಿರುವ ಅನುದಾನ ಮತ್ತು ಖರ್ಚು ವೆಚ್ಚಗಳ ಬಗ್ಗೆ ವಿವರ ನೀಡಿದರು. ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ ಬಂಟ್ರಿಂಜ, ಸಮಿತಿಯ ಸದಸ್ಯರಾದ ಇಬ್ರಾಹಿಂ.ಕೆ.ಮಾಣಿ, ಉಷಾ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಯವರು ಉಪಸ್ಥಿತರಿದ್ದರು. ಆರೋಗ್ಯ ಸಹಾಯಕಿಯರಾದ ಉದಯ ಕುಮಾರಿ ಸ್ವಾಗತಿಸಿ, ಅರುಂದತಿ ವಂದಿಸಿದರು.