ವಿಪತ್ತು ನಿರ್ವಹಿಸಲು ಸದಾ ಎಚ್ಚರಿಕೆ, ಜಾಗರೂಕತೆಯಿಂದಿರಬೇಕು ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ

0

ಮಂಗಳೂರು: ಪ್ರಸ್ತುತ ಮುಂಗಾರಿನಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಸೂಕ್ತವಾಗಿ ನಿರ್ವಹಿಸಲು ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಸದಾ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ಇರಬೇಕು, ಇದನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲೀ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಯಾವುದೇ ಸೂಚನೆ ನೀಡದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಎಚ್ಚರಿಕೆ ನೀಡಿದರು.

ಜೂ.೨೮ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಪತ್ತು ನಿರ್ವಹಣೆಯ ಪೂರ್ವ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಂಗಾರಿನಲ್ಲಿ ಉದ್ಬವಿಸಬಹುದಾದ ಪ್ರವಾಹ, ಗುಡ್ಡಕುಸಿತ, ಭೂಕುಸಿತ ಸೇರಿದಂತೆ ಎದುರಾಗುವ ವಿವಿಧ ವಿಪತ್ತುಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕಂಟ್ರೋಲ್ ರೂಂ ರಚಿಸಬೇಕು, ಮಾತ್ರವಲ್ಲ ಅವು 24/7 ಕಾರ್ಯನಿರ್ವಹಿಸಬೇಕು ಎಂದರು.ಬಂಟ್ವಾಳ ಹಾಗೂ ಉಳ್ಳಾಲ ತಾಲೂಕಿನಲ್ಲಿ ಇದುವರೆಗೂ ಕಂಟ್ರೋಲ್ ರೂಂಗಳು ಸ್ಥಾಪನೆಯಾಗದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಎರಡೂ ತಾಲೂಕುಗಳಲ್ಲಿಯೂ ಕೂಡಲೇ ಕಂಟ್ರೋಲ್ ರೂಮ್ ಆರಂಭಿಸಬೇಕು, ದಿನದ ಮೂರು ಪಾಳಿಯಲ್ಲೂ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು, ಅವರು ಕರೆಗಳನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿಯಲ್ಲಿ ಯಾವುದೇ ಕಾರಣ ಕೇಳದೆಯೇ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಪ್ರತಿ ವಾರ್ಡ್‌ಗಳಲ್ಲಿ ಕಂಟ್ರೋಲ್ ರೂಂ ತೆರೆಯಿರಿ:
ನಗರ ಸ್ಥಳೀಯ ಸಂಸ್ಥೆಗಳು ಕೂಡ ಪ್ರತಿ ವಾರ್ಡ್‌ಗಳಲ್ಲಿ ಕಂಟ್ರೋಲ್ ರೂಮ್ ತೆರೆಯಬೇಕು, ಮೆಸ್ಕಾಂನಿಂದ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಈ ದಿಸೆಯಲ್ಲಿ ಜಿಲ್ಲೆಯ ಪೂರ್ವ ಇತಿಹಾಸವನ್ನು ಅವಲೋಕಿಸಿ ಭೂಕುಸಿತ, ಪ್ರವಾಹ ಇತ್ಯಾದಿಗಳು ವರದಿಯಾಗಿರುವ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದಾಗ ಕೂಡಲೇ ಅವುಗಳನ್ನು ಪುನರ್ ಸ್ಥಾಪಿಸಲು ಆಯಾ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳನ್ನು ದಾಸ್ತಾನಿರಿಸಿಕೊಳ್ಳಬೇಕು, ಅಲ್ಲಿಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿರಬೇಕು, ವಾಹ, ಅಗತ್ಯ ಸಾಮಗ್ರಿಗಳು ಸೇರಿದಂತೆ ವಿವಿಧ ರೀತಿಯ ಸಿದ್ದತೆಗಳ ಬಗ್ಗೆ ಖಾತ್ರಿ ಪಡಿಸಬೇಕು, ಈ ವಿಷಯದಲ್ಲಿ ಯಾವುದೇ ವ್ಯತ್ಯಾಸವಾದರೂ ಕೂಡ ಕೂಡಲೇ ತಿಳಿಸುವಂತೆ ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ರೋಹಿತ್‌ಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.


ಮೇಘ ಸ್ಪೋಟ, ಭೂಕುಸಿತಗಳಾಗುವ ಕಡೆ ಅವುಗಳನ್ನು ಸೂಕ್ತವಾಗಿ ನಿಭಾಯಿಸಲು ಎಚ್ಚರ ವಹಿಸಬೇಕು, ತಾಲೂಕು, ಗ್ರಾಮ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ಸಿದ್ಧಪಡಿಸಿಟ್ಟುಕೊಂಡು, ಅದಕ್ಕೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಬೇಕು, ಜೆಸಿಬಿ ಇತರೆ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳಬೇಕು,ಅದರೊಂದಿಗೆ ಮರಗಳನ್ನು ನೆಲಕ್ಕೆ ಉರುಳಿದಾಗ ಅರಣ್ಯ ಇಲಾಖೆಯು ತೆರವುಗೊಳಿಸಲು ಸಜ್ಜಾಗಬೇಕೆಂದರು.

ಸಮುದ್ರ ಕೊರೆತ ಎದುರಾಗುವ ಪ್ರದೇಶಗಳಲ್ಲಿ ಎಚ್ಚರ ವಹಿಸಬೇಕು, ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಮಾಹಿತಿ ನೀಡುವುದು ಹಾಗೂ ಅಲ್ಲಿ ಗೃಹರಕ್ಷಕರ ನಿಯೋಜನೆ ಮತ್ತು ಲೈಫ್ ಗಾರ್ಡ್‌ಗಳು ಇರಬೇಕು ಎಂದರು.ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಡ್ಯಾಂಗಳು, ನದಿ ಪಾತ್ರಗಳಲ್ಲಿ ಪ್ರವಾಹ ಉಂಟಾದ ಸ್ಥಳದ ಮಾಹಿತಿಯೊಂದಿಗೆ ಜಿಲ್ಲೆಯ ಇಬ್ಬರೂ ಸಹಾಯಕ ಆಯುಕ್ತರು ತಮ್ಮ ವ್ಯಾಪ್ತಿಯ ತಹಶೀಲ್ದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಸೂಚಿಸಿದರು.

21 ಮನೆ ಸಂಪೂರ್ಣ, 107 ಭಾಗಶ: ಹಾನಿ:
ಮಳೆ ಸೇರಿದಂತೆ ಇತರೆ ಕಾರಣಗಳಿಂದಾಗಿ ಈ ಜಿಲ್ಲೆಯಲ್ಲಿ 21 ಮನೆಗಳು ಸಂಪೂರ್ಣ ಹಾಗೂ ೧೦೭ ಮನೆಗಳು ಭಾಗಶಃ ಹಾನಿಗೊಳಗಾಗಿವೆ.ಈ ಪ್ರಕರಣಗಳಲ್ಲಿ ಯಾವುದಾದರು ಪರಿಹಾರಕ್ಕೆ ಬಾಕಿ ಉಳಿದಿದ್ದರೆ ಪರಿಶೀಲಿಸಿ, ಪರಿಹಾರ ವಿತರಿಸಬೇಕು.ಮಣ್ಣಿನ ಗೋಡೆಗಳ ಮನೆಗಳು, ಮಳೆಯಿಂದಾಗಿ ಬೀಳುವ ಮನೆಗಳಿದ್ದರೆ ಅವುಗಳನ್ನು ಪತ್ತೆ ಹಚ್ಚುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ವಿಪತ್ತುಗಳಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಮಾನವ ಪ್ರಾಣ ಹಾನಿ ಸಂಭವಿಸಿಲ್ಲ, ಆದರೆ ಮೂರು ಪ್ರಾಣಿಗಳು ಸಾವಿಗೀಡಾಗಿದ್ದು, ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ವೆಂಟೆಡ್ ಡ್ಯಾಮ್‌ಗಳಲ್ಲಿ ಸಮಸ್ಯೆಗಳಿದ್ದರೆ ಕೂಡಲೇ ಗಮನಕ್ಕೆ ತರಬೇಕು ಹಾಗೂ ಸಂಭಾವ್ಯ 101 ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳಿರಬೇಕು, ಜಿಲ್ಲೆಯಲ್ಲಿ ಕೊಠಡಿ ಅಥವಾ ಕಟ್ಟಡ ಬೀಳುವ ಹಂತದಲ್ಲಿರುವ ಶಾಲೆಗಳ ಪಟ್ಟಿಯನ್ನು ಎರಡು ದಿನಗಳಲ್ಲಿ ಒದಗಿಸಬೇಕು ಹಾಗೂ ತಾತ್ಕಾಲಿಕ ದುರಸ್ತಿ ಮಾಡುವುದಾದಲ್ಲೀ ಕೂಡಲೇ ಮಾಡಿಕೊಳ್ಳಬೇಕು, ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಗುರುತಿಸುವಂತೆ ಸಂಬಂಧ ಸಂಬಂಧಪಟ್ಟ ಮುಖ್ಯೋಪಾಧ್ಯಾಯರಿಂದಲೇ ಲಿಖಿತವಾಗಿ ಮಾಹಿತಿ ಪಡೆದುಕೊಳ್ಳಬೇಕು, ಶಿಥಿಲ ಕಟ್ಟಡಗಳಿಂದ ಬೇರೆಡೆ ಮಕ್ಕಳನ್ನು ಸ್ಥಳಾಂತರಿಸಬೇಕು, ಅದರಂತೆ ಶಿಥಿಲಗೊಂಡ ಅಂಗನವಾಡಿ ಕಟ್ಟಡ ಪತ್ತೆ ಹಚ್ಚಿ, ಅಲ್ಲಿನ ಮಕ್ಕಳನ್ನು ಇತರೆಡೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಯಕ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪಾಪ ಬೋವಿ ಅವರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಇಕ್ಕೆಲಗಳಲ್ಲಿ ವಾಹನಗಳಿಗೆ ತೊಡಕುಂಟಾಗದಂತೆ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಮಳೆಯ ನೀರು ಹರಿಯುವಿಕೆಗೆ ಸೂಕ್ತ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅನಿರುದ್ಧ್ ಅವರಿಗೆ ತಾಕೀತು ಮಾಡಿದರು.

ಚುನಾವಣಾ ಕಾರ್ಯ ನಿಮಿತ್ತ ಜಿಲ್ಲೆಗೆ ಕೆಲವು ತಹಶೀಲ್ದಾರರು ವರ್ಗಾವಣೆಯಾಗಿ ಬಂದಿದ್ದಾರೆ, ಅವರುಗಳು ದೂರದಿಂದ ಬಂದೆ ಎಂಬ ಭಾವನೆ ಬಿಟ್ಟು, ಕೆಲಸ ಮಾಡಬೇಕು. ವಿಪತ್ತು ನಿರ್ವಹಣೆ, ಪ್ರವಾಹ ಸೇರಿದಂತೆ ವಿಪತ್ತುಗಳನ್ನು ಸೂಕ್ತವಾಗಿ ನಿರ್ವಹಿಸಲು ಹೆಚ್ಚಿನ ಸಿದ್ದತೆಗಳನ್ನು ಮಾಡಿಕೊಳ್ಳಬೇಕು, ತಮ್ಮ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಹೆಚ್ಚಿನ ಮಾಹಿತಿ ಪಡೆದು ಶ್ರಮ ಹಾಕುವ ಮೂಲಕ ವಿಪತ್ತು ನಿರ್ವಹಣಾ ಕಾರ್ಯವನ್ನು ಗಂಭೀರವಾಗಿ ನಿರ್ವಹಿಸಬೇಕು ಎಂದರು ಜಿಲ್ಲಾಧಿಕಾರಿ ಸಲಹೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಸಿಪಿ ಅನ್ಶು ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಮಾಣಿಕ್ಯ ವೇದಿಕೆಯಲ್ಲಿದ್ದರು.ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

LEAVE A REPLY

Please enter your comment!
Please enter your name here