ವಿದ್ಯಾರ್ಥಿಗಳ ಜೀವನ ಶೈಲಿ ಭ್ರೇಕಿಲ್ಲದ ವಾಹನದಂತೆ ಚಲಿಸುತ್ತಿದೆ : ವಿಠಲ್ ನಾಯಕ್ ಕಲ್ಲಡ್ಕ
ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಶಿಕ್ಷಕ-ರಕ್ಷಕ ಮಹಾಸಭೆ ಜು. 9ರಂದು ನಡೆಯಿತು. ಮುಖ್ಯಅತಿಥಿಗಳಾಗಿ ಉತ್ತಮ ವಾಗ್ಮಿ, ಶಿಕ್ಷಕರೂ ಆಗಿರುವ ವಿಠಲ್ ನಾಯಕ್ ಕಲ್ಲಡ್ಕ ಆಗಮಿಸಿದ್ದರು. ಪ್ರಸ್ತುತ ವಿದ್ಯಾರ್ಥಿಗಳ ಜೀವನ ಶೈಲಿಯು ಬ್ರೇಕಿಲ್ಲದ ವಾಹನದಂತೆ ಚಲಿಸುತ್ತಿದ್ದು, ಹೇಳುವುದನ್ನು ಕೇಳುವ ತಾಳ್ಮೆ, ಸಮಾಧಾನ, ಸಂಯಮ ಮತ್ತು ಏಕಾಗ್ರತೆಯ ಕೊರತೆ ಇದ್ದು ಮಕ್ಕಳಿಗೆ ಈಗ ಲಿಂಬೆ-ಚಮಚ ಓಟದ ಅಭ್ಯಾಸವನ್ನು ಮಾಡಿಸುವುದು ಉತ್ತಮ ಇದರಿಂದ ತಾಳ್ಮೆ, ಸಮಾಧಾನ, ಸಂಯಮ ಮತ್ತು ಏಕಾಗ್ರತೆಯು ಬರುತ್ತದೆ ಅಲ್ಲದೇ ತಮ್ಮ ಹಾಗೂ ಹೆತ್ತವರ ಘನತೆ ಗೌರವಕ್ಕೆ ಕುಂದು ಬಾರದಂತೆ ಬದುಕಲು ಕಲಿಯುತ್ತಾರೆ ಎಂದು ವಿಠಲ ನಾಯಕ್ ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ಗೋಕುಲ್ ನಾಥ್ ಪಿ.ವಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಮತ್ತು ಸಮಾಜದ ಮುಖ್ಯವಾಹಿನಿಯಿಂದ ವಂಚಿತಗೊಂಡ ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ, ಬೋಧಿಸಿ ಮತ್ತೆ ಸಮಾಜದ ಮುಖ್ಯವಾಹಿನಿಗೆ ತರುವ ಶ್ರೇಷ್ಠ ಕೆಲಸವನ್ನು ಎಲ್ಲಾ ವಿದ್ಯಾಸಂಸ್ಥೆಗಳು ಮಾಡಿದರೆ ಇದು ದೇಶಸೇವೆಯೇ ಸರಿ ಎಂದು ಹೇಳಿದರು. ತದನಂತರ ಪೋಷಕರು ಹಾಗೂ ಶಿಕ್ಷಕರ ನಡುವೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರು, ಮುಖ್ಯಶಿಕ್ಷಕಿ, ಸಿ.ಎಸ್.ಐ ವಸತಿ ನಿಲಯದ ವಾರ್ಡನ್ ಚಂದ್ರಶೇಖರ್, ವಿಕ್ಟರ್‍ಸ್ ಹೆಣ್ಣುಮಕ್ಕಳ ಪ್ರಗತಿ ವಿದ್ಯಾರ್ಥಿಗಳ ವಾರ್ಡನ್ ಕುಮಾರಿ ಕಲಾವತಿ ಎಮ್, ಉಪನ್ಯಾಸಕ ವೃಂದದವರು, ಸಿಬ್ಬಂದಿ ವರ್ಗದವರು ಹಾಗೂ ಪೋಷಕರು ಉಪಸ್ಥಿತರಿದ್ದರು. ಕುಮಾರಿ ಚೈತಾಲಿ ಮತ್ತು ತಂಡದವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಕುಮಾರಿ ಹರ್ಷಿತಾ ಸ್ವಾಗತಿಸಿದರು, ಕುಮಾರಿ ಅನುಪಮಾ ಧನ್ಯವಾದ ಸಲ್ಲಿಸಿದರು, ಶ್ರೀಮತಿ ಒಲಿವಿಯಾ ಪಾಯಸ್ ಕಾರ್ಯಕ್ರಮವನ್ನು ನಿರೂಪಿಸಿದರು.