ಕೊಂಬಾರು: ಸಮಸ್ಯೆಗೆ ಕಾರಣವಾಗಿರುವ ಅಪೂರ್ಣ ರಸ್ತೆ ಕಾಮಗಾರಿವಾಹನ ಸಂಚಾರಕ್ಕೆ ತೊಡಕು; ಸ್ಥಳೀಯರಿಂದ ಪ್ರತಿಭಟನೆಗೆ ಸಿದ್ಧತೆ

0

ಕಡಬ: ಕೊಂಬಾರು ಗ್ರಾಮದ ಕೊಂಬಾರು, ಪೊರ್ದೇಲು, ಒಡೋಳಿ, ಕೋಲ್ಕಜೆಯ ಮೂಲಕ ಕೆಂಜಾಳವನ್ನು ಸಂಪರ್ಕಿಸುವ ಜಿ.ಪಂ.ರಸ್ತೆಯಲ್ಲಿ ಪೊರ್ದೇಲು ಎಂಬಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಇರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿದ್ದು, ಸ್ಥಳೀಯರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.
ರಸ್ತೆ ಅಗೆದು 5 ತಿಂಗಳಾದರೂ ನಡೆಯದ ಕಾಮಗಾರಿ: ಗ್ರಾಮದ ಕೋಲ್ಕಜೆ ಮತ್ತು ನಾರಡ್ಕ ಪರಿಶಿಷ್ಟ ಜಾತಿ ಕಾಲನಿಯನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಮುಂದುವರಿದ ಭಾಗವಾಗಿ ಶಾಸಕರ 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯುವ ಈ ಕಾಮಗಾರಿಯನ್ನು ಗುತ್ತಿಗೆದಾರರು ಕಳೆದ ಮಾರ್ಚ್ ತಿಂಗಳಲ್ಲಿ ಪೊರ್ದೇಲು ಬಳಿ ಆರಂಭಿಸಿ ರಸ್ತೆಯನ್ನು ಅಗೆದು ದೊಡ್ಡ ಗಾತ್ರದ ಜಲ್ಲಿಯನ್ನು ರಾಶಿ ಹಾಕಿ ಹೋದವರು ಬಳಿಕ ಕಾಮಗಾರಿಯನ್ನು ಮುಂದುವರಿಸಿಲ್ಲ. ಹಾಕಿದ ಜಲ್ಲಿಯನ್ನು ರೋಲರ್ ಬಳಸಿ ಸಮತಟ್ಟು ಮಾಡದೇ ಇರುವುದರಿಂದ ಇಲ್ಲಿ ವಾಹನ ಸಂಚಾರಕ್ಕೆ ಮಾತ್ರವಲ್ಲದೇ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ನಡೆದುಹೋಗಲೂ ಸಮಸ್ಯೆಯಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಇಲ್ಲಿ ವಾಹನ ಚಲಾಯಿಸಲು ಹರಸಾಹಸ ಪಡಬೇಕಿದೆ. ಅಪೂರ್ಣ ಕಾಮಗಾರಿಯಿಂದ ಹಲವು ಅಪಘಾತಗಳು ಕೂಡ ಇಲ್ಲಿ ಸಂಭವಿಸಿದೆ. ಸಂಬಂಧಪಟ್ಟ ಇಲಾಖಾ ಇಂಜಿನಿಯರ್‌ಗಳನ್ನು ಸಂಪರ್ಕಿಸಿ ರಸ್ತೆಯನ್ನು ಸರಿಪಡಿಸುವಂತೆ ಮನವಿ ಮಾಡಿದರೆ ಅವರು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಸ್ಥಳೀಯ ಜನರು ತೊಂದರೆಪಡುತ್ತಿದ್ದು, ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರನ್ನು ಸೇರಿಸಿ ಸಂಬಂಧಪಟ್ಟ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿರುವ ಸ್ಥಳೀಯ ಪ್ರಮುಖರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ.

ಮಳೆಯ ಕಾರಣದಿಂದಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ರಸ್ತೆ ಅಗೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
-ಆರ್.ವೇಣುಗೋಪಾಲ್,
ಕಾರ್ಯಪಾಲಕ ಇಂಜಿನಿಯರ್, ದ.ಕ.ಜಿ.ಪಂ.
ಇಂಜಿನಿಯರಿಂಗ್ ವಿಭಾಗ

LEAVE A REPLY

Please enter your comment!
Please enter your name here