ಮಣಿಪುರದ ಘಟನೆಯನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ವಿಟ್ಲದಲ್ಲಿ ಪ್ರತಿಭಟನೆ

0

ಸ್ತ್ರೀಯರನ್ನು ಪೂಜಿಸುವ ಈ ದೇಶದಲ್ಲಿ ಹೆಣ್ಮಕ್ಕಳ ಮೇಲಿನ ದೌರ್ಜನ್ಯ ಖಂಡನೀಯ: ಶಕುಂತಳಾ ಟಿ.ಶೆಟ್ಟಿ
ಮಣಿಪುರದ ಘಟನೆ ಕೇಂದ್ರ ಸರಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ: ಡಾ.ರಾಜಾರಾಮ್ ಕೆ.ಬಿ.
ಮೋದಿ ಹಠಾವೋ ಬೇಟಿ ಬಚಾವೋ ಆಂದೋಲನ ಪ್ರಾರಂಭಿಸಬೇಕಾಗಿದೆ: ಎಂ.ಎಸ್.ಮಹಮ್ಮದ್
ಮಹಿಳೆಯರಿಗೆ ಗೌರವ ನೀಡುವ ಕೆಲಸವಾಗಬೇಕು: ವಲೇರಿಯನ್ ಮಾರ್ತ

ವಿಟ್ಲ: ಸ್ತ್ರೀಯರನ್ನು ಪೂಜಿಸುವ ಈ ದೇಶದಲ್ಲಿ ಹೆಣ್ಮಕ್ಕಳನ್ನು ಬೆತ್ತಲೆಗೊಳಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಇದರ ವಿರುದ್ಧ ಹೋರಾಟ ಮಾಡದಿದ್ದರೆ ಮುಂದೆ ದಕ್ಷಿಣ ಭಾರತದ ಜನರಿಗೂ ಇಂತಹ ಪರಿಸ್ಥಿತಿ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಹೇಳಿದರು. ಅವರು ಮಣಿಪುರದ ಘಟನೆಯನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ದಿನಪ್ರತಿ ಅತ್ಯಾಚಾರ ನಡೆಯುತ್ತಿದ್ದರೂ ಈ ದೇಶದಲ್ಲಿ ಶಿಕ್ಷೆ ಇಲ್ಲವೆ? ಮೋದಿ ದೇಶವನ್ನು ಕಾಯುತ್ತಿದ್ದಾರೆ ಎಂದು ಹೇಳುವವರಿಗೆ ಮಣಿಪುರ ಘಟನೆ ಕಾಣಲಿಲ್ಲವೇ, ಹೆಣ್ಣುಮುಕ್ಕಳಿಗೆ ರಕ್ಷಣೆ ನೀಡಲು ಸಾಧ್ಯವಾಗಿಲ್ಲ. ಹೆಣ್ಮಕ್ಕಳ ನೋವು ಇವರಿಗೆ ಅರ್ಥವಾಗುತ್ತಿಲ್ಲವೆ. ರಾಷ್ಟ್ರೀಯ ನಾಯಕರೇ ನಿಮ್ಮ ಹೆಣ್ಮಕ್ಕಳ ಮೇಲೆ ಇಂತಹ ಸ್ಥಿತಿ ಬಂದರೆ ನೀವು ಮೌನವಾಗಿರುತ್ತೀರಾ ಎಂದು ಪ್ರಶ್ನಿಸಿದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ.ರವರು ಮಾತನಾಡಿ ಹಾಡಹಗಲೇ ಮಹಿಳೆಯರ ಮೇಲೆ ನಡುರಸ್ತೆಯಲ್ಲಿ ದೌರ್ಜನ್ಯ ನಡೆಸುತ್ತಿರುವುದು ನೀಚ ಕೃತ್ಯವಾಗಿದೆ. ಇದು ಕೇಂದ್ರ ಸರಕಾರದ ವೈಫಲ್ಯಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಜಗತ್ತೆ ನೋಡುತ್ತಿದ್ದರೂ ಪ್ರಧಾನಿ ಮಾತ್ರ ಏನು ಅರಿಯದಂತೆ ವರ್ತಿಸುತ್ತಿದ್ದಾರೆ. ಮಣಿಪುರ ಘಟನೆ ಬಗ್ಗೆ ಹೋರಾಟ ನಡೆಸದಿದ್ದರೆ ಈ‌ ಘಟನೆಗೆ ನಾವು ಪರೋಕ್ಷವಾಗಿ ಬೆಂಬಲ ನೀಡಿದಂತೆ ಆಗುತ್ತದೆ ಎಂದರು.‌

ಕೆಪಿಸಿಸಿ ಕಾರ್ಯದರ್ಶಿ ಎಂ. ಎಸ್. ಮಹಮ್ಮದ್ ಮಾತನಾಡಿ ಘಟನೆ ಬಗ್ಗೆ ಕೇವಲ 30 ಸೆಕೆಂಡ್ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಗೆ ನಾಚೀಗೆ ಆಗುವುದಿಲ್ಲವೇ? ಮೋದಿಯಿಂದ ಈ ದೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಣಿಪುರ ಘಟನೆಯಿಂದ ಬಗ್ಗೆ ಕ್ರಮ ಕೈಗೊಳ್ಳುವ ಯೋಗ್ಯತೆ ಅಲ್ಲಿನ ರಾಜ್ಯ ಸರಕಾರದ ಮುಖ್ಯಮಂತ್ರಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಈ ಘಟನೆಯನ್ನು ನೋಡುವಾಗ ಮೋದಿ ಹಠಾವೋ ಬೇಟಿ ಬಜಾವೋ ಆಂದೋಲನ ಪ್ರಾರಂಭಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಜವಾಬ್ದಾರಿಯುತ ಪ್ರದಾನಿ ಮಣಿಪುರಕ್ಕೆ ಭೇಟಿ ಕೊಡದಿದ್ದರೂ ಕೂಡ, ರಾಹುಲ್ ಗಾಂದಿ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸವನ್ನು ಮಾಡಿರುವುದು ಅಭಿನಂದನೀಯ ಎಂದರು.

ವಿಟ್ಲ ಬೂತ್ ಅಧ್ಯಕ್ಷ ವಲೇರಿಯನ್ ಮಾರ್ತರವರು ಮಾತನಾಡಿ ಮಣಿಪುರದಲ್ಲಿ ನಡೆದ ಮಹಿಳೆಯರ ಅತ್ಯಾಚಾರ ಪ್ರಕರಣದಲ್ಲಿ ಕೇಂದ್ರ ಸರಕಾರ ಹಾಗೂ ಅಲ್ಲಿನ ರಾಜ್ಯ ಸರಕಾರ ಕಣ್ಣಿದ್ದು ಕುರುಡಾಗಿದೆ. ಮಹಿಳೆಯರಿಗೆ ಗೌರವ ನೀಡುವ ಕೆಲಸವಾಗಬೇಕು. ಅವರ ವಿರುದ್ಧ ನಡೆದ ದೌರ್ಜನ್ಯವನ್ನು ನಾವು ಖಂಡಿಸಲೇ ಬೇಕಾಗಿದೆ. ರಾಜ್ಯಾಧ್ಯಂತ ನಡೆಯುವ ಈ ಪ್ರತಿಭಟನೆ ಪ್ರಧಾನಿಗೆ ತಲುಪಲಿ. ಅಲ್ಪಸಂಖ್ಯಾತ ಘಟಕದ ರಾಜ್ಯ ಸಹಕಾರ್ಯದರ್ಶಿ ನಝೀರ್ ಮಠ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಅಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಬ್ಲಾಕ್ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಕೋಡಿಂಬಾಡಿ, ಮೋನಪ್ಪ ಗೌಡ ಪಮ್ಮನಮಜಲು, ಒಸ್ವಾಲ್ಡ್ ಪಿಂಟೋ, ಕೆನ್ಯೂಟ್ ಮಸ್ಕರೇನಸ್ ಯು.ಟಿ. ತೌಸಿಫ್ ,ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ಎಸ್ಸಿ ಘಟಕದ ಬ್ಲಾಕ್ ಅಧ್ಯಕ್ಷ ರಾಮಣ್ಣ ಪಿಲಿಂಜ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ವಿಟ್ಲ ಶ್ರೀ‌ನಿವಾಸ ಶೆಟ್ಟಿ ಕೊಲ್ಯ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹಸೈನಾರ್‌ ನೆಲ್ಲಿಗುಡ್ಡೆ, ಪದ್ಮಿನಿ, ಲತಾವೇಣಿ, ಬ್ಲಾಕ್ ಕಾರ್ಯದರ್ಶಿ ವಿ.ಎ.ರಶೀದ್, ಎಸ್.ಕೆ.ಮೊಹಮ್ಮದ್ , ಸಿ.ಎಫ್.ಸಿಕ್ವೆರಾ, ದಿನಕರ ಆಳ್ವ, ಅಬ್ದುಲ್ ರಹಿಮಾನ್ ಕುರುಂಬಳ ಮೊದಲಾದವರು ಉಪಸ್ಥಿತರಿದ್ದರು. ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ವಿ.ಕೆ.ಎಂ.ಅಶ್ರಪ್ ಸ್ವಾಗತಿಸಿದರು. ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ವಂದಿಸಿದರು.

LEAVE A REPLY

Please enter your comment!
Please enter your name here