ಕಡಬ ಸಹಿತ ಹೊಸ ತಾಲೂಕುಗಳಿಗೆ ಮೂಲ ಸೌಕರ್ಯ – ಪತ್ರಿಕಾ ಸಂವಾದದಲ್ಲಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ

0

ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮ
ಪ್ರತ್ಯೇಕ ಟೂರಿಸಂ ಸರ್ಕ್ಯೂಟ್ ರಚನೆ
ಹೊಂಡ, ಗುಂಡಿ ಬಗ್ಗೆ ಶೀಘ್ರ ವರದಿ
ಕಂದಾಯ, ಅರಣ್ಯ ಭೂಮಿ ವರ್ಗೀಕರಣಕ್ಕೆ ವಿಶೇಷ ಸರ್ವೆಗೆ ಪ್ರಯತ್ನ
ಪ್ರತಿ ತಿಂಗಳು ತಾಲೂಕು ಕೇಂದ್ರಕ್ಕೆ ಡಿಸಿ ಭೇಟಿ
ಗ್ರಾಮೀಣ ಜನರ ಸಮಸ್ಯೆ ಸ್ಥಳದಲ್ಲೇ ಇತ್ಯರ್ಥಕ್ಕೆ ಪ್ರಯತ್ನ

ಮಂಗಳೂರು:ದ.ಕ.ಜಿಲ್ಲೆಯಲ್ಲಿ ರಚನೆಗೊಂಡ ಹೊಸ ತಾಲೂಕುಗಳಿಗೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.ಕಡಬ ತಾಲೂಕಿಗೆ ಅಗತ್ಯ ಕಚೇರಿಗಳ ಸ್ಥಳಾಂತರ ಬಗ್ಗೆ ಪರಿಶೀಲನೆ ನಡೆಸಲಾಗುವುದು.ಸಿಬ್ಬಂದಿ ಕೊರತೆ ಹೋಗಲಾಡಿಸಲು ನಿಯೋಜಿತರಿಗೆ ವೇಳಾಪಟ್ಟಿ ಪ್ರಕಾರ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗುವುದು. ಸರ್ಕಾರಿ ಹಂತದಲ್ಲಿ ನೇಮಕಾತಿ, ಅನುದಾನ ಇತ್ಯಾದಿಗಳ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು. ಕಡಬ, ಮುಲ್ಕಿ, ಉಳ್ಳಾಲ, ಮೂಡಬಿದ್ರೆ ಮೊದಲಾದ ಹೊಸ ತಾಲೂಕುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಕಂದಾಯ ಇಲಾಖೆಯ ಮಾಹಿತಿ ಪಡೆದಿದೆ. ಶೀಘ್ರದಲ್ಲೇ ತಾಲೂಕು ಕೇಂದ್ರಗಳಲ್ಲಿ ಸೌಕರ್ಯಗಳು ಲಭ್ಯವಾಗಲಿವೆ ಎಂದು ಅವರು ಹೇಳಿದರು. ಕಡಬ ತಾಲೂಕು ಘೋಷಣೆಯಾಗಿ ನಾಲ್ಕು ವರ್ಷಗಳು ಕಳೆದರೂ ವಿವಿಧ ಇಲಾಖಾಧಿಕಾರಿಗಳ ಹುದ್ದೆ ಸೃಷ್ಟಿಸದೇ ಇರುವುದು, ವಿವಿಧ ಇಲಾಖೆಗಳು ಕಾರ್ಯನಿರ್ವಹಿಸದೆ ಜನತೆಗೆ ತೊಂದರೆಯಾಗುತ್ತಿರುವ ಕುರಿತು ಸುದ್ದಿಯಲ್ಲಿ ವಿಶೇಷ ಲೇಖನ ಪ್ರಕಟವಾಗಿದ್ದು ಸುದ್ದಿ ಬಿಡುಗಡೆ ಮಂಗಳೂರು ವರದಿಗಾರ ಭಾಸ್ಕರ ರೈಯವರು ಈ ಕುರಿತು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
ಗ್ರಾಮೀಣ ಭಾಗಗಳಲ್ಲಿ ತಾಲೂಕು ಆಸ್ಪತ್ರೆ, ತಾಲೂಕು ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ನಿಗದಿತ ದಿನಗಳಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟವರು ಲಭ್ಯ ಇರುವಂತೆ ಹಾಗೂ ಈ ಮಾಹಿತಿ ಕಚೇರಿಗಳಲ್ಲಿಯೂ ಲಭ್ಯವಾಗುವಂತೆ ಕ್ರಮ ವಹಿಸಲಾಗುವುದು ಎಂದೂ ಜಿಲ್ಲಾಧಿಕಾರಿ ಹೇಳಿದರು.
ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮ:
ಶಿರಾಡಿ, ಕೊಂಬಾರು, ಸಿರಿಬಾಗಿಲುಗಳಲ್ಲಿ ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಹೇಳಿದರು.ಈ ಗಡಿ ಭಾಗದ ಕುಟುಂಬಗಳ ಆರ್‌ಟಿಸಿಯಲ್ಲಿ ಸರ್ಕಾರಿ ಜಮೀನು ಎಂದು ನಮೂದಾಗಿರುವುದರಿಂದ ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.ಇದನ್ನು ಸರಿಪಡಿಸಬೇಕಾಗಿದೆ.ಉಪ್ಪಿನಂಗಡಿಯ ನಟ್ಟಿಬೈಲು ಹಾಗೂ ನೆಲ್ಯಾಡಿಯಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಚರಂಡಿ ಮುಚ್ಚಿ ಮಳೆನೀರು ರಸ್ತೆಯಲ್ಲೇ ಉಕ್ಕಿ ಹರಿದು ಕೃತಕ ನೆರೆ, ಧರೆ ಕುಸಿತಕ್ಕೆ ಕಾರಣವಾಗುತ್ತಿದೆ.ನೀರಕಟ್ಟೆ, ವಳಾಲುಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.ಮಳೆಗಾಲದಲ್ಲಿ ಮಂಗಳೂರಲ್ಲಿ ಒಳಚರಂಡಿ ನೀರಿಗೆ ಮಳೆ ನೀರು ಸೇರಿ ಕೃತಕ ನೆರೆ ಆವರಿಸುತ್ತದೆ.ಈ ಸಮಸ್ಯೆ ನಿವಾರಿಸಲು ಮುಂದಾಗುವಂತೆ ಪತ್ರಕರ್ತರಿಂದ ಆಗ್ರಹ ವ್ಯಕ್ತವಾಯಿತು.
ಪ್ರತ್ಯೇಕ ಟೂರಿಸಂ ಸರ್ಕ್ಯೂಟ್ ರಚನೆ:
ದ.ಕ.ಜಿಲ್ಲೆಯ ಬೀಚ್, ಧಾರ್ಮಿಕ ಹಾಗೂ ಆರೋಗ್ಯ ಕ್ಷೇತ್ರವನ್ನೊಳಗೊಂಡು ಪ್ರತ್ಯೇಕ ಟೂರಿಸಂ ಸರ್ಕ್ಯೂಟ್ ರಚಿಸಲು ಉದ್ದೇಶಿಸಲಾಗಿದೆ. ಟೂರಿಸಂ ಕಾರ್ಯಕ್ರಮಗಳ ವಾರ್ಷಿಕ ವೇಳಾಪಟ್ಟಿ ಸಿದ್ಧಪಡಿಸಿ ಎಲ್ಲವನ್ನೂ ಒಂದೇ ಸರ್ಕ್ಯೂಟ್‌ನಡಿ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ರಚಿಸುವ ಇರಾದೆ ಇದೆ. ಪ್ರಮುಖ ಹೆದ್ದಾರಿಗಳಲ್ಲಿ ದಿಕ್ಸೂಚಿ ಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿ ಸಂಡೇ ಬಜಾರ್, ಕರಾವಳಿ ಉತ್ಸವ, ಬೀಚ್ ಉತ್ಸವ ಮೊದಲಾದ ಉತ್ಸವಗಳನ್ನು ವಾರ್ಷಿಕವಾಗಿ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗುವುದು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.


ಬಹು ಸಂಖ್ಯೆಯಲ್ಲಿ ಶಿಕ್ಷಣ, ಆರೋಗ್ಯ, ಧಾರ್ಮಿಕ ಕೇಂದ್ರಗಳ ಜತೆಗೆ ಬೀಚ್‌ಗಳಿಂದ ಕೂಡಿರುವ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಜಲಕ್ರೀಡೆ(ಸರ್ಫಿಂಗ್)ಯ ಜತೆಗೆ ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗ ಧಾಮವನ್ನು ಒಳಗೊಂಡು ಈ ಎಲ್ಲಾ ಕೇಂದ್ರಗಳನ್ನು ಕ್ರೋಢೀಕರಿಸಿಕೊಂಡು ವಿಭಿನ್ನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ನಿಗದಿತ ಸಮಯಗಳಲ್ಲಿ ರೂಪಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸಿಗರು ಕನಿಷ್ಟ 10 ದಿನಗಳ ಕಾಲ ಇಲ್ಲಿ ಉಳಿದು ಜಿಲ್ಲೆಯ ಸೊಬಗನ್ನು ಸವಿಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಕಾರ್ಯಕ್ರಮ ರೂಪಿಸಬೇಕಾಗಿದೆ. ಈ ಹಂತದಲ್ಲಿ ಪ್ರಥಮ ಕಾರ್ಯವಾಗಿ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ಮಾಡಿ ಜಿಲ್ಲಾಡಳಿತವು ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಪೋರ್ಟಲ್ ಮೂಲಕ ಪ್ರಚಾರ ಮಾಡುವ ಕಾರ್ಯವನ್ನು ಮಾಡಲಿದೆ. ತುರ್ತಾಗಿ ನಗರದ ಪ್ರಮುಖ ಬೀಚ್‌ಗಳು, ಪ್ರವಾಸಿ ಕೇಂದ್ರಗಳ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಒಂದು ಪ್ರವಾಸಿ ತಾಣಕ್ಕೆ ಆಗಮಿಸಿದರೆ, ಅಲ್ಲಿಂದ ಬಹು ಪ್ರವಾಸಿ ತಾಣಗಳನ್ನು ವೀಕ್ಷಿಸುವಂತಾಗಬೇಕು. ದೇವಸ್ಥಾನಗಳಿಗೆ ಆಗಮಿಸುವ ಭಕ್ತರಿಗೆ ಪ್ರವಾಸಿ ತಾಣಗಳ ಸಂಪರ್ಕ ಬಗ್ಗೆ ಖಾಸಗಿ ಸಹಯೋಗ ಏರ್ಪಡಿಸಬೇಕು.ಆಗ ಭಕ್ತರಿಗೂ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಾಧ್ಯವಿದೆ.ಇದರ ಜತೆಗೆ ಆರೋಗ್ಯ ಟೂರಿಸಂಗೂ ಒತ್ತು ನೀಡಲಾಗುವುದು.ಬೆಳಗ್ಗೆ ಧ್ಯಾನದಿಂದ ತೊಡಗಿ ಆಯುರ್ವೇದ ಚಿಕಿತ್ಸೆವರೆಗೆ ಹೆಲ್ತ್ ಟೂರಿಸಂನಲ್ಲಿ ತೊಡಗಿಸಿಕೊಳ್ಳಬಹುದು. ಇಂತಹ ಟೂರಿಸಂ ಸಂಪರ್ಕ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗುವುದು. ಇದರಿಂದ ಗೋವಾ ಟೂರಿಸಂ ಮಾದರಿಯಲ್ಲಿ ಮಂಗಳೂರು ಬ್ರ್ಯಾಂಡ್ ಹಬ್ ಆಗಿ ಮಾರ್ಪಡಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

ಹೊಂಡ, ಗುಂಡಿ ಬಗ್ಗೆ ಶೀಘ್ರ ವರದಿ:
ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರಮುಖವಾಗಿ ಕಂಡುಬಂದಿರುವ ರಸ್ತೆ ಹೊಂಡ, ಗುಂಡಿಗಳ ಬಗ್ಗೆ ವರದಿ ನೀಡುವಂತೆ ಮಹಾನಗರ ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ.ಅವರು ವರದಿ ಸಲ್ಲಿಸಿದ ಬಳಿಕ ಅಂತಹ ಸ್ಥಳಗಳಿಗೆ ಖುದ್ದು ಪೊಲೀಸ್ ಇಲಾಖೆ ಜತೆ ನಾನು ಭೇಟಿ ನೀಡಿ ಪರಿಶೀಲನೆ
ನಡೆಸುತ್ತೇನೆ. ಕೆಲವು ಪ್ರಕರಣಗಳಿಗಷ್ಟೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು ಎಂದು ಡಿಸಿ ಹೇಳಿದರು.
ಸಾರಿಗೆ ಪ್ರಾಧಿಕಾರದ ಸಭೆ:
ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳ ಓಡಾಟಕ್ಕಿರುವ ಸಮಸ್ಯೆ, ಇಲೆಕ್ಟ್ರಿಕ್ ಆಟೋರಿಕ್ಷಾಗಳು ಸೇರಿದಂತೆ ಸಾರಿಗೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಶೀಘ್ರವೇ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಕಂದಾಯ, ಅರಣ್ಯ ಭೂಮಿ ವರ್ಗೀಕರಣಕ್ಕೆ ವಿಶೇಷ ಸರ್ವೆಗೆ ಪ್ರಯತ್ನ:
ಕಂದಾಯ ಮತ್ತು ಅರಣ್ಯ ಭೂಮಿ ವರ್ಗೀಕರಣ ಬಗ್ಗೆ ವಿಶೇಷ ಜಂಟಿ ಸರ್ವೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಇಂತಹ ಪ್ರಕರಣ ಇದ್ದು, ಇಲ್ಲಿ ಗ್ರಾಮ ಠಾಣಾ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ಇಲ್ಲಿ ಜಿಪಿಎಸ್ ನೆರವಿನಲ್ಲಿ ಅರಣ್ಯದ ಸರ್ವೆ ನಡೆಸಲು ವಿಶೇಷ ಜಂಟಿ ಸರ್ವೆ ತಂಡ ರಚಿಸಲಾಗುವುದು.ನಗರ ವ್ಯಾಪ್ತಿಯಲ್ಲಿ ಜಾಗ ವಿಂಗಡಣೆ ಆಗದ ಸಮಸ್ಯೆ ಇದೆ.ಇದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದೂ ಜಿಲ್ಲಾಧಿಕಾರಿ ಹೇಳಿದರು.
ಡಿಎಂ ನೋಟಿಫಿಕೇಷನ್ ತೆರವಿಗೆ ಕ್ರಮ:
ಮಂಗಳೂರಿನಲ್ಲಿ ಸ್ಟೇಟ್‌ಬ್ಯಾಂಕ್ ಪ್ರವೇಶಕ್ಕೆ ಹೊಸ ಬಸ್‌ಗಳಿಗೆ ಪರವಾನಗಿ ನೀಡುವುದಕ್ಕೆ ತಡೆಯಾಗಿರುವ ಜಿಲ್ಲಾ ದಂಡಾಧಿಕಾರಿ (ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್) ನೋಟಿಫಿಕೇಷನ್ ತೆರವಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ ನೀಡಿದರು.
ನಗರದಲ್ಲಿ ಸರ್ಕಾರಿ ನಗರ ಸಾರಿಗೆ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.ಡಿಎಂ ನೋಟಿಫಿಕೇಷನ್ ವಿಚಾರ ಕೋರ್ಟ್‌ನಲ್ಲಿದ್ದು, ಈ ಬಗ್ಗೆ ಆರ್‌ಟಿಒ ಜತೆ ಕೂಡ ಚರ್ಚಿಸಿ ಸರಿಯಾದ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಗುಡ್ಡ ಅಗೆತಕ್ಕೆ ಕಡಿವಾಣಕ್ಕೆ ಆಗ್ರಹ:
ಉಳ್ಳಾಲ, ಬಂಟ್ವಾಳ, ಮಂಗಳೂರು, ಮೂಡುಬಿದಿರೆಗಳಲ್ಲಿ ಗುಡ್ಡ ಜರಿತದ ಪ್ರಕರಣ ವರದಿಯಾಗುತ್ತಿದೆ.ಅಪಾರ ಪ್ರಮಾಣದಲ್ಲಿ ಗುಡ್ಡ ಹಾನಿಗೊಳಿಸುವ ವಿದ್ಯಮಾನಗಳು ನಡೆಯುತ್ತಿರುತ್ತವೆ. ಇದರಿಂದ ಭವಿಷ್ಯದಲ್ಲಿ ತರಕಾರಿ ಕೃಷಿಗೂ ಮಣ್ಣು ಸಿಗದ ಪರಿಸ್ಥಿತಿ ಉಂಟಾಗುವ ಭೀತಿ ಇದೆ.ಗುಡ್ಡದ ಮಣ್ಣು ಕೃಷಿ ಉದ್ದೇಶಕ್ಕೆ ಬಳಕೆಯಾಗಬೇಕೇ ವಿನಃ ವಾಣಿಜ್ಯ ಉದ್ದೇಶಗಳಿಗೆ ಅಲ್ಲ. ಹಾಗಾಗಿ ಬೇಕಾಬಿಟ್ಟಿ ಗುಡ್ಡ ಅಗೆತಕ್ಕೆ ನಿಯಮ ರೂಪಿಸಿ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಗಮನ ಸೆಳೆದರು.
ಕುಮ್ಕಿ ಹೆಸರಿನಲ್ಲಿ ಸರ್ಕಾರಿ ಭೂಮಿ ಮಾರಾಟ ದಂಧೆ ನಡೆಯುತ್ತಿದೆ.ಇದರಲ್ಲಿ ಸ್ಥಳೀಯಾಡಳಿತ ಕೂಡ ಶಾಮೀಲಾಗಿದೆ.ಅಕ್ರಮ-ಸಕ್ರಮ ಮೂಲಕ ಇಂತಹ ಜಾಗವನ್ನು ಸಕ್ರಮಗೊಳಿಸುತ್ತಾರೆ. ಆದ್ದರಿಂದ ಗ್ರಾಮಾಂತರ ಪ್ರದೇಶದಲ್ಲಿ ವಸತಿ ರಹಿತರಿಗೆ ಭೂಮಿ ಗುರುತಿಸಿ ಕಾದಿರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು.ಸರ್ಕಾರಿ ಭೂಮಿ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಹಾಕಬೇಕು ಎಂದು ಗುರುವಪ್ಪ ಬಾಳೆಪುಣಿ ಸಲಹೆ ಮಾಡಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಪ್ರಾಸ್ತಾವಿಕ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ನಿರೂಪಿಸಿದರು.

ಪ್ರತಿ ತಿಂಗಳು ತಾಲೂಕು ಕೇಂದ್ರಕ್ಕೆ ಡಿಸಿ ಭೇಟಿ ಗ್ರಾಮೀಣ ಜನರ ಸಮಸ್ಯೆ ಸ್ಥಳದಲ್ಲೇ ಇತ್ಯರ್ಥಕ್ಕೆ ಪ್ರಯತ್ನ
ಪ್ರತಿ ತಿಂಗಳು ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಗ್ರಾಮೀಣ ಜನತೆ ಸರ್ಕಾರಿ ಕಚೇರಿ ಕೆಲಸಕ್ಕೆ ಮಂಗಳೂರಿಗೆ ಬರುವುದನ್ನು ತಪ್ಪಿಸಬೇಕು.ಇಷ್ಟು ದೂರ ಬರುವುದರಿಂದ ಸಮಯವೂ ವ್ಯರ್ಥವಾಗುತ್ತದೆ.ಅದಕ್ಕಾಗಿ ಮೊದಲು ತಾಲೂಕು ಕೇಂದ್ರಕ್ಕೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ತಂಡವನ್ನು ಕಳುಹಿಸಿ ಅಲ್ಲಿನ ಕುಂದುಕೊರತೆಗಳನ್ನು ಆಲಿಸಲಾಗುವುದು.ಅವರು ಸಮಸ್ಯೆ ಬಗೆಹರಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ,ಬಳಿಕ ನಾನು ಭೇಟಿ ನೀಡುತ್ತೇನೆ.ಬುಧವಾರ ಅಥವಾ ಗುರುವಾರ ಪ್ರತಿ ತಾಲೂಕು ಕೇಂದ್ರಕ್ಕೆ ಭೇಟಿ ನೀಡುವ ಬಗ್ಗೆ ಸಮಯ ನಿಗದಿಪಡಿಸಲಾಗುವುದು.ಅಲ್ಲಿ ಸ್ಥಳದಲ್ಲೇ ಸಮಸ್ಯೆ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು.ಮುಂದಿನ ಹಂತದಲ್ಲಿ ಹೋಬಳಿ ಕೇಂದ್ರದಲ್ಲೂ ಜಿಲ್ಲಾಧಿಕಾರಿ ಭೇಟಿ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

LEAVE A REPLY

Please enter your comment!
Please enter your name here