ಆ.27ರಂದು ಬೆಳ್ತಂಗಡಿಯಲ್ಲಿ ಸೌಜನ್ಯಾಗೆ ನ್ಯಾಯಕ್ಕಾಗಿ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನಾ ಸಭೆ: ಸುದರ್ಶನ ಎಂ.

0

ಮಂಗಳೂರು: ಸೌಜನ್ಯಾ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಆ.27ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಹೇಳಿದ್ದಾರೆ.


ಆ.24ರಂದು ಮಂಗಳೂರಿನಲ್ಲಿ `ಸುದ್ದಿ’ ಜೊತೆಗೆ ಮಾತನಾಡಿದ ಅವರು, ಆ.27ರಂದು ಬೆಳಗ್ಗೆ 10.30ಕ್ಕೆ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸೌಜನ್ಯಗೆ ನ್ಯಾಯ ಸಿಕ್ಕಿಲ್ಲ ಎನ್ನುವ ಜನಾಭಿಪ್ರಾಯ ಏನಿದೆಯೋ ಇದಕ್ಕೆ ಪೂರಕವಾಗಿ ಬಿಜೆಪಿ ವತಿಯಿಂದಲೂ ಸೌಜನ್ಯಾಗೆ ನ್ಯಾಯ ಸಿಗಬೇಕು ಎನ್ನುವ ನೆಲೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.


ಸೌಜನ್ಯಾ ಪ್ರಕರಣದ ತೀರ್ಪು ಬಂದ ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಪ್ರಥಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ತೀರ್ಪಿನ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಜನರು ಒಪ್ಪುತ್ತಿಲ್ಲ, ವ್ಯತ್ಯಾಸವಾಗಿದೆ, ಮರುತನಿಖೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಜನರ ಬೇಡಿಕೆ ಇರುವುದು ಸೌಜನ್ಯಾಗೆ ನ್ಯಾಯ ಸಿಗಬೇಕು ಎಂದು. ಪಕ್ಷವು ಪ್ರತೀ ಸಂದರ್ಭದಲ್ಲಿ ಕೂಡ ಜನರ ಪರವಾಗಿಯೇ ನಿಂತಿದೆ. ಜನರ ಆಶೋತ್ತರಗಳ ಪರವಾಗಿಯೇ ಬಿಜೆಪಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಇದೇ ಹಿನ್ನೆಲೆಯಲ್ಲಿ ಸೌಜನ್ಯಾ ಪರ ನ್ಯಾಯ ಕೇಳಬೇಕೆನ್ನುವ ನೆಲೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಎರಡೂ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆ ಮೂಲಕ ಕಾರ್ಯಕ್ರಮ ಆಯೋಜನೆಯಾಗಿದೆ. ಮುಂದೆ ರಾಜ್ಯಾಧ್ಯಕ್ಷರು, ಶಾಸಕರ ನಿರ್ಧಾರದಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು, ರಾಜ್ಯಪಾಲರನ್ನು ಭೇಟಿ ಮಾಡುವುದು ಇತ್ಯಾದಿ ಮುಂದಿನ ಕೆಲಸಗಳನ್ನು ಪಕ್ಷದ ವರಿಷ್ಠರು ಮಾಡಲಿದ್ದಾರೆ ಎಂದು ವಿವರಿಸಿದರು.


ಆ.27ರಂದು ಬೆಳಗ್ಗೆ 13.30ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ಯಾವುದೇ ಮೆರವಣಿಗೆ ಹಮ್ಮಿಕೊಂಡಿಲ್ಲ. ಎಲ್ಲರೂ ಅಲ್ಲೇ ಸೇರಿ ಪ್ರತಿಭಟನಾ ಸಭೆ ನಡೆಸುತ್ತೇವೆ. ಸಾವಿರಾರು ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಭೆ ನಡೆಯುತ್ತಿದೆ. ಶಾಸಕರೆಲ್ಲರೂ ತೆಲಂಗಾಣದಲ್ಲಿ ಚುನಾವಣಾ ಪೂರ್ವಭಾವಿ ಪ್ರಚಾರದಲ್ಲಿ ನಿರತರಾಗಿದ್ದು, ಇಂದು ನಾಳೆ ಎಲ್ಲರೂ ಬರುತ್ತಾರೆ. ಅವರ ನೇತೃತ್ವದಲ್ಲಿ ಎಲ್ಲಾ ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸುದರ್ಶನ್ ಎಂ. ಹೇಳಿದರು.


ಇದು ಸೌಜನ್ಯಾಗೆ ಒಟ್ಟು ನ್ಯಾಯ ಸಿಗಬೇಕೆನ್ನುವ ನೆಲೆಯಲ್ಲಿ ನಡೆಯುತ್ತಿರುವ ಹೋರಾಟ. ಇಲ್ಲಿ ಯಾರನ್ನೂ ರಕ್ಷಣೆ ಮಾಡುವಂತದ್ದಲ್ಲ. ಇದು ಯಾರ ಪರವಾಗಿಯೂ ಅಲ್ಲ, ವಿರುದ್ಧವಾಗಿಯೂ ಅಲ್ಲ. ಸೌಜನ್ಯಾಗೆ ಮೊನ್ನೆಯ ತೀರ್ಪಿನಲ್ಲಿ ನ್ಯಾಯ ಸಿಗಲಿಲ್ಲ ಎನ್ನುವ ಜನಾಭಿಪ್ರಾಯಕ್ಕೆ ನಾವು ಮನ್ನಣೆ ನೀಡುತ್ತಿದ್ದೇವೆ ಎಂದು ಸುದರ್ಶನ್ ಅವರು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here