ಕಾಂಗ್ರೆಸ್‌ನಿಂದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ: ಅಶೋಕ್ ಕುಮಾರ್ ರೈ

0

ಉಪ್ಪಿನಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ನುಡಿದಂತೆ ನಡೆಯುವ ಸರಕಾರವಾಗಿದ್ದು, ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಯೋಜನೆಗಳಲ್ಲಿ ಮೂರು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದ್ದು, ಇದೀಗ ನಾಲ್ಕನೇ ಯೋಜನೆಗೆ ಚಾಲನೆ ನೀಡುವ ಮೂಲಕ ಮಹಿಳೆಯರ ಕೈ ಬಲಪಡಿಸುವ ಕೆಲಸ ಮಾಡಿದೆ. ದ.ಕ ಜಿಲ್ಲೆಯಲ್ಲಿಯೇ ಈ ಯೋಜನೆಯಡಿ 60 ಕೋ.ರೂ.ಹಣ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.
ಉಪ್ಪಿನಂಗಡಿ ಗ್ರಾ.ಪಂ.ನ ಸಭಾಂಗಣದಲ್ಲಿ ಆ.30ರಂದು ನಡೆದ ಗೃಹಲಕ್ಷ್ಮೀ ಯೋಜನೆಯ ಚಾಲನಾ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಫಲಾನುಭವಿಗಳ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಏನೆಲ್ಲಾ ಯೋಜನೆಗಳನ್ನು ಘೋಷಿಸಿತ್ತೋ ಅದು ಜಾರಿಯಾಗುವ ಬಗ್ಗೆ ಹಲವರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಅಧಿಕಾರಕ್ಕೆ ಬಂದ ಸ್ವಲ್ಪ ದಿನಗಳಲ್ಲಿಯೇ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ಫ್ರೀ ಮಾಡಿತ್ತು. ಮತ್ತೆ 200 ಯುನಿಟ್‌ನಷ್ಟು ವಿದ್ಯುತ್ ಬಿಲ್ ಅನ್ನು ಫ್ರೀ ಮಾಡಿತು. ಪುತ್ತೂರು ತಾಲೂಕೊಂದರಲ್ಲಿಯೇ 9,2೦೦ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿವೆ. ಇದರೊಂದಿಗೆ ಅರ್ಹ ಪಡಿತರದಾರರಿಗೆ ಉಚಿತವಾಗಿ 5 ಕೆ.ಜಿ.ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುತ್ತೇವೆಂದು ಘೋಷಣೆ ಮಾಡಿದ ಸರಕಾರ ಅಕ್ಕಿಯ ಲಭ್ಯತೆ ಇಲ್ಲದಿದ್ದಾಗ ಎರಡು ತಿಂಗಳಿನಿಂದ ಅದರ ಹಣವನ್ನು ನೀಡುತ್ತಿದೆ. ಇದರಿಂದ ಕೆಲವು ಕುಟುಂಬಗಳು ಸಾವಿರಕ್ಕಿಂತಲೂ ಅಧಿಕ ಮೊತ್ತವನ್ನು ಪಡೆಯುತ್ತವೆ. ಕುಚಲಕ್ಕಿಯ ಬೇಡಿಕೆಯಿರುವ ದ.ಕ. ಜಿಲ್ಲೆಯಲ್ಲಿ ಈ ಹಣ ಹೆಚ್ಚಿನ ಪ್ರಯೋಜನ ಬೀಳುತ್ತಿದ್ದು, ಇದರಿಂದ ಕುಚಲಕ್ಕಿಯನ್ನು ಪಡೆದುಕೊಳ್ಳಬಹುದಾಗಿದೆ. ಇದೀಗ ಗೃಹಲಕ್ಷ್ಮೀ ಯೋಜನೆಗೆ ಇಂದಿನಿಂದ ಚಾಲನೆ ದೊರಕಿದ್ದು, ಮಹಿಳೆಯರ ಕೈ ಬಲಪಡಿಸುವ ಕೆಲಸ ಮಾಡಿದೆ. ನುಡಿದಂತೆ ನಡೆಯುವ ನಮ್ಮ ಸರಕಾರವೆಂದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ತೋರಿಸಿಕೊಟ್ಟಿದೆ. ಪದವೀಧರ ನಿರುದ್ಯೋಗಿಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಬಾಕಿಯಿದ್ದು, ಕೆಲವೇ ದಿನಗಳಲ್ಲಿ ಅದೂ ಅನುಷ್ಠಾನಗೊಳ್ಳಲಿದೆ ಎಂದ ಶಾಸಕ ಅಶೋಕ್ ಕುಮಾರ್ ರೈ, ಮಹಿಳೆಯೊಬ್ಬಳು ಮನೆಯೊಳಗೆ ಶಕ್ತಿ ಇದ್ದ ಹಾಗೆ. ಆಕೆಯ ಕೈಗೆ ಹಣ ಬಂದರೆ ಅದು ದುರುಪಯೋಗವಾಗದೇ ಮನೆಯ ಅಗತ್ಯಗಳಿಗೆ ನೆರವಾಗುತ್ತದೆ. ಆದ್ದರಿಂದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದರು.
ಈ ಸಂದರ್ಭ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾದ ಜಮೀಳಾ, ನೆಬೀಸಾ, ರೋಹಿಣಿ, ಶಕೀನಾ, ಗಿರಿಜಾ ಅವರಿಗೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಯೋಜನೆಯ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು.
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ, ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿದ್ಯಾಲಕ್ಷ್ಮೀ, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಡಾ. ರಾಜಾರಾಮ್ ಕೆ.ಬಿ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಉಷಾಚಂದ್ರ ಮುಳಿಯ, ರುಕ್ಮಿಣಿ, ಇಬ್ರಾಹೀಂ ಕೆ., ಧನಂಜಯ, ಅಬ್ದುರ್ರಶೀದ್, ನೆಬೀಸಾ, ಲೊಕೇಶ್ ಬೆತ್ತೋಡಿ, ಮೈಸೀದ್ ಇಬ್ರಾಹೀಂ, ಸಣ್ಣಣ್ಣ, ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಅಯೂಬ್ ಕೂಟೇಲು, ಅಝೀಝ್ ಬಸ್ತಿಕ್ಕಾರ್, ಅನಿ ಮಿನೇಜಸ್, ಶಾಂಭವಿ ರೈ, ನಝೀರ್ ಮಠ, ಎಸ್.ಬಿ. ದಾರಿಮಿ, ಶಬೀರ್ ಕೆಂಪಿ, ಆದಂ ಕೊಪ್ಪಳ, ಯೊಗೀಶ್ ಸಾಮಾನಿ, ಮುಹಮ್ಮದ್ ಕೆಂಪಿ, ಇಬ್ರಾಹೀಂ ಆಚಿ, ಸಿದ್ದೀಕ್ ಕೆಂಪಿ ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫೇಡ್ ಲಾರೆನ್ಸ್ ರೊಡ್ರಿಗಸ್ ಸೇರಿದಂತೆ ಗ್ರಾ.ಪಂ. ಸಿಬ್ಬಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಕಿಕ್ಕಿರಿದು ತುಂಬಿದ ಸಭಾಂಗಣ
ಗೃಹಲಕ್ಷ್ಮೀ ಯೋಜನೆಯ ಚಾಲನಾ ಸಮಾರಂಭವನ್ನು ಎಲ್ಲಾ ಗ್ರಾ.ಪಂ.ಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದ್ದು, ಉಪ್ಪಿನಂಗಡಿಯಲ್ಲಿ ಮಾತ್ರ ಮುಖ್ಯಮಂತ್ರಿಯವರ ಜೊತೆ ಫಲಾನುಭವಿಗಳ ನೇರ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉಪ್ಪಿನಂಗಡಿಯ ಗ್ರಾ.ಪಂ. ಸಭಾಂಗಣದಲ್ಲಿ ಜನರು ಕಿಕ್ಕಿರಿದು ತುಂಬಿದರು. ಸಭಾಂಗಣ ತುಂಬಾ ಮಹಿಳೆಯರೇ ಕಂಡು ಬರುತ್ತಿದ್ದರು.

LEAVE A REPLY

Please enter your comment!
Please enter your name here