ಉಪ್ಪಳಿಗೆ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಎಲ್‌ಕೆಜಿ ಪ್ರಾರಂಭ

0

ಸೆ.4ರಂದು ಉದ್ಘಾಟನೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ
ಪುತ್ತೂರು:ಸರಕಾರಿ ಶಾಲೆಗಳಲ್ಲಿಯೂ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಗೊಂಡಿದ್ದು ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಶಾಲೆಗಳಲ್ಲಿ ಒಂದಾಗಿರುವ ಇರ್ದೆ-ಉಪ್ಪಳಿಗೆ ಸ.ಹಿ ಪ್ರಾ ಶಾಲೆಯಲ್ಲಿ ಎಲ್‌ಕೆಜಿ ತರಗತಿಯು ಸೆ.4ರಂದು ಉದ್ಘಾಟನೆಗೊಳ್ಳಲಿದೆ.
1955ರಲ್ಲಿ ಪ್ರಾರಂಭಗೊಂಡಿರುವ ಈ ಶಾಲೆಯಲ್ಲಿ ನಂತರದ ದಿನಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ಇಂದು ಸಮಾಜದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಈ ಶಾಲೆಯು 2006ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ. 2020-21ರಲ್ಲಿ ಸರಕಾರದ ಆದೇಶದಂತೆ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಗೊಂಡಿದೆ. 1 ರಿಂದ 4ನೇ ತರಗತಿ ತನಕ ಆಂಗ್ಲ ಮಾಧ್ಯಮದಲ್ಲಿ ತರಗತಿಗಳು ನಡೆಯುತ್ತಿದ್ದು 53 ವಿದ್ಯಾರ್ಥಿಗಳು ಈಗಾಗಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ 1 ರಿಂದ 7ನೇ ತರಗತಿ ತನಕ ಒಟ್ಟು 220 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅನುಭವೀ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. 68 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಈ ಶಾಲೆಯಲ್ಲಿ ಎಲ್‌ಕೆಜಿ ಶಿಕ್ಷಣ ಪ್ರಾರಂಭಗೊಂಡಿರುವುದು ಜನತೆಯಲ್ಲಿ ಸಂತಸ ತಂದಿದೆ.
ನೂತನವಾಗಿ ಪ್ರಾರಂಭವಾದ ಎಲ್‌ಕೆಜಿ ತರಗತಿಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಕ್ಷೇತ್ರ ಸಂಪನ್ಮೂಲ ಅಧಿಕಾರಿ ನವೀನ್ ಸ್ಟೀಫನ್ ವೇಗಸ್, ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀ ಸುರೇಶ್, ಗ್ರಾ.ಪಂ ಸದಸ್ಯರು, ಇಲಾಖಾಧಿಕಾರಿಗಳು ಹಾಗೂ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.


ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ
ಇರ್ದೆ ಗ್ರಾಮದ ಸುತ್ತ ಮುತ್ತಲ ಗ್ರಾಮಗಳಿಗೆ ಹೋಲಿಕೆ ಮಾಡಿದರೆ ಇರ್ದೆ-ಉಪ್ಪಳಿಗೆ ಶಾಲೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಇಲ್ಲಿ ಪ್ರತಿ ವರ್ಷ ದಾಖಲಾತಿಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಗ್ರಾಮೀಣ ಸರಕಾರಿ ಶಾಲೆಗಳ ಪೈಕಿ ಇರ್ದೆ ಉಪ್ಪಳಿಗೆ ಸ.ಹಿ.ಪ್ರಾ ಶಾಲೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ಎಲ್‌ಕೆಜಿ ತರಗತಿಯ ಪ್ರಾರಂಭಕ್ಕೆ ಸರಕಾರದಿಂದ ಅನುಮೋದನೆ ದೊರೆತಿದೆ.

LEAVE A REPLY

Please enter your comment!
Please enter your name here