ಮಹಿಳಾ ವಿಭಾಗದಲ್ಲಿ ದ.ಕ. ಚಾಂಪಿಯನ್
ಪುರುಷರ ವಿಭಾಗದಲ್ಲಿ ಮಂಡ್ಯ ಚಾಂಪಿಯನ್
ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಅಸೋಸಿಯೇಶನ್ ಮತ್ತು ಬೆಂಗಳೂರಿನ ಯಚೇನಹಳ್ಳಿಯ ಟ್ರಾನ್‌ಸೆಂಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಸಂಯುಕ್ತಾಶ್ರಯದಲ್ಲಿ ನಡೆದ 2ನೇ ರಾಜ್ಯ ಮಟ್ಟದ ಹಿರಿಯ ಪುರುಷ ಮತ್ತು ಮಹಿಳೆಯರ ಡಾಡ್ಜ್‌ಬಾಲ್ ಚಾಂಪಿಯನ್ ಶಿಪ್‌ನಲ್ಲಿ ದ.ಕ. ಜಿಲ್ಲಾ ಮಹಿಳಾ ತಂಡವು ಚಾಂಪಿಯನ್ ಶಿಪ್ ಅನ್ನು ತನ್ನದಾಗಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ ಮಂಡ್ಯ ಜಿಲ್ಲಾ ತಂಡವು ಚಾಂಪಿಯನ್ ಶಿಪ್ ಅನ್ನು ತನ್ನದಾಗಿಸಿಕೊಂಡಿತು.
ಮಹಿಳೆಯರ ವಿಭಾಗದಲ್ಲಿ ದ.ಕ. ಜಿಲ್ಲಾ ತಂಡ ಹಾಗೂ ಮಂಡ್ಯ ಜಿಲ್ಲಾ ತಂಡದೊಂದಿಗೆ ಫೈನಲ್ ಪಂದ್ಯಾಟ ನಡೆದು, ದ.ಕ. ಜಿಲ್ಲಾ ತಂಡವು 3-2 ಸೆಟ್‌ಗಳಿಂದ ಗೆದ್ದು ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡಿತು. ಈ ಪಂದ್ಯಾವಳಿಯ ಆಟಗಾರ್ತಿಯಾಗಿ ಜಿಲ್ಲೆಯ ಶ್ರೀಮತಿ ಪವಿತ್ರ ಹೊರಹೊಮ್ಮಿದರು. ಪುರುಷರ ವಿಭಾಗದಲ್ಲಿ ದ.ಕ. ಜಿಲ್ಲೆ ಹಾಗೂ ಹಾಸನ ಜಿಲ್ಲಾ ತಂಡಗಳ ನಡುವೆ ಪಂದ್ಯಾಟ ನಡೆದು, ಹಾಸನ ತಂಡವು 3-2 ಸೆಟ್‌ಗಳಿಂದ ಪಂದ್ಯಾಟ ಗೆದ್ದುಕೊಂಡಿತು. ಇದರಿಂದಾಗಿ ದ.ಕ. ಜಿಲ್ಲಾ ತಂಡವು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಪಂದ್ಯಾಟದ ಉತ್ತಮ ಆಟಗಾರ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಅಭಿಶ್ರುತ್ ಭಾಜನರಾದರು. ದ.ಕ. ಜಿಲ್ಲಾ ತಂಡದ ಕೋಚ್ ಆಗಿ ವಿಜೇತ್ ಕುಮಾರ್ ಕಾರ್ಯನಿರ್ವಹಿಸಿದರು.
ಪುರುಷರ ವಿಭಾಗದಲ್ಲಿ ಮಂಡ್ಯ ಜಿಲ್ಲಾ ತಂಡ ಹಾಗೂ ಹಾಸನ ಜಿಲ್ಲಾ ತಂಡದೊಂದಿಗೆ ಫೈನಲ್ ಪಂದ್ಯಗಳು ನಡೆದವು. ಮಂಡ್ಯ 3-2 ಸೆಟ್‌ಗಳಿಂದ ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡಿತು. ಮಂಡ್ಯ ಜಿಲ್ಲಾ ತಂಡದ ಕೋಚ್ ಆಗಿ ಡಾ. ರವಿ ಮಂಡ್ಯ ಕಾರ್ಯನಿರ್ವಹಿಸಿದರು. ಬೆಂಗಳೂರಿನ ಯಚೇನಹಳ್ಳಿಯಲ್ಲಿ ನಡೆದ ಈ ಪಂದ್ಯಾಟದಲ್ಲಿ 16 ಜಿಲ್ಲಾ ತಂಡಗಳು ಭಾಗವಹಿಸಿದವು.