ವಸ್ತು ನಿಷ್ಠ, ನಿಖರ, ವಿಶ್ವಾಸಾರ್ಹ ಆಶಯದ ನ್ಯೂಸ್ ಪುತ್ತೂರು ಚಾನೆಲ್, ಪತ್ರಿಕೆಗೆ ಸ್ವಾಗತ

0

*ಭ್ರಷ್ಟಾಚಾರ, ಬಂದ್ ಮೊದಲಾದ ಪಿಡುಗುಗಳ ವಿರುದ್ಧ ಹೋರಾಡುವ, ನಿಷ್ಪಕ್ಷಪಾತ ಮಾಧ್ಯಮ ಎಂದು ಸೇರಿಸಿಕೊಂಡರೆ ಇನ್ನೂ ಹೆಚ್ಚಿನ ಸ್ವಾಗತ ಮತ್ತು ಬೆಂಬಲ
*ಸುದ್ದಿಗೆ ಸ್ಪರ್ಧಿ, ವಿರೋಧಿ ಎಂಬ ಭಾವನೆ ನಮ್ಮಲ್ಲಿಲ್ಲ. ನಾವು ಎಲ್ಲರಲ್ಲಿಯೂ ಕಲಿಯುತ್ತೇವೆ, ಎಲ್ಲರನ್ನೂ ಸೇರಿಸಿಕೊಳ್ಳುತ್ತೇವೆ, ಬೆಂಬಲಿಸುತ್ತೇವೆ. ಕೆಡುಕನ್ನು ಮಾತ್ರ ವಿರೋಧಿಸುತ್ತೇವೆ.
*ನೀರಿನ ಕೊರತೆಗಾಗಿ ಮಳೆ ಕೊಯ್ಲು, ವಿದ್ಯುತ್ ಕೊರತೆಗಾಗಿ ಸೋಲಾರ್ ಪವರ್, ಸ್ವಚ್ಛತೆ, ಜನರ, ಕೃಷಿಕರ, ವಿದ್ಯಾರ್ಥಿಗಳ ಬದುಕಿಗೆ ಬೇಕಾದ ಮಾಹಿತಿ, ತರಬೇತಿ ಎಲ್ಲಾ ಸಮುದಾಯದ ಸಾಮರಸ್ಯ ಒಂದೂಡಿಕೆಗೆ ಸುದ್ದಿಯ ಪ್ರಯತ್ನ


38 ವರ್ಷಗಳ ಹಿಂದೆ ನಾನು ಪತ್ರಿಕೆ ಪ್ರಾರಂಭಿಸಲು ಯೋಚಿಸಿದಾಗ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ ಪ್ರಮುಖವಲ್ಲದ ಯಾವುದೇ ಸುದ್ದಿ ಜಿಲ್ಲೆಯ ಪ್ರಮುಖ ಪತ್ರಿಕೆಯಾಗಿದ್ದ ಉದಯವಾಣಿಯಲ್ಲಿ ಬರುತ್ತಿರಲಿಲ್ಲ. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಇರುತ್ತಿರಲೇ ಇಲ್ಲ. ಈ ಕಾರಣಕ್ಕೆ ಸುಳ್ಯ, ಪುತ್ತೂರು, ಬೆಳ್ತಂಗಡಿಗಳ ಸುದ್ದಿಗಾಗಿ – ಅಭಿವೃದ್ಧಿಗಾಗಿ ಎಂದು ಸ್ಥಳೀಯ ಪತ್ರಿಕೆಗಳನ್ನು ಪ್ರಾರಂಭಿಸಿದಾಗ ಡಾ.ಗೆ ಹುಚ್ಚು ಎಂದು ಹೇಳಿದವರೇ ಹೆಚ್ಚು ಮಂದಿ ಇದ್ದರು. ಆದರೆ ಇಂದು ನಮ್ಮ ಸ್ಥಳೀಯ ಸುದ್ದಿಗಳಿಗೇ ಜಿಲ್ಲೆ ಮಾತ್ರವಲ್ಲ ರಾಜ್ಯ ಮಟ್ಟದ ಪತ್ರಿಕೆಗಳು, ಮಾಧ್ಯಮಗಳು ಮುಗಿಬೀಳುತ್ತಿವೆ. ಆದ್ಯತೆ ನೀಡುತ್ತಿವೆ. ಹಲವಾರು ಪತ್ರಿಕೆಗಳು, ಚಾನೆಲ್‌ಗಳು, ವೆಬ್‌ಸೈಟ್‌ಗಳು ಸ್ಥಳೀಯವಾಗಿ ಪ್ರಾರಂಭಗೊಂಡಿವೆ. ಅದರಲ್ಲಿ ಹೆಚ್ಚಿನವರು ಸುದ್ದಿಯಲ್ಲಿ ಕೆಲಸ ಮಾಡಿದವರು, ಅನುಭವ ಪಡೆದವರು ಆಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಆರೋಗ್ಯಕರ ಸ್ಪರ್ಧೆ ನೀಡುವ ಅವರು ಯಾರೂ ನಮಗೆ ವಿರೋಧಿಗಳಲ್ಲ.


ನ್ಯೂಸ್ ಪುತ್ತೂರು ವೆಬ್‌ಸೈಟ್ ಪ್ರಾರಂಭ-ಮಠಂದೂರುರವರಿಂದ ಪ್ರೋತ್ಸಾಹ
ಪುತ್ತೂರಿನಲ್ಲಿ ನ್ಯೂಸ್ ಪುತ್ತೂರು ಎಂಬ ಚಾನೆಲ್, ಇ-ಪತ್ರಿಕೆ ಹೊರಬರುತ್ತದೆ ಎಂಬ ಸುದ್ದಿ ಬಂದಾಗ ಆ ಬಗ್ಗೆ ನಾವು ಹೆಚ್ಚು ಯೋಚನೆ ಮಾಡಲಿಲ್ಲ. ಯಾಕೆಂದರೆ ಶಾಸಕರಾಗಿದ್ದ ಸಂಜೀವ ಮಠಂದೂರುರವರ ಪ್ರೋತ್ಸಾಹದಲ್ಲಿ ಪ್ರಾರಂಭವಾದ ಪ್ರೇರಣಾ ಎಂಬ ತರಬೇತಿ ಸಂಸ್ಥೆಯವರು ತಮ್ಮ ಕೆಲಸದ ಪ್ರಚಾರವಲ್ಲದೆ ಶಾಸಕರಾಗಿದ್ದ ಸಂಜೀವ ಮಠಂದೂರುರವರಿಗಾಗಿ, ಅವರ ಒಳ್ಳೆಯ ಕೆಲಸಗಳನ್ನು ಪ್ರಚಾರ ಮಾಡಲಿಕ್ಕಾಗಿ ನ್ಯೂಸ್ ಪುತ್ತೂರು ಎಂಬ ವೆಬ್‌ಸೈಟ್ ಪ್ರಾರಂಭಿಸಿದ್ದಾರೆ. ಮಠಂದೂರುರವರು ಅದಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಅವು ಕಳೆದ ಒಂದು ವರ್ಷದಿಂದ ಉತ್ತಮ ಕೆಲಸ ಮಾಡುತ್ತಿದೆ ಹಾಗೂ ಮಠಂದೂರುರವರ ಚುನಾವಣಾ ಪ್ರಚಾರದ ಬೆಂಬಲಕ್ಕೆ ನಿಂತಿದೆ. ಅಲ್ಲದೆ ಗೌಡ ಸಮಾಜದ ಚಟುವಟಿಕೆಗೆ ಆದತೆ ನೀಡುತ್ತಿದೆ ಎಂಬ ಅಭಿಪ್ರಾಯವಿದ್ದುದರಿಂದ ಈ ಹಿಂದೆ ನಡೆಸಿಕೊಂಡು ಬಂದಿದ್ದ ಚಟುವಟಿಕೆಯ ಮುಂದುವರಿದ ಭಾಗ ಎಂದು ಯೋಚಿಸಿದ್ದೆವು. ಆದರೆ ಈಗ ಅವರ ಕೆಲವು ಜನಪರ ಉzಶಗಳನ್ನು ನೋಡಿ ಸಂತೋಷವಾಗಿದೆ.


ಸುದ್ದಿಯ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಬಲ, ವಿರೋಧವಿಲ್ಲ-ನ್ಯೂಸ್ ಪುತ್ತೂರು ಆಡಳಿತ ಮಂಡಳಿ
ಆದರೆ ಕೆಲವರು ನ್ಯೂಸ್ ಪುತ್ತೂರು ಸುದ್ದಿಗೆ ಸ್ಪರ್ಧಿಯೆಂದು, ವಿರೋಧಿ ಎಂದು ಹೇಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅದನ್ನು ತಮಾಷೆಗಾಗಿ, ನಮ್ಮನ್ನು ರೇಗಿಸಲಿಕ್ಕಾಗಿ ಹೇಳುತ್ತಿದ್ದಾರೆ ಎಂಬ ಭಾವನೆ ನಮ್ಮ ಬಳಗದಲ್ಲಿದೆ. ಅದನ್ನು ನಾವು ಅಲ್ಲಗಳೆದಿದ್ದೇವೆ. ಯಾಕೆಂದರೆ ನ್ಯೂಸ್ ಪುತ್ತೂರಿನ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ನಮ್ಮ ಸ್ನೇಹಿತರು ಮತ್ತು ಸುದ್ದಿ ಪತ್ರಿಕೆಯ ಎಲ್ಲಾ ಕೆಲಸಗಳಿಗೆ ಬೆಂಬಲಿಗರು ಆಗಿದ್ದಾರೆ. ಆದರೂ ಸುದ್ದಿಗೆ ವಿರೋಧಿ ಎಂಬ ಅಭಿಪ್ರಾಯವನ್ನು ಕೆಲವರು ಉದ್ದೇಶಪೂರ್ವಕವಾಗಿ ಹರಡಬಹುದು ಎಂಬ ಕಾರಣಕ್ಕೆ ಅದನ್ನು ನಿವಾರಿಸಲಿಕ್ಕಾಗಿ ಆಡಳಿತ ಮಂಡಳಿಯ ಪ್ರಮುಖರಲ್ಲಿ ಆ ವಿಷಯವನ್ನು ತಿಳಿಸಿದ್ದೇವೆ. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಬಲ ಖಂಡಿತ ಇದೆ, ವಿರೋಧವಿಲ್ಲ ಎಂದು ಹೇಳುವ ಮೂಲಕ ಆ ಸಂಶಯವನ್ನು ಅವರು ನಿವಾರಿಸಿದ್ದಾರೆ. ಪತ್ರಿಕೆಗೆ ಜಾಹೀರಾತೂ ನೀಡಿದ್ದಾರೆ. ನಾವು ಪ್ರಕಟಿಸಿದ್ದೇವೆ. ಮಾತ್ರವಲ್ಲ ಆ ಕಾರ್ಯಕ್ರಮಕ್ಕೆ ಗೌರವಯುತವಾಗಿ ಆಮಂತ್ರಿಸಿದ್ದಾರೆ. ನಾನು, ಸೃಜನ್ ಮತ್ತು ತಂಡ ಅಲ್ಲಿ ಭೇಟಿ ನೀಡಿ ಶುಭಾಶಯ ಹೇಳಿದ್ದೇವೆ. ಕಾರ್ಯಕ್ರಮದ ವೀಡಿಯೋ ಮತ್ತು ನ್ಯೂಸ್ ವಿವರವಾಗಿ ವರದಿ ಮಾಡಿದ್ದೇವೆ.


ಸುದ್ದಿ’ಯನ್ನು ಹೊರತು ಪಡಿಸಿ ಒಂದು ಮಾಧ್ಯಮದ ವರದಿ, ಜಾಹೀರಾತು ಇನ್ನೊಂದು ಮಾಧ್ಯಮದಲ್ಲಿ ಬರುವುದಿಲ್ಲ:
ನ್ಯೂಸ್ ಪುತ್ತೂರಿನ ಜಾಹೀರಾತು ಹಾಕಿರುವುದು ಹಾಗೂ ವರದಿ ಮಾಡಿರುವುದು ನಮ್ಮ ಹೆಗ್ಗಳಿಕೆ ಎಂದು ಹೇಳುತ್ತಿಲ್ಲ. ಯಾವುದೇ ಒಂದು ಮಾಧ್ಯಮದ, ಪತ್ರಿಕೆಯ ಜಾಹೀರಾತು ಇನ್ನೊಂದು ಮಾಧ್ಯಮ ಮತ್ತು ಪತ್ರಿಕೆಯಲ್ಲಿ ಬರುವುದಿಲ್ಲ. ಅದರ ವರದಿಯೂ ಬರುವುದಿಲ್ಲ ಎಂಬುವುದನ್ನು ನ್ಯೂಸ್ ಪುತ್ತೂರಿನ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಗಮನಿಸಬೇಕು. ಶಾಸಕ ಅಶೋಕ್ ಕುಮಾರ್ ರೈರವರನ್ನು, ಮಾಜಿ ಶಾಸಕ ಸಂಜೀವ ಮಠಂದೂರುರವರನ್ನು, ಅರುಣ್ ಕುಮಾರ್ ಪುತ್ತಿಲರನ್ನು ಕರೆದಿದ್ದರೂ, ಪುತ್ತೂರಿನ ಎಲ್ಲಾ ಪತ್ರಿಕಾ ಸಂಘಗಳ ಅಧ್ಯಕ್ಷರುಗಳು ಅತಿಥಿಗಳಾಗಿದ್ದರೂ, ಅವರುಗಳು ಪ್ರತಿನಿಧಿಸುವ ಯಾವುದೇ ಪತ್ರಿಕೆಯಲ್ಲಿ, ಚಾನೆಲ್‌ನಲ್ಲಿ ನ್ಯೂಸ್ ಪುತ್ತೂರಿನ ಕಾರ್ಯಕ್ರಮದ ವರದಿ ಬಂದಿದೆಯೇ? ಎಂದು ವಿಚಾರಿಸಿ ನೋಡಬೇಕು. ನಾವು ಮಾಡಿರುವ ವಿಶೇಷ ವರದಿ ಮತ್ತು ವೀಡಿಯೋಗಳನ್ನು ಆ ಹಿನ್ನೆಲೆಯಲ್ಲಿ ನೋಡಿದರೆ ಎಲ್ಲರನ್ನೂ ಸೇರಿಸಿಕೊಂಡು ಹೋಗುವ ನಮ್ಮ ಸಿದ್ಧಾಂತ ಮತ್ತು ನಾವು ಯಾರಿಗೂ ವಿರೋಧಿಗಳಲ್ಲ ಎಂಬ ಮಾತಿನ ಅರ್ಥವಾಗಬಹುದು ಎಂದು ನಂಬಿದ್ದೇವೆ. ನ್ಯೂಸ್ ಪುತ್ತೂರಿನ ಹೊಸ ವರದಿಗಾರರು ಅದನ್ನು ಗಮನಿಸಬೇಕು ಎಂದು ಬಯಸುತ್ತೇನೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಆರೋಗ್ಯಕರ ಸ್ಪರ್ಧೆಗೆ ನ್ಯೂಸ್ ಪುತ್ತೂರು’ಗೆ ಸ್ವಾಗತ
`ನ್ಯೂಸ್ ಪುತ್ತೂರು’ ಇದರ ಆಶಯದಲ್ಲಿ ವಸ್ತುನಿಷ್ಠ, ನಿಖರ, ವಿಶ್ವಾಸಾರ್ಹ ಎಂಬ ಪದಗಳಿದ್ದವು. ಅಂತಹ ಮಾಧ್ಯಮಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಜನತೆಯ ಒಳಿತಿಗಾಗಿ ಸಾಮಾಜಿಕ ಚಟುವಟಿಕೆಗಳ ವಿಷಯಗಳಲ್ಲಿ ನಮ್ಮೊಳಗಿನ ಆರೋಗ್ಯಕರ ಸ್ಪರ್ಧೆಯನ್ನು ಸ್ವಾಗತಿಸುತ್ತೇವೆ. ಅದರೊಂದಿಗೆ ಸಮಾಜದ ಪಿಡುಗುಗಳಾದ ಭ್ರಷ್ಟಾಚಾರದ ವಿರುದ್ಧ, ಬಲಾತ್ಕಾರದ ಬಂದ್‌ಗಳ ವಿರುದ್ಧ ಹೋರಾಡುವುದಲ್ಲದೆ ನಿಷ್ಪಕ್ಷಪಾತ ವರದಿ ಮಾಡುವಂತೆ ಅವರಿಗೆ ಸಲಹೆ ಮತ್ತು ಬೆಂಬಲ ನೀಡುತ್ತಿದ್ದೇನೆ. ನ್ಯೂಸ್ ಪುತ್ತೂರಿನ ಆಡಳಿತದಲ್ಲಿ ಇರುವ ಎಲ್ಲರೂ ನಮ್ಮ ಸುದ್ದಿ ಬಳಗದವರು ಆಗಿರುವುದರಿಂದ ಸಹಜವಾಗಿ ಅವರ ಬೆಂಬಲ, ಪ್ರೋತ್ಸಾಹ ನಮ್ಮ ಸಮಾಜ ಪರ ಎಲ್ಲಾ ಹೋರಾಟಗಳಿಗೆ ಇದೆ ಎಂದು ನಂಬಿದ್ದೇನೆ. ಆ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳುವ ಕೆಲವು ಯೋಜನೆಗಳ ಬಗ್ಗೆ ಈ ಕೆಳಗೆ ನೀಡಿದ್ದೇನೆ.

  • *ತಾಲೂಕಿನ ಎಲ್ಲಾ ಮನೆಗಳಲ್ಲಿ, ತೋಟಗಳಲ್ಲಿ ಮಳೆಕೊಯ್ಲು ಮಾಡಿಸಿ ನೀರಿನ ಅಭಾವವನ್ನು ನಿವಾರಿಸುವುದು
  • *ಪರಿಸರ ಕಲ್ಮಶಗೊಳಿಸದ ಉತ್ತಮವಾದ ಸೋಲಾರ್ ಶಕ್ತಿಯನ್ನು ಉಪಯೋಗಿಸಿ ವಿದ್ಯುತ್ ಶಕ್ತಿಯನ್ನು ತಾಲೂಕಿನ ಮನೆ ಮನೆಗಳಿಗೆ ಅಳವಡಿಸಲು ಯೋಜನೆ ಹಾಕಿಕೊಳ್ಳುವುದು.
  • *ಸಾರ್ವಜನಿಕ ಸ್ವಚ್ಛತೆಯನ್ನು ಜೀವನ ಕ್ರಮವನ್ನಾಗಿ ತಾಲೂಕಿನ ಎಲ್ಲರೂ ಆದತೆ ನೀಡುವಂತೆ ಮಾಡುವುದು
  • *ಜನರ ಅದರಲ್ಲೂ ಬಡಜನರ, ಶೋಷಿತರ ಸಮಸ್ಯೆಗಳಿಗೆ ಪರಿಹಾರಕ್ಕೆ ಪ್ರಯತ್ನಿಸುವುದು.
    *ಲಂಚ, ಭ್ರಷ್ಟಾಚಾರದ, ಬಲಾತ್ಕಾರದ ಬಂದ್‌ನ ವಿರುದ್ಧ ಹೋರಾಟವನ್ನು ಮುಂದುವರಿಸುವುದು.
  • *ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ಬದುಕಿಗೆ, ಸಂಪಾದನೆಗೆ ಬೇಕಾದ ಮಾಹಿತಿಯನ್ನು, ತರಬೇತಿಯನ್ನು, ಮಾರುಕಟ್ಟೆಯನ್ನು ಗ್ರಾಮ ಗ್ರಾಮಗಳಲ್ಲಿ ಒದಗಿಸುವುದು.
  • *ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಡುವ ಶೈಕ್ಷಣಿಕ ಮಾಹಿತಿಯನ್ನು ನೀಡುವುದು. ಆರ್ಥಿಕ ಸೌಲಭ್ಯ ಒದಗಿಸುವುದು.
  • *ಸಮಾಜದ ಎಲ್ಲಾ ಸಮುದಾಯದವರನ್ನು ಒಂದು ಗೂಡಿಸಿ, ಎಲ್ಲರಿಗೂ ಪ್ರಾಮುಖ್ಯತೆ ನೀಡುವ ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವುದು ಎಂಬ ಈ ಮೇಲಿನ ಆಶಯಗಳನ್ನು ಸುದ್ದಿ ಪತ್ರಿಕೆ ಮತ್ತು ಚಾನೆಲ್‌ನ ಆದ್ಯತೆಯನ್ನಾಗಿ ಮಾಡಲಿದ್ದೇವೆ, ಅದಕ್ಕೆ ಬೆಂಬಲ ನೀಡಬೇಕೆಂದು ಸಾರ್ವಜನಿಕರಲ್ಲಿ, ಸಂಘಸಂಸ್ಥೆಗಳವರಲ್ಲಿ ಕೇಳಿಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here