ಸೈಂಟ್ ಮಿಲಾಗ್ರಿಸ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ

0

ರೂ.6.51 ಕೋಟಿ ನಿವ್ವಳ ಲಾಭ | ದುಡಿಯುವ ಬಂಡವಾಳ ರೂ.1150 ಕೋಟಿ | ವಾರ್ಷಿಕ ವಹಿವಾಟು ರೂ.8017 ಕೋಟಿ

ಪುತ್ತೂರು: ಜಿಲ್ಲೆಯ ಪ್ರತಿಷ್ಠಿತ ಸಹಕಾರಿಗಳಲ್ಲಿ ಒಂದಾದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ 2022-23ರ 20ನೇ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಸಹಕಾರಿಯ ಸಭಾಭವನದಲ್ಲಿ ಜರಗಿತು.
ಕಾರವಾರ ಧರ್ಮಪ್ರಾಂತ್ಯದ ಧರ್ಮಗುರು ವಂ|ಡೆಸ್ಮಂಡ್ ರೆಬೆಲ್ಲೊ ಪವಿತ್ರ ಗ್ರಂಥ ಬೈಬಲ್ ವಾಚಿಸಿ ಆಶೀರ್ವಾದಿಸುವ ಮೂಲಕ ಮಹಾಸಭೆಗೆ ಚಾಲನೆ ನೀಡಿ ಶುಭ ಹಾರೈಸಿದರು.


ಸಹಕಾರಿಯ ಹಾಲಿ ನಿರ್ದೇಶಕರು ಹಾಗೂ ಸಂಸ್ಥಾಪಕ ಅಧ್ಯಕ್ಷೆ ರೊಸ್ಲೀನ್ ಫೆರ್ನಾಂಡೀಸ್‌ ಮಾತನಾಡಿ, ಸೆಪ್ಟೆಂಬರ್ 14ರಂದು ಸಹಕಾರಿಯು 20 ವರ್ಷಗಳನ್ನು ಪೂರೈಸಿದ್ದು, ಸಹಕಾರಿ ಈವರೆಗೆ ನಡೆದು ಬಂದ ಹಾದಿಯನ್ನೊಮ್ಮೆ ಮೆಲುಕು ಹಾಕುವ ಮೂಲಕ ಸಹಕಾರಿಯ ಪ್ರಾರಂಭದಿಂದ ಈವರೆಗಿನ ಸಾಧನೆಯನ್ನು ನೆನೆದರು.
ಸಹಕಾರಿಯ ನೂತನ ವ್ಯವಸ್ಥಾಪಕ ನಿರ್ದೇಶಕಿ ಕು.ಡೇಮಿ ಫೆರ್ನಾಂಡೀಸ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿಯು ಉತ್ತಮ ಪ್ರಗತಿ ಸಾಧಿಸಿದ್ದು, ಆರ್ಥಿಕ ವರ್ಷಾಂತ್ಯದಲ್ಲಿ ಇದ್ದಂತೆ ಠೇವಣಿ ಸಂಗ್ರಹಣೆಯು ರೂ.1081 ಕೋಟಿ, ಸಾಲ ನೀಡಿಕೆಯು ರೂ.990 ಕೋಟಿ, ದುಡಿಯುವ ಬಂಡವಾಳ ರೂ.1150 ಕೋಟಿ ಹೊಂದಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಸೇವೆಯನ್ನು ಇನ್ನೂ ಉತ್ತಮಗೊಳಿಸುವಂತಹ ಯೋಜನೆಗಳನ್ನು ನೀಡುವ ಬಗ್ಗೆ ಸುಳಿವು ನೀಡಿದರು.

ಪ್ರಧಾನ ವ್ಯವಸ್ಥಾಪಕಿ ರಾಜೇಶ್ವರಿ ರಾಯ್ಕರ್‌ 2022-23ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿಯ ಒಟ್ಟೂ ರೂ.6.51 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿ, ಮಹಾಸಭೆಯ ವಿಷಯ ಪಟ್ಟಿಯನ್ನು ಸಾದರಪಡಿಸಿ ಅನುಮೋದನೆಯನ್ನು ಪಡೆದುಕೊಳ್ಳಲಾಯಿತು.

ಪ್ರಸಕ್ತ ಸಾಲಿನಲ್ಲಿ ಸಹಕಾರಿಯ ಚುನಾವಣೆ ನಡೆದಿದ್ದು ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಾರ್ಜ್ ಫೆರ್ನಾಂಡೀಸ್‌ರವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಲಾಯಿತು.
ಸಹಕಾರಿಯ ಪ್ರಧಾನ ಕಛೇರಿಯ ಲೆಕ್ಕ ವಿಭಾಗದ ಅಧಿಕಾರಿಯವರು ಸಹಕಾರಿಯು ವರದಿ ಸಾಲಿನಲ್ಲಿ 34358 ಸದಸ್ಯರು ಸೇರ್ಪಡೆಯಾಗಿ ವರ್ಷಾಂತ್ಯಕ್ಕೆ ಇದ್ದಂತೆ ಒಟ್ಟು 2,82,441 ಸದಸ್ಯರನ್ನು ಹೊಂದಿದೆ. ಅಲ್ಲದೆ ಸಭೆಯಲ್ಲಿ ಅಡವು ಪ್ರತಿ, ಜಮಾ-ಖರ್ಚು, ಲಾಭ-ಹಾನಿ ಪ್ರತಿ ಹಾಗೂ 2023-24ನೇ ಸಾಲಿನ ಅಂದಾಜು ಮುಂಗಡ ಪ್ರತಿಯನ್ನು ಸಭೆಯಲ್ಲಿ ಸಾದರಪಡಿಸಿದರು. ಸಹಕಾರಿಯ ಪ್ರಧಾನ ಕಛೇರಿಯ ಹಿರಿಯ ಸಿಬ್ಬಂದಿ ಶ್ರೀಮತಿ ರಮ್ಯಾ ಪ್ರಭುರವರು ಸಹಕಾರಿಯು ನೀಡುತ್ತಿರುವ ಮೌಲ್ಯಾಧಾರಿತ ಸೇವೆಗಳ ಬಗ್ಗೆ ವಿವರಣೆ ನೀಡಿದರು. ಸಹಕಾರಿಯ ಉಪಾಧ್ಯಕ್ಷ ಜಾಕೊಬ್ ಮೆಂಡೊನ್ಸಾ ಸ್ವಾಗತಿಸಿ, ಪ್ರಧಾನ ಕಛೇರಿಯ ಆಡಳಿತ ಅಧಿಕಾರಿ ಕು.ಶ್ರುತಿ ನಾಯ್ಕ ವಂದಿಸಿದರು. ಪ್ರಧಾನ ಕಛೇರಿಯ ಆಡಳಿತ ವ್ಯವಸ್ಥಾಪಕ ವಿನಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಸಹಕಾರಿಯ ನಿರ್ದೇಶಕರು, ಪ್ರಧಾನ ಕಛೇರಿಯ ಅಧಿಕಾರಿಗಳು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಮತ್ತು ಸಹಕಾರದಲ್ಲಿ ತನ್ನದೇ ಛಾಪು ಮೂಡಿಸಿರುವ ಸೈಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿಗೆ ಇದೀಗ ಇಪ್ಪತ್ತು ವರ್ಷ. ಸಂಸ್ಥೆಯ ಉದ್ಯೋಗಿಗಳ ಹಿತಾಶಕ್ತಿ ಜೊತೆ ಗ್ರಾಹಕರ ಕಾಳಜಿಯೊಂದಿಗೆ ಸಾಮಾಜಿಕ ಸೇವೆಯನ್ನು ತಮ್ಮ ಆದ್ಯತಾ ರಂಗವಾಗಿಸಿಕೊಂಡು ಸಂಕಷ್ಟಕ್ಕೀಡಾಗುವವರ, ಅಸಹಾಯಕರ ಮತ್ತು ಅಗತ್ಯವಿರುವವರಿಗೆ ನೆರವಾಗುವುದು ಸೈಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿಯ ಧ್ಯೇಯವಾಗಿದೆ.

LEAVE A REPLY

Please enter your comment!
Please enter your name here