ಆರಾಧನೆ ಮೂಲಕ ಮಸೀದಿಯನ್ನು ಧನ್ಯಗೊಳಿಸಿ-ಆಟಕೋಯ ತಂಙಳ್
ಪುತ್ತೂರು: ಬದ್ರಿಯಾ ಜುಮಾ ಮಸೀದಿ ಪೇರಲ್ತಡ್ಕ ಇರ್ದೆ ಇಲ್ಲಿ ನವೀಕೃತ ಮಸೀದಿ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ ಅ.8ರಂದು ನಡೆಯಿತು. ಪೇರಲ್ತಡ್ಕ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮಹಮ್ಮದ್ ನವಾಝ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪೇರಲ್ತಡ್ಕ ಬಿಜೆಎಂ ಗೌರವಾಧ್ಯಕ್ಷ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮಸೀದಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಸೀದಿ ಅಲ್ಲಾಹನ ಭವನವಾಗಿದ್ದು ಅದನ್ನು ಸಂರಕ್ಷಿಸುವುದು, ನಮಾಝ್ ಮತ್ತು ಇತರ ಕರ್ಮಗಳ ಮೂಲಕ ಧನ್ಯಗೊಳಿಸುವುದು ಸತ್ಯವಿಶ್ವಾಸಿಗಳ ಭಾಧ್ಯತೆಯಾಗಿದೆ. ಮಸೀದಿ, ಮದರಸ ನಿರ್ಮಾಣಕ್ಕೆ ಸಹಾಯ ಮಾಡುವವರು ಭಾಗ್ಯವಂತರಾಗಿದ್ದು ಅಂತವರು ಅಲ್ಲಾಹನ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.
ಸಭೆ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ಉದ್ಘಾಟಿಸಿದ ಪೇರಲ್ತಡ್ಕ ಖತೀಬ್ ಇಬ್ರಾಹಿಂ ಮದನಿ ಅಲ್ ಹುಮೈದಿ ನೆಲ್ಯಾಡಿ ಮಾತನಾಡಿ ಮಸೀದಿ ನಾಡಿನ ಶಾಂತಿಯ ಕೇಂದ್ರವಾಗಿದೆ. ಮಸೀದಿ, ದೇವಸ್ಥಾನ, ಚರ್ಚ್ ಶಾಂತಿ, ಸೌಹಾರ್ದತೆಯಿಂದ ಬದುಕಲು ಕಲಿಸುತ್ತಿದ್ದು ಧರ್ಮದ ಆದೇಶಗಳನ್ನು ಪಾಲಿಸದೇ ಧರ್ಮಗಳೆಡೆಯಲ್ಲಿ ವಿಷಬೀಜ ಬಿತ್ತುವವರು ಯಾವುದೇ ಧರ್ಮದ ನೈಜ ಅನುಯಾಯಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಎಲ್ಲ ಧರ್ಮಗಳು ಶಾಂತಿ, ಸಹೋದರತೆ, ಸಹಬಾಳ್ವೆಯನ್ನು ಬೋಧಿಸುತ್ತಿದ್ದು ಧರ್ಮದ ಸಾರವೂ ಅದೇ ಆಗಿದೆ, ಆದರೆ ಇಂದು ರಾಜಕೀಯ ಲಾಭಕ್ಕಾಗಿ ಧರ್ಮಗಳನ್ನು ದುರ್ಬಳಕೆ ಮಾಡಲಾಗುತ್ತಿದೆ, ಎಲ್ಲರನ್ನೂ ಒಂದೇ ರೀತಿ ಕಾಣುವುದು ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ ಎಂದು ಹೇಳಿದರು. ನಾವೆಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ ಬಾಳಬೇಕು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು, ನಮ್ಮ ಧರ್ಮವನ್ನು ಆಚರಿಸಿಕೊಂಡು ಇತರ ಧರ್ಮವನ್ನು ಗೌರವಿಸಿದ ದೇಶ ವಿಶ್ವಗುರು ಆಗಲು ಸಾಧ್ಯ ಎಂದು ಹೇಳಿದರು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮಾತನಾಡಿ, ನಮ್ಮ ದೇಶ ಸೌಹಾರ್ದತೆಯ ತಳಹದಿಯ ಮೇಲೆ ನಿಂತ ದೇಶವಾಗಿದ್ದು ಅದನ್ನು ಇಲ್ಲದಾಗಿಸಲು ಯಾರಿಂದಲೂ ಸಾಧ್ಯವಿಲ್ಲ, ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಿಕರು ಜಾತಿ, ಧರ್ಮಗಳನ್ನು ಬಿಟ್ಟು ಒಗ್ಗಟ್ಟಿನಿಂದ ಹೋರಾಟ ನಡೆಸಿದಂತೆ ನಾವೂ ಒಗ್ಗಟ್ಟಿನಿಂದ, ಸಹೋದರತೆಯಿಂದ ಈ ದೇಶವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು. ಪುತ್ತೂರು ಶಾಸಕ ಅಶೋಕ್ ರೈ ಬಗ್ಗೆ ಗುಣಗಾಣ ಮಾಡಿದ ಎಕೆಎಂ ಅಶ್ರಫ್ ಅವರು ಅಶೋಕ್ ರೈ ಇಲ್ಲಿನ ಶಾಸಕನಾಗಿರುವುದು ನಿಮ್ಮ ಭಾಗ್ಯ, ಅವರಲ್ಲಿ ಸದಾ ಅಭಿವೃದ್ಧಿ ಪರವಾದ ಚಿಂತನೆಯಿದೆ ಎಂದು ಹೇಳಿದರು.
ನಿಡ್ಪಳ್ಳಿ ಚರ್ಚ್ನ ಧರ್ಮಗುರು ಫಾದರ್ ಜೇಸನ್ ಲೋಬೋ ಮಾತನಾಡಿ, ನಾವು ಒಳ್ಳೆಯವರಾಗಿ ಜೀವಿಸಲು ಪ್ರಯತ್ನಿಸಬೇಕು. ನಾವು ಹೊರಗಡೆ ಹೇಗೆ ಇರುತ್ತೇವೆ, ನಮ್ಮ ನಡೆ, ನುಡಿ ಇವೆಲ್ಲವೂ ನಾವು ಪ್ರತಿನಿಧಿಸುವ ಧರ್ಮವನ್ನು ತೋರಿಸುತ್ತದೆ, ಹಾಗಾಗಿ ನಾವು ಒಳ್ಳೆಯವರಾಗಬೇಕು, ಒಳ್ಳೆಯವರಾಗಿ ಪ್ರಾರ್ಥಿಸಿದಾಗ ದೇವರು ಕೂಡಾ ಅದನ್ನು ಸ್ವೀಕರಿಸುತ್ತಾನೆ ಎಂದು ಹೇಳಿದರು.
ಕನ್ನಡ ಪ್ರಭಾಷಣ ನಡೆಸಿದ ಮಿತ್ತೂರು ಕೆಜಿಎನ್ ಮುರ‍್ರಿಸ್ ಹುಸೈನ್ ಅಹ್ಸನಿ ಅಲ್ ಮುಹೀನಿ ಮಾರ್ನಾಡ್ ಮಾತನಾಡಿ, ಮಸೀದಿ, ದೇವಸ್ಥಾನ, ಚರ್ಚ್ ಮೊದಲಾದ ಧಾರ್ಮಿಕ ಕೇಂದ್ರಗಳು ನಾಡಿನ ಭಕ್ತಿಯ, ಶ್ರದ್ದೆಯ ಕೇಂದ್ರಗಳಾಗಿದ್ದು ಆಯಾ ಧರ್ಮದ ಅನುಯಾಯುಗಳಿಗೆ ಅಲ್ಲಿ ಶಾಂತಿಯನ್ನು, ಪ್ರೀತಿಯನ್ನು ಕಲಿಸಲಾಗುತ್ತಿದೆ, ಎಲ್ಲ ಧರ್ಮಗಳೂ ಒಳ್ಳೆಯದನ್ನು ಮಾತ್ರ ಬೊಧಿಸುತ್ತದೆ ಎಂದು ಅವರು ಹೇಳಿದರು.
ಟ್ರೆಂಡ್ ರಾಜ್ಯ ತರಬೇತುದಾರ ಇಕ್ಬಾಲ್ ಬಾಳಿಲ ಮಾತನಾಡಿ ಸೌಹಾರ್ದತೆಯ ಪರಂಪರೆ ಇರುವ ನಮ್ಮ ದೇಶದಲ್ಲಿ ಮಸೀದಿ, ಮದರಸಗಳು ಅದಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬುತ್ತಾ ಬಂದಿದೆ. ಇಂದು ಉದ್ಘಾಟನೆಗೊಂಡ ಪೇರಲಡ್ಕ ಮಸೀದಿ ವಠಾರದಲ್ಲಿ ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ಸಿನಲ್ಲಿ ಸಹಕರಿಸಿದ್ದು ಆ ಮೂಲಕ ಇಲ್ಲಿಂದ ದೇಶಕ್ಕೆ ಮಾದರಿಯಾದ ಒಂದು ಸಂದೇಶ ರವಾನೆಯಾಗಿದೆ. ಇಲ್ಲಿನ ಸರ್ವಧರ್ಮ ಒಗ್ಗಟ್ಟು ಮತ್ತು ಐಕ್ಯತೆ ನಿರಂತರವಾಗಿ ನೆಲೆಗೊಳ್ಳಲಿ ಎಂದು ಅವರು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಊರವರೇ ಸೇರಿಕೊಂಡು ಇಲ್ಲಿ ಸುಂದರವಾದ ಮಸೀದಿ ನಿರ್ಮಿಸಿದ್ದು ಜಾತಿ ಮತ ಬೇಧ ಇಲ್ಲದೇ ಎಲ್ಲರೂ ಒಗ್ಗಟ್ಟಿನಿಂದ ಇಲ್ಲಿ ಬದುಕುತ್ತಿದ್ದೇವೆ. ಮಸೀದಿ ಅಧ್ಯಕ್ಷ ಮಹಮ್ಮದ್ ನವಾಝ್, ಮಹಮ್ಮದ್ ಕುಕ್ಕುವಳ್ಳಿ ಮೊದಲಾದವರ ನೇತೃತ್ವದಲ್ಲಿ ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿ ಎಂದು ಅವರು ಶುಭ ಹಾರೈಸಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಪೇರಲ್ತಡ್ಕದಲ್ಲಿ ಯಾವತ್ತೂ ಸೌಹಾರ್ದತೆ ಇದೆ. ಒಳ್ಳೆಯ ಚಿಂತನೆ ಇರುವವರು ಈ ಭಾಗದಲ್ಲಿದ್ದಾರೆ, ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು ಎಲ್ಲರೂ ನಮ್ಮವರು ಎನ್ನುವ ಮನೋಭಾವ ಇರುವವರು ಈ ಕಡೆ ಇರುವ ಕಾರಣ ಇಲ್ಲಿ ಶಾಂತಿ, ಸೌಹಾರ್ದತೆ, ಸಹೋದರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಕ.ರ.ವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ ಕೃಷ್ಣೇ ಗೌಡ ಮಾತನಾಡಿ ನಾವೆಲ್ಲಾ ಮನುಷ್ಯರು, ಮಾನವೀಯತೆಯೇ ನಿಜವಾದ ಧರ್ಮ. ನಮ್ಮ ಧರ್ಮವನ್ನು ಆಚರಿಸಿಕೊಂಡು ಇತರ ಧರ್ಮಗಳನ್ನು ಗೌರವದಿಂದ ಕಂಡಾಗ ನಾವು ಧರ್ಮದ ನೈಜ ಅನುಯಾಯಿಯಾಗಳು ಸಾಧ್ಯ ಎಂದರು. ಪ್ರಾಸ್ತಾವಿಕ ಪ್ರಭಾಷಣ ನಡೆಸಿದ ಪೇರಲ್ತಡ್ಕ ಮಸೀದಿಯ ಸದರ್ ಮುಅಲ್ಲಿಂ ಹನೀಫ್ ಅಸ್ಲಮಿ ಸೊರಕೆ ಮಾತನಾಡಿ ಮಸೀದಿ ನಾಡಿನ ಅಭಯ ಕೇಂದ್ರವಾಗಿದೆ ಎಂದು ಹೇಳಿದರು.
ಎಸ್‌ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿ ಪೇರಲ್ತಡ್ಕ ಎನ್ನುವ ಈ ಊರಲ್ಲಿ ಎಲ್ಲರೂ ಅನ್ಯೋನ್ಯತೆಯಿಂದ ಬಾಳುತ್ತಿರುವುದು ಸಂತಸದ ವಿಚಾರ, ಮುಂದಕ್ಕೂ ಎಲ್ಲರೂ ಒಗ್ಗಟ್ಟಿನಿಂದ ಜೀವಿಸುವಂತಾಗಲಿ ಎಂದು ಹೇಳಿದರು.
ಸ್ವಾಗತಿಸಿದ ಸ್ವಾಗತ ಸಮಿತಿ ಚೇರ್‌ಮೆನ್ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಮಾತನಾಡಿ ಈ ಊರಿನ ಹಿರಿಯರ, ಕಿರಿಯರ ಅವಿರತ ಪರಿಶ್ರಮ, ತ್ಯಾಗ, ಕಾರ್ಯಕ್ಷಮತೆಯಿಂದ ಇಲ್ಲಿ ಸುಂದರವಾದ ಮಸೀದಿ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು. ಇರ್ದೆ ಪೇರಲ್ತಡ್ಕಕ್ಕೆ ತನ್ನದೇ ಆದ ಇತಿಹಾಸವಿದ್ದು ಈ ಊರು ಸಹೋದರತೆಗೆ, ಸಾಮರಸ್ಯಕ್ಕೆ ಹೆಸರು ಪಡೆದಿದ್ದು ದಿ.ನಾರಾಯಣ ರೈ, ಹುಕ್ರಪ್ಪ ಸಹಿತ ಹಲವರು, ಹಲವು ಕುಟುಂಬಗಳು ಮೊದಲಿನಿಂದಲೂ ಸೌಹಾರ್ದತೆಗೆ ಒತ್ತು ನೀಡುವವರಾಗಿದ್ದು ನಾವು ಏರ್ಪಡಿಸಿರುವ ಸೌಹಾರ್ದ ಕಾರ್ಯಕ್ರಮವೂ ಅಂತವರ ಪ್ರೇರಣೆ ಇದೆ. ಮುಂದಕ್ಕೂ ಸೌಹಾರ್ದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ನಾವೆಲ್ಲಾ ಕಟ್ಟಿಬದ್ದರಾಗಿದ್ದೇವೆ ಎಂದು ಅವರು ಹೇಳಿದರು.
ಬೆಟ್ಟಂಪಾಡಿ ಸಿಎ ಬ್ಯಾಂಕ್ ಮ್ಯಾನೇಜರ್ ರಾಮಯ್ಯ ರೈ, ಬೆಳಿಯೂರುಕಟ್ಟೆ ಪ.ಪೂ ಕಾಲೇಜಿನ ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ನವೀನ್ ರೈ ಚೆಲ್ಯಡ್ಕ, ಚಂದ್ರಶೇಖರ್ ರೈ ಬಾಲ್ಯೊಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ಪೇರಲ್ತಡ್ಕ ಮಾಜಿ ಖತೀಬ್ ಅಬ್ಬಾಸ್ ಮದನಿ ಮೊದಲಾದವರು ಸಮಯೋಚಿತವಾಗಿ ಮಾತನಾಡಿದರು.
ಇದೇ ವೇಳೆ ಮಸೀದಿ ನಿರ್ಮಾಣ ಕಾರ್ಯಕ್ಕೆ ವಿಶೇಷ ಸಹಕಾರ ನೀಡಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಪೇರಲ್ತಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ಪ್ರಸ್ತುತ ಮಸೀದಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಾಜಿ ಮಹಮ್ಮದ್ ನವಾಝ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಮಾಅತ್ ವತಿಯಿಂದ ಶಾಸಕರಿಗೆ 2 ಮನವಿಗಳನ್ನು ಇದೇ ವೇಳೆ ಸಲ್ಲಿಸಲಾಯಿತು.
ವಿ ಹೆಲ್ಪ್ ಟೀಮ್ ಇರ್ದೆ-ಬೆಟ್ಟಂಪಾಡಿ ವತಿಯಿಂದ ಶಾಫಿ ಪೇರಲ್ತಡ್ಕ ಅಬುದಾಭಿ ನೇತೃತ್ವದಲ್ಲಿ ಮಸೀದಿಗೆ ವಾಟರ್ ಕೂಲರ್ ಕೊಡುಗೆಯಾಗಿ ನೀಡಲಾಯಿತು. ಶಾಸಕ ಅಶೊಕ್ ಕುಮಾರ್ ರೈ ಹಸ್ತಾಂತರಿಸಿದರು. ವಾಯ್ಸ್ ಆಫ್ ಇರ್ದೆ ವಾಟ್ಸಪ್ ಗ್ರೂಪ್‌ನಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಮಂದಿಗೆ ಜ್ಯೂಸ್, ಕಲ್ಲಂಗಡಿ, ಬಾಲೆಹಣ್ಣು ಫಲಾಹಾರವನ್ನು ವಿತರಿಸಲಾಯಿತು. ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ದುವಾ ನೆರವೇರಿಸಿದರು. ಮಾಸ್ಟರ್ ಮುವಾದ್ ಖಿರಾಅತ್ ಪಠಿಸಿದರು. ಅಬ್ದುಲ್ ಅಝೀಝ್ ಕುಂಞಿಲಡ್ಕ ವರದಿ ಮಂಡಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸೌಹಾರ್ದ ಸಂಗಮದ ಬಳಿಕ ಅನ್ವರ್ ಅಲೀ ಹುದವಿ ಮಲಪ್ಪುರಂ ಅವರಿಂದ ಪ್ರಭಾಷಣ ನಡೆಯಿತು. ಪೇರಲ್ತಡ್ಕ ಜಮಾಅತ್ ಕಮಿಟಿಯವರು, ಸ್ವಾಗತ ಸಮಿತಿಯವರು, ನುಸ್ರತುಲ್ ಮಸಾಕೀನ್ ಯಂಗ್‌ಮೆನ್ಸ್ ಅಸೋಸಿಯೇಶನ್‌ನವರು ವಿವಿಧ ಸಹಕಾರ ನೀಡಿದರು.