‘ಪ್ರಾಮಾಣಿಕತೆ, ಯೋಜನೆ, ಶ್ರಮವಿದ್ದರೆ ಯಶಸ್ಸು ಖಚಿತ’- ಶ್ರೀ ಮಹಾಲಿಂಗೇಶ್ವರ ಐಟಿಐ ಘಟಿಕೋತ್ಸವದಲ್ಲಿ ಶಾಸಕ ಅಶೋಕ್ ಕುಮಾರ್ ರೈ

0

  • ಐಟಿಐ ಹುಡಗನೂ ಬಿ.ಇ ಇಂಜಿನಿಯರ್ ಸಂಬಳ ಪಡೆಯಬಹುದು – ಧನಂಜಯ ಅಡ್ಪಂಗಾಯ
  • ಯುವ ಶಕ್ತಿಗೆ ಸರಕಾರದ ಹಲವು ಯೋಜನೆ – ಸಂಜೀವ ಮಠಂದೂರು
  • ಐಟಿಐ ಕಲಿತವರಿಗೆ ಕೆಲಸ ಮಾಡುವುದು,ಕ್ರಿಯೇಟ್ ಮಾಡುವುದು ಗೊತ್ತಿದೆ – ಕೇಶವ ಅಮೈ
  • ಕುತೂಹಲ ಬೆಳೆಸಿಕೊಳ್ಳಿ, ಕಲಿಕೆಯನ್ನು ನಿಲ್ಲಿಸಬೇಡಿ – ವಚನ ಜಯರಾಮ್
  • ಹೊಸ ಸಲಕರಣೆಯ ಕೊರತೆ ನೀಗಿಸುವಂತೆ ಮನವಿ – ಚಿದಾನಂದ ಬೈಲಾಡಿ
  • ಸಿ.ಪಿ.ಜಯರಾಮ ಗೌಡರ ಕನಸು ನನಸು ಮಾಡಿದ್ದೇವೆ – ಯು.ಪಿ.ರಾಮಕೃಷ್ಣ
  • ಸಿಕ್ಕಿದ ಕೆಲಸದಲ್ಲಿ ಪರಿಣತರಾಗಿ- ಪ್ರಕಾಶ್ ಪೈ

ಪುತ್ತೂರು: ಟೆಕ್ನಿಕಲ್ ಕೋರ್ಸ್ ಪಾಸ್ ಆದ ಬಳಿಕ ಜೀವನದಲ್ಲಿ ಅಚ್ಯುವ್‍ಮೆಂಟ್ ಮಾಡಬೇಕು. ಇಂತಹ ಅಚ್ಯುವ್‍ಮೆಂಟ್‍ಗೆ ಪ್ರಾಮಾಣಿಕತೆ, ಯೋಜನೆ, ಶ್ರಮವಿದ್ದರೆ ಯಶಸ್ಸು ಖಚಿತ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಅ.9ರಂದು ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ ಕೌಶಲ್ಯ ಸಭಾ ಭವನದಲ್ಲಿನ ಡಿ.ವಿ ಸದಾನಂದ ಗೌಡ ಮತ್ತು ಸಂಜೀವ ಮಠಂದೂರು ವೇದಿಕೆಯಲ್ಲಿ ನಡೆದ ವಾರ್ಷಿಕ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದರು. ಇಂಜಿನಿಯರಿಂಗ್ ಮಾಡಿದವರು ತುಂಬಾ ಜನ ಕೆಲಸ ಇಲ್ಲದೆ ಇದ್ದಾರೆ. ಆದರೆ ಇವತ್ತು ಐಟಿಐ ಮಾಡಿದ ಎಲ್ಲರಿಗೂ ಕೆಲಸ ಸಿಕ್ಕಿದೆ.

ಇದು ನಿಜವಾಗಿ ಒಳ್ಳೆಯ ವಿಚಾರ. ಸರಕಾರಿ ಐಟಿಐ ಕಾಲೇಜಿನಲ್ಲಿ ಸೀಟಿಗಾಗಿ ಬೇಕಾದಷ್ಟು ಜನ ಶಿಫಾರಸ್ಸಿಗೆ ಬರುತ್ತಾರೆ. ಇವತ್ತು ಐಟಿಐಗೆ ಹೆಚ್ಚಿನ ಬೇಡಿಕೆ ಇದೆ. ಯಾರೂ ಸಹ ಹಣವಿದ್ದು ಉದ್ಯಮ ಮಾಡುವುದಿಲ್ಲ. ಇದಕ್ಕೆ ನಾನೇ ಸಾಕ್ಷಿ ಎಂದರು.

ಐಟಿಐ ಹುಡಗನೂ ಬಿ.ಇ ಇಂಜಿನಿಯರ್ ಸಂಬಳ ಪಡೆಯಬಹುದು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅವರು ಮಾತನಾಡಿ, ಸುಳ್ಯ ತಾಲೂಕಿನಲ್ಲಿ 1929ರಿಂದ 1950ರ ಒಂದೇ ಒಂದು ಹೈಸ್ಕೂಲ್ ಇರಲಿಲ್ಲ. ಹಾಗಾಗಿ 1929ನೇ ಇಸವಿಯಲ್ಲಿ ಪ್ರಾರಂಭಗೊಂಡ ಗೌಡ ವಿದ್ಯಾಸಂಘ ಪುತ್ತೂರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡುವ ಉದ್ದೇಶವಿಟ್ಟುಕೊಂಡು ತನ್ನ ಯೋಜನೆ ರೂಪಿಸಿತ್ತು.

ಇವತ್ತು ಅದು ಐಟಿಐ ಆಗಿ ಹೆಮ್ಮರವಾಗಿ ಬೆಳೆದಿದೆ. ಇವತ್ತು ಐಟಿಐ ಕಲಿತ ಹುಡುಗರಿಗೂ ಬಿ.ಇ ಇಂಜಿನಿಯ‌ರ್‌ಗೆ ಸಿಗುವಂತಹ ಸಂಬಳ ಸಿಗುತ್ತಿದೆ. ಹಾಗಾಗಿ ಐಟಿಐಗೆ ಇವತ್ತು ಉತ್ತಮ ಅವಕಾಶವಿದೆ ಎಂದ ಅವರು ಇಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧಕರಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಯುವ ಶಕ್ತಿಗೆ ಸರಕಾರದ ಹಲವು ಯೋಜನೆ:
ಸಂಸ್ಥೆಯ ನಿರ್ದೇಶಕರಾದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಭಾರತ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದಲ್ಲಿ ಸೂಪರ್ ಪವರ್ ಆಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯುವ ಶಕ್ತಿಗೆ ಹಲವು ಯೋಜನೆ ನೀಡಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಆರಂಭಿಸಿ ಯುವಕರಿಗೆ ಶಕ್ತಿ ನೀಡಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳು ತಂತ್ರಜ್ಞಾನ ಕಲಿಯಬೇಕೆಂದು ಅಟಲ್ ಟಿಂಕ್ಕರಿಂಗ್ ಲ್ಯಾಬ್ ನೀಡಿದೆ.

ಸರಕಾರಿ ಐಟಿಐಗೆ ರೂ. 30ಕೋಟಿಯ ಯಂತ್ರೋಪಕರಣ ನೀಡುವ ಹಲವು ಯೋಜನೆ ನೀಡಿದೆ. ಅದೇ ರೀತಿ ಐಟಿಐ ವಿದ್ಯಾರ್ಥಿಗಳು ಕೂಡ ಪದವಿ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ ಎಂದು ಅವರಿಗೂ ಪದವಿ ನೀಡುವ ಕಾರ್ಯಕ್ರಮ ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಕೂಡಾ ವಿದ್ಯೆಯನ್ನು ಜ್ಞಾನಾರ್ಜನೆಗಾಗಿ ಪಡೆಯಬೇಕು ವಿನಃ ಧನ ಸಂಪದಾನೆಯ ಗುರಿಯಿಟ್ಟಲ್ಲ. ಜ್ಞಾನಾರ್ಜನೆ ಆದರೆ ಹಂತಹಂತವಾಗಿ ಧನಪ್ರಾಪ್ತಿಯಾಗುತ್ತದೆ ಎಂದರು.

ಐಟಿಐ ಕಲಿತವರಿಗೆ ಕೆಲಸ ಮಾಡುವುದು, ಕ್ರಿಯೇಟ್ ಮಾಡುವುದು ಗೊತ್ತಿದೆ:
ಎಸ್‍ಆರ್‌ಕೆ ಲ್ಯಾಡರ್ಸ್‍ನ ಮಾಲಕ ಕೇಶವ ಅಮೈ ಅವರು ಮಾತನಾಡಿ, ಇವತ್ತು ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ಇದೆ. ಬೇಸಿಕ್ ಸ್ಕಿಲ್‍ಗೆ ಐಟಿಐ ಮುಖ್ಯ. ಇವತ್ತು ಬೇಸಿಕ್ ಸ್ಕಿಲ್ ಸುಮಾರು 1 ಕೋಟಿಯಷ್ಟು ಕೊರತೆಯಿದೆ. ಇದು ಮುಂದಿನ ವರ್ಷ 2 ರಿಂದ 4 ಕೋಟಿಯಷ್ಟು ಹೋಗಬಹುದು. ಇದು ದೇಶದ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಐಟಿಐ ಕೌಶಲ್ಯ ಭರಿತ ವಿದ್ಯಾರ್ಥಿಗಳನ್ನು ತರಬೇತು ಮಾಡುವ ಮೂಲಕ ದೊಡ್ಡ ಹೆಜ್ಜೆ ಇಟ್ಟಿದೆ.

ಇಲ್ಲಿ ಊರಿಗೆ, ಸಮಾಜಕ್ಕೆ, ದೇಶಕ್ಕೆ ಬೇಕಾಗುವ ರೀತಿಯಲ್ಲಿ ತರಬೇತುದಾರರು ತಯಾರಾಗುತ್ತಾರೆ. ಐಟಿಐ ಕಲಿತವರಿಗೆ ಕೆಲಸ ಮಾಡಲೂ, ಕೆಲಸ ಕ್ರಿಯೇಟ್ ಮಾಡಲು ಸಾಧ್ಯವಿದೆ. ಅದರೆ ಕಲಿಕೆಯ ಪಠ್ಯಕ್ರಮಕ್ಕೂ ಇಂಡಸ್ಟ್ರೀ ವಿಚಾರಕ್ಕೂ ವ್ಯತ್ಯಾಸವಿದೆ ಇದನ್ನು ಗಮನಿಸಬೇಕು. ವಿದೇಶದಲ್ಲಿ ಪಠ್ಯದ ಅಂಕಕ್ಕೆ ಕೆಲಸ ಇಲ್ಲ. ಕೌಶಲ್ಯಕ್ಕೆ ಮಾತ್ರ ಕೆಲಸ. ನಮ್ಮಲ್ಲಿ ಅನೇಕ ಮಂದಿ ವಿದೇಶಕ್ಕೆ ಹೋಗಲು ಕೌಶಲ್ಯದ ಪ್ರಮಾಣ ಪತ್ರಕ್ಕಾಗಿ ಬರುತ್ತಾರೆ. ಅವರಿಗೆ ನಾವು ಪೂರ್ಣ ಸಹಕಾರ ನೀಡುತ್ತೇವೆ ಎಂದ ಅವರು ನನಗೆ ಇಂಡಸ್ಟ್ರಿ ಕ್ಷೇತ್ರದಲ್ಲಿ 24 ವರ್ಷದ ಅನುಭವ ಇದೆ. ನನ್ನ ಅನುಭವ ಹಂಚಿಕೊಳ್ಳಲು ನಾನು ಯಾವಾಗಲು ಸಿದ್ದನಿದ್ದೇನೆ ಎಂದರು.

ಕುತೂಹಲ ಬೆಳೆಸಿಕೊಳ್ಳಿ, ಕಲಿಕೆಯನ್ನು ನಿಲ್ಲಿಸಬೇಡಿ:
ಐಟಿಐ ತಾಂತ್ರಿಕ ವಿಭಾಗದ ಸದಸ್ಯೆ ವಚನ ಜಯರಾಮ್ ಅವರು ಮಾತನಾಡಿ, ಕಲಿಕೆ ಉಸಿರು ಇರುವ ತನಕ ಮುಗಿಯುವುದಿಲ್ಲ. ಇಲ್ಲಿ ತನಕ ಇರುವ ಸ್ಕಿಲ್ ಪರೀಕ್ಷೆ ಪಾಸ್ ಮಾಡಿಸಿ ಉದ್ಯೋಗ ಸಿಕ್ಕಿದ ಬಳಿಕ ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೆ ಹೋಗಲು ಕಲಿಯುವ ಶೈಲಿ ಬದಲು ಮಾಡಬೇಕು. ಕಲಿಕೆಯನ್ನು ನಿಲ್ಲಿಸಬೇಡಿ ಎಂದರು.

ಹೊಸ ಸಲಕರಣೆಯ ಕೊರತೆ ನೀಗಿಸುವಂತೆ ಮನವಿ:
ಸಂಸ್ಥೆಯ ನಿರ್ದೇಶಕ ಚಿದಾನಂದ ಬೈಲಾಡಿಯವರು ಮಾತನಾಡಿ, ನಮ್ಮ ಸಂಸ್ಥೆಯಿಂದ ವರ್ಷಕ್ಕೆ 92 ವಿದ್ಯಾರ್ಥಿಗಳು ತರಬೇತಿ ಪಡೆದು ಹೊರಗೆ ಹೋಗುತ್ತಾರೆ. ಜೀವನದ ಶಿಕ್ಷಣ ವ್ಯವಸ್ಥೆಯನ್ನು ತಿಳಿಸುವ ಈ ಸಂಸ್ಥೆಯಲ್ಲಿ ಹಲವು ಕೊರತೆಗಳಿವೆ. ವರ್ಷಕ್ಕೊಮ್ಮೆ ಪಠ್ಯಕ್ರಮ ಬದಲಾದಂತೆ ಹೊಸ ಹೊಸ ಯಂತ್ರೋಪಕರಣದ ಕೊರತೆ ಕಾಡುತ್ತದೆ. ಇದಕ್ಕಾಗಿ ಸುಮಾರು ರೂ. 50ಲಕ್ಷ ಬೇಕಾಗುತ್ತದೆ. ಅದೇ ರೀತಿ ತರಬೇತು ಅಧಿಕಾರಿಗಳ ಕೊರತೆ ಇದೆ. ಸಂಸ್ಥೆಯ ಕಟ್ಟಡಕ್ಕೆ ಲಿಫ್ಟ್ ಬೇಕಾಗಿದೆ ಎಂದು ಅವರು ಶಾಸಕರಿಗೆ ಬೇಡಿಕೆ ಸಲ್ಲಿಸಿದರು.

ಸಿ.ಪಿ.ಜಯರಾಮ ಗೌಡರ ಕನಸು ನನಸು ಮಾಡಿದ್ದೇವೆ:
ಸಂಸ್ಥೆಯ ಸಂಚಾಲಕ ಯು.ಪಿ ರಾಮಕೃಷ್ಣರವರು ಸ್ವಾಗತಿಸಿ ಮಾತನಾಡಿ, ಸಂಸ್ಥೆಯ ಸಂಚಾಲಕರಾಗಿದ್ದ ಸಿ.ಪಿ.ಜಯರಾಮ ಗೌಡರವರು ಅನಾರೋಗ್ಯದಿಂದ ನಿಧನರಾದ ಬಳಿಕ ಅವರ ಕನಸನ್ನು ನನಸು ಮಾಡುವ ಕೆಲಸಕ್ಕೆ ನಾನು ಚಾಲನೆ ನೀಡಿ, ಈ ಸುಸಜ್ಜಿತವಾದ ಕೌಶಲ್ಯ ಸೌಧವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೇನೆ. ಈ ಯಶಸ್ಸಿನ ಹಿಂದೆ ಸಾಕಷ್ಟು ಕೊಡುಗೈ ದಾನಿಗಳು ಸಹಕರಿಸಿದ್ದಾರೆ ಎಂದರು.

ಸಿಕ್ಕಿದ ಕೆಲಸದಲ್ಲಿ ಪರಿಣತರಾಗಿ:
ಸಂಸ್ಥೆಯ ಪ್ರಾಚಾರ್ಯ ಪ್ರಕಾಶ್ ಪೈ ವಿ. ಅವರು ಮಾತನಾಡಿ, ಉದ್ಯೋಗ ಸಿಕ್ಕಿದ ಬಳಿಕ ಅದು ಸಣ್ಣದಾಗಿರಲಿ, ಕಷ್ಟಕರವಾಗಿರಲಿ. ಅದರಲ್ಲೇ ಮುಂದುವರಿದಾಗ ನಿಮಗೆ ಅನುಭವ ಹೆಚ್ಚಾಗುತ್ತಾ ಹೋಗುತ್ತದೆ. ಕೆಲವು ಕಡೆ ಸುಶೀಕ್ಷಿತಾ ತರಬೇತಿಯಲ್ಲಿ 2 ವರ್ಷ ಸ್ಟೈಪಂಡ್ ಸಿಗುತ್ತದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ಹೇಳಿದ ಅವರು, ಈ ಸಂಸ್ಥೆಯಿಂದ ತರಬೇತಿ ಪಡೆದ ಅನೇಕರು ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಇದು ನಮಗೆ ಹೆಮ್ಮೆ ಇದೆ. ತರಬೇತಿ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳು ನಿರಂತರ ಸಂಪರ್ಕ ಪಡೆಯಬೇಕು ಎಂದು ಹೇಳಿದರು.

ದ.ಕ ಗೌಡ ವಿದ್ಯಾ ಸಂಘದ ಜೊತೆ ಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಸಂಸ್ಥೆಯ ನಿರ್ದೇಶಕರಾದ ಚಂದ್ರಕಲಾ ಸಿ.ಜೆ, ಜಯರಾಮ ಗೌಡ ಚಿಲ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿರಿಯ ತರಬೇತು ಅಧಿಕಾರಿಗಳಾದ ಪ್ರಶಾಂತ್ ನಾಯಕ್, ಹರಿಕೃಷ್ಣ ಪಿ.ಎನ್, ಮಧುಕರ ಪಿ.ಎಮ್, ದಯಾನಂದ ಎಸ್.ಕೆ, ಜಯಶೀಲಾ, ಕಚೇರಿ ಅಧೀಕ್ಷಕ ರಾಧಾಕೃಷ್ಣ ಎಮ್ ಅತಿಥಿಗಳನ್ನು ಗೌರವಿಸಿದರು. ಕೀರ್ತನ್ ಮತ್ತು ಚಿಂತನ್ ಪ್ರಾರ್ಥಿಸಿದರು.

ಸಂಸ್ಥೆಯ ಪ್ರಾಚಾರ್ಯ ಪ್ರಕಾಶ್ ಪೈ ವಂದಿಸಿದರು. ನಾರಾಯಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪ್ರಾಂಶುಪಾಲ ಭವಾನಿ ಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ್, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಯುವರಾಜ್ ಪೆರಿಯತ್ತೋಡಿ ಸಹಿತ ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಹಾಲಿಂಗೇಶ್ವರ ಐಟಿಐ ಮೇಲೆ ಅಭಿಮಾನವಿದೆ:
ಮಹಾಲಿಂಗೇಶ್ವರ ಐಟಿಐಯನ್ನು ನಾನು ಜ್ಯೂನಿಯರ್ ಕಾಲೇಜಿಗೆ ಹೋಗುವಾಗಲೇ ನೋಡಿದವ. ಹಾಗಾಗಿ ತುಂಬಾ ಹಿರಿತನದ ಈ ಸಂಸ್ಥೆಯ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಸಂಸ್ಥೆಯ ಕೆಲವು ಬೇಡಿಕೆಯ ಕುರಿತ ಹಲವು ಮನವಿಯನ್ನು ಹಿಂದೆಯೂ ಕೊಟ್ಟಿರಬಹುದು. ಅದು ಯಾಕೆ ಆಗಿಲ್ಲ ಎಂಬುದನ್ನು ಗಮನಿಸಬೇಕು. ಇವತ್ತು ಶಾಸಕನ ನೆಲೆಯಲ್ಲಿ ಯಾವುದನ್ನು ಕೊಡಬಹುದು ಎಂಬ ಕುರಿತು ನಾನು ಪರಿಶೀಲಿಸಬೇಕಾಗಿದೆ. ಸಂಸ್ಥೆಗೆ ಆಗಬೇಕಾದ ಸಹಾಯಕ್ಕೆ ನಾನು ಸಹಕಾರ ನೀಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಭರವಸೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here