ರಾಜಧಾನಿಯಲ್ಲಿ ಛಾಪು ಮೂಡಿಸಿದ ಕಂಬಳ-ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ ಬೆಂಗಳೂರು ಕಂಬಳ-ನಮ್ಮ ಕಂಬಳ

0

ಬೆಂಗಳೂರಿನಲ್ಲಿ ಪ್ರತೀ ವರ್ಷ ಕಂಬಳ ಮಾಡಿ – ಸಿಎಂ ಸಿದ್ದರಾಮಯ್ಯ

ಬೆಂಗಳೂರು:ರಾಜ್ಯ ರಾಜಧಾನಿಯ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ಕಂಬಳ-ನಮ್ಮ ಕಂಬಳ’ ನ.25ರಂದು ಬೆಳಿಗ್ಗೆ ಉದ್ಘಾಟನೆಗೊಂಡು ಅದ್ದೂರಿಯಾಗಿ ನಡೆಯುತ್ತಿದ್ದು ಈ ಮೂಲಕ ಕರಾವಳಿಯ ಕಂಬಳ ಕ್ರೀಡೆಯೊಂದಿಗೆ ತುಳು ಭಾಷೆ ರಾಜ್ಯ ರಾಜಧಾನಿಯಲ್ಲಿ ಮೇಳೈಸಿತು,ಪ್ರತಿಧ್ವನಿಸಿತು.ಬೆತ್ತ ಹಿಡಿದ ಯುವಕರು ಓಡಾಡಿದರೆ,ಮುಂಡಾಸು ಸುತ್ತಿದ ಕೋಣಗಳ ಮಾಲೀಕರು ಖುಷಿಯಿಂದ ಸುತ್ತಾಡುತ್ತಿದ್ದರು.ಬೆಂಗಳೂರಿನ ತಂಪಗಿನ ವಾತಾವರಣದ ಮಣ್ಣಿನಲ್ಲಿ ಕೋಣಗಳ ಗಾಂಭೀರ್ಯ ನಡಿಗೆ ಕಂಬಳದ ಸೀಮೋಲ್ಲಂಘನೆ ನಡೆಸಿತು.ಅಪ್ಪಟ ತುಳು, ಕನ್ನಡದಲ್ಲಿ ಕಂಬಳ ಕಾಮೆಂಟರಿ, ಕೋಣಗಳ ಓಟಕ್ಕೆ ಬೆಂಗಳೂರಿಗರು ನಿಬ್ಬೆರಗಾದರು..ಸಿಳ್ಳೆ ಚಪ್ಪಾಳೆ ಮುಗಿಲುಮುಟ್ಟಿತು.ಕೋರಿರೊಟ್ಟಿ, ಕೋರಿಸುಕ್ಕ, ಕೋರಿ ಪುಳಿಮುಂಚಿ, ಅಂಜಲ್ – ಹೀಗೆ ಕರಾವಳಿಯ ಖಾದ್ಯಗಳು ಅರಮನೆ ಮೈದಾನದಲ್ಲಿ ಘಮಘಮಿಸಿತು…

ಬೆಂಗಳೂರಿನ ಅರಮನೆ ಮೈದಾನ ಕರಾವಳಿಯ ಕಂಬಳಗದ್ದೆಯಾಗಿ ಪರಿಣಮಿಸಿತು..ಇದು ಬೆಂಗಳೂರು ಕಂಬಳ-ನಮ್ಮ ಕಂಬಳದ ಹೈಲೈಟ್ಸ್.. ಸಂಜೆ ನಡೆದ ಮುಖ್ಯಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದರು.ಕಂಬಳಕ್ಕೆ ಇಷ್ಟೊಂದು ಜನಸಾಗರ ಸೇರುತ್ತಾರೆಂದು ನಿರೀಕ್ಷಿಸಿರಲಿಲ್ಲ.ಪ್ರತೀ ವರ್ಷ ಕಂಬಳ ಮಾಡಿ’..ಇದು ಬೆಂಗಳೂರು ಕಂಬಳ-ನಮ್ಮ ಕಂಬಳ’ದಲ್ಲಿ ನೆರೆದ ಜನಸ್ತೋಮವನ್ನು ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಗರಿಸಿದರು. ಪುನೀತ್ ರಾಜ್‌ಕುಮಾರ್ ವೇದಿಕೆಯಲ್ಲಿ ನ25ರಂದು ಸಂಜೆ ನಡೆದಬೆಂಗಳೂರು ಕಂಬಳ-ನಮ್ಮ ಕಂಬಳ’ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು,ಕರಾವಳಿಯ ಕಂಬಳವನ್ನು ಬೆಂಗಳೂರಿಗೆ ತಂದ ಶಾಸಕ ಅಶೋಕ್ ರೈ ಮತ್ತು ತಂಡದ ಕಾರ್ಯ ಶ್ಲಾಘನೀಯ.ಇಷ್ಟೊಂದು ಜನರ ನಿರೀಕ್ಷೆ ಮಾಡಿರಲಿಲ್ಲ. ಜನಸಾಗರ ನೋಡಿ ಆಶ್ಚರ್ಯವಾಗಿದೆ’ ಎಂದರು.ಕರಾವಳಿಯ ಪುರಾತನ ಜಾನಪದ ಕಲೆ ಇದು.ಇದನ್ನು ಬೆಂಗಳೂರಿಗೆ ಪರಿಚಯಿಸುವ ಪ್ರಯತ್ನ ಶ್ಲಾಘನೀಯ.ಮಣ್ಣನ್ನು ಹದ ಮಾಡಿ ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಕಂಬಳವನ್ನು ಜನ ಮೈಗೂಡಿಸಿಕೊಂಡಿದ್ದು ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ ಎಂಬುದನ್ನು ಅರಿತಿದ್ದೇನೆ.ಭತ್ತ ಬೆಳೆಯುವ ರೈತರು ಜಾನುವಾರುಗಳ ಉತ್ಸವ ಮಾಡಿ ಕ್ರೀಡೆಯಲ್ಲಿ ತೊಡಗಿಸಿ ಖುಷಿಪಡುತ್ತಿದ್ದರು’ ಎಂದು ಕಂಬಳ ಕ್ರೀಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂರವರು ಕಂಬಳದ ಕೋಣಗಳ ಓಟಗಾರರ ಬಗ್ಗೆ ಶ್ಲಾಸಿದರು.


ಶ್ರೀಮಂತರ ಕ್ರೀಡೆಯಾ?:
ಕಂಬಳ ಕೋಣಗಳ ಸಾಕಾಣಿಕೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ಮಾತನಾಡಿದ ಸಿಎಂರವರು,ವರ್ಷಕ್ಕೆ 15 ಲಕ್ಷ ಖರ್ಚು ಮಾಡಿ ಕೋಣ ಸಾಕುವುದಾದರೆ ಇದು ಶ್ರೀಮಂತರ ಕ್ರೀಡೆಯಾ?’ ಎಂದು ನಕ್ಕು ಕೇಳಿದರು.

ಸುಗ್ರೀವಾಜ್ಞೆ ಹೊರಡಿಸಿದ್ದೆ:
ಕಂಬಳ ಗೂಳಿಕಾಳಗದಷ್ಟು ಕೆಟ್ಟ ಕ್ರೀಡೆ ಇದಲ್ಲ.ಹಿಂದೆ ಕಂಬಳಕ್ಕೆ ಅಡ್ಡಿ ಎದುರಾದಾಗ ಸುಗ್ರೀವಾe ಮಾಡಿ ಜನಸಾಮಾನ್ಯರ ಕ್ರೀಡೆಯಾದ ಕಂಬಳ ಉಳಿಸುವಲ್ಲಿ ಪ್ರಯತ್ನ ಮಾಡಿದ್ದೇವೆ’ ಎಂದು ಸಿದ್ದರಾಮಯ್ಯ ಇದೇ ವೇಳೆ ನೆನಪಿಸಿಕೊಂಡರು.

ಕರಾವಳಿ ಸಮುದಾಯ ಭವನಕ್ಕೆ ಅರ್ಜಿ ಹಾಕಿ:
ಬೆಂಗಳೂರಿನಲ್ಲಿ ಕರಾವಳಿ ಸಮುದಾಯ ಭವನ ನಿರ್ಮಾಣಕ್ಕಾಗಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಿಎಂ,ಬಿಡಿಎ ಸಿಎ ಸೈಟ್‌ಗೆ ಅರ್ಜಿ ಹಾಕಿ’ ಎಂದರು.
ರಾಜಧಾನಿ ಬೆಂಗಳೂರಲ್ಲಿ ನಡೆದ ಮೊದಲ ಕಂಬಳವೇ ಯಶಸ್ವಿಯಾಗಿದೆ.ಕ್ರೀಡೆ ಮುಂದೆಯೂ ಯಶಸ್ವಿಯಾಗಲಿದೆ ಎಂದು ಹಾರೈಸಿದ ಸಿಎಂರವರು, ಪ್ರತೀ ವರ್ಷ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿ.ಆ ಮೂಲಕ ಬೆಂಗಳೂರಿಗರಿಗೂ ಮನೋರಂಜನೆ ದೊರೆಯುವಂತಾಗಲಿ’ಎಂದು ಹೇಳಿ ‘ಜೈ ಕಂಬಳ’ ಎಂದು ಘೋಷಿಸಿ ತಮ್ಮ ಭಾಷಣಕ್ಕೆ ವಿರಾಮ ನೀಡಿದರು.


ಕುಡ್ಲಡುಲ್ಲೆನಾ, ಬೆಂಗ್ಲೂರುಡೆಲ್ಲೆನಾ.. ಯು.ಟಿ.ಖಾದರ್:
ಸಭಾ ಕಾರ್ಯಕ್ರಮದಲ್ಲಿ ನೆರೆದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್‌ರವರು,ದ.ಕ.ಜಿಲ್ಲೆಯ ಸಂಸ್ಕೃತಿಯ ಎರಡು ಕಣ್ಣುಗಳಾದ ಕಂಬಳ ಮತ್ತು ಯಕ್ಷಗಾನ ಜೀವಂತವಾಗಿರಿಸುವಲ್ಲಿ ಕರಾವಳಿಯ ಹಿರಿಯರ ಶ್ರಮವಿದೆ.ಬೆಂಗಳೂರು ಕಂಬಳದ ವ್ಯವಸ್ಥೆ ಮತ್ತು ಇಲ್ಲಿನ ವಾತಾವರಣ ನೋಡಿ, ಕುಡ್ಲಡುಲ್ಲೆನಾ, ಬೆಂಗ್ಲೂರುಡೆಲ್ಲೆನಾ.. ಆತ್ಂಡ್’ ಎಂದು ಉದ್ಗರಿಸಿದರು.ಈ ಸಂಸ್ಕೃತಿ ಬೆಳೆಯಬೇಕು.ಸಂಘಟಕರ ಶ್ರಮ ಮೆಚ್ಚಬೇಕು.ಕರಾವಳಿಯ ಸಂಸ್ಕೃತಿಯನ್ನು ರಾಜಧಾನಿಗೆ ತರುವ ಮೂಲಕ ಸಂಸ್ಕೃತಿ ರಾಷ್ಟ್ರವ್ಯಾಪಿ ಪಸರಿಸಿದೆ. ಈ ಮೂಲಕ ದ.ಕ. ಉಡುಪಿ ಜಿಲ್ಲೆಯವರನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಪ್ರತೀ ವರ್ಷ ಕಂಬಳ ಶಾಶ್ವತವಾಗಿ ನಡೆಯಬೇಕು’ ಎಂದು ಹೇಳಿ ಶುಭ ಹಾರೈಸಿದರು. ತುಳು ಭಾಷೆಯನ್ನು ರಾಜ್ಯದ ಎರಡನೇ ಅಽಕೃತ ಭಾಷೆಯನ್ನಾಗಿ ಮಾಡುವಲ್ಲಿ ಸಿಎಂ ಪ್ರಯತ್ನಿಸಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.


ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರರತ್ನ ಡಾ|ಎಂ.ಎನ್.ರಾಜೇಂದ್ರ ಕುಮಾರ್‌ರವರು ಮಾತನಾಡಿ,ಜಗತ್ತಿನಾದ್ಯಂತ ತುಳುನಾಡಿನ ಕ್ರೀಡೆ ಪಸರಿಸಲಿ.ತುಳುನಾಡಿನ ಜನತೆಯ ಪರವಾಗಿ ಅಶೋಕ್ ಕುಮಾರ್ ರೈ ಮತ್ತು ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿ ಶುಭಹಾರೈಸಿದರು.


ತುಳು ಭಾಷೆ ಹೆಚ್ಚುವರಿ ಭಾಷೆ-ಭರವಸೆಯಿದೆ-ಅಶೋಕ್ ಕುಮಾರ್ ರೈ:
ಪ್ರಾಸ್ತಾವಿಕ ನುಡಿಗಳನ್ನಾಡಿದ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈಯವರು ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯನ್ನಾಗಿ ಮಾಡಬೇಕೆಂದು ಎಲ್ಲಾ ತುಳುವರ ಪರವಾಗಿ ಮನವಿ ಇದೆ.ಮುಖ್ಯಮಂತ್ರಿಯವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ವೇಳೆ ಐದು ಇಲಾಖೆಗಳ ಎನ್‌ಒಸಿ ಬಂದಾಗ ತುಳುವಿಗೆ ಮಾನ್ಯತೆ ಸಿಗಲಿದೆ ಎಂದಿದ್ದಾರೆ.ಈ ಬಗ್ಗೆ ಅವರು ಸತತ ಪ್ರಯತ್ನ ಮಾಡಿ ತುಳುವರಿಗೆ ಮನ್ನಣೆ ಒದಗಿಸಿಕೊಡುವ ಕೆಲಸ ಮಾಡಲಿದ್ದಾರೆ ಎನ್ನುವ ಭರವಸೆ ಇದೆ ಎಂದರು.


ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳ ಸಮಿತಿಯ ಗೌರವಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರು ಮಾತನಾಡಿ,`ತುಳುನಾಡಿನಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ.ಕರಾವಳಿಯ ಬುದ್ದಿವಂತರು ಮಾತ್ರವಲ್ಲ.ನಾವು ಸಾಧಕರು ಎಂಬುದನ್ನು ಕಂಬಳ ಆಯೋಜನೆಯ ಮೂಲಕ ಸಾಬೀತಾಗಿದೆ’ ಎಂದರು.
ಅನಿವಾಸಿ ಉದ್ಯಮಿ ಡಾ|ಬಿ.ಆರ್. ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಮಾತನಾಡಿ ಕಂಬಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಎಂ.ಲಮಾಣಿ, ವಿಧಾನಪರಿಷತ್ ಸದಸ್ಯ ಡಾ|ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಕಂಬಳದ ಪ್ರಾಯೋಜಕರಾದ ಉದಯ್ ಶೆಟ್ಟಿ ಮುನಿಯಾಲು, ಆಭರಣ ಜ್ಯುವೆಲ್ಲರ್ಸ್‌ನ ಮಧುಕರ್ ಪ್ರತಾಪ್,ಬೆಂಗಳೂರು ಕಂಬಳ ಸಮಿತಿ ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ, ಕಾವು ಹೇಮನಾಥ್ ಶೆಟ್ಟಿ ಕಾವು, ಅನಿತಾ ಹೇಮನಾಥ ಶೆಟ್ಟಿ, ಪ್ರಿಯಾಂಕಾ ಉಪೇಂದ್ರ, ಉಮೇಶ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ವಿಠಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ವಂದಿಸಿದರು.

ತುಳು ಹೆಚ್ಚುವರಿ ಭಾಷೆಯಾಗಿ ಪರಿಗಣನೆಗೆ ಪ್ರಯತ್ನ
ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಬೇಕೆಂಬ ಮನವಿಯನ್ನು ಸ್ವೀಕರಿಸಿದ ಸಿಎಂ ಸಿದ್ಧರಾಮಯ್ಯ ಅವರು, ಶಾಸಕ ಅಶೋಕ್ ಕುಮಾರ್ ರೈಯವರು ಸದನದಲ್ಲಿ ಈ ವಿಚಾರ ಪ್ರಶ್ನೆ ಮಾಡಿದ್ದ ವೇಳೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅದಕ್ಕೆ ಉತ್ತರ ನೀಡಿದ್ದಾರೆ.ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಸಚಿವರ ಜೊತೆ ಮಾತನಾಡಿ ಈ ಬಗ್ಗೆ ಪ್ರಯತ್ನ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.ನಿಮ್ಮ ಕರಾವಳಿಯವರೇ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು.ಹಿಂದಿನವರು ಇದನ್ನು ಮಾಡಬೇಕಿತ್ತು.ಅವರು ಮಾಡಿಲ್ಲ.ನಾವು ಪ್ರಯತ್ನ ಮಾಡಲಿದ್ದೇವೆ’ ಎಂದು ಸಿಎಂ ಹೇಳಿದರು.ಉಡುಪಿ, ದ.ಕ.ಜಿಲ್ಲೆಯವರು ಎಲ್ಲಿದ್ದರೂ ತುಳು ಮಾತನಾಡಿಕೊಳ್ಳುತ್ತಾರೆ.ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿಯವರು ದುಬೈನಲ್ಲಿದ್ದರೂ ಕರಾವಳಿಗರು ಸಿಕ್ಕರೆ ತುಳುವಿನಲ್ಲಿಯೇ ಮಾತನಾಡುತ್ತಾರೆ.ಕೆಲವೊಮ್ಮೆ ತುಳುವ ಭಾಷಿಗರ ಮಧ್ಯೆ ನಾವು ಸಿಲುಕಿಕೊಳ್ಳುತ್ತೇವೆ.ಅಷ್ಟೊಂದು ತಮ್ಮ ಮಾತೃಭಾಷೆಯ ಬಗ್ಗೆ ಅವರು ಅಭಿಮಾನ ತೋರುತ್ತಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಕಂಬಳ-ನಮ್ಮ ಕಂಬಳ’ ಸುದ್ದಿ’ ವಿಶೇಷ ಸಂಚಿಕೆ ಬಿಡುಗಡೆ
ಸುದ್ದಿ ಬಿಡುಗಡೆ ಹೊರತಂದಿರುವ `ಬೆಂಗಳೂರು ಕಂಬಳ-ನಮ್ಮ ಕಂಬಳ’ ವಿಶೇಷ ಸಂಚಿಕೆಯನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಅಶ್ವಿನಿ ಪುನೀತ್‌ರಾಜ್ ಕುಮಾರ್, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ,ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಗುರುಕಿರಣ್, ಕ್ವಾಲಿಟಿ ಸದಾನಂದ ಶೆಟ್ಟಿ ಎಂಎಲ್ಸಿ ಭಾರತಿ ಶೆಟ್ಟಿ ಮತ್ತು ಕಂಬಳ ಸಮಿತಿ ಪದಾಧಿಕಾರಿಗಳು, ಸುಮಾ ಅಶೋಕ್ ಕುಮಾರ್ ರೈ, ಡ್ಯಾಶ್ ಮಾರ್ಕೆಟಿಂಗ್‌ನ ನಿಹಾಲ್ ರೈ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು.ಸುದ್ದಿ ಬಿಡುಗಡೆ ಸಿಇಒಗಳಾದ ಸೃಜನ್ ಊರುಬೈಲು, ಸಿಂಚನಾ ಊರುಬೈಲು ಹಾಗೂ ಸಿಬ್ಬಂದಿಗಳು ಈವೇಳೆ ಹಾಜರಿದ್ದರು.

LEAVE A REPLY

Please enter your comment!
Please enter your name here