2014ರಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಯಶಸ್ಸು ಕಂಡ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಕ್ರೀಡಾಕೂಟ

0

ಡಿ.1ಕ್ಕೆ ಕ್ರೀಡಾಜ್ಯೋತಿ ಉದ್ಘಾಟನೆ
ಡಿ.2ಕ್ಕೆ ಉದ್ಘಾಟನಾ ಸಮಾರಂಭ
ಡಿ.3,4ಕ್ಕೆ ಕ್ರೀಡಾಕೂಟ‘ಕ್ರೀಡಾ ಕಾರಂಜಿ’

ಪುತ್ತೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಕ್ರೀಡಾಕೂಟ-ಕಾವು ಹೇಮನಾಥ ಶೆಟ್ಟಿ
200ಕ್ಕೂ ಮಿಕ್ಕಿ ನಿರ್ಣಾಯಕರ ತಂಡ -ಬಿಇಒ ಲೋಕೇಶ್ ಎಸ್. ಆರ್
ಆಯಾ ಊರಿಗೆ ಸಂಬಂಧಿಸಿದ ಆಹಾರ -ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ

ಬಾಲಕ-ಬಾಲಕಿಯರ ವಿಭಾಗದಲ್ಲಿ ತಲಾ 17 ಸ್ಪರ್ಧೆಗಳು-ದೈ.ಶಿ. ಪರಿವೀಕ್ಷಣಾಧಿಕಾರಿ ಸುಂದರಗೌಡ

ಪುತ್ತೂರು: 2014ರ ನವೆಂಬರ್ ತಿಂಗಳಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನೇತೃತ್ವದಲ್ಲಿ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟ ಯಶಸ್ವಿಯಾದ ಬಳಿಕ ಅದೇ ಕ್ರೀಡಾಂಗಣದಲ್ಲಿ ರಾಮಕೃಷ್ಣ ಪ್ರೌಢ ಶಾಲೆಯ ನೇತೃತ್ವದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟ ಡಿ.1ರಿಂದ 4ರ ತನಕ ಜರುಗಲಿದೆ.


ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಕ್ರೀಡಾಕೂಟ ಸಮಿತಿಯನ್ನು ರಚಿಸಲಾಗಿದೆ.ಕಾರ್ಯಾಧ್ಯಕ್ಷರಾಗಿ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಕ್ರೀಡಾಕೂಟದ ಸಿದ್ಧತೆ, ವ್ಯವಸ್ಥೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಸಹಾಯಕ ಆಯುಕ್ತ ಗಿರೀಶ್ ನಂದನ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕರು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರ ಸಹಕಾರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.


ಪುತ್ತೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಕ್ರೀಡಾಕೂಟ- ಹೇಮನಾಥ ಶೆಟ್ಟಿ:
ದ.ಕ.ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ ಮಂಗಳೂರು, ಪುತ್ತೂರು ಉಪವಿಭಾಗ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿ ಪುತ್ತೂರು ಇವರ ಸಹಯೋಗದೊಂದಿಗೆ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ನೇತೃತ್ವದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವು ‘ಕಾರಂತರ ಕರ್ಮಭೂಮಿಯಲ್ಲಿ ಕ್ರೀಡಾ ಕಾರಂಜಿ’ ಎನ್ನುವ ಹೆಸರಿನೊಂದಿಗೆ ಸಂಪನ್ನಗೊಳ್ಳಲಿದೆ.ಕ್ರೀಡಾಕೂಟಕ್ಕೆ ಈಗಾಗಲೇ ಭರದ ಸಿದ್ದತೆಗಳು ನಡೆಯುತ್ತಿವೆ ಎಂದು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ, ಕ್ರೀಡಾಕೂಟದ ಕಾರ್ಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು, ಎಲ್ಲಾ ಶಿಕ್ಷಕರನ್ನು ಸೇರಿಸಿಕೊಂಡು ಶಿಕ್ಷಣ ಇಲಾಖೆ ಪೂರ್ವಸಿದ್ಧತೆ ನಡೆಸುತ್ತಿದೆ.ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರು.ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ನೆನೆಪಿಸಿಕೊಳ್ಳುವ ಉದ್ದೇಶದಿಂದ ಕ್ರೀಡಾಕೂಟವು ‘ಕಾರಂತರ ಕರ್ಮಭೂಮಿಯಲ್ಲಿ ಕ್ರೀಡಾ ಕಾರಂಜಿ’ ಎನ್ನುವ ಹೆಸರಲ್ಲಿ ನಡೆಯಲಿದೆ.ಈಗಾಗಲೇ ಕ್ರೀಡಾಕೂಟದ ಸಿದ್ದತೆಗಾಗಿ ಪೂರ್ವಭಾವಿಯಾಗಿ 10ರಿಂದ 15 ಸಭೆಗಳನ್ನು ಬೇರೆ ಬೇರೆ ವಿಭಾಗದಲ್ಲಿ ಮಾಡಿದ್ದೇವೆ.ರಾಜ್ಯದ 36 ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ 2 ಕ್ರೀಡಾನಿಲಯದಿಂದ ಸೇರಿ ಒಟ್ಟು 38 ಭಾಗಗಳಿಂದ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.ಕ್ರೀಡಾಳುಗಳಿಗೆ ಊಟ, ವಸತಿ ಮತ್ತು ಇತರೆ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮಕೈಗೊಳ್ಳಲಾಗುವುದು.ಈ ನಿಟ್ಟಿನಲ್ಲಿ ಈಗಾಗಲೇ ಸುಮಾರು 2 ಸಾವಿರ ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ ಎಂದು ಹೇಮನಾಥ ಶೆಟ್ಟಿ ಹೇಳಿದರು.


ಡಿ.1ರಂದು ಕ್ರೀಡಾಜ್ಯೋತಿ ಮೆರವಣಿಗೆ:
ಡಿ.1ರಂದು ಕ್ರೀಡಾಜ್ಯೋತಿ ಮೆರವಣಿಗೆ ನಡೆಯಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಚಾಲನೆ ಪಡೆದುಕೊಂಡು ಕ್ಷೇತ್ರಾದ್ಯಂತ ಉಪ್ಪಿನಂಗಡಿ, ಆಲಂಕಾರು, ಕಡಬ ತಾಲೂಕು ಸೇರಿದಂತೆ ಹಲವು ಕಡೆ ಕ್ರೀಡಾ ಜ್ಯೋತಿ ಸಾಗಲಿದೆ.
ಡಿ.2ರಂದು ಸಂಜೆ ದರ್ಬೆಯಲ್ಲಿ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಲಾಗುವುದು.ಅಲ್ಲಿಂದ ಜ್ಯೋತಿಯು ಪುತ್ತೂರಿನ ಮುಖ್ಯ ರಸ್ತೆಯ ಮೂಲಕ ಕೊಂಬೆಟ್ಟು ತಾಲೂಕು ಕ್ರೀಡಾಂಗಣವನ್ನು ಪ್ರವೇಶಿಸಲಿದೆ.ಈ ಮೆರವಣಿಗೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು, ಎಲ್ಲಾ ಶಾಸಕರು, ರಾಜ್ಯಮಟ್ಟದ ಸಚಿವರು, ಎಲ್ಲಾ ಅಧಿಕಾರಿ ವರ್ಗದವರು ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ತರಬೇತುದಾರರು, ತೀರ್ಪುಗಾರರು, ಕ್ರೀಡಾಭಿಮಾನಿಗಳು, ಕ್ರೀಡಾಪೋಷಕರು ಮತ್ತು ಶಾಲಾ ವಿದ್ಯಾರ್ಥಿಗಳಲ್ಲದೆ ಶಿಲ್ಪ ಗೊಂಬೆ ಬಳಗ, ಚೆಂಡೆ ವಾದ್ಯ, ಬ್ಯಾಂಡ್ ಸೆಟ್‌ಗಳ ಮೂಲಕ ಭವ್ಯ ಮೆರವಣಿಗೆ ನಡೆದು ಕ್ರೀಡಾಜ್ಯೋತಿ ಕ್ರೀಡಾಂಗಣವನ್ನು ಪ್ರವೇಶ ಮಾಡಲಿದೆ.12 ಜೊತೆ ಬ್ಯಾಂಡ್ ಸೆಟ್ ಇರಲಿದೆ.ಸಂಜೆ 4.30ಕ್ಕೆ ಕ್ರೀಡಾಕೂಟದ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.ಕ್ರೀಡಾಕೂಟವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕ್ರೀಡಾ ಸಚಿವರು, ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಜನಪ್ರತಿನಿಽಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಡಿ.3 ಮತ್ತು 4ರಂದು ಬೆಳಗ್ಗಿನಿಂದಲೇ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಲಿವೆ.ಡಿ.4ರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.ಈ ಸಂದರ್ಭ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.

34 ಸ್ಪರ್ಧೆಗಳು-2000 ಕ್ರೀಡಾಪಟುಗಳು ಭಾಗಿ:
ರಾಜ್ಯಮಟ್ಟದ ಈ ಕ್ರೀಡಾಕೂಟದಲ್ಲಿ ರಾಜ್ಯದ 35 ಜಿಲ್ಲೆಗಳು ಮತ್ತು ಎರಡು ಕ್ರೀಡಾಶಾಲೆಗಳ 38 ಕಡೆಗಳಿಂದ ಆಗಮಿಸುವ, ಈಗಾಗಲೇ ನೋಂದಾವಣೆ ಮಾಡಿರುವ 2 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.ಪ್ರತೀ ಜಿಲ್ಲೆಯಿಂದ 70 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಜೊತೆಗೆ ಶಿಕ್ಷಕರು ಕೂಡ ಭಾಗವಹಿಸಲಿದ್ದಾರೆ.ವಸತಿ, ಸಾರಿಗೆ ವ್ಯವಸ್ಥೆಗೆ ಪೂರಕವಾಗಿ ಸಮಿತಿಗಳನ್ನು ರಚಿಸಿಕೊಂಡು ಸಭೆ ನಡೆಸಲಾಗಿದೆ.ಕ್ರೀಡಾಳು ವಿದ್ಯಾರ್ಥಿಗಳಿಗೆ ಸರ್ವ ವ್ಯವಸ್ಥೆಯನ್ನು ಮಾಡಲಾಗಿದೆ.ವಿವಿಧ ಜಿಲ್ಲೆಗಳ ಮಕ್ಕಳಿಗೆ ಬಾಲಕ ಬಾಲಕಿಯರಿಗೆ ಪ್ರತ್ಯೇಕವಾಗಿ ಪುತ್ತೂರು ಆಸುಪಾಸಿನ ವಿವಿಧ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.ಅಲ್ಲಿಂದ ಕರೆತರಲು, ಕೊಂಡೊಯ್ಯಲು 30 ಬಸ್‌ಗಳ ವ್ಯವಸ್ಥೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ.ಎಲ್ಲಾ ವಸತಿಯಲ್ಲೂ ವೈದ್ಯಕೀಯ, ಪೊಲೀಸ್, ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಮನಾಥ್ ಶೆಟ್ಟಿ ಅವರು ಹೇಳಿದರು.


ಆಯಾ ಊರಿಗೆ ಸಂಬಂಧಿಸಿ ಆಹಾರ ತಯಾರಿಕೆ:
ಆಹಾರ ಸಮಿತಿ ಅಧ್ಯಕ್ಷರಾಗಿರುವ ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆಯವರು ಮಾತನಾಡಿ ಕ್ರೀಡಾಕೂಟದಲ್ಲಿ ತಾಲೂಕಿನ ಎಲ್ಲಾ ಶಾಲೆಗಳು, ಮಕ್ಕಳು ಭಾಗವಹಿಸಬೇಕೆಂಬ ನಿಟ್ಟಿನಲ್ಲಿ ಹಸಿರುವಾಣಿ ಹೊರೆಕಾಣಿಕೆ ಸಲ್ಲಿಕೆಯ ಪರಿಕಲ್ಪನೆ ರೂಪಿಸಲಾಗಿದೆ.ತಾಲೂಕಿನ ಹಾಗೂ ಹೊರತಾಲೂಕಿನ ಶಾಲೆಗಳಿಂದ ಹಸಿರುವಾಣಿ ಸಂಗ್ರಹ ನಡೆಯಲಿದೆ.ಕ್ರೀಡಾಪಟುಗಳಿಗೆ ಊಟೋಪಚಾರದ ವ್ಯವಸ್ಥೆಗಾಗಿ ಈ ಹಸಿರುವಾಣಿ ಯೋಜನೆ ಹಮ್ಮಿಕೊಳ್ಳಲಾಗಿದೆ.ಕ್ರೀಡಾಜ್ಯೋತಿಯು ಸಾಗುವ ಜೊತೆಗೆ ಹೊರೆಕಾಣಿಕೆ ಸಂಗ್ರಹ ಕೂಡ ನಡೆಯಲಿದೆ.ಹಸಿರುವಾಣಿ ಸಲ್ಲಿಕೆ ಮಾಡುವವರು ಅಕ್ಕಿ, ಸುಲಿದ ತೆಂಗಿನಕಾಯಿ, ಬಾಳೆಗೊನೆ, ವಿವಿಧ ತರಕಾರಿಗಳು, ಬೆಲ್ಲ, ಸಕ್ಕರೆ, ಎಣ್ಣೆ, ಕೃಷಿ ಉತ್ಪನ್ನಗಳು, ಹಾಳೆ ತಟ್ಟೆ, ಅವಲಕ್ಕಿ, ಗೋಽ ರವೆ, ಹೆಸರುಬೇಳೆ, ಪಚ್ಚೆ ಹೆಸರು, ತೊಗರಿ ಬೇಳೆ, ಕಾಳುಗಳು, ಒಣ ಮೆಣಸು, ತುಪ್ಪ ಇತ್ಯಾದಿಗಳನ್ನು ನೀಡಬಹುದಾಗಿದೆ.ಪ್ರತಿ ದಿನ ಊಟೋಪಚಾರಗಳಿವೆ.ಡಿ.2ರಂದು ಬೆಳಿಗ್ಗೆ ಗಂಟೆ 7.30ರಿಂದ 10 ಗಂಟೆಯ ತನಕ ಉಪಹಾರ, ಮಧ್ಯಾಹ್ನ ಗಂಟೆ 12.30ರಿಂದ 2.30ರ ತನಕ ಊಟೋಪಚಾರ, ಸಂಜೆ ಗಂಟೆ 5 ಗಂಟೆಗೆ ಮೆರವಣಿಗೆ ನಂತರ ಲಘು ಉಪಹಾರ, ರಾತ್ರಿ ಗಂಟೆ 7.30 ರಿಂದ 10 ಗಂಟೆಯ ತನಕ ಊಟ. ಡಿ.3ರಂದು 6 ಗಂಟೆ ಸಂಜೆ ರಾತ್ರಿ ಗಂಟೆ 10ರ ತನಕ ಉಟ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಡಿ.4ರಂದು ಸಂಜೆ ವೇಳೆ ಕ್ರೀಡಾಪಟುಗಳು ತೆರಳುವ ಹಿನ್ನೆಲೆಯಲ್ಲಿ ರಾತ್ರಿಯ ಸಮಯ 1 ಸಾವಿರ ಮಂದಿಗೆ ಉಪಹಾರವನ್ನು ಪಾರ್ಸೆಲ್ ಪೊಟ್ಟಣ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.


ಆಯಾ ಜಿಲ್ಲೆಯವರಿಗೆ ಆಯಾ ಆಹಾರಗಳು:
ರಾಜ್ಯದ ವಿವಿಧ ಜಿಲ್ಲೆಗಳ ಕ್ರೀಡಾಳುಗಳು ಭಾಗವಹಿಸುವ ಕಾರಣ ವಿವಿಧ ಬಗೆಯ ಆಹಾರದ ತಯಾರಿಕೆ ನಡೆಯಲಿದೆ.ರಾಗಿಮುದ್ದೆ,ಜೋಳದ ರೊಟ್ಟಿಯೂ ಆಹಾರದ ಪಟ್ಟಿಯಲ್ಲಿದೆ ಎಂದು ಕ್ರೀಡಾಕೂಟದ ಆಹಾರ ಸಮಿತಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಹೇಳಿದರು.

200ಕ್ಕೂ ಮಿಕ್ಕಿ ನಿರ್ಣಾಯಕರ ತಂಡ:
ಕ್ಷೇತ್ರ ಶಿಕ್ಷಣಾಧಿಕಾರಿ ಲೇಕೇಶ್ ಎಸ್ ಆರ್ ಮಾತನಾಡಿ ಒಟ್ಟು 2 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ,ಜೊತೆಗೆ ಶಿಕ್ಷಕರೂ ಬರಲಿದ್ದಾರೆ. ಕ್ರೀಡಾಳು ವಿದ್ಯಾರ್ಥಿಗಳಿಗೆ ಸರ್ವ ವ್ಯವಸ್ಥೆಯನ್ನು ಮಾಡಲಾಗಿದೆ.ವಿವಿಧ ಜಿಲ್ಲೆಗಳ ಮಕ್ಕಳಿಗೆ ವಿವಿಧ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.ಶಾಸಕರ ಸಂಪೂರ್ಣ ಸಹಕಾರ ಕಾರ್ಯಕ್ರಮಕ್ಕೆ ಇದೆ.17 ವಿವಿಧ ಕ್ರೀಡೆಗಳು ನಡೆಯಲಿದೆ. ಆರೋಗ್ಯ ಇಲಾಖೆ, ಪೊಲೀಸ್ ಮತ್ತು ನಗರಸಭೆ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ.ಕ್ರೀಡಾ ಕೂಟದ ಕುರಿತು ಅಧಿಕಾರಿಗಳಿಗೂ ಮಾಹಿತಿ ಕಾರ್ಯಾಗಾರ ಮಾಡಲಾಗಿದೆ.200ಕ್ಕೂ ಮಿಕ್ಕಿ ನಿರ್ಣಾಯಕರು ಭಾಗವಹಿಸಲಿದ್ದಾರೆ.ರಾಜ್ಯದ 36 ಜಿಲ್ಲೆಗಳ ಕ್ರೀಡಾಳುಗಳ ಪಥ ಸಂಚಲನ ನಡೆಯಲಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಜಯಲಕ್ಷ್ಮೀ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್ ಜೆ ಉಪಸ್ಥಿತರಿದ್ದರು.

ಕ್ರೀಡಾ ಜ್ಯೋತಿ ರಥದ ಜೊತೆ ಹಸಿರುವಾಣಿ ಸಂಗ್ರಹ
ಡಿ.1ರಂದು ಬೆಳಗ್ಗೆ 7.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಚಾಲನೆ ಪಡೆದುಕೊಳ್ಳುವ ಕ್ರೀಡಾಜ್ಯೋತಿಯು ಬೆಳಗ್ಗೆ 8.30ಕ್ಕೆ ಸುದಾನ ವಸತಿ ಶಾಲೆ, 9ಕ್ಕೆ ಸ.ಉ.ಹಿ.ಪಂ, ಶಾಲೆ ಹಾರಾಡಿ, 9.30ಕ್ಕೆ ಕೋಡಿಂಬಾಡಿ ಗ್ರಾಮ ಪಂಚಾಯತ್, 10.30ಕ್ಕೆ ಸ.ಮಾ.ಹಿ.ಪ್ರಾ.ಶಾಲೆ ಉಪ್ಪಿನಂಗಡಿ, 11ಕ್ಕೆ ಜುಮ್ಮಾ ಮಸೀದಿ ಆತೂರು,11.30ಕ್ಕೆ ದುರ್ಗಾಂಬಾ ಪ್ರೌಢಶಾಲೆ ಆಲಂಕಾರು ತಲುಪಲಿದೆ.ಅಪರಾಹ್ನ 1 ಗಂಟೆಗೆ ಸೈಂಟ್ ಆನ್ಸ್ ಪ್ರೌಢಶಾಲೆ ಕಡಬ, 2 ಗಂಟೆಗೆ ಪ್ರಗತಿ ಕಾಣಿಯೂರು, 3 ಗಂಟೆಗೆ ಸ.ಹಿ.ಪ್ರಾ.ಶಾಲೆ ಕುದ್ಮಾರು, 3.30ಕ್ಕೆ ವಿದ್ಯಾರಶ್ಮಿ ಸವಣೂರು, ಸಂಜೆ 4ಕ್ಕೆ ಸಾಂದೀಪನಿ ನರಿಮೊಗರು,4.30ಕ್ಕೆ ಸ.ಉ.ಹಿ.ಪ್ರಾ.ಶಾಲೆ ಮುಂಡೂರು, 5 ಗಂಟೆಗೆ ಕೆದಂಬಾಡಿ ಗ್ರಾಮ ಪಂಚಾಯತ್,5.30ಕ್ಕೆ ಕೆ.ಪಿ.ಎಸ್. ಕೆಯ್ಯೂರು ತಲುಪಲಿದೆ.ಅಲ್ಲಿಂದ ಡಿ.2ರಂದು ಪೂರ್ವಾಹ್ನ ಹೊರಡಲಿದ್ದು 8 ಗಂಟೆಗೆ ಕೆ.ಪಿ.ಎಸ್. ಕೆಯ್ಯೂರು, 9 ಗಂಟೆಗೆ ಸ.ಹಿ.ಪ್ರಾ.ಶಾಲೆ ಪೆರ್ಲಂಪಾಡಿ, 9.30ಕ್ಕೆ ಸ.ಮಾ.ಉ.ಪ್ರಾ.ಶಾಲೆ ಕಾವು, 10.30ಕ್ಕೆ ಹನುಮಗಿರಿ ಈಶ್ವರಮಂಗಲ, 11.30ಕ್ಕೆ ಸ.ಉ.ಹಿ.ಪ್ರಾ.ಶಾಲೆ ಬಡಗನ್ನೂರು, 12.30ಕ್ಕೆ ಗ್ರಾಮ ಪಂಚಾಯತ್ ಪಾಣಾಜೆಗೆ ತಲುಪಲಿದೆ.ಅಪರಾಹ್ನ 1.30ಕ್ಕೆ ಗ್ರಾಮ ಪಂಚಾಯತ್ ಬೆಟ್ಟಂಪಾಡಿ, 2 ಗಂಟೆಗೆ ಸ.ಹಿ.ಪ್ರಾ.ಶಾಲೆ ಇರ್ದೆ ಉಪ್ಪಳಿಗೆ, 2.30ಕ್ಕೆ ಸ.ಕಿ.ಪ್ರಾ. ಶಾಲೆ ಕೈಕಾರ, 3 ಗಂಟೆಗೆ ಗ್ರಾಮ ಪಂಚಾಯತ್ ಒಳಮೊಗ್ರು ತಲುಪಿ 3.30ಕ್ಕೆ ಪುತ್ತೂರು ದರ್ಬೆ ವೃತ್ತ ತಲುಪಲಿದೆ.ಕ್ರೀಡಾ ಜೋತಿ ರಥ ಹೋದ ಕಡೆ ಹಸಿರುವಾಣಿ ಸಂಗ್ರಹದ ವಾಹನವೂ ತೆರಳಲಿದೆ.ಶಾಲೆಗಳಿಂದ ಸಂಗ್ರಹವಾದ ಹಸಿರುವಾಣಿಯನ್ನು ವಾಹನಗಳಿಗೆ ಹಾಕುವ ಮೂಲಕ ಡಿ.2ರಂದು ಸಂಜೆ ಕ್ರೀಡಾ ಜ್ಯೋತಿಯ ಜೊತೆ ಹಸಿರುವಾಣಿ ಮೆರವಣಿಗೆಯೂ ನಡೆಯಲಿದೆ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು.

ರೂ.56 ಲಕ್ಷ ವೆಚ್ಚ
ರಾಜ್ಯಮಟ್ಟದ ಕ್ರೀಡಾಕೂಟ ಮಾಡಲು ನಾವು ಒಪ್ಪಿಕೊಂಡಾಗ ಮೊದಲು ವಿವೇಕಾನಂದ ಮತ್ತು ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ಮಾಡುವ ಚಿಂತನೆ ಮಾಡಿದ್ದೆವು.ಆದರೆ ನಮ್ಮದೇ ಕೊಂಬೆಟ್ಟು ತಾಲೂಕು ಕ್ರೀಡಾಂಗಣ ಇರುವಾಗ ಬೇರೆ ಯಾಕೆ ಎಂಬ ನಿಟ್ಟಿನಲ್ಲಿ ತಾಲೂಕು ಕ್ರೀಡಾಂಗಣದಲ್ಲೇ ಕ್ರೀಡಾಕೂಟ ಮಾಡುವ ನಿರ್ಣಯಕ್ಕೆ ಬಂದಿದ್ದೆವು.ಅದೇ ರೀತಿ ಕ್ರೀಡಾಕೂಟಕ್ಕೆ ಸರಕಾರದ ಮೂಲಕ ಶಿಕ್ಷಣ ಇಲಾಖೆಯಿಂದ ರೂ.1.70 ಲಕ್ಷ ಸಿಗುತ್ತದೆ.ಉಳಿದ ಹಣವನ್ನು ನಾವು ಹೊಂದಾಣಿಕೆ ಮಾಡಬೇಕು.ಈಗಾಗಲೇ ರೂ.20 ಲಕ್ಷ ಕ್ರೀಡಾಂಗಣದ ಕಾಮಗಾರಿಗೆ ತಗಲುತ್ತಿದ್ದು, ಅದಕ್ಕಾಗಿ ಶಾಸಕರು ಜಿ.ಪಂ, ತಾ.ಪಂ ಸುಮಾರು ರೂ.10 ಲಕ್ಷ ಅನುದಾನ ನೀಡುತ್ತಿದ್ದಾರೆ.ಇನ್ನೂ ರೂ.10 ಲಕ್ಷ ಕೊರತೆ ಇದೆ.ಈಗಾಗಲೇ ಕ್ರೀಡಾಂಗಣದಲ್ಲಿ ತಡೆಗೋಡೆ ಕಾಮಗಾರಿ ಮಾಡಲಾಗಿದೆ. ಚರಂಡಿ ವ್ಯವಸ್ಥೆ ಮಾಡಲಾಗಿದೆ.ಅಚ್ಚುಕಟ್ಟಾದ ವಿಸ್ತರಣೆ ಮಾಡಲಾಗಿದೆ.ನಮ್ಮಲ್ಲಿ ಸಿಂಥಟಿಕ್ ಟ್ರ‍್ಯಾಕ್ ಇಲ್ಲದಿದ್ದರೂ ಸಿಂಥಟಿಕ್ ಟ್ರ‍್ಯಾಕ್ ಮಾದರಿಯಲ್ಲೇ ನಿರ್ಮಾಣ ಮಾಡಲಾಗಿದೆ. ಟ್ರ‍್ಯಾಕ್‌ಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಮುಂದಿನ ದಿನ ಈ ಮೈದಾನ ಅತ್ಯಾಕರ್ಷಕ ಮೈದಾನವಾಗಿ ಮೂಡಿ ಬರಲಿದೆ
-ಹೇಮನಾಥ್ ಶೆಟ್ಟಿ ಕಾವು, ಕ್ರೀಡಾಕೂಟದ ಕಾರ್ಯಾಧ್ಯಕ್ಷ

ಪುತ್ತೂರಿನಿಂದ 10 ರಿಂದ15 ಕ್ರೀಡಾಪಟುಗಳು
ಕಳೆದ ವರ್ಷ ಮೈಸೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆದಿತ್ತು.ಈ ಬಾರಿ ಪುತ್ತೂರಿನಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ ಬಾಲಕರು ಮತ್ತು ಬಾಲಕಿಯರ ವಿಭಾಗದಲ್ಲಿ ತಲಾ 17ರಂತೆ ಒಟ್ಟು 34 ಕ್ರೀಡಾಸ್ಪರ್ಧೆಗಳು ನಡೆಯಲಿದೆ.ಬೆಳಗ್ಗೆ 6 ಗಂಟೆಯಿಂದಲೇ ಕ್ರೀಡಾ ಸ್ಪರ್ಧೆಗಳು ಆರಂಭಗೊಳ್ಳಲಿವೆ. ಪುತ್ತೂರಿನಿಂದ 10 ರಿಂದ 15 ಮಂದಿ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಮೊನ್ನೆ ಮೊನ್ನೆ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 6 ಸಮಗ್ರ ಚಾಂಪಿಯನ್ ದಕ್ಷಿಣ ಕನ್ನಡ ಜಿಲ್ಲೆಗೆ ಇದೆ.ಅದರಲ್ಲೂ 5 ಪುತ್ತೂರಿನವರು ಪಡೆದುಕೊಂಡಿದ್ದಾರೆ. ನಾಲ್ಕು ದಾಖಲೆಯನ್ನೂ ಪುತ್ತೂರಿನ ಮಕ್ಕಳು ಮಾಡಿದ್ದಾರೆ.ರಾಜ್ಯಮಟ್ಟದ ಕ್ರೀಡೆಯಲ್ಲೂ ಮಕ್ಕಳು ದಾಖಲೆ ಮಾಡಲಿದ್ದಾರೆ ಎಂಬ ಭರವಸೆ ಇದೆ. ಪ್ರಥಮ/ ದ್ಬಿತೀಯ ಸ್ಥಾನಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಹೇಳಿದರು.

LEAVE A REPLY

Please enter your comment!
Please enter your name here