




ರಸ್ತೆಗಾಗಿ ಚುನಾವಣೆ ಬಹಿಷ್ಕಾರ ಮಾಡಿದ್ದ ಕಲ್ಲಂದಡ್ಕಕ್ಕೆ ಭರ್ಜರಿ ಅನುದಾನ: ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಹಲವಾರು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಕಬಕ ಗ್ರಾಮದ ಕಲ್ಲಂದಡ್ಕಕ್ಕೆ ರೂ.20 ಲಕ್ಷ ಅನುದಾನವನ್ನು ನೀಡಿದ್ದೇನೆ, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಚುನಾವಣಾ ಬಹಿಷ್ಕಾರ ಮಾಡುವುದಾಗಿ ನೀವು ಹೇಳಿದ್ದೀರಿ ನಾನು ಭರವಸೆ ಕೊಟ್ಟಿದ್ದೆ ಅದನ್ನು ಈಡೇರಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.




ಕಲ್ಲಂದಡ್ಕದಲ್ಲಿ ರೂ.20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಅಶೋಕ್ ರೈ, ಚುನಾವಣೆ ಸಂದರ್ಭದಲ್ಲಿ ನಾನು ಸುಳ್ಳು ಭರವಸೆಗಳನ್ನು ನೀಡಿ ಹೋಗಿಲ್ಲ, ಕೊಟ್ಟ ಮಾತಿನಂತೆ ಇಲ್ಲಿಗೆ ಬಂದು ನಿಮಗೆ ರಸ್ತೆ ಮಾಡಿಸಿಕೊಟ್ಟಿದ್ದೇನೆ ಮುಂದಿನ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಶಾಸಕರು ಮನವಿ ಮಾಡಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕಲ್ಲಂದಡ್ಕದಲ್ಲಿ ರಸ್ತೆ ಇಲ್ಲದೆ ಹಲವಾರು ವರ್ಷಗಳಿಂದ ಜನತೆ ತೊಂದರೆಯಲ್ಲಿದ್ದರು. ರಾಜಕೀಯ ದುರುದ್ದೇಶದಿಂದ ಇಲ್ಲಿ ರಸ್ತೆ ಕಾಮಗಾರಿ ಮಾಡಿರಲಿಲ್ಲ. ಚುನಾವಣೆ ಬಹಿಷ್ಕಾರ ಮಾಡುವುದಾಗಿ ಘೋಷಣೆ ಮಾಡಿದ್ದ ಇಲ್ಲಿನ ಸುಮಾರು 40 ಕುಟುಂಬಗಳಿಗೆ ಈಗ ಸಂತಸವಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು ವಿರೋಧ ಪಕ್ಷದವರಿಗೆ ಸಹಿಸಲು ಸಾಧ್ಯವಾಗದೆ ಕಿರುಚಾಡುತ್ತಿದ್ದಾರೆ ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಮಾತನಾಡಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ಅರಂಭವಾಗಿದೆ. ಜನರ ನಿರೀಕ್ಷೆಗೂ ಮೀರಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ಹಂಚಿಕೆ ಮಾಡುವ ಮೂಲಕ ರಾಜಧರ್ಮ ಪಾಲನೆ ಮಡುತ್ತಿರುವ ಶಾಸಕರಿಗೆ ಅಭಿನಂದಿಸುವುದಾಗಿ ಹೇಳಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಹಿಂದುಳಿದ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.












