ಪುತ್ತೂರು:ನಾಥ ಪಂಥೀಯ ಜೋಗಿ ಸಮಾಜ ಸುಧಾರಕ ಸಂಘ ಪುತ್ತೂರು ಇದರ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ಜ.21ರಂದು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.
ತಂತ್ರಿ ಕೆ. ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆಯಲಿರುವ ಪೂಜಾ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಪ್ರಾರ್ಥನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದ ತಂತ್ರಿ ಕೆ. ಸುಬ್ರಹ್ಮಣ್ಯ ಬಳ್ಳಕ್ಕುರಾಯರವರು ಮಾತನಾಡಿ, ಸತ್ಯನಾರಾಯಣ ಪೂಜೆಯು ಎಲ್ಲ ಮನೆಯಲ್ಲಿ ನಡೆಯುತ್ತದೆ. ಒಂದು ಸಮುದಾಯ ಒಟ್ಟು ಸೇರಿ ಮಾಡಿದಾಗ ಅದಕ್ಕೆ ವಿಶೇಷ ಬಲ ಬರುತ್ತದೆ. ಮನೆ, ಕುಟುಂಬ, ಸಮಾಜ ಉಳಿಯಬೇಕಾದರೆ ಹೊಂದಾಣಿಕೆ ಬಹುಮುಖ್ಯ. ಎಲ್ಲರೂ ಹೊಂದಾಣಿಕ, ಒಗ್ಗಟ್ಟಿನಿಂದ ಮುಂದುವರಿದಾಗ ಸಮಾಜ ಬೆಳೆಯಲು ಸಹಕರಿಯಾಗಲಿದೆ. ಇದಕ್ಕಾಗಿ ಸಂಘಟನೆ ಬಹುಮುಖ್ಯವಾಗಿದೆ. ಎಲ್ಲರ ಯೋಚನೆಗಳೂ ಒಂದಾಗಿ ರಾಷ್ಟ್ರದರ್ಮ ಬರಬೇಕು. ಸಮಾಜವನ್ನು ಒಟ್ಟು ಸೇರಿಸಲು ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿ. ಪ್ರತಿಯೊಬ್ಬರೂ ಸ್ವ ಸಾಮರ್ಥ್ಯದಿಂದ ತೊಡಗಿಸಿಕೊಂಡಾಗ ಸಮಾಜ, ರಾಷ್ಟ್ರ ಬೆಳಗಲು ಸಾಧ್ಯ ಎಂದರು.
ವಿಟ್ಲ ಯೋಗೀಶ್ವರ ಮಠದ ಶ್ರದ್ದಾನಾಥ ಸ್ವಾಮಿಜಿ ಮಾತನಾಡಿ, ನಾಥ ಪಂಥದ ಗುರು ಪರಂಪರೆಯಲ್ಲಿ ಬೆಳೆದು ಬಂದ ಜೋಗಿ ಸಮಾಜವು ಇಂದು ಸಂಘದ ಮೂಲಕ ಸಂಘಟಿತವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದೆ. ಜೋಗಿ ಸಮಾಜ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಾಧಾನ್ಯತೆ ಬಂದಿದೆ. ನಮ್ಮ ಸಮಾಜವು ಗುಣಾತ್ಮಕವಾಗಿ ಬೆಳೆಯಬೇಕು. ಸಂಘಟನೆಯಿಂದ ಸಮಾಜಕ್ಕೆ ಶಕ್ತಿ ಸಂಚಯನವಾಗುತ್ತದೆ. ನಾಥ ಪಂಥದ ಭಾಗವಾಗಿರುವ ಜೋಗಿ ಬಂಧುಗಳು ತಮ್ಮ ಸಮಾಜದ ಆಚಾರ ವಿಚಾರಗಳನ್ನು ತಿಳಿಯಬೇಕೆಂದು ಹೇಳಿದ ಅವರು ಮನೆಯಲ್ಲಿ ಶಾಂತಿ, ನೆಮ್ಮದಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಮೋನಪ್ಪ ಪುರುಷ ಮಾತನಾಡಿ, ಸಂಘಟನೆ ಬೆಳೆದು ಬಂದ ದಾರಿ, ಸಂಘಟನೆ ಮಹತ್ವ ಹಾಗೂ ಉದ್ದೇಶಗಳನ್ನು ತಿಳಿಸಿ ಪ್ರತಿಯೊಬ್ಬರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು.
ಗೌರವಾಧ್ಯಕ್ಷ ದಯಾನಂದ, ಸಂಚಾಲಕ ಉಮೇಶ್ ಇಂದಿರನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ವಿಜಯ ಸ್ವಾಗತಿಸಿದರು. ಅಧ್ಯಕ್ಷ ನವೀನ ದೋಳ್ತಟ್ಟ ವಂದಿಸಿದರು. ಶಿಕ್ಷಕ ದೇವಪ್ಪ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು.