ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ ಸಂಭ್ರಮ

0

ಪುಣಚ : ಅಯೋಧ್ಯೆ ಶ್ರೀ ರಾಮ ಜನ್ಮ‌ ಭೂಮಿಯಲ್ಲಿ ನಡೆಸಿದ ಶ್ರೀ ರಾಮ ಮಂದಿರ ಲೋಕಾರ್ಪಣೆ ಹಾಗೂ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶ್ರೀ ರಾಮೋತ್ಸವ ಕಾರ್ಯಕ್ರಮ ಜ.22ರಂದು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ‌ ಹಿರಿಯ ಕರಸೇವಕ ಪದವು ನಾರಾಯಣ ನಾಯಕ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಪುಣಚ ಗೀತ ಜ್ಞಾನ ಯಜ್ಞ ಘಟಕ ತಂಡದವರಿಂದ ಮೂಲ ರಾಮಾಯಣ ಪಾರಾಯಣ, ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಮಹಿಷಮರ್ದಿನಿ ಸಿಂಗಾರಿ ಮೇಳ ತಂಡದವರಿಂದ ಚೆಂಡೆ ಪ್ರದರ್ಶನ, ರಾಮಾಯಣದ ವೇಷ ಭೂಷಣ ಧರಿಸಿದ ಮಕ್ಕಳಿಂದ ಆಕರ್ಷಕ ಚೆಂಡೆ ನಾದನದೊಂದಿಗೆ ದೇವಸ್ಥಾನದ ಸುತ್ತ ಸಂಚಲನ, ರಾಮಾಯಣಕ್ಕೆ ಸಂಬಂಧಿಸಿದ ರಸಪ್ರಶ್ನೆ, ರಾಮ ತಾರಕ ಮಂತ್ರ ಜಪ ನಡೆಯಿತು.


ಸಭಾ ಕಾರ್ಯಕ್ರಮ : ಅಯೋಧ್ಯಾ ಹೋರಾಟ ಇತಿಹಾಸದ ಮೆಲುಕು ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯವಾಹಕ ಹರಿಕೃಷ್ಣ ಮಾತನಾಡಿ 30 ವರ್ಷಗಳ ಹಿಂದೆ ಕರ ಸೇವಕರು ಪ್ರಾಣವನ್ನೂ ಲೆಕ್ಕಿಸದೆ ಕಷ್ಟ,ನಷ್ಟ ಅನುಭವಿಸಿ ನಡೆಸಿದ ಹೋರಾಟದ ಫಲವಾಗಿ ಇಂದು ರಾಮಮಂದಿರ ನಿರ್ಮಾಣವಾಗಿ ರಾಮನ‌ ಪ್ರತಿಷ್ಠೆಯಾಗಿದೆ. ಇದು ಕೇವಲ ರಾಮಮಂದಿರ ಅಲ್ಲ ಇದು ರಾಷ್ಟ್ರ ಮಂದಿರ ಎನ್ನಬಹುದು. ನಮ್ಮ ಅಸ್ಮಿತೆಯನ್ನು ಮತ್ತೆ ಆ ಸ್ಥಾನದಲ್ಲಿ ಸ್ಥಾಪನೆ ಮಾಡಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ವ್ಯಸನ ಮುಕ್ತ, ಮಾಲಿನ್ಯ ಮುಕ್ತ, ಸಂಘರ್ಷ ಮುಕ್ತ ಸಂಸ್ಕಾರಯುತ ಸಮಾಜ ನಿರ್ಮಾಣವಾಗಬೇಕಾದರೆ ನಮ್ಮ ಮನೆಗಳಿಂದ ಸಂಸ್ಕಾರ , ಸಂಘರ್ಷ ಮುಕ್ತವಾದ ಕೆಲಸ ಮಾಡುವ ಮೂಲಕ ನಮ್ಮ ಗ್ರಾಮ ರಾಮ ರಾಜ್ಯವಾಗಬಹುದು ಎಂದರು.ದೇವಸ್ಥಾನದ ಆಡಳಿತ ಸಮಿತಿಯ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಿ ಪ್ರಸಾದ್ ಕಲ್ಲಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಅಯೋಧ್ಯಾ ಕರಸೇವಕರಿಗೆ ಗೌರವಾರ್ಪಣೆ :
ಕೃಷ್ಣ ಶಾಸ್ತ್ರಿ ಕದಳೀವನ, ಎಸ್ ಆರ್ ರಂಗಮೂರ್ತಿ, ರಾಜೇಂದ್ರ ರೈ ಬೈಲುಗುತ್ತು, ರವೀಂದ್ರ ಪರಿಯಾಲು, ಜಗನ್ನಾಥ ಪರಿಯಾಲು, ಪ್ರೀತಿಪಾಲ ಅಡ್ಯಂತಾಯ, ನಾರಾಯಣ ಬನ್ನಿಂತಾಯ, ಆದಿದೇವ ಶಾಸ್ತ್ರಿ ಮಣಿಲ, ತೀರ್ಥಾನಂದ ಗೌಡ ಬಾಳೆಕುಮೇರಿ, ನಾರಾಯಣ ನಾಯಕ್ ಪದವು, ಶ್ರೀಧರ್ ಶೆಟ್ಟಿ ಬರೆಂಜ, ಜಯಂತ ಗೌಡ ಒ. ಸುರೇಶ ಗೌಡ ಒ. ಗಣೇಶ ಗೌಡ ಒ. ದಯಾನಂದ ನಾಯ್ಕ ದೇವಿನಗರ, ವಿಜಯ್ ಕುಮಾರ್ ದಂಬೆ, ಪ್ರಕಾಶ್ ಪಾಟಾಳಿ ಮಲೆತ್ತಡ್ಕ ಹಾಗೂ ದಿ.ಸಚ್ಚಿದಾನಂದ ನಾಯಕ್ ರವರ ಪರವಾಗಿ ಧರ್ಮ ಪತ್ನಿ ಸುಮತಿ, ದಿ.ವಾಸುದೇವ ಗೌಡರವರ ಪರವಾಗಿ ಸಹೋದರನ ಪುತ್ರ ದಿನಕರ, ದಿ.ನಾರಾಯಣ ನಾಯ್ಕರವರ ಪರವಾಗಿ ಧರ್ಮ ಪತ್ನಿ ಸುಮತಿ, ದಿ. ಚೆನ್ನಪ್ಪ ಗೌಡರ ಪರವಾಗಿ ಧರ್ಮ ಪತ್ನಿ ಪೊನ್ನಕ್ಕ, ದಿ.ಗಣೇಶ ಪೂಜಾರಿಯವರ ಪರವಾಗಿ ಪುತ್ರಿ ಶ್ರೀಲತಾ, ದಿ.ರಾಜುರವರ ಪುತ್ರ ಸುಧಾಕರ ರವರನ್ನು ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅತಿಥಿ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಮಕೃಷ್ಣ ಬಿ. ಅಯೋಧ್ಯಾ ಕರಸೇವಕರ ಪಟ್ಟಿ ವಾಚಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಿವೃತ್ತ ಯೋಧ ಕಿಶೋರ್ ಕುಮಾರ್ ವಂದಿಸಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.


ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರ‌ ವೀಕ್ಷಣೆ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಪುಣಚ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಕೆಲ್ಲಾಳಿ ಭಕ್ತ ವೃಂದವರಿಂದ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಮಹಿಷಮರ್ದಿನಿ ಯಕ್ಷ ಬಳಗದವರಿಂದ ಶ್ರೀ ರಾಮ ದರ್ಶನ ಯಕ್ಷಗಾನ ತಾಳಮದ್ದಳೆ ಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here