ನೆಲ್ಯಾಡಿ: ಜ.24ರಂದು ಬೆಳಿಗ್ಗೆ ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ಮಹಾಸಭೆಯಲ್ಲಿ ಖಾಝಿಯವರ ಸಮ್ಮುಖದಲ್ಲೇ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಇತ್ತಂಡದ 10 ಮಂದಿ ಮಂಗಳೂರು ಹಾಗೂ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು 19 ಮಂದಿ ವಿರುದ್ಧ ಕೇಸು ದಾಖಲಾಗಿದೆ.
ಆರೋಪಿಗಳು:
ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್ ಎಂಬವರು ನೀಡಿದ ದೂರಿನ ಮೇರೆಗೆ ಬಜತ್ತೂರು ಗ್ರಾಮದ ನೀರಕಟ್ಟೆ ನಿವಾಸಿ ದಿ. ಅಬೂಬಕ್ಕರ್ ಎಂಬವರ ಮಕ್ಕಳಾದ ಉಸ್ಮಾನ್ ಜೌಹರಿ ನೀರಕಟ್ಟೆ, ಇಬ್ರಾಹಿಂ ಮದನಿ ಉಳ್ಳಾಲ, ಅಬ್ದುಲ್ ರಹಿಮಾನ್ ಎಸ್.ಎಂ., ಮುಹಮ್ಮದ್ ಮುಸ್ತಾಫ್, ಉಮ್ಮರ್ ಫಾರೂಕ್, ಮಹಮ್ಮದ್ ಹನೀಫ್, ಶಫೀಖ್ ಅಹ್ಸನಿ, ಇರ್ಷಾದ್ ಎಂಬವರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಠಾಣಾ ಅ.ಕ್ರ: 13/2024 ಕಲಂ: 143,147,148,323,324,504,506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜತ್ತೂರು ಗ್ರಾಮದ ನೀರಕಟ್ಟೆ ದಿ.ಅಬೂಬಕ್ಕರ್‌ರವರ ಪುತ್ರ ಎಮ್.ಉಸ್ಮಾನ್ ಅವರು ನೀಡಿದ ದೂರಿನಂತೆ ಸಿದ್ದೀಕ್, ಟಿಪ್ಪುಸುಲ್ತಾನ್, ನಾಸೀರ್, ಸಾಕೀರ್, ಸಿದ್ದೀಕ್, ಸುಲೈಮಾನ್, ಹನೀಫ್, ರಫೀಕ್, ರಫೀಕ್ ಆಲಂಪಾಡಿ, ಖಲೀಲ್, ಶಕೀಲ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 13/2024 ಕಲಂ: 143,147,148,323,324,504,506, ಜೊತೆಗೆ 149 ಐಪಿಸಿಯಂತೆ ಕೇಸು ದಾಖಲಾಗಿದೆ.
ಗಾಯಾಳುಗಳು:
ಘಟನೆಯಲ್ಲಿ ಗಾಯಗೊಂಡಿರುವ ಯೂಸುಫ್ ಶಾಂತಿಬೆಟ್ಟು, ಶಾಕೀರ್, ಸುಲೈಮಾನ್‌ರವರು ಮಂಗಳೂರಿನ ಐಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನೊಂದು ತಂಡದ ಮಹಮ್ಮದ್ ಮುಸ್ತಾಫ್, ಇರ್ಷಾದ್, ಮಹಮ್ಮದ್ ಸಪೀಕ್, ಮಹಮ್ಮದ್ ಹನೀಫ್, ಎಮ್ ಉಸ್ಮಾನ್, ಉಮ್ಮರ್ ಫಾರೂಕ್‌ರವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಹಾಗೂ ಮಹಮ್ಮದ್ ಹನೀಫ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ದೂರು ನಂ.1:
ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್‌ರವರು ನೀಡಿದ ದೂರಿನಲ್ಲಿ ಬಜತ್ತೂರು ಗ್ರಾಮದ ನೀರಕಟ್ಟೆ ದಿ.ಅಬೂಬಕ್ಕರ್ ಅವರ ಪುತ್ರರೂ, ಪ್ರಕರಣದ ಆರೋಪಿತರೂ ಆದ ಉಸ್ಮಾನ್ ಜೌಹರಿ ನೀರಕಟ್ಟೆ, ಇಬ್ರಾಹಿಂ ಮದನಿ ಉಳ್ಳಾಲ, ಅಬ್ದುಲ್ ರಹಿಮಾನ್ ಎಸ್.ಎಂ, ಮಹಮ್ಮದ್ ಮುಸ್ತಾಫಾ, ಉಮ್ಮರ್ ಫಾರೂಕ್, ಮಹಮ್ಮದ್ ಹನೀಫ್, ಶಫೀಕ್ ಅಹ್ಸನಿ, ಇರ್ಷಾದ್‌ರವರ ಪೈಕಿ ಉಸ್ಮಾನ್ ಜೌಹರಿಯವರು ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯ ಜಮಾತಿಗೆ ಒಳಪಟ್ಟಿರುವುದಿಲ್ಲ. ಜ.19ರಂದು ನಡೆದ ಮಸೀದಿಯ ಸಭೆಯಲ್ಲಿ ಆರೋಪಿತರು ಗದ್ದಲ ನಡೆಸಿದ್ದರಿಂದ ಜ.24ರಂದು ತುರ್ತು ಸಭೆ ಕರೆಯಲಾಗಿತ್ತು. ಈ ಸಭೆಗೆ ಎಲ್ಲಾ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ದೊಂಬಿ ನಡೆಸುವ ಉದ್ದೇಶದಿಂದ ಬೆಳಿಗ್ಗೆ 10.30 ಗಂಟೆಗೆ ಕೆಎ 03, ಎಂಎಸ್ 3488 ಹಾಗೂ ಕೆಎ52 ಎನ್ 1398 ನಂಬರಿನ ಕಾರು ಮತ್ತು ಬುಲೆಟ್ ವಾಹನದಲ್ಲಿ ಬಂದು ಕೊಲೆ ಮಾಡುವ ಉದ್ದೇಶದಿಂದ ಯೂಸುಫ್ ಶಾಂತಿಬೆಟ್ಟು, ಯೂಸುಫ್ ಅತ್ತಾಜೆ, ಶಾಕಿರ್ ಮತ್ತು ಸುಲೈಮಾನ್ ಎಂಬವರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ, ಜಮಾತಿನ ಖತೀಬರಾದ ಶೌಕತ್ ಆಲಿ ಅಮಾನಿಯವರನ್ನು ಉದ್ದೇಶಿಸಿ ನೀವು ಹೇಗೆ ಕೆಲಸ ಮಾಡುತ್ತೀರೆಂದು ನೋಡಿಕೊಳ್ಳುತ್ತೇವೆ ಎಂಬುದಾಗಿ ಜೀವಬೆದರಿಕೆ ಒಡ್ಡಿದ್ದಲ್ಲದೇ, ಅಧ್ಯಕ್ಷರಾದ ನನ್ನನ್ನೂ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿರುತ್ತಾರೆ. ಆರೋಪಿಗಳು ಹಲ್ಲೆ ನಡೆಸಿರುವುದರಿಂದ ಯೂಸುಫ್ ಶಾಂತಿಬೆಟ್ಟು, ಶಾಕಿರ್ ಮತ್ತು ಸುಲೈಮಾನ್‌ರವರು ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರು ಐಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿತ ಉಸ್ಮಾನ್ ಜೌಹರಿ ನೀರಕಟ್ಟೆಯವರ ಕುಮ್ಮಕ್ಕಿನಿಂದ ಇತರ ಆರೋಪಿಗಳು ಈ ರೀತಿಯ ಕೃತ್ಯ ಎಸಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ದೂರು ನಂ.2:
ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜತ್ತೂರು ಗ್ರಾಮದ ನೀರಕಟ್ಟೆ ನಿವಾಸಿ ದಿ.ಅಬೂಬಕ್ಕರ್ ಎಂಬವರ ಪುತ್ರ ಎಮ್.ಉಸ್ಮಾನ್‌ರವರು ನೀಡಿದ ದೂರಿನಲ್ಲಿ ಜ.24ರಂದು ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಖಾಝಿಯವರ ನೇತೃತ್ವದಲ್ಲಿ ವಾರ್ಷಿಕ ಸಭೆ ಏರ್ಪಡಿಸಿದ್ದು ಸದ್ರಿ ಸಭೆಯಲ್ಲಿ ಮಸೀದಿಯ ಹಿಂದಿನ ಉಪಾಧ್ಯಕ್ಷರೂ ಆದ ನನ್ನ ತಮ್ಮಂದಿರಾದ ಮಹಮ್ಮದ್ ಮುಸ್ತಾಫಾ, ಉಮ್ಮರ್ ಫಾರೂಕ್, ಮಹಮ್ಮದ್ ಹನೀಫ್, ಮಹಮ್ಮದ್ ಶಫೀಕ್, ಇರ್ಷಾದ್, ಇಬ್ರಾಹಿಂ ಮತ್ತು ಅಬ್ದುಲ್ ರಹಿಮಾನ್‌ರವರು ಭಾಗವಹಿಸಿದ್ದರು. ಸಭೆ ನಡೆಯುತ್ತಿರುವಾಗ ಬೆಳಿಗ್ಗೆ 10.30 ಗಂಟೆಗೆ ಕೌಕ್ರಾಡಿ ಗ್ರಾ.ಪಂ. ಸದಸ್ಯ ಮಹಮ್ಮದ್ ಹನೀಫ್ ಅವರು ಬೊಬ್ಬೆ ಹಾಕಬೇಡಿ ಖಾಝಿಯವರಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದಾಗ ಶಾಕೀರ್ ಎಂಬವರು ಅವರಿಗೆ ಕೈಯಿಂದ ಹೊಡೆದಿದ್ದು ಆಗ ನಾನು ಹಾಗೂ ತಮ್ಮಂದಿರು ತಡೆಯಲು ಹೋದಾಗ ಮಹಮ್ಮದ್ ಶಫೀಕ್ ಅವರಿಗೆ ಶಾಕೀರ್ ಮತ್ತು ಕೊಡ್ಲಿಪೇಟೆ ಸುಲೈಮಾನ್‌ರವರು ಸೌಟಿನಿಂದ ಹೊಡೆದಿದ್ದು, ಸಿದ್ದಿಕ್ ಮತ್ತು ಟಿಪ್ಪುಸುಲ್ತಾನ್‌ರವರು ನನಗೆ ಕೈಯಿಂದ ಹೊಡೆದಿದ್ದು, ಸಹೋದರ ಮಹಮ್ಮದ್ ಮುಸ್ತಾಫಾನಿಗೆ ಶಕೀಲ್ ಹಾಗೂ ಹನೀಫ್ ಎಂಬವರು ರಾಡ್‌ನಿಂದ ಕುತ್ತಿಗೆಗೆ ಹೊಡೆದಿರುತ್ತಾನೆ. ಇನ್ನೊಬ್ಬ ಸಹೋದರ ಉಮ್ಮರ್ ಫಾರೂಕ್‌ರವರಿಗೆ ನಾಸಿರ್ ಮತ್ತು ಸಿದ್ದಿಕ್‌ರವರು ಕೈಯಿಂದ ಗುದ್ದಿರುತ್ತಾರೆ. ಮಹಮ್ಮದ್ ಹನೀಫ್‌ಗೆ ರಫೀಕ್ ಅವರು ತುಳಿದಿದ್ದು, ರಫೀಕ್ ಅಲಂಪಾಡಿಯವರು ಮೂಗು ಬಾಯಿಗೆ ಗುದ್ದಿರುತ್ತಾರೆ. ಇರ್ಷಾದ್‌ರವರಿಗೆ ಖಲೀಲ್‌ರವರು ಕಾಲಿನಿಂದ ತುಳಿದು ಬಲಕೈಗೆ ರಾಡ್‌ನಿಂದ ಹಲ್ಲೆ ಮಾಡಿರುತ್ತಾರೆ. ಇದರಿಂದ ನಾನು ಹಾಗೂ ತಮ್ಮಂದಿರು ಗಾಯಗೊಂಡು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಮಹಮ್ಮದ್ ಹನೀಫ್ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಆರೋಪಿಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರಿಂದ ತನಿಖೆ:
ಉಪ್ಪಿನಂಗಡಿ ಪೊಲೀಸರು ಎರಡೂ ಕಡೆಯುವರ ದೂರು ಸ್ವೀಕರಿಸಿ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://youtu.be/Dqy-jk7xOpA