ಉಪ್ಪಿನಂಗಡಿ: ಜಮಾಅತೆ ಇಸ್ಲಾಮೀ ಹಿಂದ್ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಫೆ. 23ರಂದು ಉಪ್ಪಿನಂಗಡಿ ಎಚ್.ಎಂ. ಆಡಿಟೋರಿಯಂನಲ್ಲಿ ಬಹುತ್ವದ ಭಾರತ-ಸವಾಲುಗಳು ಮತ್ತು ಪರಿಹಾರ ಎಂಬ ವಿಷಯದಲ್ಲಿ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು 34-ನೆಕ್ಕಿಲಾಡಿ ಮಸ್ಜಿದುಲ್ ಹುದಾ ಮಸೀದಿ ಅಧ್ಯಕ್ಷ ಜಲೀಲ್ ಮುಕ್ರಿ ಹೇಳಿದರು.
ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4:30ರಿಂದ 6.30ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ವಕೀಲ, ಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಮುರೊಳ್ಳಿ, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಉಪ ಸಂಚಾಲಕ ಅಮೀನ್ ಅಹ್ಸನ್ ಮಾತನಾಡಿ, ಜಮಾಅತೆ ಇಸ್ಲಾಮೀ ಹಿಂದ್ ಭಾರತದ ಇಸ್ಲಾಮೀ ಸಂಘಟನೆಯಾಗಿದ್ದು, ಕಳೆದ 75 ವರ್ಷಗಳಿಂದ ಸಾಮಾಜಿಕ ಮತ್ತು ಧಾರ್ಮಿಕವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಇದೀಗ ದೇಶದ ಪ್ರಸಕ್ತ ಪರಿಸ್ಥಿತಿ ಬಹುತ್ವದ ಪರಿಕಲ್ಪನೆಯನ್ನು ನಾಶಪಡಿಸುತ್ತಿದೆ, ಅನಾಗರಿಕ ಸಂಸ್ಕೃತಿಯನ್ನು ವೈಭವೀಕರಿಸಲಾಗುತ್ತಿದೆ. ಆದ್ದರಿಂದ ದೇಶದ ಬಹುತ್ವ ಪರಂಪರೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರವನ್ನು ಕಂಡು ಹುಡುಕಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಬ್ದುಲ್ ಹಸೀಬ್ ಉಪಸ್ಥಿತರಿದ್ದರು.