ಪುತ್ತೂರು ತಾ| ಮಟ್ಟದ ತುಳುವೆರೆ ಮೇಳೊ ಉದ್ಘಾಟನೆ

0

ಪುತ್ತೂರು: ತುಳು ಭಾಷೆ ರಾಜ್ಯದ 2ನೇ ಭಾಷೆ ಆಗದೇ ನಮಗೆ ಗೌರವ ಇಲ್ಲ. ಆಗ ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಇರಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು. ಅವರು ಪುತ್ತೂರು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ತುಳು ಕೂಟೊ ಪುತ್ತೂರು ತಾಲೂಕು ಇದರ ವತಿಯಿಂದ ಮಾ.3ರಂದು ನಡೆದ ’ತುಳುವೆರೆ ಮೇಳೊ-2024’ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶ್ರೀಗಳು ಸಭಾ ಕಾರ್ಯಕ್ರಮದ ವೇದಿಕೆಗೆ ಆಗಮಿಸುವ ಮೊದಲು ಗೋವುಗಳಿಗೆ ತಿನಸು ನೀಡುವ ಮೂಲಕ ತುಳು ಸಂಪ್ರದಾಯಕ್ಕೆ ಚಾಲನೆ ನೀಡಿದರು. ತುಳುವರ ಮನಸ್ಸು, ದೊಡ್ಡದು. ತುಳು ಪ್ರಾದೇಶಿಕ ಮತ್ತು ವ್ಯವಹಾರಿಕ ಭಾಷೆ. ಜಾತಿ, ವರ್ಣ, ಪಂಗಡ ಬಿಟ್ಟು ತುಳು ಭಾಷೆ ಮಹತ್ವ ಪಡೆದಿದೆ. ತುಳು ಭಾಷೆಗೆ ಭಾವನಾತ್ಮಕ ಸಂಬಂಧವಿದೆ. ಈಗ ವಿಧಾನಸಭೆಯಲ್ಲೂ ತುಳು ಭಾಷೆ ಕೇಳಲು ಆರಂಭವಾಗಿದೆ. ಇದಕ್ಕೆ ಶಾಸಕರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ತುಳು ಲಿಪಿ ನಮ್ಮಲ್ಲಿ ಇದೆ. ತುಳುವಿಗೆ ಅಂಕೆ ಸಂಖ್ಯೆಯೂ ಇದೆ. ಹಾಗಾಗಿ ಜಾತಿ ಮತ ಪಂಗಡ ಬಿಟ್ಟು ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ಮಾಡೋಣ ಎಂದರು.


ತುಳು ಭಾಷೆಗೆ ಶಕ್ತಿ ಸಿಕ್ಕಿದೆ, ಉಳಿಸುವ ಕೆಲಸ ಆಗಬೇಕು:
ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ಕಲಸೆಗೆ ಭತ್ತವನ್ನು ಸುರಿಯುವ ಮೂಲಕ ತುಳು ಸಂಸ್ಕೃತಿಗೆ ಚಾಲನೆ ನೀಡಿ ಮಾತನಾಡಿ, ತುಳು ಮಾತನಾಡುವ ಮೂಲಕ ನಮ್ಮ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದು ನಮ್ಮ ಮೂಲ ಉದ್ದೇಶ. ಈ ಕುರಿತು ದೆಹಲಿಯ ತನಕ ಹೋಗಿ ಆಗಿದೆ. ಆರಂಭದಲ್ಲಿ ಧರ್ಮಸ್ಥಳದ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಒಡಿಯೂರು ಶ್ರೀಗಳು ತುಳು ಭಾಷೆಯ ಬಗ್ಗೆ ಹಲವು ಪ್ರಯತ್ನಪಟ್ಟರು. ಈಗ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆ ಸದಸ್ಯರಾಗಿರುವುದು ತುಳು ಭಾಷೆಗೆ ಶಕ್ತಿ ಸಿಕ್ಕಿದೆ. ಜಿಲ್ಲೆಯ ಆರು ತಾಲೂಕಿನಲ್ಲಿಯೂ ತುಳುವೆರೆ ಮೇಳೊ ನಡೆಸಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸುವ ಕೆಲಸ ಆಗಬೇಕು. ತುಳುವಿನ ಉಳಿವಿಗಾಗಿ ಹೆಚ್ಚು ಪ್ರಯತ್ನ ಮಾಡಿದ ಪಾಲ್ತಾಡಿ ರಾಮಕೃಷ್ಣ ಆಚಾರ್, ಡಾ| ಚಿನ್ನಪ್ಪ ಗೌಡ, ವಿವೇಕ್ ರೈ, ಎಸ್.ಆರ್ ರೈ, ಎ.ಸಿ.ಭಂಡಾರಿ ಹಾಗೂ ಇನ್ನಿತರ ಮುಖಂಡರ ಮೂಲಕ ಸರಕಾರಕ್ಕೆ ಒತ್ತಡ ಹಾಕುವ ಕೆಲಸ ಆಗ ಬೇಕೆಂದರು.

ಆದಷ್ಟು ಬೇಗ ಸಮಿತಿ ರಚನೆ:
ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಎ.ಸಿ.ಭಂಡಾರಿ ಅವರು ಮಾತನಾಡಿ, ಮಾತೃಭಾಷೆ ಬೇರೆ ಆದರೂ ತುಳುವಿಗೆ ಪ್ರಾಮುಖ್ಯತೆ ಕೊಡುವುದು ಬಹಳ ಮುಖ್ಯ. ತುಳು ಭಾಷೆಗಾಗಿ ೪೪ ಕೂಟ ಕೆಲಸ ಮಾಡುತ್ತಿವೆ. ಇದರ ಉದ್ದೇಶ ತುಳು ಭಾಷೆ, ಸಂಸ್ಕೃತಿ, ವಿಚಾರ ಉಳಿಸುವ ಕೆಲಸವಾಗಿದೆ. ಪಂಚ ದ್ರಾವಿಡ ಭಾಷೆಯಲ್ಲಿ ತುಳುವಿಗೆ ಮಾತ್ರ ಗೌರವ ಸಿಗಲಿಲ್ಲ. ತುಳುವನ್ನು ರಾಜ್ಯ ಭಾಷೆ ಮಾಡುವ ನಿಟ್ಟಿನಲ್ಲಿ ಆದಷ್ಟು ಬೇಗ ಸಮಿತಿ ರಚನೆ ಮಾಡಲಾಗುವುದು. ಮೇ ೧೭ರಂದು ಮಂಗಳೂರು ಪುರಭವನದಲ್ಲಿ ತುಳು ಉಚ್ಚಯ ಕಾರ್ಯಕ್ರಮ ನಡೆಯಲಿದೆ ಎಂದರು.

8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಪೂರಕ ಕಾರ್ಯಕ್ರಮ:
ತುಳುವೆರೆ ಮೇಳೊ ಇದರ ಅಧ್ಯಕ್ಷ ರೇ ವಿಜಯ ಹಾರ್ವಿನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೃ ಭಾಷೆಯೊಂದಿಗೆ ವ್ಯವಹಾರಿಕ ಭಾಷೆ ಉಳಿಸಬೇಕು. ಭಾಷೆ ಜಾತಿಗೆ ಸೀಮಿತವಾಗಿಲ್ಲ. ತುಳು ಭಾಷೆ ನಮ್ಮನ್ನು ಕಟ್ಟಿ ಹಾಕುವ ದೊಡ್ಡ ದಾರದ ಹಾಗಿದೆ. ನಮ್ಮನ್ನು ಒಟ್ಟು ಮಾಡಿ ನಮಗೆ ಶಕ್ತಿನೀಡಿದೆ. ಮುಂದೆ ತುಳು ಭಾಷೆ 8ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಲು ಪೂರಕ ಕಾರ್ಯಕ್ರಮ ಇದಾಗಿದೆ. ತುಳುವಿನಲ್ಲಿ ಹಲವು ಮಂದಿ ಕೆಲಸ ಮಾಡಿದವರಿದ್ದಾರೆ. ಅವರನ್ನು ನೆನಪು ಮಾಡುವ ಮೂಲಕ ತುಳುಭಾಷೆಯ ಮಹತ್ವ ಅರಿಯಬೇಕೆಂದರು.

ನಮ್ಮ ಆಸ್ಪತ್ರೆಯಲ್ಲೂ ತುಳು ಭಾಷೆಗೆ ಪ್ರಾಮುಖ್ಯತೆ ಕೊಡುತ್ತೇವೆ:
ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್ ಅವರು ಮಾತನಾಡಿ, ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ನಮ್ಮ ಪ್ರಯತ್ನ ಇರಬೇಕು. ನಮ್ಮ ಆಸ್ಪತ್ರೆಯಲ್ಲೂ ನಾವು ತುಳುವಿನಲ್ಲಿ ಮಾತನಾಡುವವರೊಂದಿಗೆ ತುಳುವಿನಲ್ಲೇ ಮಾತನಾಡುತ್ತೇವೆ. ತುಳುಕೂಟದ ಇಂತಹ ಉತ್ತಮ ಕಾರ್ಯಗಳಿಗೆ ಸಹಕಾರ ನೀಡೋಣ ಎಂದರು.

ಪಾರ್ಲಿಮೆಂಟ್‌ನಲ್ಲೂ ತುಳು ಭಾಷೆ ಮೊಳಗುವ ಕಾಲ ಬರಲಿ:
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ಮಾತನಾಡಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಹಿತ ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ತುಳುವಿನಲ್ಲಿ ಮಾತನಾಡಿದ್ದಾರೆ. ಸ್ಪೀಕರ್ ಯು.ಟಿ.ಖಾದರ್‌ರವರು ಇದಕ್ಕೆ ಪೂರಕವಾಗಿರುವುದರಿಂದ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರುವಲ್ಲಿ ಸಂಶಯವಿಲ್ಲ. ಶ್ರೀಕ್ಷೇತ್ರ ಧರ್ಮಸ್ಥಳದ ಖಾವಂದರು, ಒಡಿಯೂರು ಶ್ರೀಗಳು ಬೇಕಾದಷ್ಡು ಕೆಲಸ ಮಾಡಿದ್ದಾರೆ. ಮೂಡಬಿದ್ರೆ ಮೋಹನ್ ಆಳ್ವರು ಸಹ ತುಳುವಿನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಬರುವಂತೆ ಕೆಲಸ ಮಾಡುತ್ತಿದ್ದಾರೆ. ಸಂಸದರು ತುಳು ಭಾಷೆಗೆ ಮಹತ್ವ ಕೊಟ್ಟಿದ್ದಾರೆ. ಮುಂದೆ ಪಾರ್ಲಿಮೆಂಟ್‌ನಲ್ಲಿ ತುಳು ಭಾಷೆ ಮಾತನಾಡುವ ಕಾಲ ಮೂಡಿ ಬರಲಿ ಎಂದರು.

ತುಳು ಭಾಷೆಗಾಗಿ ಸಮಯ ಕೊಡಿ:
ನಗರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರು ಮಾತನಾಡಿ, ತುಳು ಭಾಷೆಗಾಗಿ ನಾವು ನಮ್ಮ ಸಮಯ ಕೊಡಬೇಕು. ಎಳೆ ವಯಸ್ಸಿನಲ್ಲೇ ತುಳು ಭಾಷೆಯ ಆಸಕ್ತಿ ಮೂಡಿಸಲು ಅಂಗನವಾಡಿ ಮಕ್ಕಳಗೆ ಸ್ಪರ್ಧೆ ಏರ್ಪಡಿಸಬೇಕು. ಶಾಲೆಗಳಲ್ಲಿ ತುಳು ಭಾಷೆಗೆ ಪ್ರಾಧಾನ್ಯತೆ ಕೊಡಬೇಕು. ಪ್ರಯತ್ನ, ಮನಸ್ಸು ಮತ್ತು ಇಚ್ಛಾಶಕ್ತಿಯಿದ್ದರೆ ತುಳು ಭಾಷೆಯ ಗೌರವ ಹೆಚ್ಚುತ್ತದೆ ಎಂದರು.

ತುಳುವೆರೆ ಕೂಟದ ಮೂಲಕ ಹಲವು ಕಾರ್ಯಕ್ರಮ:
ತುಳುಕೂಟೊ ಪುತ್ತೂರು ಇದರ ಅಧ್ಯಕ್ಷರಾಗಿರುವ ತುಳುವೆರೆ ಮೇಳೊ ಕಾರ್ಯಾಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೨೩ರಲ್ಲಿ ತುಳು ಮೇಳ ಮಾಡಲಾಗಿದೆ. ತುಳುವೆರೆ ಮೇಳೊ 2ನೇ ಸಮ್ಮೇಳನವಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಸಿಕ್ಕಿದೆ. ಕಳೆದ ವರ್ಷದಿಂದ ಸುಮಾರು 10 ವಿವಿಧ ಕಾರ್ಯಕ್ರಮ ಮಾಡಿದ್ದೇವೆ. ಮುಂದೆಯೂ ನಿರಂತರ ಕಾರ್ಯಕ್ರಮ ನಡೆಯಲಿದೆ ಎಂದರು.

ತುಳುವೆರೆ ಮೇಳೊ ಕಾರ್ಯಕ್ರಮದ ಗೌರವಾಧ್ಯಕ್ಷೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಂಚಾಲಕ ವೆಂಕಟರಮಣ ಕಳುವಾಜೆ, ತುಳುಕೂಟೊ ಇದರ ಉಪಾಧ್ಯಕ್ಷೆ ಹೀರಾ ಉದಯ್, ಜೊತೆ ಕಾರ್ಯದರ್ಶಿಗಳಾದ ನಯರಾನ ರೈ, ಉಲ್ಲಾಸ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಯನಾ ರೈ ನೆಲ್ಲಿಕಟ್ಟೆ ಪ್ರಾರ್ಥಿಸಿದರು. ತುಳುವೆರೆ ಮೇಳೊ ಸಮಿತಿ ಕಾರ್ಯದರ್ಶಿ ಡಾ| ರಾಜೇಶ್ ಬೆಜ್ಜಂಗಳ ವಂದಿಸಿದರು. ಕಡಬ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಬೆಳಿಗ್ಗೆ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ಮಂಡಳಿ ಪುತ್ತೂರು ಘಟಕದ ವತಿಯಿಂದ ತುಳು ಪದರಂಗಿತ ನಡೆಯಿತು.

ತುಳುವಾಮೃತ:
ಸಭಾ ಕಾರ್ಯಕ್ರಮದ ಬಳಿಕ ಅಮೃತ ಸೋಮೇಶ್ವರ ಅವರ ನೆನಪು ’ತುಳುವಾಮೃತ’ ಕಾರ್ಯಕ್ರಮ ನಡೆಯಿತು. ತುಳುಕೂಟೊ ಇದರ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ವಿಶ್ರಾಂಶ ಪ್ರಾಂಶುಪಾಲ ಝೇವಿಯರ್ ಡಿ’ಸೋಜ ಉಪಸ್ಥಿತರಿದ್ದರು. ಸಾಹಿತಿ ಪ್ರೊ. ವಿ.ಬಿ ಅರ್ತಿಕಜೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಹಿಳಾ ಕಾಲೇಜಿನ ಉಪನ್ಯಾಸಕ ನರೇಂದ್ರ ರೈ ದೇರ್ಲ, ರಂಗ ನಿರ್ದೇಶಕ ಐ.ಕೆ.ಬೊಳುವಾರು, ಯಕ್ಷಗಾನ ಕಲಾವಿದ ಜಬ್ಬರ್ ಸುಮೊ ಪ್ರಬಂಧ ಮಂಡನೆ ಮಾಡಿದರು. ಬಳಿಕ ಕಬಿ ಕುಟೊ ನಡೆಯಿತು.

ಐವರಿಗೆ ಬಿರ್ದ್‌ದ ತುಳುವೆರ್ ಪ್ರಶಸ್ತಿ ಪ್ರದಾನ:
ಐವರು ಸಾಧಕರಿಗೆ ಬಿರ್ದ್‌ದ ತುಳುವೆರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜಯ ಕುಮಾರ್ ಹೆಬ್ಬಾರಬೈಲು, ಯೂಸೂಪ್ ಮಠ, ಕೊಳ್ತಿಗೆ ನಾರಾಯಣ ಗೌಡ, ಯಮುನಾ ಪೂಜಾರಿ, ಗುಬ್ಬಿ ಕೆಮ್ಮಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಳ್ತಿಗೆ ನಾರಾಯಣ ಗೌಡ ಸನ್ಮಾನಿತರ ಪರವಾಗಿ ಮಾತನಾಡಿದರು. ತುಳುವೆರೆ ಮೇಳೊ ಸಮಿತಿ ಕಾರ್ಯದರ್ಶಿ ಡಾ| ರಾಜೇಶ್ ಬೆಜ್ಜಂಗಳ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here