ನೆಟ್‌ವರ್ಕ್ ಸಿಗದೇ ಕಂಗಾಲಾದ ಸ್ಥಳೀಯರು-ಸಮಸ್ಯೆ ಬಗೆಹರಿಸಲು ಆಗ್ರಹ
ಪುತ್ತೂರು: ಕೆದಂಬಾಡಿ ಗ್ರಾ.ಪಂ ವ್ಯಾಪ್ತಿಯ ಗಟ್ಟಮನೆ, ಸನ್ಯಾಸಿಗುಡ್ಡೆ, ಸಾರೆಪುಣಿ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ತಲೆದೋರಿದ್ದು ಮೊಬೈಲ್ ಬಳಕೆದಾರರು ಪರದಾಟ ಪಡುವಂತಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗಿದ್ದು ಯಾವ ಸಿಮ್ ಉಪಯೋಗಿಸುವವರಿಗೂ ಸರಿಯಾಗಿ ನೆಟ್‌ವರ್ಕ್ ಸಿಗದ ಕಾರಣಕ್ಕೆ ಬಳಕೆದಾರರು ತೊಂದರೆ ಅನುಭವಿಸುತ್ತಿದ್ದಾರೆ.
ಗಟ್ಟಮನೆ, ಸನ್ಯಾಸಿಗುಡ್ಡೆ, ಸಾರೆಪುಣಿ ಪರಿಸರದಲ್ಲಿ ನೂರಾರು ಮನೆಗಳಿದ್ದು ಇದೀಗ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣದಿಂದ ಯಾರಿಗಾದರೂ ಕರೆ ಮಾಡಿ ಸರಿಯಾಗಿ ಮಾತನಾಡಲೂ ಆಗುತ್ತಿಲ್ಲ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಎರಡು ತಿಂಗಳಿನಿಂದ ಈ ಸಮಸ್ಯೆ ಉಂಟಾಗಿದ್ದು ಹಿಂದಿನಂತೆ ನಮ್ಮ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವಂತೆ ಮಾಡಲು ಸಂಬಂಧಪಟ್ಟ ಕಂಪೆನಿಗಳು ಕ್ರಮ ವಹಿಸಬೇಕು ಎಂದು ಸ್ಥಳೀಯ ಮೊಬೈಲ್ ಬಳಕೆದಾರರು ಆಗ್ರಹಿಸಿದ್ದಾರೆ.
ನಮ್ಮ ಪರಿಸರದಲ್ಲಿ ಈ ಹಿಂದೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರಲಿಲ್ಲ. ಕೆಲ ತಿಂಗಳಿನಿಂದ ನೆಟ್‌ವರ್ಕ್ ಸಮಸ್ಯೆ ಶುರುವಾಗಿದೆ. ಹೆಚ್ಚಿನವರೆಲ್ಲ ಮೊಬೈಲ್ ಬಳಕೆದಾರರಾದ ಕಾರಣ ನೆಟ್‌ವರ್ಕ್ ಸಿಗದಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದು ಸಂಬಂಧಪಟ್ಟವರು ಇಲ್ಲಿನ ಸಮಸ್ಯೆಗೆ ತುರ್ತಾಗಿ ಸ್ಪಂಧಿಸಿ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯ ಮುಖಂಡ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸಾರೆಪುಣಿ ಆಗ್ರಹಿಸಿದ್ದಾರೆ.