ತಾ|ಕನ್ನಡ ಸಾಹಿತ್ಯ ಪರಿಷತ್‌ನಿಂದ “ಶಾಸನ ಶೋಧನ ಅಧ್ಯಯನ, ಸಂರಕ್ಷಣಾ ಯೋಜನೆ”ಗೆ ಚಾಲನೆ

0

ಪುತ್ತೂರು: ಪ್ರಾಚೀನ ಕಾಲದಲ್ಲಿ ನಡೆದು ಹೋದ ಘಟನೆಗಳನ್ನು ದಾಖಲೀಕರಣ ಮಾಡುವ ನಿಟ್ಟಿನಲ್ಲಿ ವಿವಿಧ ಪರಿಕರಗಳ ಮೇಲೆ ಬರೆಯಲಾದ ಅಮೂಲ್ಯ ಬರಹಗಳ ಶೋಧನೆ ಮಾಡಿ ಅದರ ಅಧ್ಯಯನ ಮಾಡಿ ಅದನ್ನು ಪ್ರಕಾಶನ ಮಾಡುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ಪ್ರಾಚೀನ ಕನ್ನಡ ಶಾಸನಗಳ “ಶಾಸನ ಶೋಧನ-ಅಧ್ಯಯನ, ಸಂರಕ್ಷಣಾ” ಯೋಜನೆಗೆ ಎ.6ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಾಲಯದ ಗರ್ಭಗುಡಿಯ ಸಮೀಪ ಇರುವ ಶಿಲಾಶಾಸನದ ಸಮೀಪ ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯರವರು ಶಿಲಾಶಾಸನದ ಫಲಕ ಅನಾವರಣ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಚಿತ್ರ : ಕೃಷ್ಣ ಸ್ಟುಡಿಯೋ

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದಿಂದ ಶಾಸನ, ಶೋಧನೆ ಅಧ್ಯಯನ ಮತ್ತು ಸಂರಕ್ಷಣೆ ಎಂಬ ಯೋಜನೆಯನ್ನು ಕೈಗೆತ್ತಿಕೊಳ್ಳಾಗಿದೆ. ಇದು ರಾಜ್ಯದಲ್ಲೇ ಪ್ರಥಮವಾಗಿದೆ. ದೇವಾಲಯಗಳಲ್ಲಿ, ಮಠ ಮಂದಿರಗಳಲ್ಲಿ, ಜೈನ ಮಂದಿರ, ಬಸದಿ, ಗರಡಿಗಳಲ್ಲಿ ಹಾಗೂ ದೈವಸ್ಥಾನ, ಅರಸರ ಅರಮನೆಯಲ್ಲಿ, ಗುತ್ತಿನ ಮನೆಗಳಲ್ಲಿ ತರವಾಡು ಮನೆಗಳಲ್ಲಿ, ಪ್ರಾಚೀನ ಮನೆಗಳಲ್ಲಿ ಹಾಗೂ ಬಯಲು ಪ್ರದೇಶಗಳಲ್ಲಿ ಪ್ರಾಚೀನ ಬರವಣಿಗೆಯ ಶಾಸನಗಳು ಲಭ್ಯವಾಗುತ್ತವೆ. ಇವುಗಳು ನಮ್ಮ ಇತಿಹಾಸ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಪರಂಪರೆ, ಸಂಸ್ಕೃತಿ, ಸಾಮಾಜಿಕ ಹಾಗೂ ಚಾರಿತ್ರಿಕ ನಡವಳಿಕೆಗಳು ಇತ್ಯಾದಿಗಳ ಕುರಿತು ಅಮೂಲ್ಯ ಮಾಹಿತಿಗಳನ್ನು ಒದಗಿಸುತ್ತವೆ. ಇದು ಅಮೂಲ್ಯ ಜ್ಞಾನನಿಧಿಯಾಗಿದೆ. ಇವುಗಳು ಶಿಲೆಗಳ ಮೇಲೆ, ತಾಮ್ರಪಟಗಳ ಮೇಲೆ, ರಥದಲ್ಲಿ, ತುಳಸಿ ಕಟ್ಟೆಯಲ್ಲಿ, ಮೂರ್ತಿಗಳ ಮೇಲೆ, ಗಂಟೆ, ಹರಿವಾಣ, ಆರತಿ, ಶಂಖ, ಖಡ್ಗ, ಮಡಕೆ, ಇತ್ಯಾದಿಗಳ ಮೇಲೆ ಬರೆಯಲ್ಪಟ್ಟಿರುತ್ತವೆ. ಹಿರಿಯ ಶಾಸನ ತಜ್ಞರಾಗಿರುವ ಡಾ|ಉಮಾನಾಥ್ ಶೆಣೈ ಈ ಯೋಜನೆಯ ಮುಖ್ಯ ಅಧ್ಯಯನಕಾರರಾಗಿರುತ್ತಾರೆ. ಮೊದಲ ಹಂತದಲ್ಲಿ ಪುತ್ತೂರು ತಾಲೂಕು ಹಾಗೂ ಅದರ ಪರಿಸರವನ್ನು ಈ ಯೋಜನೆಗೆ ಅಳವಡಿಸಿಕೊಳ್ಳಲಾಗಿರುತ್ತದೆ. ಮುಂದಿನ ಹಂತದಲ್ಲಿ ಜಿಲ್ಲೆಯ ಇತರ ತಾಲೂಕುಗಳಿಗೆ ಈ ಶಾಸನ ಅಧ್ಯಯನವನ್ನು ವಿಸ್ತರಿಸಲಿದ್ದೇವೆ. ಈ ಯೋಜನೆಯ ಅಡಿಯಲ್ಲಿ ಸಂಬಂಧಪಟ್ಟ ಶಾಸನಗಳು ಲಭ್ಯವಾದ ವಿವರ, ಅದರ ಛಾಯಾಚಿತ್ರ, ಪೂರ್ಣಪಾಠ, ಭಾಷಾಂತರ ಸಾರಾಂಶ, ಸಂಕ್ಷಿಪ್ತ ಪರಿಚಯ ಇತ್ಯಾದಿಗಳನ್ನು ಕೃತಿಯ ರೂಪದಲ್ಲಿ ಪ್ರಕಟಿಸಲಾಗುತ್ತದೆ ಎಂದರು.

ಇತಿಹಾಸಕಾರ ಹಾಗೂ ಶಾಸನ ತಜ್ಞ ಡಾ.ಉಮಾನಾಥ ಶೆಣೈ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪುತ್ತೂರು ಲೀಜನ್ ಅಧ್ಯಕ್ಷೆ ಮಲ್ಲಿಕಾ ಜೆ. ರೈ ಉಪಸ್ಥಿತರಿದ್ದರು.

ಅಕ್ಕಿಹುಡಿ ಹಾಕಿ ಶಾಸನ ಓದಲಾಯಿತು:
ಶಾಸನ ಅನಾವರಣ ಬಳಿಕ ಶಾಸನದ ಮೇಲೆ ಅಕ್ಕಿ ಹುಡಿ ಹಾಕಿ ಶಾಸನವನ್ನು ಓದಲಾಯಿತು. ಇತಿಹಾಸಕಾರ ಹಾಗೂ ಶಾಸನ ತಜ್ಞರಾಗಿರುವ ಡಾ.ಉಮಾನಾಥ್ ಶೆಣೈರವರು ಶಾಸನವನ್ನು ಓದಿದರು.

LEAVE A REPLY

Please enter your comment!
Please enter your name here